ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 739ರ ಎಪಿಸೋಡ್ ಕಥೆ ಇಲ್ಲಿದೆ. ಗುಂಡಣ್ಣ ವಯಸ್ಸಿನಲ್ಲಿ ಚಿಕ್ಕವನಾದರೂ ತನ್ವಿಗಿಂತ ಚೆನ್ನಾಗಿ ಅಮ್ಮನ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದಾನೆ. ನಮಗಾಗಿ ಅಮ್ಮ ಬಹಳ ಕಷ್ಟಪಡುತ್ತಿದ್ದಾರೆ. ಅಮ್ಮನಿಗೆ ಹೇಗಾದರೂ ಸಹಾಯ ಮಾಡಬೇಕು ಎಂದುಕೊಳ್ಳುತ್ತಾನೆ. ಹೀಗೆ ಯೋಚಿಸುತ್ತಲೇ ಶಾಲೆಗೆ ಬಂದ ಗುಂಡಣ್ಣನಿಗೆ ಸ್ನೇಹಿತನೊಬ್ಬ ಬರ್ತ್ಡೇ ಪಾರ್ಟಿಗೆ ಆಹ್ವಾನಿಸುತ್ತಾನೆ. ಗುಂಡಣ್ಣ ಖುಷಿಯಿಂದಲೇ ಪಾರ್ಟಿಗೆ ಹೋಗುತ್ತಾನೆ.
ರೆಸಾರ್ಟ್ನಲ್ಲಿ ಜೋಕರ್ ಆಗಿ ಕುಣಿಯುತ್ತಿದ್ದವರಲ್ಲಿ ನನ್ನ ಅಮ್ಮನೂ ಇರುವ ವಿಚಾರ ಗುಂಡಣ್ಣನಿಗೆ ಗೊತ್ತಾಗುತ್ತದೆ. ತನ್ನ ಸಹೋದ್ಯೋಗಿ ಜೊತೆ ಭಾಗ್ಯಾ ತನ್ನ ಕಷ್ಟಗಳನ್ನೆಲ್ಲಾ ಹೇಳುವುದನ್ನು ಗುಂಡಣ್ಣ ಕೇಳಿಸಿಕೊಳ್ಳುತ್ತಾನೆ. ನಾನು ಇಲ್ಲಿ ಕೆಲಸ ಮಾಡುತ್ತಿರುವುದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೆ ಅವರು ಈ ಕೆಲಸವನ್ನು ಬಿಡಿಸುತ್ತಾರೆ. ನನಗೆ ಹಣದ ಅವಶ್ಯಕತೆ ಬಹಳ ಇದೆ. ಸಂಸಾರ ನಡೆಸಬೇಕು. ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕು, ಆದ್ದರಿಂದ ನಾನು ಈ ಕೆಲಸ ಮಾಡಲೇಬೇಕು ಎಂದು ಭಾಗ್ಯಾ ಸಹೋದ್ಯೋಗಿಗೆ ಹೇಳುತ್ತಾಳೆ. ಇದೆಲ್ಲವನ್ನೂ ಗುಂಡಣ್ಣ ಕೇಳಿಸಿಕೊಳ್ಳುತ್ತಾನೆ. ಇಲ್ಲ ಯಾವುದೇ ಕಾರಣಕ್ಕೂ ಈ ವಿಚಾರವನ್ನು ಮನೆಯವರಿಗೆ ಹೇಳಬಾರದು, ಅಮ್ಮ ಗೆಲ್ಲಲ್ಲೇಬೇಕು ಎಂದು ನಿರ್ಧರಿಸುತ್ತಾನೆ. ಪೂಜಾ, ಸುಂದ್ರಿ ಇಬ್ಬರೂ ಗುಂಡಣ್ಣನನ್ನು ಹುಡುಕಿಕೊಂಡು ರೆಸಾರ್ಟ್ಗೆ ಬರುತ್ತಾರೆ. ಅವರಿಬ್ಬರನ್ನೂ ನೋಡುವ ಗುಂಡಣ್ಣ, ಇವರು ಅಮ್ಮನನ್ನು ನೋಡಿದರೆ ಕಷ್ಟ ಎಂದುಕೊಂಡು ಅವರನ್ನು ಏನೋ ಸುಳ್ಳು ಹೇಳಿ ಮನೆಗೆ ಕರೆತರುತ್ತಾನೆ.
ಮನೆಗೆ ಬರುತ್ತಿದ್ದಂತೆ ಪೂಜಾ, ಗುಂಡಣ್ಣನಿಗಾಗಿ ಹಣ್ಣುಗಳನ್ನು ತಂದುಕೊಡುತ್ತಾಳೆ. ಆದರೆ ಗುಂಡಣ್ಣ, ಅಮ್ಮನ ಬಗ್ಗೆಯೇ ಯೋಚನೆ ಮಾಡುತ್ತಾ ಕೂರುತ್ತಾನೆ. ಎಷ್ಟೇ ಬಲವಂತ ಮಾಡಿದರೂ ಹಣ್ಣು ತಿನ್ನುವುದಿಲ್ಲ. ನನಗೆ ಹಸಿವೇ ಇಲ್ಲ ಎನ್ನುತ್ತಾನೆ. ಕುಸುಮಾ ಕೂಡಾ ಬಂದು ಮೊಮ್ಮಗನನ್ನು ಸಮಾಧಾನ ಮಾಡಲು ಯತ್ನಿಸುತ್ತಾಳೆ. ಆದರೆ ಕುಸುಮಾ ಮಾತಿಗೂ ತನ್ಮಯ್ ಜಗ್ಗುವುದಿಲ್ಲ. ಅಷ್ಟರಲ್ಲಿ ಭಾಗ್ಯಾ ಮನೆಗೆ ಸುಸ್ತಾಗಿ ಬರುತ್ತಾಳೆ. ತಾನು ದಣಿದಿರುವುದು ಯಾರಿಗೂ ಗೊತ್ತಾಬಾರದು ಎಂಬ ಕಾರಣಕ್ಕೆ ಲವಲವಿಕೆಯಿಂದ ಇರುವಂತೆ ಕಾಣಲು ನಗುತ್ತಾ ಮನೆ ಒಳಗೆ ಬರುತ್ತಾಳೆ. ಅಮ್ಮನನ್ನ ನೋಡಿ ಗುಂಡಣ್ಣ ಖುಷಿಯಾಗುತ್ತಾನೆ.
ನಿನ್ನ ಕೆಲಸಕ್ಕೆ ಹೊತ್ತು ಗೊತ್ತು ಇಲ್ಲವೇ? ಇಷ್ಟು ತಡವಾಗಿ ಮನೆಗೆ ಬರುತ್ತೀಯ ಎಂದು ಸುನಂದಾ ಭಾಗ್ಯಾಳನ್ನು ಪ್ರಶ್ನಿಸುತ್ತಾಳೆ. ಸುನಂದಾ ಹೀಗೇಕೇ ಮಾತನಾಡುತ್ತೀರಿ. ಹೋಟೆಲ್ ಎಂದರೆ ಹಾಗೇ ಅಲ್ಲವೇ, ಒಂದು ದಿನ ಆರ್ಡರ್ ಹೆಚ್ಚಾಗಿರುತ್ತೆ, ಕೆಲಸ ಮಾಡುತ್ತಾ ತಡವಾಗುತ್ತದೆ, ಏನೂ ಮಾಡಲು ಆಗುವುದಿಲ್ಲ ಎಂದು ಧರ್ಮರಾಜ್ ಸೊಸೆ ಪರ ವಹಿಸಿಕೊಂಡು ಮಾತನಾಡುತ್ತಾನೆ. ಆದರೆ ಗುಂಡಣ್ಣ, ಅಮ್ಮ ಜೋಕರ್ ವೇಷ ಧರಿಸಿ ಕುಣಿಯುವುದನ್ನು ನೆನಪಿಸಿಕೊಳ್ಳುತ್ತಾನೆ. ಸರಿ ಭಾಗ್ಯಾ ನೀನು ಹೋಗಿ ಊಟಕ್ಕೆ ರೆಡಿ ಮಾಡು ಎಂದು ಕುಸುಮಾ ಹೇಳುತ್ತಾಳೆ. ಅಮ್ಮ ಸುಸ್ತಾಗಿ ಬಂದಿದ್ದಾಳೆ, ಅವಳಿಗೆ ಏನೂ ಕೆಲಸ ಹೇಳಬೇಡಿ ಎಂದು ತನ್ಮಯ್ ಅಜ್ಜಿಗೆ ಹೇಳುತ್ತಾನೆ. ನಿನ್ನ ಅಮ್ಮ ಆರಾಮವಾಗಿದ್ದಾಳೆ. ಅವಳಿಗೆ ಏನೂ ಸುಸ್ತಾಗಿಲ್ಲ. ಅವಳದ್ದು ಸುಲಭದ ಕೆಲಸ ಎಂದು ಕುಸುಮಾ ಹೇಳುತ್ತಾಳೆ. ಹೌದು ಅತ್ತೆ ಒಂದು ರೀತಿ ಮ್ಯೂಸಿಕ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾ ಮಾಡುವ ಕೆಲಸ ಎಂದು ಭಾಗ್ಯಾ ಹೇಳುತ್ತಾಳೆ.
ಎಲ್ಲರೂ ಹೀಗೆ ಮಾತನಾಡುವಾಗ ಗುಂಡಣ್ಣ ಅಡುಗೆ ಮನೆಗೆ ಓಡುತ್ತಾನೆ. ತಟ್ಟೆಗೆ ಅನ್ನ, ಸಾಂಬಾರ್ ಬಡಿಸಿಕೊಂಡು ಡೈನಿಂಗ್ ಟೇಬಲ್ ಬಳಿ ಬಂದು ಕೂರುತ್ತಾನೆ. ಏನೋ ಗುಂಡಣ್ಣ ಅಷ್ಟು ಹಸಿವಾಗ್ತಿದ್ಯಾ? ಇರು ತಿನ್ನಿಸುತ್ತೇನೆ ಎಂದು ಭಾಗ್ಯಾ ಹೇಳುತ್ತಾಳೆ. ಅಮ್ಮ ಇದು ನನಗಲ್ಲ, ನಿನಗೆ, ನೀನು ಕೆಲಸ ಮಾಡಿ ಸುಸ್ತಾಗಿ ಬಂದಿದ್ದೀಯ ನೀನು ಊಟ ಮಾಡು ಎನ್ನುತ್ತಾನೆ. ಅದು ಹೇಗೆ ಆಗುತ್ತೆ ಗುಂಡಣ್ಣ, ಎಲ್ಲರೂ ಮೊದಲು ಊಟ ಮಾಡಲಿ ನಂತರ ನಾನು ಮಾಡುತ್ತೇನೆ ಎನ್ನುತ್ತಾಳೆ. ನೀನು ಮೊದಲು ಊಟ ಮಾಡಬಾರದು ಎಂದು ರೂಲ್ಸ್ ಇದೆಯಾ? ನೀನು ಈಗ ಊಟ ಮಾಡಬೇಕು, ನಂತರವಷ್ಟೇ ನಾನು ಮಾಡುತ್ತೇನೆ ಎಂದು ಗುಂಡಣ್ಣ ಕಂಡಿಷನ್ ಮಾಡುತ್ತಾನೆ. ಮಗನ ಹಠಕ್ಕೆ ಸೋತು ಭಾಗ್ಯಾ ಊಟ ಮಾಡಲು ಒಪ್ಪುತ್ತಾಳೆ. ಗುಂಡಣ್ಣ ಅಮ್ಮನಿಗೆ ಕೈ ತುತ್ತು ಇಡುತ್ತಾನೆ. ಮಗನ ಪ್ರೀತಿ ಕಂಡು ಭಾಗ್ಯಾ ಭಾವುಕಳಾಗುತ್ತಾಳೆ.
ಅತ್ತೆ ಕಾಲಿಗೆ ಮುಲಾಮು ಹಚ್ಚಿ ಉಳಿದಿರುವ ಮನೆ ಕೆಲಸ ಮಾಡಲು ಹೊರಡುತ್ತಿದ್ದ ಭಾಗ್ಯಾಳನ್ನು ರೂಮ್ಗೆ ಕರೆದೊಯ್ಯುವ ಗುಂಡಣ್ಣ, ಬಕೆಟ್ನಲ್ಲಿ ಬಿಸಿ ನೀರು ತಂದು ಅದಕ್ಕೆ ಉಪ್ಪು ಹಾಕಿ ಕಾಲು ಇಡುವಂತೆ ಅಮ್ಮನಿಗೆ ಹೇಳುತ್ತಾನೆ. ಇದೆಲ್ಲಾ ಯಾಕೋ ಗುಂಡಣ್ಣ ಎಂದು ಭಾಗ್ಯಾ ಕೇಳುತ್ತಾಳೆ. ಅಮ್ಮ ನೀನು ಕೆಲಸ ಮಾಡಿ ದಣಿದಿದ್ದೀಯ ಅಂತ ನನಗೆ ಗೊತ್ತು, ಕಾಲನ್ನು ಬಿಸಿ ನೀರಿನಲ್ಲಿ ಇಡು ನಿನಗೆ ರಿಲೀಫ್ ಆಗುತ್ತೆ ಎನ್ನುತ್ತಾನೆ. ಜೊತೆಗೆ ಅಮ್ಮನ ಭುಜ ಒತ್ತುತ್ತಾನೆ. ಇದರಿಂದ ಭಾಗ್ಯಾ ಖುಷಿಯಾಗಿ ಮಗನನ್ನು ಅಪ್ಪಿಕೊಳ್ಳುತ್ತಾಳೆ.
ಇತ್ತ ತಾಂಡವ್, ಭಾಗ್ಯಾ ಬಗ್ಗೆಯೇ ಯೋಚಿಸುತ್ತಾನೆ. ಶ್ರೇಷ್ಠಾ ಸ್ನಾಕ್ಸ್ ತಂದು ಕೊಟ್ಟರೂ ನಿರಾಕರಿಸುತ್ತಾನೆ. ನೀನು ಅವಳ ಬಗ್ಗೆ ಇಷ್ಟೊಂದು ಏಕೆ ಯೋಚಿಸುತ್ತಿದ್ದೀಯ ಎಂದು ಶ್ರೇಷ್ಠಾ ಕೇಳುತ್ತಾಳೆ. ಅವಳ ಸೋಲು ನನ್ನ ಗೆಲುವು, ಅವಳ ಗೆಲುವು ನನ್ನ ಸಾವು, ಭಾಗ್ಯಾ ಸೋತು ನನ್ನ ಕಾಲು ಹಿಡಿದ ದಿನವೇ ನಾನು ನೆಮ್ಮದಿಯಾಗಿ ಊಟ ಮಾಡುವುದು. ಭಾಗ್ಯಾಗೆ ಯಾವುದೋ ಹೋಟೆಲ್ನಲ್ಲಿ ಶೆಫ್ ಆಗಿ ಕೆಲಸ ಸಿಕ್ಕಿದೆಯಂತೆ ನನಗೆ ಅದೇ ಯೋಚನೆ ಆಗುತ್ತಿರುವುದು, ಹೀಗೆ ಅದರೆ ಅವಳು ಮುಂದಿನ ತಿಂಗಳ ಇಎಂಐನ್ನು ಸುಲಭವಾಗಿ ಕಟ್ಟುತ್ತಾಳೆ ಎನ್ನುತ್ತಾನೆ. ಹೌದಾ ಕನ್ನಿಕಾ ಅಷ್ಟು ಅವಮಾನ ಮಾಡಿದರೂ ಭಾಗ್ಯಾಗೆ ಹೇಗೆ ಕೆಲಸ ಸಿಕ್ಕಿತು ಎಂದು ಶ್ರೇಷ್ಠಾ ಕೇಳುತ್ತಾಳೆ. ಕನ್ನಿಕಾ ಏನೂ ಮಾಡಿಲ್ಲ, ಭಾಗ್ಯಾ ಕೆಲಸ ಇದೇ ಅಂತಾನೇ ಇಷ್ಟು ಧೈರ್ಯವಾಗಿದ್ದಾಳೆ. ಏನಾದರೂ ಮಾಡಲೇಬೇಕು ಎಂದು ತಾಂಡವ್ ಹೊಸ ಪ್ಲ್ಯಾನ್ ಮಾಡಲು ರೆಡಿಯಾಗುತ್ತಾನೆ.
ಭಾಗ್ಯಾ ಜೋಕರ್ ಕೆಲಸ ಮಾಡುತ್ತಿರುವುದು ತಾಂಡವ್-ಶ್ರೇಷ್ಠಾಗೆ ತಿಳಿದುಹೋಗುತ್ತಾ? ಆ ಕೆಲಸಕ್ಕೂ ಕಲ್ಲು ಹಾಕುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.