ಇಡೀ ಕರ್ನಾಟಕ ಜನರನ್ನ ನಕ್ಕು ನಗಿಸುತ್ತಿದ್ದ
ಕಾಮಿಡಿ ಕಿಲಾಡಿ ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ ಇಹಲೋಕ ತ್ಯಜಿಸಿದ್ದಾರೆ. ಕಾಮಿಡಿ ಶೋಗಳು, ಧಾರವಾಹಿಗಳು, ಸಿನಿಮಾ ಹೀಗೆ ಎಲ್ಲಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು ಈ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಈ ನಟ ಆರಾಮಾಗಿಯೇ ಇದ್ದರು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುವವರು ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ಚಿಕ್ಕ ವಯಸ್ಸು, ಮಧ್ಯ ವಯಸ್ಸಿನವರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಇದೀಗ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೇವಲ 34 ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಇಡೀ ಕರ್ನಾಟಕವನ್ನ ನಕ್ಕು ನಗಿಸುತ್ತಿದ್ದ ರಾಕೇಶ್ ಇನ್ನಿಲ್ಲ ಅನ್ನೋ ಸುದ್ದಿಯೇ ಇಡೀ ಚಿತ್ರರಂಗವನ್ನ ಶಾಕಿಂಗ್ ಗೆ ದೂಡಿದೆ.

ಹೌದು, ಉಡುಪಿ ಮೂಲದ ಈ ಕಲಾವಿದ ಇಂದು ಬೆಳಗ್ಗಿನ ಜಾವ 3:30ರ ವೇಳೆಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಕಳೆದ ರಾತ್ರಿ ಅವರು ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರಂತೆ. ಕೇವಲ ಭಾಗಿಯಾಗಿದ್ದಷ್ಟೆ ಅಲ್ಲ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರಂತೆ. ಅಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಿಲ್ಲ. ಇತ್ತ ಲೋ ಬಿಪಿಯಿಂದ ಈ ಸಮಸ್ಯೆ ಕಾಣಿಸಿಕೊಂಡಿತ್ತು ಅಂತಲೂ ಹೇಳಲಾಗುತ್ತಿದೆ.
ಇನ್ನು ರಾಕೇಶ್ ಅನೇಕ ಸಿನಿಮಾ ಒಪ್ಪಿಕೊಂಡಿದ್ದರು. ಆ ಪೈಕಿ ಕಾಂತಾರ-1 ಕೂಡ ಒಂದು. ಈ ಸಿನಿಮಾ ಈಗಾಗಲೇ ಶೂಟಿಂಗ್ ಆರಂಭವಾಗಿ ಅನೇಕ ದಿನಗಳು ಕಳೆದಿವೆ. ಈ ಸಿನಿಮಾದಲ್ಲೂ ಆಕ್ಟ್ ಮಾಡಿದ್ದಾರೆ ರಾಕೇಶ್. ನಿನ್ನೆಯಷ್ಟೇ ಕಾಂತಾರ ಪ್ರಿಕ್ವೆಲ್ ಶೂಟಿಂಗ್ನಲ್ಲಿ ಭಾಗಿಯಾಗಿದ್ದರಂತೆ ರಾಕೇಶ್. ಈ ಸಿನಿಮಾದಲ್ಲಿ ತಮ್ಮ ಭಾಗದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರಂತೆ ರಾಕೇಶ್.
ಇದೆಲ್ಲದರ ಮಧ್ಯೆ ಇತ್ತೀಚೆಗೆ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಕೇಶ್ ಗೆ ಆಕ್ಸಿಡೆಂಟ್ ಕೂಡ ಆಗಿತ್ತು ಎನ್ನಲಾಗಿದೆ. ಬೇರೆ ಯಾವ ತರಹದ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ರಾಕೇಶ್ ಸಾವಿಗೆ ರಕ್ಷಿತಾ ಪ್ರೇಮ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ನಿನ್ನೆ ಇದ್ದವ ಇಂದು ಇಲ್ಲ ಅನ್ನೋ ನೋವಿನ ಜೊತೆಗೆ ಒಬ್ಬ ಹಾಸ್ಯ ಕಲಾವಿದನನ್ನ ಚಿತ್ರರಂಗ ಕಳೆದುಕೊಂಡಿದೆ.
ರಾಕೇಶ್ ಅವರ ತಂದೆ ತಾಯಿಗೆ ಒಬ್ಬನೇ ಪುತ್ರ. ಒಬ್ಬಳು ತಂಗು ಕೂಡ ಇದ್ದಾರೆ. ಸದ್ಯ ತಂಗಿ ಮದುವೆ ಕನಸು ಹೊತ್ತುಕೊಂಡಿದ್ದರಂತೆ ರಾಕೇಶ್. ರಾಕೇಶ್ ಕಾಮಿಡಿ ಕಿಲಾಡಿ ಸೀಸನ್ ನಲ್ಲಿ ವಿಜೇತರಾದ ಬಳಿಕ ಸಾಕಷ್ಟು ಆಫರ್ ಗಳು ಅವರನ್ನ ಹುಡಯಕಿ ಬಂದಿದ್ದವು. ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡ ಸಿನಿಮಾ, ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳಲ್ಲೂ ನಟಿಸಿದ್ದಾರೆ.



