ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ದಿನ ನಿತ್ಯ ಒಂದೊಂದು ಹೇಳಿಕೆಗಳು ಹೊರ ಬರುತ್ತಿವೆ. ಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದರೂ ಸಿಎಂ ಕುರ್ಚಿಯ ಕಾದಾಟ ಮುಂದುವರೆದಿದೆ. ಯಾವಾಗ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿತ್ತೋ ಅಂದೇ ಸಿಎಂ ಯಾರು ಅಂತ ಘೋಷಣೆ ಮಾಡೋಕೆ ನಾಲ್ಕೈದು ದಿನ ತೆಗೆದುಕೊಂಡಿತ್ತು ಎಐಸಿಸಿ. ಅಂದಿನಿಂದಲೇ ಕುರ್ಚಿ ಕಂಟಕ ಮುಂದುವರೆದಿತ್ತು. ಇದು ಇಲ್ಲಿಯವರೆಗೂ ನಿಂತಿಲ್ಲ. ನಿಲ್ಲೋದು ಇಲ್ಲ ಅನ್ನಿಸುತ್ತೆ.
ಸದ್ಯ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋದು ಜಗಜ್ಜಾಹಿರ್ರಾದ ವಿಚಾರವೇ. ಆದರೆ ಸಿಎಂ ಸ್ಥಾನ ಅಷ್ಟು ಸುಲಭವಾಗಿ ಅವರಿಗೆ ದಕ್ಕಲ್ಲ ಅನ್ನೋದು ಕೂಡ ಗೊತ್ತಿರುವ ವಿಚಾರವೇ. ಈಗಾಗಲೇ ಸಿಎಂ ಆಪ್ತರು ಎಂದೆನಿಸಿರುವ ಕೆಲವೊಂದು ಸಚಿವರುಗಳು ಅವರ ಬಳಿ ಇರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಕಿತ್ತು ಕೊಳ್ಳುವ ಪ್ರಯತ್ನದಲ್ಲೇ ಇದ್ದಾರೆ. ಆದರೆ ಅದೂ ಕೂಡ ಸುಲಭವಿಲ್ಲ. ಸಿಎಂ ಸ್ಥಾನಕ್ಕಾಗಿ ನಿತ್ಯವೂ ಒಂದಿಲ್ಲೊಂದು ತಂತ್ರ ಮಾಡ್ತಾ ಇರೋ ಡಿಕೆ ಶಿವಕುಮಾರ್ ಹೊಸದೊಂದು ದಾಳ ಉರುಳಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸಹಜವಾಗಿ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟ ಯಾರೇ ಆದ್ರೂ ಬ್ಲ್ಯಾಕ್ ಮೇಲ್ ಗಳು, ಅಥವಾ ತಾವು ಪಕ್ಷಕ್ಕೆ ದುಡಿದ ದಿನಗಳ ಬಗ್ಗೆ ಮಾತಾಡೇ ಆಡ್ತಾರೆ. ಅಂತಹದೊಂದು ಪರಿಸ್ಥಿತಿಯನ್ನ ಡಿಕೆ ಶಿವಕುಮಾರ್ ಸೃಷ್ಟಿ ಮಾಡ್ತಾ ಇದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ, ಈ ಬಾರಿ ಪೂರ್ಣ ಬಹುಮತ ಬರಲು ಅವರೂ ಕಾರಣ ಅನ್ನೋ ಮಾತನ್ನ ಒಪ್ಪದೇ ಇರಲು ಆಗೋದಿಲ್ಲ. ಅದರಂತೆ ಸಿದ್ದರಾಮಯ್ಯ ನೋಡಿಯೂ ಮತ ಹಾಕಿದ್ದಾರೆ ಜನ ಅನ್ನೋದು ಕೂಡ ಅಷ್ಟೆ ಸತ್ಯ. ಈಗ ಇರುವ ವಿಚಾರ ಏನಪ್ಪ ಅಂದ್ರೆ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಹೊಸದೊಂದು ರಣತಂತ್ರ ಮಾಡಿದ್ದಾರೆ ಅನ್ನೋದು.
ಹೌದು, ಡಿಕೆ ಶಿವಕುಮಾರ್ ಅವರಿಗೆ ಕೇಸರಿ ಮೇಲೆ ಒಲವು ಜಾಸ್ತಿ ಆಗಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ. ಅದಕ್ಕೆ ಕಾರಣ ಜೊತೆಗೆ ಪುಷ್ಟಿ ಕೊಡುವ ಕೆಲವೊಂದು ಘಟನೆಗಳು ಇತ್ತೀಚೆಗೆ ನಡೆದಿವೆ. ತಮ್ಮದೇ ಪಕ್ಷದ ವರಿಷ್ಠರು, ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಕುಂಭ ಮೇಳದ ಕುರಿತು ನೀಡಿದ್ದ ಹೇಳಿಕೆಯೊಂದು ಸಾಕಷ್ಟು ವೈರಲ್ ಆಗೋದ್ರ ಜೊತೆಗೆ ಟೀಕೆಗೂ ಗುರಿಯಾಗಿತ್ತು. ಆದರೆ ಅದನ್ನೂ ಮೀರಿ ಡಿಕೆ ಶಿವಕುಮಾರ್ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿ ಬಂದರು. ಇದನ್ನೂ ಕೂಡ ವಿಪಕ್ಷಗಳು ಟೀಕೆ ಮಾಡಿದ್ದವು. ಆದರೆ ಡಿಕೆ ಶಿವಕುಮಾರ್ ಸರಿಯಾದ ತಿರುಗೇಟು ನೀಡಿದರು.

ಇದೆಲ್ಲದರ ಮಧ್ಯೆ ಹೊಸ ವಿಚಾರ ಎನ್ನುವಂತೆ ರಾಜಸ್ಥಾನದಲ್ಲಿ ನಡೆದ ಜಲಸಂಪನ್ಮೂಲ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಮೋದಿಯವರ ಫೋಟೋ ಮುಂದೆ ಕುಳಿತು ನೀಡಿದ ಹೇಳಿಕೆಯೊಂದು ಇದೀಗ ಹೊಸ ರಾಜಕೀಯ ತಿರುವು ಹಾಗೂ ಚರ್ಚೆಗೆ ಕಾರಣವಾಗಿದೆ. ಕುಂಭಮೇಳದ ನೀರು ಕಲುಷಿತ ಆಗಿದೆ ಅನ್ನೋ ವರದಿ ಬಂದಿತ್ತು. ಈ ಸಂಬಂಧ ಮಾಧ್ಯಮವೊಂದು ಪ್ರಶ್ನೆ ಕೇಳಿದಾಗ ಅದಕ್ಕೆ ನೋ ರಿಯಾಕ್ಷನ್ ಅನ್ನೋ ರೀತಿ ಉತ್ತರ ನೀಡಿದ್ದಾರೆ.
ಇದೆಲ್ಲವನ್ನು ನೋಡ್ತಾ ಇದ್ರೆ ಡಿಕೆ ಶಿವಕುಮಾರ್ ಕಮಲದ ಕಡೆ ವಾಲ್ತಾ ಇದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ತಮಗೆ ಸಿಎಂ ಸ್ಥಾನ ಸಿಗದೇ ಹೋದ್ರೆ ಆ ಕಡೆ ವಾಲುವ ಯೋಚನೆ ಮಾಡಬೇಕಾಗುತ್ತದೆ ಅನ್ನೋ ಸೂಚನೆಯನ್ನೇನಾದ್ರೂ ನೀಡಿದ್ರಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗಲಿದೆ ಅಂತ ಇಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದರೆ ಅಂತಹದೊಂದು ಯೋಚನೆ ಮಾಡಿದ್ರಾ ಡಿಕೆ ಶಿವಕುಮಾರ್ ಅನ್ನೋದು ಸದ್ಯದ ಕುತೂಹಲ.

ರಾಜ್ಯ ರಾಜಕೀಯದಲ್ಲಿ ಯಾವುದೇ ಸಮಯದಲ್ಲಿ ಆದರೂ ಬದಲಾವಣೆ ಆಗಬಹುದು. ಅಥವಾ ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಯಾರು ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದು. ಈ ಹಿಂದೆ ಕೂಡ ಸಾಕಷ್ಟು ಸಿದ್ದಾಂತ ಇಟ್ಟುಕೊಂಡಂತಹ ಅನೇಕ ಪ್ರಬಲ ನಾಯಕರು ಪಕ್ಷಾಂತರಿಗಳಾಗಿದ್ದಾರೆ. ಸಿದ್ದಾಂತ ಪಕ್ಕಕ್ಕಿಟ್ಟು ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗಿದ್ದೂ ಇದೆ. ಅದಕ್ಕೆ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ. ಅಧಿಕಾರಕ್ಕಾಗಿಯೇ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿದ್ದು ಅನ್ನೋ ಚರ್ಚೆ ಜೀವಂತವಾಗಿ ಇದ್ದೇ ಇದೆ. ಹೀಗಿರುವಾಗ ಬಿಜೆಪಿ ಪಕ್ಷಕ್ಕೆ ಹೋಗಲು ಡಿಕೆಶಿಗೆ ವೇದಿಕೆ ತೆರೆ ಮರೆಯಲ್ಲಿ ಸಿದ್ದವಾಗುತ್ತಿದೆ ಅನ್ನೋದನ್ನ ತಳ್ಳಿ ಹಾಕುವಂತಿಲ್ಲ. ಸದ್ಯದ ಬಿಜೆಪಿಯಲ್ಲಿ ಸಾರಥಿಯ ಕೊರತೆ ಕೂಡ ಎದ್ದು ಕಾಣ್ತಾ ಇರೋ ಹೊತ್ತಲ್ಲಿ ಇಂತಹದೊಂದು ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತೊಂದು ತಿರುವು ಪಡೆಯುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.



