ಡ್ರೋನ್ ಪ್ರತಾಪ್ ನಾನೊಬ್ಬ ಯುವ ವಿಜ್ಞಾನಿ, ನಾನು ಡ್ರೋನ್ ತಯಾರಿಸಿದ್ದೇನೆ ಎಂದು ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಮಾಧ್ಯಮಗಳನ್ನು ಯಾಮಾರಿಸಿದ್ದ. ನಟ ಜಗ್ಗೇಶ್ ಅವರಿಂದ ಹಿಡಿದು ಅನೇಕರು ಘಟಾನುಘಟಿಗಳು ಡ್ರೋನ್ ಪ್ರತಾಪ್ಗೆ ಹಣದ ನೆರವು ನೀಡಿದ್ದರು. ಆದರೆ, ಆತ ಯುವ ವಿಜ್ಞಾನಿಯಲ್ಲ ನಕಲಿ ವಿಜ್ಞಾನಿ, ಆತ ಎಲ್ಲರ ಕಿವಿಗೆ ಹೂ ಇಟ್ಟಿದ್ದಾನೆ ಅಂತಾ ಗೊತ್ತಾದಾಗ ಆತನನ್ನು ನಂಬಿದ್ದ ಅದೇ ಜನ ಯಾರನ್ನು ನಂಬೋದು ಅಂತಾ ಬೇಸರಪಟ್ಟುಕೊಂಡಿದ್ದು ಉಂಟು. ಎಲ್ಲರ ನಂಬಿಕಗೆ ದ್ರೋಹ ಬಗೆದು ಪೊಲೀಸರು ವಿಚಾರಣೆಯನ್ನೂ ಎದುರಿಸಿ ಕಣ್ಮರೆಯಾಗಿದ್ದ ಡ್ರೋನ್ ಪ್ರತಾಪ್, ಎರಡು ವರ್ಷಗಳ ಬಳಿಕ ಇತ್ತೀಚೆಗಷ್ಟೇ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇಡೀ ಕರ್ನಾಟಕ ಆತನ ಮಾತಿಗೆ ಮರುಳಾದ ಒಂದು ಕಾಲವಿತ್ತು. ಆದರೆ, ಆತನ ನಿಜರೂಪ ತಿಳಿದಾಗ ಅದೇ ಕರ್ನಾಟಕದ ಜನ ಇಂದಿಗೂ ಆತನನ್ನು ಕಾಗೆ ಪ್ರತಾಪ್ ಅಂತಾನೇ ಕರೆಯುತ್ತಿದ್ದಾರೆ. ನನ್ನ ತಮ್ಮ ಡ್ರೋನ್ ಪ್ರತಾಪ್ ಮತ್ತು ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ… ಈ ಮಾತನ್ನು ಸ್ವತಃ ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದು, ಭಾರಿ ವೈರಲ್ ಆಗಿದೆ.ಅಷ್ಟಕ್ಕೂ ಪ್ರಥಮ್ ಈ ಮಾತನ್ನು ಯಾಕೆ ಹೇಳಿದ್ರು ?
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷರಾಗಿರುವ ಪ್ರತಾಪ್, ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದಾರೆ. ಟೇಬಲ್ ಮೇಲೊಂದು ಲ್ಯಾಪ್ಲಾಪ್ ಇಟ್ಟು, ಅದಕ್ಕೆ ಡಾಟಾ ಕೇಬಲ್ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಮೆಶಿನ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾನೆ. ಟೇಬಲ್ ಮೇಲೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳಿವೆ. ಟೇಬಲ್ನ ಒಂದು ಬದಿಯಲ್ಲಿ ಡ್ರೋನ್ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತದೆ.
ಡ್ರೋನ್ ಪ್ರತಾಪ್ ಇನ್ಸ್ಟಾಗ್ರಾಂ ಪೋಸ್ಟ್ಗೆ ಪ್ರಥಮ್ ಕೂಡ ಕಾಮೆಂಟ್ ಮಾಡಿದ್ದಾರೆ. ನನ್ನ ತಮ್ಮ ಡ್ರೋನ್ ಪ್ರತಾಪ್ ಮತ್ತು ನಾನು ಒಂದೇ ತಾಯಿ ಮಕ್ಕಳಿದ್ದಂಗೆ. ನಾನು ಹುಣ್ಣಿಮೇಲಿ ಹುಟ್ಟಿದೆ ಆದರೆ, ಪ್ರತಾಪ್ ಹುಟ್ಟಿದಾಗ ಕರೆಂಟ್ ಹೋಗಿತ್ತು. ಯಾವತ್ತಿದ್ರೂ ಪ್ರಥಮ್ಮು, ಪ್ರತಾಪು ಮತ್ತು ನಿರ್ದೇಶಕ ಪ್ರೇಮ್ ತ್ರಿಮುರ್ತಿಗಳು. ನಾವೆಲ್ಲಾ ಒಂದೇ ಎಂದು ಕಾಮೆಂಟ್ ಮಾಡುವ ಮೂಲಕ ಕಿಚಾಯಿಸಿದ್ದಾರೆ. ನೆಟ್ಟಿಗರು ಪ್ರಥಮ್ ಅವರ ಕಾಮೆಂಟ್ ಪ್ರತಿಕ್ರಿಯೆ ನೀಡಿದ್ದು, ಪ್ರತಾಪ್ ಕಾಗೆ ಹಾರಿಸ್ತಾರೆ. ನೀವು ಏನು ಹಾರಿಸ್ತೀರಾ ಸರ್ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ ಎಲ್ಲರು ಹಾರಿಸೋರೆ ಎಂದು ಕಮೆಂಟಿಸಿದ್ದಾರೆ.
ಈ ಬಾರಿ ಡ್ರೋನ್ ಪ್ರತಾಪ್ ಯಾವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಲ್ಲ. ಆದರೆ, ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ’ ಎಂಬ ಅಡಿಬರಹವನ್ನು ಡ್ರೋನ್ ಪ್ರತಾಪ್ ನೀಡಿದ್ದಾರೆ. ಸದ್ಯ ಪ್ರತಾಪ್ ಅವರ ಹೊಸ ಅವತಾರ ವೈರಲ್ ಆಗಿದ್ದು, ಫೋಟೋ ನೋಡಿದ ನೆಟ್ಟಿಗರು ಪ್ರತಾಪ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಗೆಬಗೆಯ ಕಾಮೆಂಟ್ಗಳೊಂದಿಗೆ ಕಾಲೆಳೆಯುತ್ತಿದ್ದಾರೆ.



