ಕಿಚ್ಚ ಸುದೀಪ್ ನಟನೆಯ ‘ನಂದಿ’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಖ್ಯಾತ ನಟಿ ಸಿಂಧು ಮೆನನ್ ಏಕಾಏಕಿ ಸಿನಿಮಾಗಳಿಂದ ದೂರವಾಗಿದ್ದು ಯಾಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸಾಕಷ್ಟು ಬೇಡಿಕೆ ಇರುವಾಗಲೇ ವಿವಾಹವಾಗಿ ವಿದೇಶಕ್ಕೆ ಹಾರಿದರು. ಸದ್ಯ, ಸಿಂಧು ಮೂರು ಮಕ್ಕಳ ತಾಯಿ. ಈಕೆ ಚಿತ್ರರಂಗ ತೊರೆಯಲು ಕಾರಣವೇನು?, ಈಗ ಎಲ್ಲಿದ್ದಾರೆ?, ಈಕೆಯ ಗಂಡ ಯಾರು? ಎಂಬುದನ್ನ ಈ ವರದಿಯಲ್ಲಿ ನೋಡೋಣ.

ಶ್ರುತಿ ನಾಯಕಿಯಾಗಿ ನಟಿಸಿದ್ದ ‘ರಶ್ಮಿ’ ಎನ್ನುವ ಕನ್ನಡ ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಸಿಂಧು ಮೆನನ್ 1994 ರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಅನಂತರ ಹುಲಿಯಾ, ಕನಸಲೂ ನೀನೇ ಮನಸಲೂ ನೀನೇ, ಪ್ರೇಮ ಪ್ರೇಮ ಪ್ರೇಮ, ಮಾರಿ ಕಣ್ಣು ಹೋರಿ ಮ್ಯಾಗಿ, ಜೇನಿನ ಹೊಳೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಿಂಧು ಬಾಲನಟಿಯಾಗಿ ಅಭಿನಯಿಸಿದರು. ಬಳಿಕ 2002ರಲ್ಲಿ ‘ನಂದಿ’ ಸಿನಿಮಾದ ನಾಯಕಿಯಾಗಿ ಪೂರ್ಣ ಪ್ರಮಾಣದ ನಟಿಯಾಗಿ ಸುದೀಪ್ ಅವರೊಂದಿಗೆ ಸಿಂಧು ನಟಿಸಿದರು.
ನಂದಿ ಚಿತ್ರದ ನಂತರ ಸಾಕಷ್ಟು ಬೇಡಿಕೆ ಪಡೆದುಕೊಂಡ ಕೇರಳ ಮೂಲದ ನಟಿ ಸಿಂಧು ಮೆನನ್ ಕನ್ನಡ, ತಮಿಳು, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದರು. ಸಿಂಧು ಮಲೆಯಾಳಿಯಾಗಿದ್ದರೂ ಕೂಡ ಹುಟ್ಟಿ ಬೆಳೆದದ್ದೆಲ್ಲವೂ ಬೆಂಗಳೂರಿನಲ್ಲಿ. ಆದ್ದರಿಂದ ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಹೀಗೆ ಸಿನಿಮಾಗಳಲ್ಲಿ ಬಹುಬೇಡಿಕೆ ಇರುವಾಗಲೇ ಈಕೆ ಪ್ರಭು ಎನ್ನುವ ಯುವಕನೊಂದಿಗೆ 2003ರಲ್ಲಿ ವಿವಾಹವಾಗಿ ಲಂಡನ್ಗೆ ಹಾರಿದರು.
ಸದ್ಯ, ಐಟಿ ಉದ್ಯೋಗಿಯಾಗಿರುವ ಪ್ರಭು ಹಾಗೂ ಒಂದು ಹೆಣ್ಣು ಮತ್ತು ಎರಡು ಮಕ್ಕಳೊಂದಿಗೆ ಸಿಂಧು ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ. ಈಕೆ ಸಿನಿಮಾಗಳಿಂದ ದೂರವಾದರೂ ಕನ್ನಡ ಪ್ರೀತಿ ಕಡಿಮೆಯಾಗಿಲ್ಲ. ಆಗಾಗ ಕನ್ನಡದ ಬಗೆಗಿನ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಇತ್ತೀಚೆಗೆ ಪುನಿತ್ ರಾಜ್ ಕುಮಾರ್ ನಿಧನರಾದಾಗ ಕೂಡ ಸಂತಾಪ ಸೂಚಿಸಿದ್ದರು. ಆದರೆ ಸಿಂಧು ಮೆನನ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.



