ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬೇರೆ ಬೇರೆ ಪಕ್ಷವಾದರೂ ಅವರ ಬಾಂದವ್ಯ ಚೆನ್ನಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಸಮಯದಲ್ಲೂ ಕೂಡ ಜಿಟಿ ದೇವೇಗೌಡರನ್ನ ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ಮಾಡಿದ್ದರು ಸಿದ್ದರಾಮಯ್ಯ. ಆದರೆ ಮಗನ ಭವಿಷ್ಯತ್ತಿಗಾಗಿ ಜೆಡಿಎಸ್ ನಲ್ಲೇ ಉಳಿದುಕೊಂಡರು. ಜೊತೆಗೆ ಜೆಡಿಎಸ್ ನಲ್ಲಿ ಉನ್ನತ ಸ್ಥಾನ ಮಾನ ಸಿಗುತ್ತೆ ಅನ್ನೋ ಕಾರಣಕ್ಕೂ ಅಲ್ಲೇ ನಿಂತು ಶಾಸಕರಾದರು. ಆದರೆ ಸದ್ಯ ಯಾವುದೇ ಸ್ಥಾನ ಮಾನ ಅಲ್ಲಿ ಸಿಗಲಿಲ್ಲ. ಹೀಗಾಗಿ ಪಕ್ಷದಿಂದ ಹಾಗೂ ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ.

ಇದೆಲ್ಲವೂ ಒಂದು ಭಾಗವಾದರೆ, ಮತ್ತೊಂದು ಕಡೆ ನೇರವಾಗಿಯೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೊಗಳುವ ಕೆಲಸ ಆಗಿಂದಾಗ್ಲೇ ಜಿಟಿ ದೇವೇಗೌಡರು ಮಾಡ್ತಾನೆ ಇದ್ದಾರೆ. ಇದು ಜೆಡಿಎಸ್ ನ ದಳಪತಿಗಳಿಗೆ ಮುಜುಗರ ಅನ್ನಿಸಿದರೂ ಕಂಡು ಕಾಣದಂತೆ ಕೂತಿದ್ದಾರೆ. ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕಾಗಿಯೇ ಈ ರೀತಿ ಮಾಡ್ತಾ ಇದ್ದಾರೆ ಅನ್ನೋದು ಅವರಿಗೂ ಗೊತ್ತು. ಒಂದು ಲೆಕ್ಕಾಚಾರದಲ್ಲಿ ಇಷ್ಟೊತ್ತಿಗೆ ಕಾಂಗ್ರೆಸ್ ಮನೆಗೆ ಹೋಗ್ತಾರೆ ಜಿಟಿ ದೇವೇಗೌಡರು ಎಂದು ಚರ್ಚೆಯೂ ನಡೆದಿತ್ತು. ಆದರೆ ಅದ್ಯಾಕೋ ಜಿಟಿ ದೇವೇಗೌಡರು ಅಂತಹದೊಂದು ಸಾಹಸಕ್ಕೆ ಕೈ ಹಾಕಲಿಲ್ಲ.
ಇದೆಲ್ಲದರ ಮಧ್ಯೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ, ಸಿದ್ದರಾಮಯ್ಯರ ಕೆಲಸವನ್ನ ಹೊಗಳುತ್ತಲೇ ಬಂದಿದ್ದಾರೆ ಜಿಟಿ ದೇವೇಗೌಡರು. ಈಗ ಮತ್ತೆ ಅಂತಹದ್ದೇ ಒಂದು ಘಟನೆ ನಡೆದಿದೆ. ಇಂದು ಮೈಸೂರಿನ ಹಿನಕಲ್ ನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಜೊತೆಗೆ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡರು ಕೂಡ ಇದ್ದರು. ಈ ವೇಳೆ ಭಾಷಣದ ಉದ್ದಕ್ಕೂ ಸಿದ್ದರಾಮಯ್ಯರ ಆಡಳಿತವನ್ನು ಹಾಡಿ ಹೊಗಳಿದ್ದಾರೆ ಜಿಟಿಡಿ.

ಬಡ ಜನರಿಗೆ ಐದು ಕೆಜಿ ಅಕ್ಕಿ ಕೊಟ್ಟ ಕೀರ್ತಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಸಲ್ಲುತ್ತದೆ. ಬಡವರ ಹಸಿವು ನೀಗಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಶಾಸಕ, ಮಂತ್ರಿ, ಡಿಸಿಎಂ, ಸಿಎಂ ಹೀಗೆ 47 ವರ್ಷಗಳ ಆಡಳಿತ ಮಾಡಿರುವ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿ ದಾಖಲೆ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರು ಸಿದ್ದರಾಮಯ್ಯ ಮಾತು ಕೇಳುತ್ತಾರೆ.
ಗ್ರೇಟರ್ ಮೈಸೂರು ಮಾಡಿ ನಿಮ್ಮ ಕೀರ್ತಿ ಹೆಚ್ಚಿಸಿಕೊಳ್ಳಿ.ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಾಡಿರೋದು ಒಳ್ಳೆಯ ಬೆಳವಣಿಗೆ. ಯುಜಿಡಿ ಸಮಸ್ಯೆ ನೀವೆ ಬಗೆಹರಿಸಬೇಕು. ನೀವು ಅಲ್ಲದಿದ್ದರೆ ಇನ್ನೂ ಯಾರು ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದೆಲ್ಲಾ ಮಾತನಾಡಿದ್ದಾರೆ.

ಇದರ ಜೊತೆಗೆ ಮತ್ತೊಂದು ಕುತೂಹಲ ಎಂದರೆ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಜಿಟಿ ದೇವೇಗೌಡರು ಗುಟ್ಟಾಗಿ ಮಾತನಾಡಿದ್ದಾರೆ. ಇದು ಅಲ್ಲಿ ನೆರೆದಿದ್ದದ್ದವರ ಕಣ್ಣು ದೊಡ್ಡದಾಗುವಂತೆ ಮಾಡಿದೆ. ಯಾವುದೋ ವಿಚಾರವನ್ನ ಅವರಿಬ್ಬರು ಗುಸುಗುಸು ಮಾತನಾಡಿದ್ದಾರೆ. ಸುಮಾರು ಹೊತ್ತು ಇಬ್ಬರು ಹೀಗೆ ಮಾತನಾಡಿದ್ದು ಹಲವಾರು ಅನುಮಾನ ಸೃಷ್ಟಿ ಮಾಡಿದೆ.
ಹಿಂದೆ ಸಿಎಂ ಬದಲಾವಣೆ ಅಂತ ಬಂದಾಗಲೂ ಸಿದ್ದರಾಮಯ್ಯ ಜೊತೆಗೆ ನಿಲ್ಲೋ ಕೆಲಸ ಮಾಡಿದ್ದರು ಜಿಟಿ ದೇವೇಗೌಡರು. ಕುರ್ಚಿ ಖಾಲಿ ಇಲ್ಲ. ಅವರಿಂದಲೇ ಕಾಂಗ್ರೆಸ್ ಅನ್ನೋ ಅರ್ಥದಲ್ಲಿ ಮಾತನಾಡಿದ್ದಷ್ಟೆ ಅಲ್ಲ, ಅವರು ಒಪ್ಪಿದರೆ ಮಾತ್ರವೇ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಎಂದಿದ್ದರು. ಆಗಲೂ ಕೂಡ ದಳಪತಿಗಳ ಕಣ್ಣು ಕೆಂಪಾಗಿದ್ದವು. ಈಗ ಮತ್ತೊಮ್ಮೆ ಇದೇ ರೀತಿ ಸಿಎಂ ರನ್ನ ಹಾಡಿ ಹೊಗಳೋ ಮೂಲಕ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿಕೊಂಡಿದ್ದಾರೆ.



