ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 738ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಹಣ ಹೊಂದಿಸಿ ದುಡ್ಡು ಕಟ್ಟಿ ಮನೆ ಉಳಿಸಿಕೊಂಡಳು, ನಾನೇ ಸೋತೆ ಎಂಬ ಕೋಪಕ್ಕೆ ತಾಂಡವ್ ಕೂಲ್ಡ್ರಿಂಕ್ಸ್ ಬಾಟಲಿಗಳನ್ನು ಗೋಡೆಗೆ ಎಸೆದು ಕೋಪ ತೀರಿಸಿಕೊಳ್ಳುತ್ತಾನೆ. ಅವನನ್ನು ಸಮಾಧಾನ ಮಾಡಲು ಶ್ರೇಷ್ಠಾ ಎಷ್ಟೇ ಪ್ರಯತ್ನಿಸಿದರೂ ತಾಂಡವ್ ಕೋಪ ತಣ್ಣಗಾಗುವುದಿಲ್ಲ. ನಿನ್ನನ್ನು ಸೋಲಿಸಿಯೇ ತೀರುತ್ತೇನೆ ಎಂದು ತಾಂಡವ್ ನಿರ್ಧರಿಸುತ್ತಾನೆ.
ರಾತ್ರಿ ಭಾಗ್ಯಾ ಎಲ್ಲರಿಗೂ ಕೈ ತುತ್ತು ನೀಡುತ್ತಾಳೆ. ದಿನಾ ನೀನು ಇದೇ ರೀತಿ 40 ಸಾವಿರ ದುಡಿಯುತ್ತಿದ್ದರೆ ನಮ್ಮೆಲ್ಲರ ಜೀವನ ಎಷ್ಟು ಬದಲಾಗುತ್ತದೆ ಗೊತ್ತಾ ಎಂದು ಸುಂದ್ರಿ, ಕನಸು ಕಾಣುತ್ತಾಳೆ. ಅದರಲ್ಲಿ ಭಾಗ್ಯಾ ಕೋಟ್ಯಾಧಿಪತಿ ಆಗಿ, ಹಣ ತುಂಬಿದ ಸೂಟ್ಕೇಸನ್ನು ತಾಂಡವ್ಗೆ ಕೊಟ್ಟು ಈ ಮನೆಯನ್ನು ನಾನೇ ಕೊಂಡುಕೊಂಡಿದ್ದೀನಿ ಎಂದು ಹೇಳುತ್ತಾಳೆ. ಭಾಗ್ಯಾ ಎದುರು ಸೋತ ತಾಂಡವ್ ಅಳುತ್ತಾ ನಿಂತಿರುವಂತೆ ಕುಸುಮಾ ಹಾಗೂ ಧರ್ಮರಾಜ್ ಗತ್ತಿನಿಂದ ಮೆರೆಯುವಂತೆ ಸುಂದ್ರಿ ಕನಸು ಕಾಣುತ್ತಾಳೆ. ಆದರೆ ಭಾಗ್ಯಾ ಹಾಗೂ ಪೂಜಾ, ನಾವಿನ್ನೂ ಎದುರಿಸಬೇಕಾಗಿರುವ ಕಷ್ಟ ಬಹಳಷ್ಟಿದೆ, ಕನಸು ಕಾಣುವುದನ್ನು ನಿಲ್ಲಿಸು ಎಂದು ವಾಸ್ತವವನ್ನು ಅರ್ಥ ಮಾಡಿಸುತ್ತಾಳೆ.
ಮರುದಿನ ಭಾಗ್ಯಾ ಗುಂಡಣ್ಣನನ್ನು ಸ್ಕೂಲ್ಗೆ ಬಿಡುತ್ತಾಳೆ. ತನ್ಮಯ್ಗೆ ಚಿಕ್ಕ ವಯಸ್ಸಾದರೂ ಅಮ್ಮನ ಕಷ್ಟ ಅರ್ಥವಾಗುತ್ತಿದೆ. ಎಲ್ಲರೂ ಏಕೆ ದುಡ್ಡಿಗೆ ಅಷ್ಟು ಪ್ರಾಮುಖ್ಯತೆ ಕೊಡುತ್ತಾರೆ, ಬ್ಯಾಂಕ್ನವರು ಮನೆ ಸೀಜ್ ಮಾಡಲು ಬಂದಿದ್ದೇಕೆ ಎಂದು ಗುಂಡಣ್ಣ ಅಮ್ಮನನ್ನು ಕೇಳುತ್ತಾನೆ. ನೀನು ದೊಡ್ಡವನಾದಾಗ ಎಲ್ಲವೂ ಅರ್ಥವಾಗುತ್ತದೆ ಎಂದು ಭಾಗ್ಯಾ ಹೇಳುತ್ತಾಳೆ. ನಾನು ದೊಡ್ಡವನಾದಾಗ ಇಷ್ಟೆಲ್ಲಾ ಆಗಲು ಬಿಡುವುದಿಲ್ಲ, ನಾನು ತುಂಬಾ ಹಣ ಸಂಪಾದನೆ ಮಾಡುತ್ತೇನೆ ಎಂದು ಗುಂಡಣ್ಣ ಹೇಳುತ್ತಾನೆ. ನೀನು ಹಣ ಸಂಪಾದನೆ ಮಾಡಬೇಕು ಎಂದರೆ ಈಗ ಚೆನ್ನಾಗಿ ಓದಬೇಕು ಎಂದು ಭಾಗ್ಯಾ ಮಗನಿಗೆ ಬುದ್ಧಿ ಹೇಳುತ್ತಾಳೆ. ಗುಂಡಣ್ಣನನ್ನು ಸ್ಕೂಲ್ ಬಳಿ ಬಿಟ್ಟು ಭಾಗ್ಯಾ ದೇವಸ್ಥಾನಕ್ಕೆ ಹೋಗುತ್ತಾಳೆ.
ದೇವಸ್ಥಾನದ ಪುರೋಹಿತರ ಬಳಿ ಬರುವ ಭಾಗ್ಯಾ, ನಿನ್ನೆ ಮಾಡಿದಂತೆ ನನಗೆ ಬೇರೆ ಅಡುಗೆ ಕೆಲಸ ಸಿಕ್ಕರೆ ಹೇಳಿ ಎಂದು ಮನವಿ ಮಾಡುತ್ತಾಳೆ. ಖಂಡಿತ ಹೇಳುತ್ತೇನೆ ಎಂದು ಪುರೋಹಿತರು ಹೇಳುತ್ತಾರೆ. ತನಗೆ ಅಡುಗೆ ಕಾಂಟ್ರಾಕ್ಟ್ ನೀಡಿದವರ ಫೋನ್ ನಂಬರ್ ಪಡೆದು ಭಾಗ್ಯಾ ಆತನಿಗೆ ಕರೆ ಮಾಡುತ್ತಾಳೆ. ಆದರೆ ಆತ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ನಿನ್ನೆ ನೀನು ಮಾಡಿದ ಕೆಲಸಕ್ಕೆ ನಿನಗೆ ದುಡ್ಡು ಕೊಟ್ಟಿದ್ದೇನೆ, ಅಲ್ಲಿಗೆ ಮುಗಿಯಿತು, ನನ್ನ ಬಳಿ ಬೇರೆ ಕೆಲಸ ಇಲ್ಲ ಎಂದು ಖಡಕ್ ಆಗಿ ಮಾತನಾಡುತ್ತಾನೆ. ಭಾಗ್ಯಾ ಬೇಸರದಿಂದ ಕೆಲಸಕ್ಕೆ ಹೋಗುತ್ತಾಳೆ.
ಗುಂಡಣ್ಣ ಆಟೋ ಇಳಿದು ಸ್ಕೂಲ್ ಒಳಗೆ ಹೋಗುವಾಗ ಅವನ ಫ್ರೆಂಡ್ ಕರೆಯುತ್ತಾನೆ. ಗುಂಡಣ್ಣ, ಸ್ನೇಹಿತನಿಗೆ ಬರ್ತ್ಡೇ ವಿಶ್ ಮಾಡುತ್ತಾನೆ. ಇವತ್ತು ಹತ್ತಿರದಲ್ಲೇ ಇರುವ ರೆಸಾರ್ಟ್ನಲ್ಲಿ ಪಾರ್ಟಿ ಇದೆ ಎಲ್ಲರೂ ಬರಬೇಕು ಎಂದು ಸ್ನೇಹಿತ ಕರೆಯುತ್ತಾನೆ. ಸಂಜೆ ಸ್ಕೂಲ್ ಮುಗಿಸಿಕೊಂಡು ಗುಂಡಣ್ಣ ಫ್ರೆಂಡ್ ಜೊತೆ ರೆಸಾರ್ಟ್ಗೆ ಹೋಗುತ್ತಾನೆ. ಅಲ್ಲಿ ಭಾಗ್ಯಾ ಮಕ್ಕಳೊಂದಿಗೆ ಕುಣಿದು ಸುಸ್ತಾಗಿ ನೀರು ಕುಡಿಯಲು ಬರುತ್ತಾಳೆ. ಅವಳನ್ನು ನೋಡಿ ಮ್ಯಾನೇಜರ್, ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಬೈಯ್ಯುತ್ತಾನೆ. ಭಾಗ್ಯಾ ಎಂಬ ಹೆಸರು ಕೇಳುತ್ತಿದ್ದಂತೆ ಗುಂಡಣ್ಣ ಅಲ್ಲೇ ನಿಲ್ಲುತ್ತಾನೆ. ಅಮ್ಮನ ದನಿ ಕೇಳುತ್ತಿದ್ದಂತೆ ಅವನಿಗೆ ಅನುಮಾನ ಹೆಚ್ಚಾಗುತ್ತದೆ.
ಹೆಸರು ಅಮ್ಮನದ್ದೇ, ಜೊತೆಗೆ ದನಿ ಕೂಡಾ ಅಮ್ಮನ ದನಿಯಂತಿದೆ ಎಂದು ಹತ್ತಿರ ಬರುತ್ತಾನೆ. ಅಷ್ಟರಲ್ಲಿ ಭಾಗ್ಯಾ ನೀರು ಕುಡಿದು ಸಹೋದ್ಯೋಗಿ ಬಳಿ ಹೋಗಿ ಕುಳಿತುಕೊಳ್ಳುತ್ತಾಳೆ. ತಲೆಗೆ ಹಾಕಿದ್ದ ವಿಗ್ ತೆಗೆಯುತ್ತಾಳೆ. ಆಗ ಗುಂಡಣ್ಣನಿಗೆ ಅದು ಅಮ್ಮ ಎಂದು ಕನ್ಫರ್ಮ್ ಆಗುತ್ತದೆ. ತಾನು ಶೆಫ್ ಆಗಿದ್ದು, ಕೆಲಸ ಬಿಟ್ಟಿದ್ದು ಮನೆ ಸಮಸ್ಯೆ ಎಲ್ಲವನ್ನೂ ಭಾಗ್ಯಾ ಸಹೋದ್ಯೋಗಿಯೊಂದಿಗೆ ಹೇಳಿಕೊಳ್ಳುತ್ತಾಳೆ. ಅಷ್ಟು ದೊಡ್ಡ ಕೆಲಸ ಮಾಡುತ್ತಿದ್ದವರು ಈಗ ಈ ಕೆಲಸ ಮಾಡಲು ಬೇಸರ ಆಗುತ್ತಿಲ್ಲವೇ ಎಂದು ಆಕೆ ಕೇಳುತ್ತಾಳೆ. ಕೆಲಸದ ಅವಶ್ಯಕತೆ ಇದೆ, ಮಾಡಲೇಬೇಕು, ನನ್ನ ಮನೆಯವರಿಗೆ ನಾನು ಈ ಕೆಲಸ ಮಾಡುತ್ತಿರುವುದು ಗೊತ್ತಿಲ್ಲ, ಗೊತ್ತಾದರೆ ಅವರು ಕೆಲಸ ಬಿಡಿಸುತ್ತಾರೆ ಎಂದು ಭಾಗ್ಯಾ ತನ್ನ ಕಷ್ಟವನ್ನು ಹಂಚಿಕೊಳ್ಳುತ್ತಾಳೆ. ಅಮ್ಮನ ಮಾತು ಕೇಳಿದ ಗುಂಡಣ್ಣ ಕಣ್ಣೀರಿಡುತ್ತಾನೆ. ಪೂಜಾ, ಸುಂದ್ರಿ ಇಬ್ಬರೂ ಗುಂಡಣ್ಣನನ್ನು ಹುಡುಕಿಕೊಂಡು ಅದೇ ರೆಸಾರ್ಟ್ಗೆ ಬರುತ್ತಾರೆ.
ಮಗ ಅಲ್ಲಿಗೆ ಬಂದಿರುವ ವಿಚಾರ ಭಾಗ್ಯಾಗೆ ಗೊತ್ತಾಗುವುದಾ? ಎಲ್ಲಾ ವಿಚಾರವನ್ನು ಗುಂಡಣ್ಣ ಮನೆಯವರಿಗೆ ಹೇಳಿಬಿಡುತ್ತಾನಾ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.



