ಬೆಂಗಳೂರು; ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದೆ.. ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಿದ್ದಾರೆ.. ಈ ಬಜೆಟ್ನ ಗಾತ್ರ ಬರೋಬ್ಬರಿ 4 ಲಕ್ಷದ 09 ಸಾವಿರದ 549 ಕೋಟಿ ರೂಪಾಯಿ. ಇದನ್ನು ಸಿಎಂ ಸಿದ್ದರಾಮಯ್ಯ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎಂದು ಬಣ್ಣಿಸಿದ್ದಾರೆ.. ಈ ಬಾರಿಯ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಬ್ರ್ಯಾಂಡ್ ಬೆಂಗಳೂರಿಗಾಗಿ 21 ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.. ಇದರಲ್ಲಿ 40 ಸಾವಿರ ಕೋಟಿ ರೂಪಾಯಿ ವೆಚ್ಚದ ಸುರಂಗ ಮಾರ್ಗ ಯೋಜನೆ ಪ್ರಮುಖವಾದುದು. ಇದು ಪಕ್ಕಕ್ಕಿಟ್ಟರೆ ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆಯನ್ನು ಮುಂದುವರೆಸಿದೆಯಾ ಎಂಬ ಪ್ರಶ್ನೆಗಳು ಏಳುತ್ತಿವೆ.. ಈ ಬಾರಿಯೂ ಕೂಡಾ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಭರಪೂರ ಯೋಜನೆಗಳನ್ನು ನೀಡಿದೆ.. ಅದ್ರಲ್ಲೂ ಕೂಡಾ ವಿಪಕ್ಷಗಳ ವಿರೋಧದ ನಡುವೆಯೂ ಕೂಡಾ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.. ಇನ್ನು ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರಿಡುವುದಾಗಿ ಘೋಷಣೆ ಮಾಡಲಾಗಿದೆ.. ಈ ವಿಚಾರಗಳು ಮುಂದಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುವ ಎಲ್ಲಾ ಸಾಧ್ಯತೆಗಳಿವೆ..

ಸದ್ಯ ಸರ್ಕಾರಿ ಗುತ್ತಿಗೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಶೇಕಡಾ 24ರಷ್ಟು ಮೀಸಲಾತಿ ಇದೆ.. ಇದ್ರಲ್ಲಿ ಶೇಕಡಾ 2ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ.. ಒಬಿಸಿ- ಪ್ರವರ್ಗ 1ಕ್ಕೆ ಶೇಕಡಾ 4, ಹಾಗೂ ಒಬಿಸಿ- ಪ್ರವರ್ಗ 2ಗೆ ಶೇಕಡಾ 15 ರಷ್ಟು ಮೀಸಲಾತಿ ನೀಡಲಾಗಿದ್ದು, ಒಟ್ಟು ಶೇಕಾಡ 43ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದೀಗ ಇದ್ರಲ್ಲಿ ಮುಸ್ಲಿಂ ಸಮುದಾಯಕ್ಕೂ ಕೂಡಾ ಮೀಸಲಾತಿಯನ್ನು ಕಲ್ಪಿಸಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.. ಜನವರಿ ತಿಂಗಳಿನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ನೇತೃತ್ವದಲ್ಲಿ ಮುಸ್ಲಿಂ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು.. ಈ ವೇಳೆ ಈ ನಿಯೋಗ, ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿತ್ತು.. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಸೂಕ್ತವಾಗಿ ಸ್ಪಂದಿಸಿದ್ದರು.. ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡೋದಾಗಿ ಹೇಳಿದ್ದರು.. ಆಗಲೇ ಬಿಜೆಪಿ ನಾಯಕರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಯಂತೆಯೇ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡಾ 4ರಷ್ಟು ಮೀಸಲಾತಿ ಕಲ್ಪಿಸಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದಿಷ್ಟೇ ಅಲ್ಲ, ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ಘೋಷಣೆಗಳನ್ನು ಮಾಡಲಾಗಿದೆ.. ಮುಸ್ಲಿಮರ ಸರಳ ಮದುವೆಗೆ 50 ಸಾವಿರ ಆರ್ಥಿಕ ಸಹಾಯ ನೀಡೋದಾಗಿ ಘೋಷಣೆ ಮಾಡಲಾಗಿದೆ. ವಕ್ಫ್, ಖಬರಸ್ಥಾನಗಳ ಮೂಲಸೌಕರ್ಯಕ್ಕೆ 150 ಕೋಟಿ ರೂಪಾಯಿ ನೀಡಲಾಗಿದೆ. ಮುಸ್ಲಿಮರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂಪಾಯಿ, ಮುಸ್ಲಿಮರು ಅತಿಹೆಚ್ಚು ವಾಸವಿರುವ ಪ್ರದೇಶದಲ್ಲಿ ITI ಸ್ಥಾಪನೆ ಮಾಡೋದಾಗಿ ಹೇಳಲಾಗಿದೆ. KEA ಅಡಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ಶುಲ್ಕ ಕಡಿತ ಮಾಡೋದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಹೇಳಿದ್ದಾರೆ. ಉಲ್ಲಾಳದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಪಿ.ಯು ಕಾಲೇಜು ಸ್ಥಾಪನೆ ಮಾಡೋದಾಗಿಯೂ ಘೋಷಣೆ ಮಾಡಲಾಗಿದೆ. ಮುಸ್ಲಿಂ ವಿದ್ಯಾರ್ಥಿಗಳ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಏರಿಕೆ ಮಾಡಲಾಗಿದೆ. ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ, ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ ನೀಡೋದಾಗಿಯೂ ಹೇಳಲಾಗಿದೆ.
ಇನ್ನು ಬೆಂಗಳೂರು ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಕೂಡಾ ಬಜೆಟ್ನಲ್ಲಿ ಅನಿರೀಕ್ಷಿತ ಘೋಷಣೆಯಾಗಿದೆ. ಯಾರೂ ಕೂಡಾ ಇದನ್ನು ಊಹೆ ಮಾಡಿರಲಿಲ್ಲ. ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ನಿಧನರಾದ ಮನಮೋಹನ್ ಸಿಂಗ್ ಹೆಸರಿಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಆದ್ರೆ ಇದಕ್ಕೆ ವಿಪಕ್ಷಗಳು ಯಾವ ರೀತಿ ಸ್ಪಂದಿಸುತ್ತವೆ. ಜನ ಸಾಮಾನ್ಯರು ಇದನ್ನು ಒಪ್ಪುತ್ತಾರೆಯೇ ಅನ್ನೋದನ್ನು ನೋಡಬೇಕಾಗಿದೆ.



