ಆನ್ಲೈನ್ ವೇದಿಕೆ ಹೆಚ್ಚು ಜಟಿಲವಾಗುತ್ತಿದ್ದು, ಬಳಕೆದಾರರ ಸುರಕ್ಷತೆ ಮತ್ತಷ್ಟು ನಿರ್ಣಾಯಕವಾಗುತ್ತಿದೆ. ದುರುದ್ದೇಶಪೂರಿತ ಚಟುವಟಿಕೆಯನ್ನು ರದ್ದುಗೊಳಿಸಿ, ಜಿಮೇಲ್ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಲು ಜಿಮೇಲ್ ತಂಡ ಕಾರ್ಯಪ್ರವೃತವಾಗಿದೆ. ಈಗಿರುವ ಭದ್ರತೆಯೊಂದಿಗೆ ಮತ್ತೆ ಯಾವ ವಿಧಾನವನ್ನು ಜಾರಿಗೆ ತರಲಿದೆ? ಅದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಮಾಹಿತಿ ಇಲ್ಲಿದೆ.
ತಂತ್ರಜ್ಞಾನ ದೈತ್ಯ ಗೂಗಲ್ ಸಹ ದುರುದ್ದೇಶಪೂರಿತ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದು, ಫೋರ್ಬ್ಸ್ ವರದಿಯ ಪ್ರಕಾರ, ಗೂಗಲ್ ಜಿಮೇಲ್ಗಾಗಿ ಎಸ್ಎಮ್ಎಸ್ ಆಧಾರಿತ 6 ಅಂಕಿಯ ದೃಢೀಕರಣ ಕೋಡ್ಗಳನ್ನು ಹಂತಹಂತವಾಗಿ ತೆಗೆದು ಹಾಕಲು ತಯಾರಿ ನಡೆಸಿದೆ. ಅದರ ಪರ್ಯಾಯವಾಗಿ ಕ್ಯೂಆರ್ ಕೋಡ್ ಪರಿಶೀಲನೆಯನ್ನು ಜಾರಿಗೆ ತರಲಿದೆ ಎಂದು ತಿಳಿದು ಬಂದಿದೆ.
ಎಸ್ಎಮ್ಎಸ್ ಸಂಬಂಧಿತ ಭದ್ರತಾ ಅಪಾಯಗಳನ್ನು ಕಡಿಮೆ ಮಾಡುವುದು ಹಾಗೂ ಟೂ ಫ್ಯಾಕ್ಟರ್ ಅಥೆಂಟಿಕೇಶನ್ ವಿಧಾನದಲ್ಲಿನ ವಂಚನೆಯಿಂದ ಬಳಕೆದಾರರನ್ನು ಸುರಕ್ಷಿತಗೊಳಿಸುವುದು ಈ ವಿಧಾನದ ಮೂಲ ಉದ್ದೇಶವಾಗಿದೆ.

ಕ್ಯೂಆರ್ ಕೋಡ್ ಹೇಗೆ ಕಾರ್ಯನಿರ್ವಹಿಸುತ್ತದೆ….?
ಮು೦ಬರುವ ದಿನಗಳಲ್ಲಿ ಜಿಮೇಲ್ ಬಳಕೆದಾರರು ಪರಿಶೀಲನೆ ಸಮಯದಲ್ಲಿ ಎಸ್ಎಮ್ಎಸ್ ಕೋಡ್ ಸ್ವೀಕರಿಸುವ ಬದಲು ಪರದೆಯ ಮೇಲೆ ಕ್ಯೂಆರ್ ಕೋಡ್ ಅನ್ನು ಪಡೆಯುತ್ತಾರೆ. ತಮ್ಮ ಸ್ಮಾರ್ಟ್ ಫೋನ್ ಬಳಸಿ ಕ್ಯಾಮೆರಾ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ಖಾತೆಗೆ ಲಾಗಿನ್ ಆಗಬಹುದಾಗಿದೆ. ಈ ವಿಧಾನದ ಮೂಲಕ ಕೋಡ್ ಇಂಟರ್ಸೆಪ್ಷನ್ ಹಾಗೂ ಸಿಮ್ ವಿನಿಮಯದಂತಹ ಅಪಾಯವನ್ನು ತೆಗೆದು ಹಾಕಿ, ಪರಿಶೀಲನಾ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸುವ ಗುರಿಯನ್ನು ಗೂಗಲ್ ಹೊಂದಿದೆ.
ಹೀಗೆ ಮಾಡುವ ಮೂಲಕ ಗೂಗಲ್, ಭದ್ರತೆಯನ್ನು ಬಲಪಡಿಸುತ್ತಿರುವುದರ ಜೊತೆಗೆ ಟೆಲಿಕಾಂ ನೆಟ್ವರ್ಕ್ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಂತಾಗುತ್ತದೆ. ಟೆಲಿಕಾಂ ನೆಟವರ್ಕ್ಗಳು ಸುಲಭವಾಗಿ ಹ್ಯಾಕರ್ಗಳ ಹತೋಟಿಗೆ ಒಳಪಡುವುದರಿಂದ, ಈ ಕ್ಯೂಆರ್ ಕೋಡ್ ವಿಧಾನ ಹೆಚ್ಚು ಸುರಕ್ಷಿತವಾಗಿರುತ್ತದೆ.
ಎಸ್ಎಮ್ಎಸ್ ವಿಧಾನದಿಂದ ದೂರ ಸರಿಯಲು ಕಾರಣ
ಎಸ್ಎಮ್ಎಸ್ ಆಧಾರಿತ ದೃಢೀಕರಣವು ತನ್ನದೇ ಆದ ದೋಷಗಳನ್ನು ಒಳಗೊಂಡಿದೆ. ಇತ್ತೀಚೆಗೆ ವಂಚಕರು ಸುಲಭವಾಗಿ ಗ್ರಾಹಕರ ಕೋಡ್ಗಳನ್ನು ಬಹಿರಂಗಪಡಿಸುವಂತೆ ಮೋಸಗೊಳಿಸುತ್ತಿದ್ದಾರೆ. ಕೆಲವೊಮ್ಮೆ ಜಿಮೇಲ್ ಬಳಕೆದಾರರು ಎಸ್ಎಮ್ಎಸ್ ಸ್ವೀಕರಿಸುವ ಸಾಧನದ ಪ್ರವೇಶವನ್ನು ಕಳೆದುಕೊಳ್ಳಬಹುದು. ಸಿಮ್ಸ್ವ್ಯಾಪ್ ವಂಚನೆಯ ಮೂಲಕ ವಂಚಕರು ಖಾತೆಗಳಿಗೆ ಅನಧಿಕೃತ ಪ್ರವೇಶ ಪಡೆಯಲು ಫೋನನ್ನು ಹೈಜಾಕ್ ಮಾಡಬಹುದಾಗಿದೆ.
ಇನ್ನೊಂದು ಪ್ರಮುಖ ಕಾರಣವೆಂದರೆ ಹೆಚ್ಚುತ್ತಿರುವ ಟ್ರಾಫಿಕ್ ಪಂಪಿಂಗ್ ಸ್ಕ್ಯಾಮ್ ಎಂದರೆ ಟೋಲ್ ಫ್ರಾಡ್. ಇಲ್ಲಿ ವಂಚಕರು ಅವರ ಹಿಡಿತದಲ್ಲಿರುವ ಮೊಬೈಲ್ ಸಂಖ್ಯೆಗೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಎಸ್ಎಮ್ಎಸ್ ವೆರಿಫಿಕೇಶನ್ ಮೆಸ್ಸೆಜನ್ನು ಕಳುಹಿಸುತ್ತಾರೆ. ಈ ಮೂಲಕ ಪ್ರತಿ ಬಾರಿ ಮೆಸ್ಸೆಜ್ ಕಳುಹಿಸಿ ಹಣ ಗಳಿಸುತ್ತಿದ್ದಾರೆ ಎಂದು ಜಿಮೇಲ್ ವಕ್ತಾರ ರಾಸ್ ರಿಚೆಂಡ್ರ್ಫ್ರರ್ ತಿಳಿಸಿದ್ದಾರೆ.



