ತುಳುನಾಡಿನ ಕಾರಣಿಕ ಶಕ್ತಿಯಾಗಿರುವ ಕೊರಗಜ್ಜ ಸ್ವಾಮಿಗೆ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯದಾದ್ಯಂತ ಭಕ್ತರಿದ್ದಾರೆ. ಮಂಗಳೂರು ನಗರದ ಕೊರಗಜ್ಜ ಆದಿಸ್ಥಳವಾಗಿರುವ ಕುತ್ತಾರು ಕ್ಷೇತ್ರಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಇದೀಗ ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಮಾಲಾಶ್ರೀ ಭೇಟಿ ನೀಡಿದ್ದು, ಬೇಡಿಕೆ ಈಡೇರಿಸಿದ ಕೊರಗಜ್ಜ ಸ್ವಾಮಿಗೆ ಹರಕೆ ತೀರಿಸಿದ್ದಾರೆ.

ಬೇಡಿಕೊಂಡ ಮೂರೇ ತಿಂಗಳಿಗೆ ಬೇಡಿಕೆ ಈಡೇರಿಸಿ ಕಾರಣ ಮಾಲಾಶ್ರೀ ಅವರು ತಮ್ಮ ಪುತ್ರಿ ಅನನ್ಯ ಹಾಗೂ ಸ್ನೇಹಿತರೊಂದಿಗೆ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದಿದೆ. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ’ ಎಂದಿದ್ದಾರೆ.
ಪುತ್ರಿ ಹಾಗೂ ಸ್ನೇಹಿತರೊಂದಿಗೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ತೀರಿಸಿದ ಮಾಲಾಶ್ರೀ ಅವರನ್ನು ಶ್ರೀಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಸಮಿತಿಯ ಟ್ರಸ್ಟಿಗಳು ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದ್ದಾರೆ. ಈ ಹಿಂದೆ ಚಾಲೆಜಿಂಗ್ ಸ್ಟಾರ್ ದರ್ಶನ್, ಆದಿತ್ಯಾ ಸೇರಿದಂತೆ ಹಲವು ನಟನಟಿಯರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.