ಸರ್ಕಾರಿ ಕಾರ್ಯಕ್ರಮಗಳು ಅಂದ ಮೇಲೆ ಪಕ್ಷಾತೀತವಾಗಿ ವೇದಿಕೆ ಮೇಲೆ ಬೇರೆ ಬೇರೆ ನಾಯಕರುಗಳನ್ನ ಕೂರಿಸೋದು ಸಹಜ. ಯಾವ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿರುತ್ತೋ ಆ ಸರ್ಕಾರವನ್ನ ಹಾಗೂ ಕಾರ್ಯಕ್ರಮವನ್ನ ಹೊಗಳೋದು ಕೂಡ ಸಹಜ. ಆದರೆ ಇಲ್ಲೊಂದು ಕಾರ್ಯಕ್ರಮದಲ್ಲಿ ಆಯೋಜನೆ ಆಗಿದ್ದ ಕಾರ್ಯಕ್ರಮ ಬಿಟ್ಟು ವೇದಿಕೆ ಮೇಲೆಯೇ ಶಾಸಕರು ಹಾಗೂ ಸಂಸದರು ಮಾತಿಗೆ ಮಾತು ಬೆಳೆಸಿದ್ದಾರೆ. ಇದು ದೊಡ್ಡ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಹೌದು, ನಿನ್ನೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ನಡೆದಿದೆ. ಈ ವೇಳೆ ಸಂಸದ ಪಿಸಿ ಮೋಹನ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಒಂದೇ ವೇದಿಕೆ ಹಂಚಿಕೊಂಡಿದ್ದರು. ಸರ್ಕಾರದಿಂದ ಆಯೋಜನೆಯಾಗಿದ್ದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ಬಲಿಜ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಕಾಲದ ಕೊಡುಗೆಗಳ ಬಗ್ಗೆ ಪಿಸಿ ಮೋಹನ್ ಹೇಳುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಶಾಸಕ ಪ್ರದೀಪ್ ಈಶ್ವರ್.
ಇದು ಸರ್ಕಾರಿ ಕಾರ್ಯಕ್ರಮ, ಒಂದು ಪಕ್ಷವನ್ನ ಹೊಗಳೋದು ಸರಿಯಲ್ಲ. ಸ್ಟೇಟ್ ನಲ್ಲಿ ಇರೋದು ಸಿದ್ದರಾಮಯ್ಯ ನವರ ಸರ್ಕಾರ, ನಿಮ್ಮಪ್ಪನ ಸರ್ಕಾರ ಅಲ್ಲ. ಎಂದು ಪ್ರದೀಪ್ ಈಶ್ವರ್ ಜೋರಾಗಿ ಮಾತನಾಡಿದ್ದಾರೆ. ಆಗ ನೀವು ಸಿದ್ದರಾಮಯ್ಯನ ಪ್ರೋಗ್ರಾಮ್ ಅಂದ್ರೆ ನಾನು ಬಿಜೆಪಿ ಶಾಸಕ ಇರಬೇಕಾ ಬೇಡ್ವಾ ಅಂತಾ ಪಿಸಿ ಮೋಹನ್ ಕಿಡಿ ಕಾರಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರದ ಪ್ರೋಗ್ರಾಮ್, ಬಾಯಿ ಮಚ್ಕೊಂಡು ಕೂತ್ಕೋಬೇಕ್ ಅಂತಾ ಬಿಜೆಪಿಗರಿಗೆ ಆವಾಜ್ ಹಾಕಿದ್ದಾರೆ ಪ್ರದೀಪ್.
ಇದು ಸಿದ್ದರಾಮಯ್ಯನ ಕಾರ್ಯಕ್ರಮ, ನಿಮ್ಮಪ್ಪನ ಕಾರ್ಯಕ್ರಮ ಅಲ್ಲ ಗೆಟ್ ಲಾಸ್ಟ್ ಅಂತ ಕಿಡಿಕಾರಿದರು. ನಮಗೂ ನಮ್ಮ ಪಾರ್ಟಿ ಸಿದ್ಧಾಂತಗಳಿರುತ್ತೆ. ನೀವು ನಿಮ್ಮ ಪಕ್ಷವನ್ನ ಗುಣಗಾನ ಮಾಡಿದ್ರೆ, ನಾವು ನಮ್ಮ ಪಕ್ಷವನ್ನ ಗುಣಗಾನ ಮಾಡಬೇಕಾಗುತ್ತೆ ಅಂತ ವಾರ್ನಿಂಗ್ ಕೊಟ್ಟರು.
ಈಶ್ವರ್ ಅವರೇ, ಇಲ್ಲಿ ನೀವು ಕಾರ್ಯಕ್ರಮ ಮಾಡ್ತಾ ಇದ್ದೀರ. ಬಲಿಜ ಸಮುದಾಯದ ಕಾರ್ಯಕ್ರಮ. ಇದು ಸಿದ್ದರಾಮಯ್ಯ ಅವರದು ಅಂದರೆ, ನಾನು ಬಿಜೆಪಿ ಸಂಸದ ಇಲ್ಲಿ ಇರಬೇಕಾ, ಬೇಡವಾ ಎಂದರು. ಈ ಸಮುದಾಯಕ್ಕೆ 3ಎ ಯಿಂದ 2ಎಗೆ ಮಾಡಿರುವುದು ನಾವು. ಈ ಜಯಂತಿ ಪ್ರಾರಂಭಿಸಿದ್ದು ಬಿಜೆಪಿ. ನೀನು ಏನು ಮಾತನಾಡಿದರೂ ಸುಮ್ಮೆ ಕುಳಿತುಕೊಂಡು ಇರಕ್ಕೆ ಆಗಲ್ಲ ಎಂದರು. ಬಳಿಕ ಪ್ರದೀಪ್ ಈಶ್ವರ್, ನೀವು ನಮ್ಮ ಸರ್ಕಾರವನ್ನು ಏಕೆ ಬೈತಿರಾ ಎಂದು ಪ್ರಶ್ನೆ ಮಾಡಿದರು.
ಇನ್ನು ಆಯೋಜಕರು ಇಬ್ಬರನ್ನೂ ಸಮಾಧಾನ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಕಾರ್ಯಕ್ರಮವನ್ನ ಬಹಿಷ್ಕರಿಸಿ ಹೊರ ನಡೆದರು.



