ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 736ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಸೋಲು ನೋಡಲು ತಾಂಡವ್ ಹಾಗೂ ಶ್ರೇಷ್ಠಾ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಭಾಗ್ಯಾ ಗೆಲ್ಲುವುದಿಲ್ಲ. ಅವಳು ಹಣ ಹೊಂದಿಸುವುದಿಲ್ಲ. ಈ ಮನೆ ಸೀಜ್ ಆಗುವುದನ್ನು ನಾನು ನೋಡಬೇಕು. ಎಲ್ಲರೂ ಬೀದಿಗೆ ಬೀಳುವುದನ್ನು ನೋಡಬೇಕು ಎಂದು ತಾಂಡವ್ ಕಾಯುತ್ತಿದ್ದಾನೆ.
ಸಮಯ ಮುಗಿಯಿತು, ಇನ್ನೇನು ಮನೆ ಸೀಜ್ ಮಾಡಬೇಕು ಎನ್ನುವಷ್ಟರಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ. ಬ್ಯಾಂಕ್ನವರಿಗೆ ಬ್ಯಾಗ್ನಿಂದ ದುಡ್ಡು ತೆಗೆದುಕೊಡುತ್ತಾಳೆ. ಅದನ್ನು ಎಣಿಸುತ್ತಾ ಏಕೆ ಟೈಮ್ ವೇಸ್ಟ್ ಮಾಡುತ್ತೀರಿ, ಅದರಲ್ಲಿ ಇರೋದು 32 ಸಾವಿರ ಮಾತ್ರ, ಸಿಕ್ಕಿದ್ದು ಅಷ್ಟೇ ದುಡ್ಡು ಅಂತ ಆಗಲೇ ಫೋನ್ ಮಾಡಿ ಹೇಳಿದ್ದಳಲ್ಲ ನೀವು ಮನೆ ಸೀಜ್ ಮಾಡಿ ಎಂದು ತಾಂಡವ್ ಹೇಳುತ್ತಾನೆ. ಆದರೆ ತಾಂಡವ್ ಲೆಕ್ಕಾಚಾರ ಉಲ್ಟಾ ಆಗುತ್ತದೆ. ಹಣ ಸರಿ ಇದೆ, 40 ಸಾವಿರ ಕಟ್ಟಿದ್ದಾರೆ, ನಾವು ಮನೆ ಸೀಜ್ ಮಾಡಲು ಆಗುವುದಿಲ್ಲ ಎಂದು ಬ್ಯಾಂಕ್ನವರು ಹೇಳುತ್ತಾರೆ. ಅದನ್ನು ಕೇಳಿ ತಾಂಡವ್-ಶ್ರೇಷ್ಠಾ ಇಬ್ಬರೂ ಶಾಕ್ ಆಗುತ್ತಾರೆ.
ತಾಂಡವ್ ಸೈಲೆಂಟ್ ಆಗಿದ್ದನ್ನು ನೋಡಿ, ಇಷ್ಟೊತ್ತಿನವರೆಗೂ ಏನೋ ಮಾತನಾಡುತ್ತಿದ್ದೀರಿ, ಈಗ ಏಕೆ ಇಷ್ಟು ಸೈಲೆಂಟ್ ಆಗಿಬಿಟ್ರಿ, ನಾನು ದುಡ್ಡು ಹೊಂದಿಸಿದ್ದು ನೋಡಿ ನಿಮಗೆ ಸಹಿಸಲು ಆಗ್ತಿಲ್ವಾ ಎಂದು ಭಾಗ್ಯಾ ಕೇಳುತ್ತಾಳೆ. ಸರಿಯಾಗಿ ದುಡ್ಡು ಎಣಿಸಿ ಸರ್ ಎಂದು ತಾಂಡವ್ ಬ್ಯಾಂಕ್ನವರಿಗೆ ಹೇಳುತ್ತಾನೆ. ಶ್ರೇಷ್ಠಾ ಕೂಡಾ ಹಾಗೇ ಹೇಳುತ್ತಾಳೆ. ಅಲ್ಲ ನೀವು ನನ್ನ ಬಗ್ಗೆ ಏಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದೀರಿ, ದುಡ್ಡು ಹೊಂದಿಸಿದ್ದನ್ನು ನೋಡಿ ಏಕೆ ನೀವಿಬ್ಬರೂ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಭಾಗ್ಯಾ ಕೇಳುತ್ತಾಳೆ. ಹೌದಮ್ಮಾ ಭಾಗ್ಯಾ ನೀನು ಗೆದ್ದಿದ್ದನ್ನು ಇವನಿಗೆ ಸಹಿಸಲು ಆಗುತ್ತಿಲ್ಲ ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾನೆ ಎಂದು ಧರ್ಮರಾಜ್ ಹೇಳುತ್ತಾನೆ. ಅಡುಗೆ ಕಾಂಟ್ರಾಕ್ಟ್ ಕೊಟ್ಟಿದ್ದವರು ಉಳಿದ ಹಣ ಕೊಡುವುದನ್ನು ಮರೆತಿದ್ದರು, ಅವರೇ ಮತ್ತೆ ನನ್ನನ್ನು ವಾಪಸ್ ಕರೆದು ಉಳಿದ ಹಣ ಕೊಟ್ಟಿದ್ದಾಗಿ ಭಾಗ್ಯಾ, ಅತ್ತೆ ಮಾವನ ಬಳಿ ಹೇಳುತ್ತಾಳೆ.
ನಾವು ನಿಮಗೆ ಇಷ್ಟು ಸಮಯ ಕೊಟ್ಟಿದ್ದು ಹೆಚ್ಚು, ಈಗ ದುಡ್ಡು ಕಟ್ಟಿದ್ದೀರಿ, ನಮಗೆ ಮನೆ ಸೀಜ್ ಮಾಡುವ ಹಕ್ಕು ಇಲ್ಲ, ಆದರೆ ಮುಂದಿನ ಬಾರಿ ಈ ರೀತಿ ಮಾಡಿಕೊಳ್ಳಬೇಡಿ, ಸಮಯಕ್ಕೆ ಸರಿಯಾಗಿ ದುಡ್ಡು ಕಟ್ಟಿ ಎಂದು ಬ್ಯಾಂಕ್ನವರು ಭಾಗ್ಯಾಗೆ ಎಚ್ಚರಿಕೆ ಕೊಟ್ಟು ಹೊರಡುತ್ತಾರೆ. ನಿಮ್ಮಿಂದ ಬಹಳ ಉಪಕಾರ ಆಯ್ತು ಎಂದು ಭಾಗ್ಯಾ ಸಮಯ ಕೊಟ್ಟಿದ್ದಕ್ಕೆ ಬ್ಯಾಂಕ್ನವರಿಗೆ ಧನ್ಯವಾದ ಹೇಳುತ್ತಾಳೆ. ಈಗೇನೋ ಯಾರೋ ಭಿಕ್ಷೆ ಹಾಕಿದರು, ಮುಂದಿನ ತಿಂಗಳು ಇಎಂಐ ಕಟ್ಟಲು ಏನು ಮಾಡುತ್ತೀಯ ಎಂದು ಶ್ರೇಷ್ಠಾ ಕೇಳುತ್ತಾಳೆ. ನನ್ನ ಮಗಳು ಕಷ್ಟ ಪಟ್ಟು ಈ ಹಣ ಸಂಪಾದನೆ ಮಾಡಿದ್ದಾಳೆ ಎಂದು ಸುನಂದಾ ಹೇಳುತ್ತಾಳೆ. ಶ್ರೇಷ್ಠಾ-ಮಗನ ಮಾತು ಕೇಳಿ ಕುಸುಮಾ ನಿನಗೆ ಮನುಷ್ಯತ್ವ ಅನ್ನೋದು ಇಲ್ಲ, ಇನ್ನೊಬ್ಬರ ನೋವಿನಲ್ಲೂ ನಗು ಕಾಣುತ್ತೀಯ ಎಂದು ಬೈಯ್ಯುತ್ತಾಳೆ. ಹೌದು ನಿಮ್ಮ ಸೊಸೆ ಮಾಡಿದ್ದೆಲ್ಲವೂ ಸರಿ, ಅಮ್ಮನ ಕಾಲನ್ನು ಹೇಗೆ ಮಾಡಿದ್ದಾಳೆ ನೋಡಿ, ಇವಳ ಜೊತೆ ಇದ್ದರೆ ಒಂದು ನಿಮ್ಮನ್ನು ಸಾಯಿಸಿಬಿಡುತ್ತಾಳೆ ಎಂದು ವ್ಯಂಗ್ಯವಾಡುತ್ತಾನೆ. ಆ ಮಾತು ಕೇಳಿ ಭಾಗ್ಯಾ ಬೇಸರಗೊಳ್ಳುತ್ತಾಳೆ. ಆದರೆ ಕುಸುಮಾ ಮಗನ ಮಾತಿಗೆ ಸಿಟ್ಟಾಗುತ್ತಾಳೆ. ಸಾಯಿಸೋಸು ನೀನು, ನಮ್ಮ ಸೊಸೆ ಅಲ್ಲ, ನೀನು ಒಂದು ಕ್ಷಣವೂ ಇಲ್ಲಿ ಇರಬೇಡ ಇಲ್ಲಿಂದ ಹೋಗು ಎಂದು ಕುಸುಮಾ ಹೇಳುತ್ತಾಳೆ. ಆದರೆ ತಾಂಡವ್ ಸುಮ್ಮನೆ ನಿಂತಿರುತ್ತಾನೆ. ಇವನಿಗೆ ಈ ರೀತಿ ಹೇಳಿದರೆ ಆಗುವುದಿಲ್ಲ ಎಂದು ತಾಂಡವ್ ಕುತ್ತಿಗೆ ಪಟ್ಟಿ ಹಿಡಿದು ಕುಸುಮಾ ಮನೆಯಿಂದ ಹೊರ ಹಾಕುತ್ತಾಳೆ. ಶ್ರೇಷ್ಠಾಳನ್ನು ಕೈ ಹಿಡಿದು ಹೊರಗೆ ಹಾಕುತ್ತಾಳೆ.
ಹೊರಗೆ ಬಂದು ತಾಂಡವ್ ಕೈ ಕೈ ಹಿಸುಕಿಕೊಳ್ಳುತ್ತಾನೆ. ಭಾಗ್ಯಾ ಸೋಲುತ್ತಾಳೆ ಎಂದುಕೊಂಡಿದ್ದೆ ಆದರೆ ಆದು ಆಗಲಿಲ್ಲ, ಪ್ರತಿ ಬಾರಿಯೂ ಅವಳಿಗೆ ಹೇಗೆ ಬೇಕೋ ಹಾಗೇ ನಡೆಯುತ್ತಿದೆ ಎಂದು ಸಿಟ್ಟಾಗುತ್ತಾನೆ. ನೀನು ಯೋಚನೆ ಮಾಡಬೇಡ ತಾಂಡವ್, ಅವಳು ಆದಷ್ಟು ಬೇಗ ಬೀದಿಗೆ ಬರುತ್ತಾಳೆ, ಸೋತೇ ಸೋಲುತ್ತಾಳೆ ನೋಡುತ್ತಿರು ಎಂದು ಶ್ರೇಷ್ಠಾ, ಅವನನ್ನು ಸಮಾಧಾನ ಮಾಡುತ್ತಾಳೆ. ಎಂದೋ ಅಲ್ಲ, ಇಂದೇ ಸೋಲಬೇಕಿತ್ತು ಎಂದು ತಾಂಡವ್ ಹೇಳುತ್ತಾನೆ. ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬರುತ್ತಾಳೆ. ಅವರು ಮಾತನಾಡುವುದನ್ನು ಕೇಳಿಸಿಕೊಂಡು, ಅದು ಅಷ್ಟು ಸುಲಭದ ಮಾತಲ್ಲ ಎನ್ನುತ್ತಾಳೆ.
ಭಾಗ್ಯಾ , ತಾಂಡವ್ ಎದುರಿಗೆ ಬಂದು ನಿಲ್ಲುತ್ತಾಳೆ. ಆದರೆ ಶ್ರೇಷ್ಠಾ ಅವಳಿಗೆ ಅಡ್ಡಿಯಾಗುತ್ತಾಳೆ. ಅಡ್ಡ ಬರಬೇಡ ಶ್ರೇಷ್ಠಾ, ಇಲ್ಲವೆಂದರೆ ಏನಾಗುತ್ತೆ ಗೊತ್ತು ತಾನೇ ಎಂದು ಭಾಗ್ಯಾ, ಏಟು ಬೀಳುತ್ತದೆ ಅನ್ನೋದನ್ನು ಸನ್ನೆ ಮೂಲಕ ತೋರಿಸುತ್ತಾಳೆ. ಶ್ರೇಷ್ಠಾ ಹೆದರಿ ಪಕ್ಕಕ್ಕೆ ಸರಿಯುತ್ತಾಳೆ. ಏಕೆ ತಾಂಡವ್ ಸರ್ ಹೀಗಿದ್ದೀರಿ? ನಾನು ಸೋಲಲಿ ಅಂತ ನೀವು ಬಹಳ ಪ್ರಾರ್ಥನೆ ಮಾಡಿದ್ರಿ ಅನ್ನಿಸುತ್ತೆ ಎನ್ನುತ್ತಾಳೆ. ಇಎಂಐ ಕಟ್ಟಿದ್ದೀಯ ಅಂತ ಇಷ್ಟು ಬಿಲ್ಡಪ್ ಬೇಡ, ಈಗೇನೋ ಕಟ್ಟಿದೆ ಮುಂದಿನ ತಿಂಗಳು ಏನು ಮಾಡುತ್ತೀಯ ಎಂದು ತಾಂಡವ್ ಕೇಳುತ್ತಾನೆ. ಒಂದು ದಿನದಲ್ಲಿ 40 ಸಾವಿರ ಅಡ್ಜೆಸ್ಟ್ ಮಾಡಿದವಳಿಗೆ 30 ದಿನಗಳಲ್ಲಿ ಒಂದು ತಿಂಗಳ ಇಎಂಐ ಹೊಂದಿಸುವುದು ಕಷ್ಟ ಆಗುವುದಿಲ್ಲ. ಯಾವುದಕ್ಕೂ ನಿಮ್ಮ ಬೆಸ್ಟ್ ವಿಶಸ್ ನನಗೆ ಇರಲಿ ಎಂದು ಭಾಗ್ಯಾ ತಾಂಡವ್ ಕೈ ಹಿಡಿದು ಗಟ್ಟಿಯಾಗಿ ಕುಲುಕಿ ರಭಸವಾಗಿ ಬಿಡುತ್ತಾಳೆ. ಅದರಿಂದ ತಾಂಡವ್ ಕೈಗೆ ನೋವಾಗುತ್ತದೆ. ಭಾಗ್ಯಾ ಗತ್ತಿನಿಂದ ಮನೆ ಒಳಗೆ ಹೋಗುವುದನ್ನು ನೋಡಿ ಇಬ್ಬರೂ ಬೆಪ್ಪಾಗಿ ನೋಡುತ್ತಾರೆ.
ತಾಂಡವ್ ಈಗಲಾದರೂ ಭಾಗ್ಯಾಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತಾನಾ? ಮುಂದಿನ ತಿಂಗಳ ಇಎಂಐ ಕಟ್ಟಲು ಭಾಗ್ಯಾ ಏನು ದಾರಿ ಹುಡುಕುತ್ತಾಳೆ? ಮುಂದೆ ತಿಳಿಯಲಿದೆ.