ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣವನ್ನ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೈಜಾಕ್ ಮಾಡಿದ್ದಾರೆ. ಸರ್ಕಾರದ ವಿರುದ್ಧ ಸಮರ ಸಾರೋಕೆ ಇದು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಜಿಲ್ಲಾಧಿಕಾರಿ ತನಿಖೆಯನ್ನ ತೀರ್ವವಾಗಿ ವಿರೋಧಿಸಿರೋ ಬಿಜೆಪಿ ನಾಯಕರು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಇತ್ತ ಜೆಡಿಎಸ್ ಕೂಡ ಇದನ್ನ ತೀವ್ರವಾಗಿ ಖಂಡಿಸಿದ್ದು ಡಿಕೆ ಶಿವಕುಮಾರ್ ರನ್ನ ಸಂಪುಟದಿಂದಲೇ ಕೈ ಬಿಡಬೇಕು ಅಂತ ಒತ್ತಾಯಿಸಿದ್ದಾರೆ.

ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಸೆಲಬ್ರೇಷನ್ ವೇಳೆ ನಡೆದ ದುರಂತ ಎಲ್ಲರ ಮನಸ್ಸಲ್ಲೂ ಕಹಿಯಾಗಿಯೇ ಉಳಿದಿದೆ. ೧೧ ಮಂದಿ ಅಮಾಯಕರು ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಕಾರಣ ಸರ್ಕಾರದ ವೈಫಲ್ಯ ಅಂತ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿದೆ. ಇಂದು ಸಿಎಂ,ಡಿಸಿಎಂ ಅವರನ್ನ ತರಾಟೆಗೆಗೆ ತೆಗೆದುಕೊಂಡಿದೆ. ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಕೊಡುವಂತೆ ಆಗ್ರಹಿಸಿದೆ.
ಇಷ್ಟಕ್ಕೆ ಡಿಕೆ ಶಿವಕುಮಾರ್ ಕಾರಣ. ಡಿಕೆ ಶಿವಕುಮಾರ್ ರಿಂದಲೇ ಈ ಘಟನೆ ನಡೆದಿರೋದು. ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ ಅಂತ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ವರ್ಚಸ್ಸು ವೃದ್ಧಿಸಿಕೊಳ್ಳಲು ಕ್ರಿಕೆಟ್ ಪ್ರೇಮಿಗಳನ್ನು ಬಲಿ ಕೊಟ್ಟಿದ್ದಾರೆ ಇದು ಸರಿಯಲ್ಲ ಎಂದಿದ್ದಾರೆ.

ದೆಹಲಿಯಲ್ಲಿ ಮಾತನಾಡಿರೋ ಅವರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣವಾದ ಡಿಸಿಎಂ ಡಿಕೆ. ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕು. ಮುಖ್ಯಮಂತ್ರಿಗೆ ಧೈರ್ಯ ಎನ್ನುವುದು ಇದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ಆಚೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ತನಗೆ ಪಿಆರ್ ಮಾಡುತ್ತಿರುವ ಕಂಪನಿಯೊಂದು ಬರೆದುಕೊಟ್ಟ ಸ್ಕ್ರಿಪ್ಟ್ ನಂತೆ ಅವರು ಬುಧವಾರ ಇಡೀ ದಿನದ ಡ್ರಾಮಾ ನಡೆಸಿದರು. ಇದು ಅಸೂಕ್ಷ್ಮತೆಯ ಪರಮಾವಧಿ. ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ವ್ಯಕ್ತಿ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ರೀತಿಯ ಮಾನವೀಯತೆಯ ಗುಣಗಳು ಇಲ್ಲ. ಸಾವಿನಲ್ಲಿಯೂ ಪ್ರಚಾರಕ್ಕೆ ಹಪಾಹಪಿಸಿದ ವ್ಯಕ್ತಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಈ ವ್ಯಕ್ತಿ ತೆವಲಿಗೆ ಅನೇಕ ಅಮಾಯಕರ ಪ್ರಾಣಗಳು ಹೋದವು. ಈತ ಒಬ್ಬ ರೌಡಿಯಂತೆ ವರ್ತಿಸಿದ್ದಾರೆ. ತನ್ನ ಶೋಕಿಗೆ ಇಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ. ಸರ್ಕಾರದ ಹೊಣೆಗೇಡಿತನ ಹಾಗೂ ಡಿಸಿಎಂ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಷ್ಟು ಜೀವಗಳನ್ನು ಬಲಿ ಕೊಟ್ಟರು. ಇದಕ್ಕೆ ಸರ್ಕಾರವೇ ಹೊಣೆ. ವಿಧಾನಸೌಧದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮಾಡಿಕೊಂಡಿದ್ದರು. ಈಗ ಕೇವಲ ತನಿಖೆಗೆ ಆದೇಶ ಕೊಟ್ಟು, ಮೃತರಿಗೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವಂತಿಲ್ಲ. ಅವರು ಇಡೀ ತಂಡವನ್ನೇ ಹೈಜಾಕ್ ಮಾಡಿದರು. ಪೊಲೀಸರನ್ನು ಹತ್ತಿರಕ್ಕೆ ಬರದಂತೆ ತಡೆದರು.

ವಿಧಾನಸೌಧದ ಮೆಟ್ಟಿಲು ಮೇಲೆ ನಡೆದ ಕಾರ್ಯಕ್ರಮದ ಮೇಲೆ ಬಂದಿದ್ದ ಜನರನ್ನು ವೇದಿಕೆಯ ಮೇಲೆ ಕತ್ತು ಹಿಡಿದು ತಳ್ಳುತ್ತಾರೆ. ಇಂಥ ವ್ಯಕ್ತಿಯನ್ನು ನಾವು ಮನುಷ್ಯ ಎಂದೂ ಕರೆಯಲು ಆಗುತ್ತದೆಯೇ ಎಂದು ವಾಗ್ದಳಿ ನಡೆಸಿದ್ದಾರೆ ಕುಮಾರಸ್ವಾಮಿ. ನಾಲ್ಕು ಜನ ಸತ್ತ ಮೇಲೆಯೂ ಡಿಸಿಎಂ ಎನ್ನುವ ಈ ವ್ಯಕ್ತಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಕಪ್ ಗೆ ಮುತ್ತಿಟ್ಟರು. ಅದು ಈ ವ್ಯಕ್ತಿಯ ನಡವಳಿಕೆ ತೋರಿಸುತ್ತದೆ ಎಂದು ಹೇಳಿದ್ದಾರೆ.



