ರಾಜಕೀಯದಲ್ಲಿ ಸೈದ್ದಾಂತಿಕವಾಗಿ ವಾಗ್ದಾಳಿಗಳು ನಡೆಯುತ್ತಲೇ ಇರುತ್ತವೆ. ಇದು ಹೊಸದೇನಲ್ಲ. ಹಿಂದಿನಿಂದಲೂ ರಾಜಕೀಯವಾಗಿ ಮಣಿಸಲು ಮಾತಿನ ಮೂಲಕವೇ ಸರಿ ಅನ್ನೋದು ಹಿಂದಿನ ರಾಜಕಾರಣಿಗಳ ಅನಸಿಕೆ. ಆದರೆ ಈಗಾಗಲ್ಲ. ರಾಜಕೀಯವಾಗಿ ಒಬ್ಬರನ್ನ ಮಣಿಸಲು ವಾಮಮಾರ್ಗಗಳು ಸಾಕಷ್ಟಿವೆ. ಅದರ ಮುಂದುವರೆದ ಭಾಗವೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು. ಅಷ್ಟೆ ಅಲ್ಲ ಮನೆ ಮಂದಿಯನ್ನೆಲ್ಲಾ ಮಾತಿಗೆ ಬಳಸಿಕೊಳ್ಳೋದು ಕಾಮನ್ ಆಗಿ ಬಿಟ್ಟಿದೆ.
ಕೆಲವೊಬ್ಬ ರಾಜಕಾರಣಿಗಳು ಅದನ್ನ ಅರಗಿಸಿಕೊಳ್ತಾರೆ, ಕೆಲವೊಬ್ಬರಿಗೆ ಅದನ್ನ ಅರಗಿಸಿಕೊಳ್ಳೋದು ಕಷ್ಟವೇ. ಈಗ ಅಂತಹದ್ದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹಿರಿಯ ರಾಜಕಾರಣಿಯೊಬ್ಬರು ಸಿಲುಕಿದ್ದಾರೆ. ತಂದೆ, ಹುಟ್ಟು ಹೀಗೆ ಹಲವು ಮಾತುಗಳನ್ನು ಆಡಿದ್ದ ಶಾಸಕನಿಗೆ ತಿರುಗೇಟು ನೀಡಲು ಅವರೇ ಹಾಕಿದ್ದ ಸವಾಲನ್ನ ಸ್ವೀಕಾರ ಮಾಡಿ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನಾವು ಹೇಳಲು ಹೊರಟಿರುವ ರಾಜಕಾರಣಿ ಬೇರಾರು ಅಲ್ಲ ಸಿದ್ದರಾಮಯ್ಯ ಸಂಪುಟದ ಪ್ರಸ್ತುತ ಸಚಿವ, ಶಾಸಕ ಶಿವಾನಂದ ಪಾಟೀಲ್ ಅವರ ಅಚ್ಚರಿಯ ನಡೆ ಬಗ್ಗೆ. ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಹಾಕಿದ್ದ ಸವಾಲನ್ನ ಸ್ವೀಕಾರ ಮಾಡಿ ಪ್ರತಿ ಸವಾಲು ಹಾಕುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ ಸಚಿವ ಶಿವಾನಂದ ಪಾಟೀಲ್. ತಮ್ಮ ಶಾಸಕ ಸ್ಥಾನಕ್ಕೆ ಇಂದು ದಿಢೀರ್ ರಾಜಿನಾಮೆ ಘೋಷಣೆ ಮಾಡಿದ್ದಾರೆ. ಇದರ ಹಿಂದಿರುವ ಕಾರಣ ಯತ್ನಾಳ್ ಅವರ ಹೇಳಿಕೆ. ಯತ್ನಾಳ್ ಹಾಕಿದ್ದ ಸವಾಲು ಸ್ವೀಕಾರ ಮಾಡಿರೋ ಶಿವಾನಂದ ಪಾಟೀಲ್ ಸ್ಪೀಕರ್ ಗೆ ರಾಜಿನಾಮೆ ಕೊಟ್ಟಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಹಾಗೂ ಯತ್ನಾಳ ನಡುವೆ ರಾಜಕೀಯ ಅಷ್ಟೆ ಅಲ್ಲ ವೈಯಕ್ತಿಕ ಕೆಸರೆರೆಚಾಟ ಶುರುವಾಗಿದೆ. ಮೊಹಮದ್ದ ಪೈಗಂಬರ್ ವಿಚಾರವಾಗಿ ಬಾಯಿಗೆ ಬಂದಗೆ ಬೈದಿದ್ದ ಯತ್ನಾಳ್ ಮುಸ್ಲಿಂ ಸಮುದಾಯ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೆ ಅಲ್ಲ ಕಾಂಗ್ರೆಸ್ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಅವರ ವಿರುದ್ಧ ಜಿಲ್ಲೆಯಲ್ಲಿ ಪ್ರತಿಭಟನೆ ಕೂಡ ಮಾಡಿದ್ದರು.
ಇದಾದ ನಂತರ ಬಸವ ಜಯಂತಿಯಂದು ಮತ್ತೆ ನಾಲಿಗೆ ಹರಿಬಿಟ್ಟಿದ್ದ ಯತ್ನಾಳ್, ಶಿವಾನಂದ ಪಾಟೀಲ ಅವರನ್ನು ಉದ್ದೇಶಿಸಿ ಬಾಯಿಗೆ ಬಂದಗೆ ಬೈದಿದ್ದರು. ಅವರು ಪಾಟೀಲರೇ ಅಲ್ಲ, ರಾಜಕೀಯಕ್ಕಾಗಿ ಪಾಟೀಲ ಅಂತ ಹೆಸರು ಸೇರಿಸಿದ್ದಾರೆ. ಅಪ್ಪನಿಗೆ ಹುಟ್ಟಿದವ ಆದರೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ನನ್ನ ಮುಂದೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದರು. ಆ ಸವಾಲನ್ನ ಸ್ವೀಕರಿಸಿದ ಶಿವಾನಂದ ಪಾಟೀಲ ರಾಜೀನಾಮೆ ನೀಡಿದ್ದಾರೆ.

ಹೀಗೆ ಶಿವಾನಂದ ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿದ್ದ ಯತ್ನಾಳ್ ಇನ್ನು ಮುಂದುವರೆದು ಅವರ ಮನೆ ಹೆಸರು ಪಾಟೀಲ್ ಅಲ್ಲ ಹಚಡದ ಎಂದು, ನಿಮ್ಮಪ್ಪ ನೀವು ಸೇರಿ ನಿಮ್ಮ ಅಡ್ಡ ಹೆಸರು ಬದಲಾಯಿಸಿಕೊಂಡಿದ್ದೀರಿ, ರಾಜಕಾರಣಕ್ಕಾಗಿ ಪಾಟೀಲ್ ಎಂದು ಮಾಡಿಕೊಂಡಿದ್ದಾರೆ ಎಂದು ಹಿಗ್ಗಾಮುಗ್ಗ ಬೈದಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕ ಶಿವಾನಂದ ಪಾಟೀಲ್ ಧೃಡ ನಿರ್ಧಾರ ಮಾಡಿ ಶಾಸಕ ಬಸನಗೌಡಪಾಟೀಲ ಯತ್ನಾಳರ ಸವಾಲನ್ನು ಸ್ವೀಕರಿಸಿದ್ದಾರೆ. ಇಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ವಿಧಾನಸೌಧದಲ್ಲಿ ತಮ್ಮ ರಾಜಿನಾಮೆ ಪತ್ರವನ್ನ ಸ್ಪೀಕರ್ ಗೆ ನೀಡಿದ್ದಾರೆ. ಬಳಿಕ ಮಾತನಾಡಿದ ಶಿವಾನಂದ ಪಾಟೀಲ, ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಇದು ವೈಯಕ್ತಿಕ ತೀರ್ಮಾನ. ಯತ್ನಾಳ ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ಇನ್ನು ಈ ರಾಜಿನಾಮೆ ಪತ್ರವನ್ನ ಯತ್ನಾಳ್ ರಾಜಿನಾಮೆ ನೀಡಿದ ಬಳಿಕ ಅಂಗೀಕಾರ ಮಾಡುವಂತೆ ತಿಳಿಸಿದ್ದಾರೆ. ಅವರು ರಾಜಿನಾಮೆ ಕೊಡುವ ಒಂದು ಗಂಟೆ ಮುಂಚೆ ರಾಜಿನಾಮೆ ಪತ್ರ ಅಂಗೀಕಾರ ಆದರೆ ಸಾಕು ಎಂದಿದ್ದಾರೆ. ಇನ್ನು ರಾಜಿನಾಮೆ ಪತ್ರ ಪಡೆದ ಬಳಿಕ ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಅವರಿಗೆ ಇನ್ನೋರ್ವ ಶಾಸಕರು ವೈಯಕ್ತಿಕ ಸವಾಲು ಹಾಕಿದ್ದಾರೆ. ಸವಾಲು ಸ್ವೀಕಾರ ಮಾಡಿ ರಾಜೀನಾಮೆ ನೀಡಿದ್ದಾರೆ. ಸವಾಲು ಹಾಕಿದ್ದವರು ರಾಜೀನಾಮೆ ನೀಡಿದ ಬಳಿಕ ಅಂಗೀಕಾರ ಮಾಡಿ ಅಂದಿದ್ದಾರೆ. ನಾವು ಪರಿಶೀಲನೆ ಮಾಡುತ್ತೇವೆ. ಅವರ ಗೌರವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪತ್ರ ಸಂವಿಧಾನದ ಪ್ರಕಾರಣ ಇದ್ಯೋ ಇಲ್ಲವೋ ನೋಡುತ್ತೇವೆ ಎಂದರು.
ಸದ್ಯ ಯತ್ನಾಳ್ ಹಾಗೂ ಶಿವಾನಂದ ಪಾಟೀಲ್ ರದ್ದು ರಾಜಕೀಯ ಕೆಸರೆರೆಚಾಟದ ಜೊತೆ ವೈಯಕ್ತಿಕ ಕರಸರೆರೆಚಾಟ ಕೂಡ ಆಗ್ತಿದೆ. ಇದರ ಮಧ್ಯೆ ಅಚ್ಚರಿ ನಡೆಯನ್ನ ಶಿವಾನಂದ ಪಾಟೀಲ್ ಇಟ್ಟಿದ್ದಾರೆ. ಈ ಸವಾಲನ್ನ ಯತ್ನಾಳ್ ಸ್ವೀಕಾರ ಮಾಡ್ತಾರಾ ಕಾದು ನೋಡಬೇಕು.



