ಸರ್ಕಾರದ ಯಾವುದೇ ಜಾಹೀರಾತುಗಳು ಇದುವರೆಗೂ ಯಾವುದೇ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರಲಿಲ್ಲ. ಆದರೆ ಇದೀಗ ಸರ್ಕಾರ ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ಒಪ್ಪಿ ಆದೇಶ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ ಹಾಗೂ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನ ಅಭಿನಂದಿಸಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಡಿಜಿಟಲ್ ಮಾಧ್ಯಮವು ಜಗತ್ತಿನ ಮುಂಚೂಣಿ ಮಾಧ್ಯಮವಾಗಿ ಜನರಿಗೆ ಹತ್ತಿರವಾಗಿದೆ. ಆದರೆ ಇದುವರೆಗೂ ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಇರಲಿಲ್ಲ. ಡಿಜಿಟಲ್ ಮಾಧ್ಯಮಗಳಿಗೆ ಮಾನ್ಯತೆ ದೊರಕಿಸಿಕೊಡುವ ಉದ್ದೇಶ ಹಾಗೂ ಡಿಜಿಟಲ್ ಮಾಧ್ಯಮಗಳ ವೃತ್ತಿಪರ ಪತ್ರಕರ್ತರ ಉಳಿವಿಗಾಗಿ ಟಿವಿ ಹಾಗೂ ಪತ್ರಿಕೆಗಳ ಮಾದರಿಯಲ್ಲೇ ಡಿಜಿಟಲ್ ಮಾಧ್ಯಮಗಳಿಗೆ ಜಾಹೀರಾತು ಪಡೆಯುವ ಮೂಲ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಸ್ಥಾಪಿಸಲಾಗಿತ್ತು. 24-08-2022 ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಸ್ಥಾಪಿತವಾದ ಸಂಸ್ಥೆ ಈ ದಿಸೆಯಲ್ಲಿ ಸಾಕಷ್ಟು ಶ್ರಮ ಹಾಕಿತ್ತು. 10-06-2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಾರ್ತಾ ಇಲಾಖೆಯ ಆಯುಕ್ತರಿಗೆ ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಹಾಗೂ ಜಾಹೀರಾತು ನೀಡುವ ಕುರಿತು ಮನವಿ ಮಾಡಲಾಗಿತ್ತು. ಈ ಮನವಿಗೆ 22-08-2023 ರಂದು ಪತ್ರದ ಮೂಲಕ ಉತ್ತರಿಸಿದ್ದ ವಾರ್ತಾ & ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ರಾಮಲಿಂಗಪ್ಪ ನಿಮ್ಮ ಬೇಡಿಕೆ ಪರಿಶೀಲನೆ ಹಂತದಲ್ಲಿದ್ದು ಅನುಮೋದನೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಇದೀಗ ಸರ್ಕಾರ ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ಒಪ್ಪಿ ಆದೇಶ ಜಾರಿಗೊಳಿಸಿದೆ. ಇದು ನಿಜಕ್ಕೂ ಅಭಿನಂದನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ ಹಾಗೂ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನ ಅಭಿನಂದಿಸಲು ತೀರ್ಮಾನಿಸಲಾಗಿದೆ. ಇದೇ ತಿಂಗಳು 29 ರಂದು ಅಂದರೆ ಮಂಗಳವಾರ ( 29,04,2025 ) ಬೆಳಗ್ಗೆ 11 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ KSDMF ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆವಿ ಪ್ರಭಾಕರ್ ಅವರಿಗೆ ಅಭಿನಂದಿಸಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಡಿಜಿಟಲ್ ಫೋರಂನ ಎಲ್ಲಾ ಸದಸ್ಯ ಸಂಸ್ಥೆಯ ಸಿಬ್ಬಂದಿಗಳು & ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಅಭಿನಂಧನಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು KSDMF ಅಧ್ಯಕ್ಷರಾದ ಬಿ. ಸಮೀವುಲ್ಲಾ ಮನವಿ ಮಾಡಿದ್ದಾರೆ. ಜಿಲ್ಲಾ ಮಟ್ಟದ ಡಿಜಿಟಲ್ ಮಾಧ್ಯಮ ಮಿತ್ರರೂ ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಕೆಲವು ವರ್ಷಗಳಿಂದ ಮಾಧ್ಯಮದ ವ್ಯಾಪ್ತಿ ಮತ್ತು ಸ್ವರೂಪ ಬದಲಾಗಿದೆ. ಅಂತರ್ಜಾಲ, ಖಾಸಗಿ ಕಂಪ್ಯೂಟರ್, ಸ್ಮಾರ್ಟ್ ಟಿವಿ ಹಾಗೂ ಸ್ಮಾರ್ಟ್ ಫೋನ್, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಜೊತೆಗೆ, ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಮಾದರಿಯಲ್ಲಿ ಡಿಜಿಟಲ್ ಜಾಹೀರಾತು ನೀಡಲು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿಯನ್ನು ಸರ್ಕಾರ ಹೊರತಂದಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಅನ್ವಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಾದ ಗೂಗಲ್ (ಯೂಟ್ಯೂಬ್), ಮೆಟಾ (ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ವಾಟ್ಸಾಪ್ ಚಾನಲ್), ಸರ್ಚ್ ಇಂಜಿನ್ಗಳಾದ ಗೂಗಲ್, ಬಿಂಗ್, ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಈ ಹಿಂದೆ ಟ್ವಿಟರ್), ಫೇಸ್ಬುಕ್, ಇನ್ಸ್ಟಾಗ್ರಾಂ, ಲಿಂಕ್ಡ್ಇನ್, ವಾಟ್ಸಾಪ್, ಸ್ನಾಪ್ಚಾಟ್, ಟೆಲಿಗ್ರಾಂ, ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್, ಸೋನಿಲೈವ್, ಜಿಯೋ ಸಿನಿಮಾ, ಜೀ 5, ವೂಟ್, ಸನ್ ನೆಕ್ಸ್ಟ್ ಮತ್ತು ಟಾಕೀಸ್, ಫಿನ್ಟೆಕ್ ಪ್ಲಾಟ್ಫಾರ್ಮ್ಗಳಾದ ಪೇಟಿಎಂ, ಪೋನ್ಪೇ ಮತ್ತು ಜಿಪೇ ಸೇರಿದಂತೆ ಇನ್ನಿತರ ಡಿಜಿಟಲ್ ವೇದಿಕೆಗಳಡಿ ಜಾಹೀರಾತು ಅರ್ಹ ಏಜೆನ್ಸಿಗಳ ಮೂಲಕ ನೀಡಲು ಅವುಗಳನ್ನು ಎಂಪ್ಯಾನಲ್ ಮಾಡಿಕೊಳ್ಳಲು ವಾರ್ತಾ ಇಲಾಖೆ ಉದ್ದೇಶಿಸಿದೆ.

ಡಿಜಿಟಲ್ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಬಯಸುವ ಏಜೆನ್ಸಿಗಳು ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್ನಲ್ಲಿ ನೋಂದಣಿಯಾದ ಪ್ರೈವೇಟ್ ಲಿಮಿಟೆಡ್ ಕಂಪನಿ, ಪಬ್ಲಿಕ್ ಲಿಮಿಟೆಡ್ ಕಂಪನಿ, ಪಾಲುದಾರಿಕೆ, ಲಿಮಿಟೆಡ್ ಲಯಬಿಲಿಟಿ ಪಾಲುದಾರಿಕೆ ಹೊಂದಿರಬೇಕು. ಎಂಪ್ಯಾನೆಲಿಂಗ್ ಸಮಯದಲ್ಲಿ ಕನಿಷ್ಠ ಎರಡು ವರ್ಷವಾಗಿರಬೇಕು. ಜಿಎಸ್ಟಿ ನೋಂದಣಿ ಇರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಚೇರಿ ಇರಬೇಕು. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆ ಇರಬೇಕು. ಡಿಜಿಟಲ್ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ಆಳವಾದ ಜ್ಞಾನವಿರಬೇಕು. ಸರ್ಕಾರಗಳಿಗೆ ಪ್ಲಾಟ್ಫಾರ್ಮ್ಗಳಲ್ಲಿ ಡಿಜಿಟಲ್ ಜಾಹೀರಾತು ನೀಡಲು ಗೂಗಲ್ ಅಥವಾ ಮೆಟಾ ಜೊತೆಗೆ ಮಾನ್ಯವಾದ ಒಪ್ಪಂದ/ಒಡಂಬಡಿಕೆ ಹೊಂದಿರಬೇಕು. ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಸರ್ಕಾರದ ಜಾಹೀರಾತು ನೀಡಲು ಗೂಗಲ್ ಅಥವಾ ಮೆಟಾದಿಂದ ಅನುಮತಿ ಪಡೆದುಕೊಂಡಿರಬೇಕು ಎಂದು ಷರತ್ತುಗಳನ್ನು ನಿಗದಿ ಪಡಿಸಿದೆ.
ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಅದರ ಏಜೆನ್ಸಿಗಳ ಎಲ್ಲ ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾದರೆ ಎಂಪ್ಯಾನೆಲ್ಮೆಂಟ್ ರದ್ದುಗೊಳಿಸಲಾಗುತ್ತದೆ. ಭಾರತದ ಕಾನೂನನ್ನು ಉಲ್ಲಂಘಿಸುವ ಪದ, ದೃಶ್ಯಗಳು, ಆಡಿಯೋ ಅಥವಾ ಅಂತಹ ಯಾವುದೇ ವಿಷಯವನ್ನು ಪ್ರಕಟಿಸಿರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಡಿಜಿಟಲ್ ಮಾಧ್ಯಮ ಘಟಕಗಳು ಮತ್ತು ಡಿಜಿಟಲ್ ಜಾಹೀರಾತು ಏಜೆನ್ಸಿಗಳು sevasindhu.karnataka.gov.in ಗೆ ಭೇಟಿ ನೀಡಿ, ನಿಗದಿ ಪಡಿಸಿರುವ ದಾಖಲಾತಿಗಳೊಂದಿಗೆ ಶುಲ್ಕ ಪಾವತಿಸಿ, ಮೇ 15ರ ಒಳಗೆ ಅರ್ಜಿ ಸಲ್ಲಿಸಲು ಕೋರಿದೆ.
ಡಿಜಿಟಲ್ ಮಾಧ್ಯಮ ಮಿತ್ರರು KSDMF ಸದಸ್ಯತ್ವ ಪಡೆಯಲು ಸನತ್ ರೈ, ಖಜಾಂಜಿ – 8105932421 ಸಂಖ್ಯೆಯನ್ನು ಸಂಪರ್ಕಿಸಬಹುದು. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗೆ ಕೆಳಕಂಡ ಮೊಬೈಲ್ ನಂಬರ್ಗಳನ್ನು ಸಂಪರ್ಕಿಸಬಹುದು.
ಕೆ.ಎಂ ಶಿವಕುಮಾರ್, KSDMF ಕಾರ್ಯದರ್ಶಿ ( ಕರ್ನಾಟಕ ಟಿವಿ ) 7204490507
ವಸಂತ್ ಕುಮಾರ್, KSDMF ಉಪಾಧ್ಯಕ್ಷರು ( ಕನ್ನಡ ನ್ಯೂಸ್ ನೌ )- 9738123234
ಮಾಲ್ತೇಶ್, KSDMF ಜಂಟಿ ಕಾರ್ಯದರ್ಶಿ 9480472030
ರಜನಿ, KSDM ಜಂಟಿ ಕಾರ್ಯದರ್ಶಿ – 960657678



