ಸಿಎಂ ಆಗೋ ಕನಸು ಕಾಣ್ತಿರೋ ಡಿಕೆ ಶಿವಕುಮಾರ್ ಈಗಾಗಲೇ ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದಾರೆ. ಹೈ ಕಮಾಂಡ್ ಗೆ ಆಗಿಂದಾಗ್ಲೇ ಒತ್ತಾಯ ಮಾಡುತ್ತಲೇ ಇದ್ದಾರೆ. ಅಷ್ಟೆ ಸಿದ್ದರಾಮಯ್ಯರ ಕೆಲವೊಂದು ಮಹತ್ವದ ನಿರ್ಣಯಗಳಿಗೆ ಅಡ್ಡಿ ಕೂಡ ಹಾಕುತ್ತಿದ್ದಾರೆ ಅನ್ನೋದು ಅನೇಕರ ಮಾತು. ಅದೇನೇ ಇದ್ದರೂ ಎಲ್ಲವೂ ಈ ಸಿಎಂ ಸ್ಥಾನಕ್ಕಾಗಿ ಅನ್ನೋದು ರಾಜಕಾರಣಿಗಳ ಮಾತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಸಿದ್ದರಾಮಯ್ಯ ಅವರ ಓಟಕ್ಕೆ ಹೈ ಕಮಾಂಡ್ ನಿಂದಲೇ ಡಿಕೆ ಶಿವಕುಮಾರ್ ಬ್ರೇಕ್ ಹಾಕಿದ್ದಾರೆ ಅನ್ನೋ ಗುಸುಗುಸು ಶುರುವಾಗಿದೆ.
ಹೌದು, ಸಿಎಂ ಸಿದ್ದರಾಮಯ್ಯ ಮುಂದೆ ಎರಡೆರಡು ಬಾರಿ ಗೆದ್ದು ಬೀಗಿದ್ರಾ ಡಿಸಿಎಂ ಡಿಕೆ ಶಿವಕುಮಾರ್ ಅನ್ನೊ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಮಾಡಿದ್ದ ಮಹತ್ವದ ನಿರ್ಣಯಗಳಿಗೆ ಹೈ ಕಮಾಂಡ್ ನಾಯಕರಿಂದಲೇ ತಡೆ ಒಡ್ಡಲಾಗಿದೆ. ರಾಹುಲ್ ಗಾಂಧಿಯೇ ಸಿಎಂಗೆ ಮಹತ್ವದ ಸೂಚನೆಗಳನ್ನ ಕೊಟ್ಟಿದ್ದಾರೆ. ಇದರ ಹಿಂದಿರೋ ಕಾಣದ ಕೈ ಡಿಕೆ ಶಿವಕುಮಾರ್ ಅನ್ನೋದು ಹಲವರ ಲೆಕ್ಕಾಚಾರ. ಇದು ಕೇವಲ ಲೆಕ್ಕಾಚಾರ ಅಷ್ಟೆ ಅಲ್ಲ ನಿಜ ಅಂತಿವೆ ಹಲವು ಮೂಲಗಳು.

ಒಂದು ಕಡೆ ಸಚಿವ ಸಂಪುಟ ವಿಸ್ತಾರಣೆ ಮಾಡಲು ಹೊರಟಿದ್ದರು ಸಿದ್ದರಾಮಯ್ಯ. ಮತ್ತಷ್ಟು ಆಪ್ತರನ್ನ ಸಂಪುಟಕ್ಕೆ ಕರೆತರಬೇಕು ಅಂದುಕೊಂಡಿದ್ದರು. ಮತ್ತೊಂದು ಕಡೆ ಜಾತಿ ಗಣತಿಯನ್ನ ಜಾರಿ ಮಾಡೋ ಮೂಲಕ ಹಿಂದುಳಿದ ವರ್ಗದ ನಾಯಕ, ಅಹಿಂದ ನಾಯಕ ಅಂದ್ರೆ ಅದು ಸಿದ್ದರಾಮಯ್ಯ ಅಂತ ಬಿಂಬಿಸೋದಕ್ಕೆ ಹೊರಟಿದ್ದರು. ಈ ಎರಡು ಮಹತ್ವದ ವಿಷಯಗಳಿಗೂ ಕೇಂದ್ರದ ಕಾಂಗ್ರೆಸ್ ನಾಯಕರು ನೋ ಎಂದಿದ್ದಾರೆ. ಜಾತಿ ಗಣತಿಯನ್ನ ಬೇಡ ಹೊಸ ಗಣತಿ ಮಾಡಿ ಅಂದಿದ್ದು ಹಾಗೂ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬೇಡ ಅಂತ ಕೇಂದ್ರ ನಾಯಕರು ಎಂದಿದ್ದು ಎಲ್ಲವೂ ಕಾಕತಾಳಿಯವೋ ಅಥವಾ ಉದ್ದೇಶ ಪೂರ್ವಕವೋ ಅನ್ನೋದು ಚರ್ಚೆ.
ಸದ್ಯ ರಾಜ್ಯ ರಾಜಕೀಯದಲ್ಲಿ ಸಿಎಂ ವರ್ಸಸ್ ಡಿಸಿಎಂ ಅನ್ನೋದು ಇದ್ದೇ ಇದೆ. ಈ ವಿಚಾರ ಬಹಿರಂಗ ಆಗದೇ ಇದ್ದರೂ ಕೂಡ ಆಗಿಂದಾಗ್ಲೇ ಈ ರೀತಿಯ ವಿಚಾರಗಳು ಬೇರೆ ಬೇರೆ ಸಂಧರ್ಭದಲ್ಲಿ ಹೊರ ಬರ್ತಾ ಇವೆ. ಹಿಂದೆ ವರ್ಗಾವಣೆ ವಿಚಾರವೊಂದರಲ್ಲಿ ಇಬ್ಬರಿಗೂ ಬಹಿರಂಗವಾಗಿಯೇ ವೈಮನಸ್ಸು ಉಂಟಾಗಿತ್ತು. ಅದು ಬಹಿರಂಗವಾಗಿಯೇ ಬಟಾಬಯಲಾಗಿತ್ತು. ಅದನ್ನ ಅಲ್ಲಿಂದಲ್ಲಿಗೆ ಮುಗಿಸಿದ್ದರು ಇಬ್ಬರೂ ನಾಯಕರು. ಆದರೆ ಇದೀಗ ಮತ್ತೊಮ್ಮೆ ಇದು ಸಾಬೀತಾಗ್ತಾ ಇದೆ. ಅಷ್ಟೆ ಅಲ್ಲ ಡಿಕೆಶಿ ಮೇಲುಗೈ ಸಾಧಿಸಿದರು ಅಂತಲೂ ಚರ್ಚೆ ಆಗ್ತಾ ಇದೆ.

ಪ್ರಮುಖವಾಗಿ ಸಿಎಂ ಸಂಪುಟ ವಿಸ್ತರಣೆ ಮಾಡಬೇಕು ಅಂತ ಮನಸ್ಸು ಮಾಡಿದ್ದರು. ತಮ್ಮ ಆಪ್ತರನ್ನ ಸಂಪುಟಕ್ಕೆ ಸೇರಿಸಲು ಮುಂದಾಗಿದ್ದರು. ಸಾಕಷ್ಟು ಬಾರಿ ಈ ವಿಚಾರವಾಗಿ ಹೈ ಕಮಾಂಡ್ ನಾಯರನ್ನೂ ಭೇಟಿಯಾಗಿ ಮಾತನಾಡಿದ್ದರು. ಇನ್ನೇನು ಈ ವಾರ ಆಗೇ ಬಿಟ್ತು ಸಂಪುಟ ವಿಸ್ತರಣೆ ಅಂತ ಅಂದುಕೊಳ್ಳುವಷ್ಟರಲ್ಲಿ ಎಲ್ಲವೂ ಬದಲಾಗಿದೆ. ಹೈ ಕಮಾಂಡ್ ನಾಯಕರೇ ಸದ್ಯಕ್ಕೆ ಪುನರ್ ರಚನೆ ಬೇಡ ಅಂತ ಹೇಳುತ್ತಿದ್ದಾರೆ. ಹಾಗಾದ್ರೆ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ನೋ ನೋ ಎಂದಿದ್ಯಾಕೆ ಹೈಕಮಾಂಡ್ ಅನ್ನೋ ಪ್ರಶ್ನೆ ಮೂಡಿದೆ. ಸಿಎಂ ಸಿದ್ದರಾಮಯ್ಯರ ಆಸೆಗೆ ಅಡ್ಡಿಯಾದ್ರಾ ಡಿಸಿಎಂ ಡಿ ಕೆ ಶಿವಕುಮಾರ್ ಅನ್ನೋದು ಕೂಡ ಚರ್ಚೆಗೆ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಪುನರ್ ರಚನೆ ಆಗಲಿ ಅಂತ ಹೈಕಮಾಂಡ್ ನಾಯಕರ ಮನವೊಲಿಸುವಲ್ಲಿ ಯಶ್ವಸಿಯಾಗಿದ್ದಾರೆ ಡಿಸಿಎಂ ಡಿಕೆಶಿ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಾ ಇರೋ ಮಾತು.
ಇದೊಂದೆ ಅಲ್ಲ ಜಾತಿ ಗಣತಿ ವಿಚಾರದಲ್ಲೂ ಡಿಕೆಶಿ ಮೇಲುಗೈ ಸಾಧಿಸಿದ್ರಾ ಅಂತ ಗುಸುಗುಸು ಕೇಳಿ ಬರ್ತಾ ಇದೆ. ಹಿಂದೆ ಕಾಂತರಾಜು ಗಣತಿ ವರದಿಯನ್ನ ಜಾರಿ ಮಾಡೇ ಮಾಡ್ತೀವಿ ಅಂತ ಹೇಳಿದ್ದಂತ ಸಿದ್ದರಾಮಯ್ಯ, ಈಗ ಫುಲ್ ಬದಲಾಗಿದ್ದಾರೆ. ಪ್ರಬಲ ಸಮುದಾಯಗಳ ವಿರೋಧದ ನಡುವೆಯೂ ತಾವು ಸ್ಪಷ್ಟತೆಯಿಂದಲೇ ಸಿದ್ದರಾಮಯ್ಯ ಇದ್ದಿದ್ದನ್ನೂ ಹಾಗೂ ಮಾತನಾಡಿದ್ದನ್ನೂ ನೋಡಿದ್ದೇವೆ. ಈ ಮೂಲಕ ಹಿಂದುಳಿದ ವರ್ಗಗಳ ಪರ ನಾನು ಎಂಬುದನ್ನ ತೋರಿಸಿದ್ದರು.
ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಇದನ್ನ ವಿರೋಧ ಮಾಡಿದ್ದರು. ಅಷ್ಟೆ ಯಾಕೆ ಡಿಕೆ ಶಿವಕುಮಾರ್ ಭೇಟಿಯಾಗಿದ್ದ ಒಕ್ಕಲಿಗ ಸಮುದಾಯ ಹೋರಾಟದ ಎಚ್ವರಿಕೆಯನ್ನೂ ಕೊಟ್ಟಿತ್ತು. ಈ ಬೆನ್ನಲ್ಲೇ ಹೈ ಕಮಾಂಡ್ ನಾಯಕರಿಗೆ ಹೋರಾಟದ ವಾಸ್ತವತೆಯನ್ನ ಹೇಳಿದ್ದಾರೆ ಡಿಕೆಶಿ. ಹಾಗಾಗಿಯೇ ಮರು ಗಣತಿಯನ್ನ ಮಾಡಿ ಅಂತ ಹೈ ಕಮಾಂಡ್ ನಾಯಕರು ಸಿದ್ದರಾಮಯ್ಯ ಗೆ ಸೂಚಿಸಿದ್ದಾರೆ ಅನ್ನೋದು ಕೂಡ ಚರ್ಚೆಯಾಗ್ತಾ ಇದೆ. ಈ ಮೂಲಕ ಸಿದ್ದರಾಮಯ್ಯ ಅವರ ಗಣತಿ ಜಾರಿಯ ಮಹತ್ವದ್ದು ನಿರ್ಣಯಕ್ಕೆ ಬ್ರೇಕ್ ಬಿದ್ದಂತಾಗಿದೆ.
ಸದ್ಯ ಸಿಎಂ ಸಿದ್ದರಾಮಯ್ಯ ಅವರ ಎರಡು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಆದರೆ ಅದನ್ನು ಜಾರಿ ಮಾಡೋದಕ್ಕೆ ಆಗ್ತಿಲ್ಲ. ಒಂದು ಕಡೆ ಜಾತಿ ಜನಗಣತಿ, ಮತ್ತೊಂದು ಕಡೆ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಬ್ರೇಕ್ ಹಾಕಿದ್ದಾರೆ. ಇದೆಲ್ಲದರ ಹಿಂದೆ ಡಿಕೆಶಿ ಇದ್ದಾರೆ ಅನ್ನೋದು ಸದ್ಯ ಚರ್ಚೆಗೆ ಬಂದ ವಿಚಾರ.



