ಸೌದಿ ವಿಶ್ವದ 13ನೇ ಅತಿದೊಡ್ಡ ರಾಷ್ಟ್ರವಾಗಿದೆ. ಇದು ಮಧ್ಯಪ್ರಾಚ್ಯದಲ್ಲಿ ಪಶ್ಚಿಮ ಯೂರೋಪ್ನ ಗಾತ್ರ ಮತ್ತು ಅಮೆರಿಕದ ಕಾಲು ಭಾಗದಷ್ಟು ದೊಡ್ಡ ದೇಶವಾಗಿದೆ. ಸೌದಿ ರಾಜನ ಅಧಿಕೃತ ಶೀರ್ಷಿಕೆ ‘ಎರಡು ಪವಿತ್ರ ಮಸೀದಿಗಳ ಪಾಲಕ'(Custodian of the Two Holy Mosques) ಎಂದು. ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ಜನವರಿ 2015ರಿಂದ ಈ ದೇಶದ ರಾಜರಾಗಿ ಆಳ್ವಿಕೆ ನಡೆಸುತ್ತಿದ್ದಾರೆ.
ಸೌದಿಯ ಅಂಕಿಅಂಶಗಳ ಪ್ರಕಾರ ಈ ದೇಶವು
ವಿಶ್ವದ 4ನೇ ಅತಿ ದೊಡ್ಡ ತಂಬಾಕು ಆಮದುದಾರ ಎಂದು ಹೇಳಲಾಗಿದೆ. ಸೌದಿಗಳು ದಿನಕ್ಕೆ ಸುಮಾರು 8 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹಣವನ್ನು ಸಿಗರೇಟ್ಗಳಿಗಾಗಿ ಖರ್ಚು ಮಾಡುತ್ತಾರಂತೆ. 2012ರಲ್ಲಿ ಸೌದಿ ಅರೇಬಿಯಾ ಸರ್ಕಾರಿ ಕಚೇರಿಗಳು ಮತ್ತು ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿತು. ಇದರಲ್ಲಿ ಶಿಶಾಸ್ ನಿಷೇಧ ಸಹ ಒಳಗೊಂಡಿರುತ್ತದೆ. ಇದಲ್ಲದೆ ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ವಾಹನ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಸೌದಿ ಅರೇಬಿಯಾ ಅನೇಕ ದೇಶಗಳಿಂತ ಮುಂದಿದೆ. ಅಂದರೆ ಇಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲವಂತೆ. 2000ರಲ್ಲಿ ವಿಶ್ವ ಬ್ಯಾಂಕ್ ವರದಿಯು ಸೌದಿ ಅರೇಬಿಯಾ ಜೊತೆಗೆ ಮಲೇಷ್ಯಾ, ಥೈಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾವು ವಾಹನ ಚಲಾಯಿಸಲು ಅತ್ಯಂತ ಅಪಾಯಕಾರಿ ದೇಶಗಳಾಗಿವೆ ಎಂದು ತಿಳಿಸಿದೆ.
ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಜೊತೆ ಪುರುಷರು ಇರಲೇಬೇಕಿತ್ತು. ಆದರೆ, ಇದೀಗ ಸೌದಿ ಅರೇಬಿಯಾ ಆ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ, ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದೆ.



