ಸಾವಿರಾರು ವರ್ಷಗಳಿಂದಲೂ ಮನುಷ್ಯ ಸಂಬಂಧವನ್ನು ಬೆಸೆಯುವಲ್ಲು ಮದುವೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಅಂದಿನಿಂದಲೂ ಕೂಡ ಕೆಲವೊಂದು ಮದುವೆಯಲ್ಲಿ ಹುಡುಗ ಅಥವಾ ಹುಡುಗಿಗೆ ಸವಾಲುಗಳನ್ನು ನೀಡಲಾಗುತ್ತದೆ. ಶ್ರೀ ರಾಮನೂ ಕೂಡ ಶಿವ ಧನಸ್ಸು ಮುರಿದು ಸೀತೆಯನ್ನು ವಿವಾಹವಾಗಿದ್ದು ಗೊತ್ತೇ ಇದೆ. ಆದರೆ ಅಮೇಜಾನ್ ಕಾಡಿನ ಬುಡಕಟ್ಟು ಜನಾಂಗವೊಂದರಲ್ಲಿ ಯುವಕರು ಮದುವೆಯಾಗಲು ವಿಚಿತ್ರ ಸವಾಲೊಂದು ಚಾಲ್ತಿಯಲ್ಲಿದೆ.ಈ ಸವಾಲಿನಲ್ಲಿ ಗೆಲ್ಲದ ಯುವಕರಿಗೆ ಮದುವೆಯಿಲ್ಲ! ಹೌದು, ಇದು ಕೇಳಲು ವಿಚಿತ್ರ ಎನಿಸಿದರೂ ಸತ್ಯ ಸಂಗತಿ.ಅಮೆಜಾನ್ ಕಾಡಿನಲ್ಲಿ ವಾಸಿಸುವ ‘ಮಾವೆ’ ಎಂಬ ಬುಡಕಟ್ಟು ಜನಾಂಗದಲ್ಲಿ ಇಂತಹದ್ದೊಂದು ವಿಚಿತ್ರ ಸ್ವಯಂ ವರ ಪದ್ದತಿ ಜಾರಿಯಲ್ಲಿದೆ.

ಈ ಪರೀಕ್ಷೆಯಲ್ಲಿ ಪಾಸಾದ ಯುವಕರು ಮಾತ್ರ ಮದುವೆಯಾಗಲು ಅರ್ಹತೆಯನ್ನು ಪಡೆಯುತ್ತಾರೆ. ಸೋತವರಿಗೆ ಮದುವೆಯಿಲ್ಲ. ಅಷ್ಟಕ್ಕೂ ಈ ಪರೀಕ್ಷೆ ಹೇಗಿರುತ್ತೆ ಅಂತ ನೀವು ಕೇಳಿದ್ರೆ. ಮಾವೆ ಜನಾಂಗದ ಯುವಕನೊಬ್ಬ ಮದುವೆಯಾಗಲು ಬಯಸಿದರೆ ಆತ ಕೈ ಕವಚವೊಂದನ್ನು ಹಾಕಿಕೊಂಡು ಹತ್ತು ನಿಮಿಷ ನಿಲ್ಲಬೇಕು. ಅರೇ..ಇಷ್ಟು ಸುಲಭದ ಸವಾಲಿನಲ್ಲಿ ಗೆಲ್ಲೋದು ಕಷ್ಟಾನಾ? ಅಂತ ನೀವು ಪ್ರಶ್ನಿಸಬಹುದು. ಆದರೆ ಮಜಾ ಇರೋದು ಇಲ್ಲೆ ನೋಡಿ. ಹಾಗೆ ಕೈಗೆ ಹಾಕಿವ ಕವಚದಲ್ಲಿ ನೂರಾರು ಇರುವೆಗಳನ್ನು ತುಂಬಿಸಲಾಗುತ್ತದೆ. ಈ ಇರುವೆಗಳ ಒಂದು ಕಡಿತ 30 ಜೇನುನೊಣಗಳ ಕಡಿತಕ್ಕೆ ಸಮ ಎನ್ನಲಾಗುತ್ತದೆ.
ಕೈಗವಚ ಹಾಕಿದ ಕೂಡಲೇ ಮದುವೆಯಾಗಲು ಬಯಸುವ ಯುವಕ ಕುಣಿಯಲು ಪ್ರಾರಂಭಿಸಬೇಕು. ಕುಣಿತ ನಡುವೆ ಕೈ ಅಲುಗಾಡುತ್ತದೆ ಮತ್ತು ಇದರಿಂದ ಹೆದರಿದ ಇರುವೆಗಳು ಕಚ್ಚುತ್ತವೆ. ಆದರೆ ಯಾವುದೇ ಕಾರಣಕ್ಕೂ ಯುವಕ ನಿಲ್ಲಬಾರದು. ಆ ಇರುವೆಯ ಕಡಿತವನ್ನು ಸಹಿಸಿಕೊಂಡು ಸವಾಲು ಎದುರಿಸಿದವನೇ ಮದುವೆಗೆ ಅರ್ಹ ಮತ್ತು ಆತನಿಗೆ ಶಕ್ತಿವಂತ ಎಂಬ ಗೌರವ ನೀಡಲಾಗುತ್ತದೆ. ಜಗತ್ತು AI ತಂತ್ರಜ್ಞಾನದ ತನಕ ಬೆಳೆದಿದ್ದರೂ ಕೂಡ ಜಗತ್ತಿನ ಮೂಲೆಯೊಂದರಲ್ಲಿ ಇಂತಹದ್ದೊಂದು ಪದ್ದತಿ ಇನ್ನೂ ಕೂಡ ಜೀವಂತವಾಗಿರುವುದು ಅಚ್ಚರಿಯಲ್ಲದೆ ಮತ್ತೇನು!