ಡಿಕೆ ಶಿವಕುಮಾರ್ ತಮ್ಮ ಕೆಪಿಸಿಸಿ ಅಧ್ಯಕ್ಷ ಅವಧಿಯಲ್ಲಿ ಏನಾದ್ರೂ ಹೆಸರು ಉಳಿಯಬೇಕು. ಮುಂದ ನನ್ನ ಹೆಸರು ಶಾಶ್ವತವಾಗಿ ಇರಬೇಕು ಅಂತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಎಐಸಿಸಿ ಅಧಿವೇಶನ ೧೦೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ ೧೦೦ ಕಾಂಗ್ರೆಸ್ ಭವನ ಕಟ್ಟಲು ಮುಂದಾಗಿದ್ದಾರೆ. ಈ ನಿರ್ಧಾರ ತೆಗೆದುಕೊಂಡ ಬಳಿಕವೂ ಈ ಕೆಲಸದಲ್ಲಿ ಒಂದಿಷ್ಟು ಅಭಿವೃದ್ಧಿ ಕಂಡಿಲ್ಲ.
ಈಗಾಗಲೇ ಒಂದಿಷ್ಟು ಕಡೆ ಜಾಗ ಹುಡುಕುವ ಕೆಲಸ ಆಗ್ತಾ ಇದ್ದರೆ, ಮತ್ತೊಂದಿಷ್ಟು ಕಡೆಗಳಲ್ಲಿ ಜಾಗ ಇದ್ದರೂ ಹಣದ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಸಚಿವರುಗಳು ಇದಕ್ಕೆ ಸಾಥ್ ಕೊಡ್ತಾ ಇಲ್ಲ ಅನ್ನೋ ಆರೋಪವೂ ಇದೆ. ಇದೆಲ್ಲದರ ಮಧ್ಯೆ ಬೆಂಗಳೂರು ಸೇರಿದಂತೆ ಮೂರ್ನಾಲ್ಕು ಜಾಗದಲ್ಲಿ ಈಗಾಗಲೇ ಕೆಲಸ ಆರಂಭ ಆಗಿದೆ. ಇದರ ಮಧ್ಯೆ ಆಯಾಯ ಭಾಗದ ಕಾಂಗ್ರೆಸ್ ರಾಜಕಾರಣಿಗಳು ಹಣ ಕೊಡೋದಕ್ಕೂ ಮುಂದಾಗುತ್ತಿದ್ದಾರೆ.

ಈಗಾಗಲೇ ಡಿಕೆ ಶಿವಕುಮಾರ್ ಸೂಚಿಸಿದಂತೆ ಯಾರಾದ್ರೂ ತಮ್ಮ ಜಿಲ್ಲೆಯ ಕಾಂಗ್ರೆಸ್ ಭವನ ಕಟ್ಟಲು ಮುಂದಾಗಬೇಕು ಅಂದರೆ ಹಣ ಕೊಡಿ ಎಂದಿದ್ದರು. ಅದರಂತೆ ಈಗ ಒಂದಿಷ್ಟು ಜನ ಮುಂದೆ ಬಂದಿದ್ದಾರೆ. ಈಗ ರಾಮನಗದಲ್ಲೂ ಕಾಂಗ್ರೆಸ್ ಭವನ ಕಟ್ಟಲು ಅಡಿಪಾಯ ಹಾಕಲಾಗುತ್ತಿದೆ. ಇಂದು ಕೂಡ ರಾಮನಗರದಲ್ಲಿ ವೇದಿಕೆ ಮೇಲೆಯೇ ಈ ವಿಚಾರವಾಗಿ ಒಂದಿಷ್ಟು ಮಾತುಕತೆ ನಡೆದಿದೆ.
ಇಂದು ರಾಮನಗರದಲ್ಲಿ ಯುವ ಪರ್ವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಜೊತೆಗೆ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭ ಕೂಡ ನಡೆಸಲಾಯ್ತು. ಈ ವೇಳೆ ಡಿಕೆ ಶಿವಕುಮಾರ್ ಸೇರಿದಂತೆ ಆ ಭಾಗದ ಕಾಂಗ್ರೆಸ್ ಶಾಸಕರು, ಮುಖಂಡರು ಭಾಗವಹಿಸಿದ್ದರು. ಇದೇ ವೇಳೆ ಕಾಂಗ್ರೆಸ್ ಭವನ ಕಟ್ಟುವ ಸಂಬಂಧ ವೇದಿಕೆ ಮೇಲೆ ಭಾಷಣ ನಡೆಯುವಾಗ ಕಟ್ಟಡಕ್ಕೆ ಹಣ ಕೊಡುವ ವಿಚಾರ ಪ್ರಸ್ತಾಪ ಆಗಿದೆ.

ಈ ವೇಳೆ ಶಾಸಕ ಸಿಪಿ ಯೋಗೇಶ್ವರ್, ಮಾತನಾಡಿ, ನಾನು ಕಾಂಗ್ರೆಸ್ ಭವನ ಕಟ್ಟಲು ವೈಯಕ್ತಿಕವಾಗಿ ೧೦ ಲಕ್ಷ ರೂಪಾಯಿ ಕೊಡ್ತೀನಿ ಎಂದರು. ಬಳಿಕ ಹೆಚ್ ಎಮ್ ರೇವಣ್ಣ ಮಾತನಾಡಿ, ಹೋಲಿಕೆ ಮಾಡಿ ನೋಡೋದಾದ್ರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಡೀ ರಾಜ್ಯದಲ್ಲಿ ಕಾರ್ಯಾಲಯ ಮಾಡಿದ್ದಾರೆ. ನಾವು ಇಷ್ಟುವರ್ಷ ಅಧಿಕಾರ ನಡೆಸಿದ್ದರೂ ಕೂಡ ಕಾರ್ಯಾಲಯ ಮಾಡಿಲ್ಲ. ಕೆಲವು ಜಾಗದಲ್ಲಿ ಮಾತ್ರ ಇವೆ.
ಅದಕ್ಕೆ ಪ್ರೇರಣೆ ಅಂದರೆ ಡಿಕೆ ಶಿವಕುಮಾರ್. ೧೦೦ ಆಫೀಸ್ ಕಟ್ಟಲು ಮಾಡಿದ್ದಾರೆ. ರಾಮನಗರದಲ್ಲೂ ಆಗ್ತಾ ಇದೆ ಅದಕ್ಕೆ ನಾನೂ ಕೂಡ ೧ ಲಕ್ಷ ಕೊಡ್ತೀನಿ ಎಂದರು.
ಈ ಇಬ್ಬರ ಮಾತು ಕೇಳಿ ವೇದಿಕೆ ಮೇಲೆ ಕೂತಿದ್ದ ಡಿಕೆ ಶಿವಕುಮಾರ್, ಎದ್ದು ಬಂದು ರೇವಣ್ಣ ಹಾಗೂ ಸಿಪಿ ಯೋಗೇಶ್ವರ್ ಕಾಲೆಳೆದರು. ಈ ವೇಳೆ ಮಾತನಾಡಿದ ಅವರು, ರೇವಣ್ಣ ಬಡವ ಇದ್ದಾನೆ ಅವನ ಪರವಾಗಿ ನಾನೇ ೧೦ ಲಕ್ಷ ಕೊಡ್ತೀನಿ ಎಂದರು. ಜೊತೆಗೆ ಯೋಗೇಶ್ವರ ಬಹಳ ಬಡವ ಇದ್ದಾನೆ. ಅವನು ಕೊಡೋದೇ ಬೇಡ ನಾನೇ ೨೫ ಲಕ್ಷ ಕೊಡ್ತೀನಿ ಎಂದು ಸಿಪಿವೈ ಗೆ ಟಾಂಗ್ ಕೊಟ್ರು. ಈ ವೇಳೆ ಸಿಪಿವೈ ನಾನೇ ಕೊಡ್ತೀನಿ ಬಿಡಪ್ಪ ೨೫ ಲಕ್ಷ ಎಂದರು. ಅಷ್ಟೆ ಅಲ್ಲ ರೇವಣ್ಣ ಕೂಡ ನಾನು ೧೦ ಲಕ್ಷ ಕೊಡ್ತೀನಿ. ನೀನೇನೂ ಕೊಡೋದು ಬೇಡ ಎಂದರು.



