ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 11ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿ ಎಲ್ಲೇ ಇದ್ದರೂ ನನ್ನ ಕಂಟ್ರೋಲ್ನಲ್ಲಿ ಇರಬೇಕು, ಅವರಿಗೆ ಪ್ರಜ್ಞೆ ಬಂದ ವಿಚಾರ ನನಗೆ ಮೊದಲು ತಿಳಿಯಬೇಕು ಎಂದು ಜಯಂತ್ ಮಾವನ ಮನೆಗೆ ಹೋಗಿ ಅಲ್ಲಿ ಕೂಡಾ ಕ್ಯಾಮರಾ ಫಿಕ್ಸ್ ಮಾಡಲು ಪ್ರಯತ್ನಿಸುತ್ತಾನೆ. ಆಫೀಸಿಗೆ ಹೋಗುತ್ತೇನೆ ಎಂದು ಜಾನು ಬಳಿ ಸುಳ್ಳು ಹೇಳಿ ಮಾವನ ಮನೆಗೆ ಹೋಗುತ್ತಾನೆ. ಅಳಿಯ ಒಬ್ಬನೇ ಬಂದಿದ್ದನ್ನು ನೋಡಿ ಮನೆಯವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಅಜ್ಜಿ ಬಗ್ಗೆ ಬಹಳ ಪ್ರೀತಿ ಇರುವಂತೆ ನಾಟಕವಾಡುವ ಜಯಂತ್, ಜಾನುಗೆ ಹೇಳದೆ ಬಂದಿದ್ದೇನೆ ಎಂದು ಹೇಳುತ್ತಾನೆ. ಲಕ್ಷ್ಮೀಗೆ ಕಾಫಿ ತರಲು, ಶ್ರೀನಿವಾಸನಿಗೆ ಆಸ್ಪತ್ರೆ ರಿಪೋರ್ಟ್ ತರಲು ಹೇಳಿ ಹೂದಾನಿಯಲ್ಲಿ ಕ್ಯಾಮರಾ ಫಿಕ್ಸ್ ಮಾಡುತ್ತಾನೆ. ಕೆಲಸ ಮುಗಿಸಿಕೊಂಡು ಮನೆಗೆ ಹೊರಡುತ್ತಾನೆ. ಆದರೆ ಜಯಂತ್ ಅತ್ತ ಹೋಗುತ್ತಿದ್ದಂತೆ ಜಾನು, ಅಮ್ಮನ ಮನೆಗೆ ಬರುತ್ತಾಳೆ. ಗಂಡ ಹೆಂಡತಿ ಇಬ್ಬರಿಗೂ ಅಜ್ಜಿ ಎಂದರೆ ಎಷ್ಟು ಇಷ್ಟ, ಅದಕ್ಕೆ ಒಬ್ಬೊಬ್ಬರಾಗಿ ಬಂದು ನೋಡಿಕೊಂಡು ಹೋಗುತ್ತಿದ್ದೀರ ಎಂದು ವೀಣಾ ಹೇಳಿದಾಗ, ಜಯಂತ್ ಇಲ್ಲಿಗೆ ಬಂದಿರುವ ವಿಚಾರ ಜಾನುಗೆ ಗೊತ್ತಾಗಿ ಗಾಬರಿ ಆಗುತ್ತಾಳೆ. ಎಲ್ಲಾ ಸರಿ ಇದೆ ತಾನೇ ಏಕೆ ಬೇಸರದಲ್ಲಿದ್ದೀಯ ಎಂದು ಮನೆಯವರು ಕೇಳುತ್ತಾರೆ.
ಹಾಗೇನಿಲ್ಲ ನಾವಿಬ್ಬರೂ ಚೆನ್ನಾಗಿದ್ದೇವೆ, ನಾನು ಹೇಳದೆ ಕೇಳದೆ ಇಲ್ಲಿಗೆ ಬಂದಿದ್ದೀನಿ, ಅವರೂ ನನಗೆ ಹೇಳದೆ ಇಲ್ಲಿ ಬಂದಿದ್ದಾರೆ, ಅವರು ಏನಂದುಕೊಳ್ಳುತ್ತಾರೋ ಎಂದು ಯೋಚಿಸುತ್ತಿರುವುದಾಗಿ ಜಾನು ಸುಳ್ಳು ಹೇಳುತ್ತಾಳೆ. ನಾನು ಇಂದು ಇಲ್ಲಿ ಇರುತ್ತೇನೆ, ನನ್ನನ್ನು ನಾಳೆ ಕಳಿಸುತ್ತೇನೆ ಎಂದು ನೀವೇ ಒಮ್ಮೆ ಅವರಿಗೆ ಕಾಲ್ ಮಾಡಿ ಹೇಳಿ ಎಂದು ಜಾನು, ಅಪ್ಪನಿಗೆ ಹೇಳುತ್ತಾಳೆ. ಶ್ರೀನಿವಾಸ್, ಅಳಿಯನಿಗೆ ಕರೆ ಮಾಡುತ್ತಾನೆ. ಅವರು ಇಲ್ಲಿಗೆ ಬಂದಿದ್ದಾರೆ ಎಂದರೆ ಖಂಡಿತ ಇಲ್ಲೂ ಕ್ಯಾಮರಾ ಇಡಲು ಬಂದಿರುತ್ತಾರೆ ಎಂದು ಜಾಹ್ನವಿಗೆ ಅನುಮಾನ ಬರುತ್ತದೆ. ಕ್ಯಾಮರಾ ಎಲ್ಲಿ ಇಟ್ಟಿರಬಹುದು ಎಂದು ಹುಡುಕಾಡುತ್ತಾಳೆ. ಇತ್ತ ಜಯಂತ್ ಚಿನ್ನುಮರಿ ಚಿನ್ನು ಮರಿ ಎಂದು ಕೂಗುತ್ತಲೇ ಮನೆಗೆ ಬರುತ್ತಾನೆ. ಇನ್ನೂ ಲೈಟ್ ಆನ್ ಆಗಿಲ್ಲದ್ದನ್ನು ನೋಡಿ ತಾನೇ ಲೈಟ್ ಆನ್ ಮಾಡುತ್ತಾನೆ. ಕತ್ತಲೆಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ, ನಾನು ಕರೆಯುತ್ತಲೇ ಇದ್ದೇನೆ ನೀವು ಏನು ಮಾತನಾಡುತ್ತಲೇ ಇಲ್ಲ ಎಂದುಕೊಂಡು ಒಳಗೆ ಬರುತ್ತಾನೆ. ಆದರೆ ಜಾನು ಮನೆಯಲ್ಲಿ ಇಲ್ಲದನ್ನು ನೋಡಿ ಗಾಬರಿಯಾಗುತ್ತಾನೆ. ಅಯ್ಯೋ ಮತ್ತೆ ಎಲ್ಲಿ ಹೋದ್ರಿ ಚಿನ್ನುಮರಿ, ಆಗೇನೋ ದೇವಸ್ಥಾನಕ್ಕೆ ಹೋಗಿದ್ರಿ ಈಗ ಎಲ್ಲಿ ಹುಡುಕೋದು ನಿಮ್ಮನ್ನು ಎಂದು ಗೋಳಾಡುತ್ತಾನೆ.
ಜಾನು ಹೊರಗೆ ಹೋಗಿದ್ದನ್ನು ಸಿಸಿ ಕ್ಯಾಮರಾದಲ್ಲಿ ನೋಡುತ್ತಾನೆ. ಗಿಡಗಳ ಬಳಿ ಮಾತನಾಡುವ ಅಭ್ಯಾಸ ಇರುವ ಸೈಕೋ ಜಯಂತ್, ಜಾಹ್ನವಿಯವರು ಮನೆ ಬಿಟ್ಟು ಹೋಗುವಾಗ ನೀವೆಲ್ಲಾ ಕತ್ತೆ ಕಾಯುತ್ತಿದ್ರಾ, ಇದಕ್ಕೆನಾ ನಿಮ್ಮನ್ನೆಲ್ಲಾ ನಾನು ಅಷ್ಟು ಕಾಳಜಿ ಮಾಡಿ ನೋಡಿಕೊಂಡಿದ್ದು ಎಂದು ಗಿಡಗಳಿಗೆ ಬೈಯ್ಯುತ್ತಾನೆ. ಅಷ್ಟರಲ್ಲಿ ಮಾವನ ಕಾಲ್ ಬರುತ್ತದೆ. ಇವರು ಇಷ್ಟೊತ್ತಿನಲ್ಲಿ ಏಕೆ ಕಾಲ್ ಮಾಡುತ್ತಿದ್ದಾರೆ ಎಂದು ಜಯಂತ್ ಅನುಮಾನದಿಂದಲೇ ಫೋನ್ ರಿಸೀವ್ ಮಾಡುತ್ತಾನೆ.
ಜಾನು ಇಲ್ಲಿಗೆ ಬಂದಿದ್ದಾಳೆ ಎಂದು ಶ್ರೀನಿವಾಸ್ ಹೇಳಿದಾಗ ಜಯಂತ್ ಸಿಟ್ಟಾಗುತ್ತಾನೆ. ಆದರೂ ಶ್ರೀನಿವಾಸ್ ಬಳಿ ತಾಳ್ಮೆಯಿಂದ ಮಾತನಾಡುತ್ತಾನೆ. ಅವರು ಹೇಳದೆ ಹೋಗಿದ್ದಾರೆ, ಅಜ್ಜಿಯನ್ನು ನೋಡಬೇಕು ಎಂದು ನನ್ನ ಬಳಿ ಹೇಳಿದ್ದರೆ ನಾನೇ ಕರೆದುಕೊಂಡು ಹೋಗುತ್ತಿದ್ದೆ, ಇರಿ ನಾನೇ ಬಂದು ಅವರನ್ನು ಕರೆತರುತ್ತೇನೆ ಎಂದು ಜಯಂತ್ ಹೇಳುತ್ತಾನೆ. ಈಗ ಕತ್ತಲಾಗಿದೆ, ಜಾನು ಕೂಡಾ ಇಲ್ಲೇ ಇರಲು ಇಷ್ಟಪಡುತ್ತಿದ್ದಾಳೆ. ಅವಳು ನಾಳೆ ಬರುತ್ತಾಳೆ, ನೀವು ಬರಬೇಡಿ ಎಂದು ಶ್ರೀನಿವಾಸ್ ಹೇಳುತ್ತಾನೆ. ಸಿಟ್ಟಿನಿಂದಲೇ ಜಯಂತ್ ಸರಿ ಮಾವ ಎನ್ನುತ್ತಾನೆ. ಜಯಂತ್ ತಾನೇ ಅಡುಗೆ ಮಾಡಿಕೊಳ್ಳುತ್ತಾನೆ. ಇಲ್ಲಿ ನಾನು ಒಬ್ಬನೇ ಇದ್ದೇನೆ, ಅಲ್ಲಿ ಜಾನು , ಮನೆಯವರ ಜೊತೆ ಕೂತು ಖುಷಿಯಿಂದ ಊಟ ಮಾಡುತ್ತಿದ್ದಾರೆ. ನನಗೆ ಊಟ ಸೇರುತ್ತಿಲ್ಲ. ಚಿನ್ನುಮರಿ ನನಗೆ ನಿಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ, ನೀವು ಹೀಗೆ ಮಾಡಿದ್ದು ಸರೀನಾ ಎಂದು ತನ್ನಷ್ಟಕ್ಕೆ ತಾನು ಮಾತನಾಡುತ್ತಾ, ಗಿಡಗಳ ಜೊತೆ ಮಾತನಾಡುತ್ತಾ ಜಯಂತ್ ಬೇಸರಗೊಳ್ಳುತ್ತಾನೆ.
ಜಯಂತ್ ಅಜ್ಜಿ ರೂಮ್ನಲ್ಲಿ ಕ್ಯಾಮರಾ ಇಟ್ಟಿರುವುದು ಜಾಹ್ನವಿಗೆ ಗೊತ್ತಾಗುತ್ತಾ? ಗಂಡನ ಮನೆಗೆ ವಾಪಸ್ ಹೋಗ್ತಾಳಾ? ನಾಳೆಯ ಸಂಚಿಕೆಯಲ್ಲಿ ತಿಳಿಯಲಿದೆ.



