ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 10ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿ, ಮನೆಗೆ ವಾಪಸ್ ಹೋದರೆ ಸೇಫ್ ಎಂದುಕೊಂಡು ಜಾನು ಅಪ್ಪನಿಗೆ ಕರೆ ಮಾಡಿ ಅಜ್ಜಿಯನ್ನು ವಾಪಸ್ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಮಗಳು ಹೇಳಿದಂತೆ ಶ್ರೀನಿವಾಸ್, ಬಂದು ಅಮ್ಮನನ್ನು ಮನೆಗೆ ವಾಪಸ್ ಕರೆದೊಯ್ಯುತ್ತಾನೆ. ಅಜ್ಜಿಯನ್ನು ಕಳಿಸಿ, ಅಲ್ಲಿ ಅವರಿಗೆ ಪ್ರಜ್ಞೆ ಬಂದರೆ ನನಗೆ ಕಷ್ಟ ಎಂದು ಜಯಂತ್ ಭಯಗೊಳ್ಳುತ್ತಾನೆ. ಆದರೆ ವಿಧಿ ಇಲ್ಲದೆ ಆಂಬುಲೆನ್ಸ್ ಮಾಡಿ ಅಜ್ಜಿಯನ್ನು ಮನೆಗೆ ಕಳಿಸುತ್ತಾನೆ.
ಮನೆಯಲ್ಲಿ ಅಜ್ಜಿ ಯಾರ ಭಾಗದಲ್ಲಿ ಇರಬೇಕು ಎಂಬುದರ ಬಗ್ಗೆ ಹರೀಶನಿಗೂ ಸಂತೋಷನಿಗೂ ಜಗಳವಾಗುತ್ತದೆ. ಆದರೆ ಶ್ರೀನಿವಾಸ್ ಅದನ್ನು ಮುಂದುವರೆಸಲು ಬಿಡುವುದಿಲ್ಲ. ಅಮ್ಮ ಎಲ್ಲಿರಬೇಕು ಅನ್ನೋದನ್ನು ನಿರ್ಧರಿಸಬೇಕಿರುವುದು ನಾನು, ಈ ವಿಚಾರದಲ್ಲಿ ಯಾರೂ ಏನೂ ಮಾತನಾಡುವಂತಿಲ್ಲ ಎಂದು ಎಲ್ಲರಿಗೂ ಎಚ್ಚರಿಸುತ್ತಾನೆ. ಗಲಾಟೆ ಮಾಡದಂತೆ ಮಗ ಹರೀಶ ಹಾಗೂ ಸೊಸೆ ಸಿಂಚನಾಗೆ ಹೇಳುತ್ತಾನೆ. ಇತ್ತ ಅಜ್ಜಿಯನ್ನು ಕಳಿಸಿಕೊಟ್ಟಾಗಿನಿಂದ ಜಯಂತ್ , ಜಾಹ್ನವಿ ಇಬ್ಬರಿಗೂ ಬಹಳ ಆತಂಕ. ಜಯಂತ್ ಅಜ್ಜಿಗೆ ಏನಾದರೂ ಸಮಸ್ಯೆ ಮಾಡಿದರೆ ಎಂದು ಜಾನು ಗಾಬರಿಯಾದರೆ, ಅಜ್ಜಿಗೆ ಪ್ರಜ್ಞೆ ಬಂದರೆ ನನ್ನ ಮತ್ತೊಂದು ಮುಖ ಎಲ್ಲಿ ಬಯಲಿಗೆ ಬರುವುದೋ ಎಂದು ಜಯಂತ್ ಆತಂಕಗೊಳ್ಳುತ್ತಾನೆ.
ಅಜ್ಜಿ ಅಲ್ಲಿದ್ದರೂ ಸರಿ ಅವರು ನನ್ನ ಕಂಟ್ರೋಲ್ನಲ್ಲಿ ಇರಬೇಕು ಎಂದು ನಿರ್ಧರಿಸುವ ಜಯಂತ್, ಆಫೀಸಿಗೆ ಹೋಗುವ ನೆಪದಲ್ಲಿ ಮಾವನ ಮನೆಗೆ ಬರುತ್ತಾನೆ. ಜಾನು ಕೂಡಾ ಜಯಂತ್ ಆಫೀಸಿಗೆ ಹೊರಡುತ್ತಿದ್ದಂತೆ ಅಪ್ಪನ ಮನೆಗೆ ಹೊರಡಲು ನಿರ್ಧರಿಸುತ್ತಾಳೆ. ಅಳಿಯ ಇದ್ದಕ್ಕಿದ್ದಂತೆ ಮನೆಗೆ ಬಂದಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ಜಾನು ಎಲ್ಲಿ ಎಂದು ಎಲ್ಲರೂ ಕೇಳುತ್ತಾರೆ. ಇಲ್ಲ ಜಾನು ಬರಲಿಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನು ಇಲ್ಲಿವರೆಗೂ ಕರೆತರುವುದು ಸೇಫ್ ಅಲ್ಲ ಎನಿಸಿತು ಅದಕ್ಕೆ ನಾನೊಬ್ಬನೇ ಬಂದೆ. ಅಜ್ಜಿ ನಮ್ಮ ಮನೆಯಲ್ಲಿ ಇದ್ದಷ್ಟು ದಿನ ಅವರು ನಮಗೆ ಬಹಳ ಹತ್ತಿರವಾಗಿದ್ದರು. ಆದರೆ ಅವರನ್ನು ನೀವು ವಾಪಸ್ ಕರೆತಂದಾಗಿನಿಂದ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನನಗೆ ಅಜ್ಜಿಯನ್ನು ನೋಡಬೇಕೆನಿಸಿತು, ಅದಕ್ಕೆ ಆಫೀಸಿಗೆ ಹೊರಟಿದ್ದವನು ಜಾನುಗೆ ಹೇಳದೆ ಬಂದುಬಿಟ್ಟೆ ಎಂದು ಹೇಳುತ್ತಾನೆ. ಜಯಂತ್ಗೆ ಅಜ್ಜಿ ಮೇಲೆ ಬಹಳ ಗೌರವ ಎಂದು ತಪ್ಪು ತಿಳಿದು ಶ್ರೀನಿವಾಸ್, ಲಕ್ಷ್ಮೀ ಇಬ್ಬರೂ ಖುಷಿಯಾಗುತ್ತಾರೆ. ನಾನು ಬಂದಿರುವ ಉದ್ದೇಶವೇ ಬೇರೆ ಎಂದು ಜಯಂತ್ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಾನೆ. ಎಲ್ಲರೂ ಅಜ್ಜಿ ರೂಮ್ಗೆ ಹೋಗುತ್ತಾರೆ. ಇವರು ಇಲ್ಲೇ ಇದ್ದರೆ ನನ್ನ ಕೆಲಸ ಆಗುವುದಿಲ್ಲ ಎಂದು ತಿಳಿದ ಜಯಂತ್, ಒಂದು ಲೋಟ ಕಾಫಿ ಕೊಡುವಂತೆ ಅತ್ತೆ ಬಳಿ ಮನವಿ ಮಾಡುತ್ತಾನೆ. ಆಸ್ಪತ್ರೆ ರಿಪೋರ್ಟ್ ತಂದುಕೊಡುವಂತೆ ಮಾವನಿಗೆ ಹೇಳುತ್ತಾನೆ. ಇಬ್ಬರೂ ರೂಮ್ನಿಂದ ಹೊರ ಹೋಗುತ್ತಿದ್ದಂತೆ ಜಯಂತ್ ತಾನು ಬಂದ ಕೆಲಸ ಮುಗಿಸುತ್ತಾನೆ.
ಎಲ್ಲಿ ಕ್ಯಾಮರಾ ಇಟ್ಟರೆ ಸೇಫ್ ಎಂದು ಜಾಗ ಹುಡುಕಿ ಕೊನೆಗೆ ಜಯಂತ್ ಹೂದಾನಿಯಲ್ಲಿ ಕ್ಯಾಮರಾ ಫಿಕ್ಸ್ ಮಾಡಿ ಅದು ಸರಿ ಇದೆಯೇ ಎಂದು ಮೊಬೈಲ್ನಲ್ಲಿ ನೋಡುತ್ತಾನೆ. ಬಂದ ಕೆಲಸ ಸಕ್ಸಸ್ ಆಗಿದ್ದಕ್ಕೆ ಖುಷಿಯಾಗುತ್ತಾನೆ. ಅಜ್ಜಿ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಕ್ಯಾಮರಾ ಇಟ್ಟ ಜಯಂತ್ ಮನೆಗೆ ಹೊರಡುತ್ತಾನೆ. ಊಟ ಮಾಡುವಂತೆ ಅತ್ತೆ ಮಾವ ಒತ್ತಾಯ ಮಾಡಿದರೂ ಇಲ್ಲ ಜಾಹ್ನವಿ ಅವರ ಜೊತೆ ಮಾಡುತ್ತೇನೆ ಎನ್ನುತ್ತಾನೆ. ಜಯಂತ್, ಜಾನು ಮೇಲೆ ಇಟ್ಟಿರುವ ಪ್ರೀತಿ ಕಂಡು ಎಲ್ಲರೂ ಖುಷಿಯಾಗುತ್ತಾರೆ.
ಜಯಂತ್ ಅತ್ತ ಹೋಗುತ್ತಿದ್ದಂತೆ ಜಾನು, ಅಪ್ಪನ ಮನೆಗೆ ಬರುತ್ತಾಳೆ. ಮಗಳನ್ನು ನೋಡಿ ಶ್ರೀನಿವಾಸ್ , ಲಕ್ಷ್ಮೀ ಖುಷಿಯಾಗುತ್ತಾರೆ. ಗಂಡ ಹೆಂಡತಿ ಇಬ್ಬರಿಗೂ ಅಜ್ಜಿ ಎಂದರೆ ಎಷ್ಟು ಪ್ರೀತಿ, ಒಬ್ಬರಾದ ನಂತರ ಒಬ್ಬರು ನೋಡಲು ಬರುತ್ತಿದ್ದೀರಿ ಎಂದು ವೀಣಾ ಹೇಳುತ್ತಾಳೆ. ಅತ್ತಿಗೆ ಮಾತು ಕೇಳಿ ಜಾನು ಗಾಬರಿಯಾಗುತ್ತಾಳೆ. ಅವರು ಇಲ್ಲಿಗೆ ಬಂದು ಹೋಗಿದ್ದಾರಾ? ಹಾಗಾದರೆ ಖಂಡಿತ ಏನೋ ಮಾಡಿರುತ್ತಾರೆ, ಅದೇನೆಂದು ತಿಳಿದುಕೊಳ್ಳಬೇಕು ಎಂದುಕೊಳ್ಳುತ್ತಾಳೆ. ಜಯಂತನ ಹೆಸರು ಕೇಳುತ್ತಿದ್ದಂತೆ ಜಾನು ಸುಮ್ಮನಾಗಿದ್ದನ್ನು ಕಂಡು, ಏನಾಯ್ತು? ಎಲ್ಲಾ ಸರಿ ಇದೆ ತಾನೇ? ಎಂದು ಪ್ರಶ್ನಿಸುತ್ತಾರೆ. ಜಯಂತ್ ತನ್ನ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದು, ಅಜ್ಜಿಯನ್ನು ಕೊಲ್ಲಲು ಯತ್ನಿಸಿದ್ದು ಎಲ್ಲವೂ ಜಾನು ಕಣ್ಣ ಮುಂದೆ ಬಂದಂತಾಗಿ ಬೇಸರಗೊಳ್ಳುತ್ತಾಳೆ.
ಮನೆಯಲ್ಲಿ ಕ್ಯಾಮರಾ ಇರುವುದನ್ನು ಜಾನು ಕಂಡುಹಿಡಿಯುತ್ತಾಳಾ? ಅಪ್ಪ-ಅಮ್ಮನ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾಳಾ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.