ರಾಜ್ಯದಲ್ಲಿ ನಡೆಸಿದ ಗಣತಿ ಈಗ ರಾಜಕೀಯದಲ್ಲಿ ಕಿಚ್ಚು ಹಚ್ಚಿದೆ. ಈಗಾಗಲೇ ಸಾಕಷ್ಟು ಸಮುದಾಯಗಳು ವಿರೋಧ ಮಾಡ್ತಾ ಇರುವ ಬೆನ್ನಲ್ಲೇ ಕೇಂದ್ರ ಕೂಡ ಜಾತಿ ಜನ ಗಣತಿ ಮಾಡುವ ಘೋಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ನಡೆದ ಜಾತಿ ಜನಗಣತಿ ಮೂಲೆಗುಂಪಾಗೋ ಎಲ್ಲಾ ಲಕ್ಷಣ ಕಾಣ್ತಾ ಇದೆ. ಯಾವಾಗ ಕೇಂದ್ರದಿಂದ ಜಾತಿ ಜನಗಣತಿ ಮಾಡಲು ಘೋಷಣೆ ಮಾಡಿದರೋ ಅಂದೇ ಈ ಗಣತಿಯ ಭವಿಷ್ಯ ಏನಾಗುತ್ತೆ ಅನ್ನೋ ಚರ್ಚೆ ಆರಂಭ ಆಗಿದೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಗೊಂದಲದ ಹೇಳಿಕೆಗಳು ಹೊರ ಬರ್ತಾ ಇದೆ.
ರಾಜ್ಯದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವರದಿ ಸಂಪುಟದಲ್ಲಿ ಮಂಡನೆಯಾಗಿದೆ. ಆದರೆ ಇದರ ಮಂಡನೆಯಾದ ಬಳಿಕ ಚರ್ಚೆಗೆ ಅವಕಾಶ ಸಿಗಲೇ ಇಲ್ಲ. ಪ್ರಬಲ ಸಮುದಾಯದ ಸಚಿವರು ಈ ವರದಿಯನ್ನ ವಿರೋಧ ಮಾಡುತ್ತಲೇ ಇದ್ದಾರೆ. ಮುಂಬರುವ ಸಚಿವ ಸಂಪುಟದಲ್ಲೂ ಇದು ಚರ್ಚೆ ಆಗುವುದಿಲ್ಲ ಅನ್ನೋದು ಮೂಲಗಳ ಮಾಹಿತಿ. ಇದೆಲ್ಲದರ ಮಧ್ಯೆ ಒಬ್ಬೊಬ್ಬ ನಾಯಕ ಒದೊಂದು ಹೇಳಿಕೆ ನೀಡ್ತಾ ಇದೆ.

ಕೇಂದ್ರದ ಗಣತಿಯ ನಿರ್ಧಾರವನ್ನ ರಾಜ್ಯದ ಹಲವು ನಾಯಕರು ಸ್ವಾಗತವನ್ನೇನೋ ಮಾಡಿದ್ದಾರೆ. ಇದು ರಾಹುಲ್ ಗಾಂಧಿಯವರ ಒತ್ತಾಯದಿಂದಲೇ ಆಗಿದ್ದು ಅಂತಲೂ ಹೇಳುತ್ತಿದ್ದಾರೆ. ಆದರೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ನಿಂತು ಕೊಳ್ತಾ ಇಲ್ಲ ನಾಯಕರು. ಕೇಂದ್ರ ಗಣತಿ ಮಾಡಿದರೆ ರಾಜ್ಯದಲ್ಲಿ ನೂರಾರು ಕೋಟಿ ಖರ್ಚು ಮಾಡಿರೋ ವರದಿ ವೇಸ್ಟ್ ಆಗೋದು ಗ್ಯಾರಂಟಿ. ಇದರ ಮಧ್ಯೆ, ಕ್ಷೇತ್ರ ವಿಂಗಡಣೆ, ಮೀಸಲಾತಿ ಹೀಗೆ ಹಲವು ವಿಚಾರಗಳಿಂದ ಯಾವುದೇ ಸ್ಪಷ್ಟ ನಿಲುವಿಗೆ ಬರ್ತಾ ಇಲ್ಲ ರಾಜ್ಯದ ಹಲವು ನಾಯಕರು.
ರಾಜ್ಯದಿಂದ ನಡೆಸಿರೋ ಈ ವರದಿಯಲ್ಲಿ ಸರಿಯಾದ ಅಂಕಿ ಅಂಶ ಇಲ್ಲ ಅಂತ ವಾದ ಮಾಡ್ತಾ ಇದ್ದಾರೆ ಅನೇಕ ಸಚಿವರು. ಆದರೆ ಈಗ ಕೇಂದ್ರದಿಂದ ಆಗುವ ಗಣತಿಗೆ ಅನಿವಾರ್ಯವಾಗಿ ಒಪ್ಪಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೆಲ ನಾಯಕರು ಇದನ್ನ ಸ್ವಾಗತ ಮಾಡ್ತಾ ಇದ್ರೆ, ಮತ್ತೊಂದಿಷ್ಟು ಜನ ಬಿಹಾರ ಚುನಾವಣೆ ಸಲುವಾಗಿ ಘೋಷಣೆ ಮಾಡಿದ್ದಾರೆ. ಹಾಗಾಗಿ ಈ ಗಣತಿ ಆಗ್ತಾ ಇದೆ. ಇದು ಕೇವಲ ಬಿಹಾರದ ಚುನಾವಣೆಗೆ ಮಾತ್ರ ಅಂತಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಯಾವಾಗ ಹೋರಾಟ ಮಾಡಿದ್ರೋ ಅವರ ಒತ್ತಾಯಕ್ಕೆ ಮಣಿದಿದೆ ಕೇಂದ್ರ ಸರ್ಕಾರ. ಕೇಂದ್ರದ ಗಣತಿಯಲ್ಲಿ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಆಗುವುದಿಲ್ಲ ಕೇವಲ ಜಾತಿ ಗಣತಿ ಮಾತ್ರ ಆಗುತ್ತದೆ ಎಂದರು.

ಈಗಾಗಲೇ ರಾಜ್ಯದ ಗಣತಿಯಿಂದ ಕ್ಷೇತ್ರ, ಸಮುದಾಯ, ಮೀಸಲಾತಿ ಕಡಿಮೆ ಆಗಿತ್ತದೆ ಅನ್ನೋದು ಅನೇಕರ ವಾದವಾಗಿದ್ದರೂ ಕೂಡ ಕೇಂದ್ರದ ಈ ನಿರ್ಧಾರ ಒಪ್ಪಲೇಬೇಕಾಗಿದೆ. ಒಂದು ಕಡೆ ಒಪ್ಪಿಲ್ಲ ಅಂದ್ರೆ ರಾಹುಲ್ ಗಾಂಧಿ ಹೇಳಿಕೆಯನ್ನ ತಿರಸ್ಕಾರ ಮಾಡಿದಂತೆ. ಒಪ್ಪಿದರೆ ಮುಂದೆ ಕ್ಷೇತ್ರದಲ್ಲಿ ಮತ ಬ್ಯಾಂಕ್ ಕಡಿಮೆ ಆಗುತ್ತೆ ಅನ್ನೋದು ಅನೇಕರ ಲೆಕ್ಕಾಚಾರ.
ಅತ್ತ ರಾಜ್ಯದ ಗಣತಿಯನ್ನು ಅನೇಕರು ಒಪ್ಪುತ್ತಾ ಇಲ್ಲ. ಅತ್ತ ಕೇಂದ್ರದಿಂದಲೂ ಗಣತಿಗೆ ಮುಂದಾಗಿರೋದ್ರಿಂದ ರಾಜ್ಯದ ಗಣತಿ ಒಪ್ಪಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿ ಇರೋ ಹಾಗಿದೆ ಸಚಿವರುಗಳು. ಇದರ ಮಧ್ಯೆ ಕೇಂದ್ರ ಕೂಡ ಗಣತಿ ಮಾಡಬೇಕು ಅಂತಿರೋದು ರಾಜ್ಯದ ಹಲವು ನಾಯಕರಿಗೆ ನುಂಗಲಾರದ ತುತ್ತಾಗಿರೋದಂತೂ ಸತ್ಯ. ಅಷ್ಟೆ ಅಲ್ಲ ರಾಜ್ಯದ ಗಣತಿಯೂ ಕೂಡ ವೇಸ್ಟ್ ಆಗಲಿದೆ.



