ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 21ರ ಎಪಿಸೋಡ್ ಕಥೆ ಇಲ್ಲಿದೆ. ಆಕ್ಸಿಡೆಂಟ್ ಕೇಸ್ ಮುಚ್ಚಿಹಾಕಲು ಜವರೇಗೌಡ ಹಾಗೂ ಮರೀಗೌಡ ಹರಸಾಹಸ ಮಾಡುತ್ತಿದ್ದಾರೆ. ಭಾವನಾ ಇಲ್ಲಿ ಇದ್ದರೆ ಕಷ್ಟ ಎಂದು ತಿಳಿದ ಜವರೇಗೌಡ, ಮರೀಗೌಡನ ಜೊತೆ ಸೇರಿ ಗಂಡ ಹೆಂಡತಿ ಇಬ್ಬರನ್ನೂ ಹನಿಮೂನ್ ನೆಪದಲ್ಲಿ ವಿದೇಶಕ್ಕೆ ಕಳಿಸುವ ಪ್ಲ್ಯಾನ್ ಮಾಡುತ್ತಾ. ನೀವು ಮದುವೆ ಆಗಿ ಬಹಳ ದಿನಗಳಾಯ್ತು, ಆದರೆ ಇನ್ನೂ ಹೊಸ ಜೀವನ ಶುರು ಮಾಡಿಲ್ಲ. ಆದ್ದರಿಂದ ನೀವಿಬ್ಬರೂ ಸ್ವಲ್ಪ ದಿನ ಜೊತೆಯಾಗಿ ಇದ್ದು ಬನ್ನಿ ಎಂದು ಜವರೇಗೌಡ ಸಿದ್ದು-ಭಾವನಾಳನ್ನು ಒಪ್ಪಿಸುತ್ತಾನೆ.
ಭಾವನಾಗೆ ಸಿದ್ದು ಜೊತೆ ಹೋಗುವುದು ಇಷ್ಟವಿಲ್ಲದಿದ್ದರೂ ಮಾವನ ಬಲವಂತಕ್ಕೆ, ತಂದೆ-ತಾಯಿ ಮನವಿ ಮಾಡಿದ್ದಕ್ಕೆ ಒಪ್ಪಿಕೊಳ್ಳುತ್ತಾಳೆ. ತಾನು ಮಾಡಿದ ಆಕ್ಸಿಡೆಂಟನ್ನು ಮತ್ತೊಬ್ಬರ ತಲೆಗೆ ಕಟ್ಟುತ್ತಿದ್ದಾರೆ ಎಂದು ತಿಳಿದು ಸಿದ್ದೇಗೌಡ ಬೇಸರಗೊಳ್ಳುತ್ತಾನೆ. ಆದರೆ ವಿಧಿ ಇಲ್ಲದೆ ಭಾವನಾ ಜೊತೆ ವಿದೇಶಕ್ಕೆ ಹೋಗಲು ಒಪ್ಪಿಕೊಳ್ಳುತ್ತಾನೆ. ಅಪ್ಪ ಹಾಗೂ ಅಣ್ಣ ಈ ಪ್ಲ್ಯಾನ್ ಮಾಡಿರುವುದು ನಿಜಕ್ಕೂ ನನಗೆ ಗೊತ್ತಿರಲಿಲ್ಲ, ಈಗಲೇ ಗೊತ್ತಾಗಿದ್ದು. ನಿಮಗೆ ಇಷ್ಟವಿಲ್ಲದ್ದು ನಾನು ಏನೂ ಮಾಡುವುದಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ವಿದೇಶಕ್ಕೆ ಹೋಗುವುದು ಬೇಡ ಎಂದು ಸಿದ್ದು ಹೇಳುತ್ತಾನೆ. ಇಲ್ಲಿ ನಮ್ಮ ಇಷ್ಟಕಷ್ಟಕ್ಕಿಂತ ಹಿರಿಯರ ಆಸೆ ಮುಖ್ಯ, ನಾವು ಹೋಗಿ ಬರೋಣ ಎಂದು ಭಾವನಾ ಹೇಳುತ್ತಾಳೆ. ಅವಳ ಮಾತು ಕೇಳಿ ಸಿದ್ದು ಖುಷಿಯಾಗುತ್ತಾನೆ.
ಸಿದ್ದು ಹಾಗೂ ಭಾವನಾ ವಿದೇಶಕ್ಕೆ ಹೋಗುತ್ತಿರುವುದು ಮನೆಯಲ್ಲಿ ಅಜ್ಜಿ, ರೇಣುಕಾ, ನೀಲುಗೆ ಗೊತ್ತಿರುವುದಿಲ್ಲ. ಸಿಂಚನಾ, ತಾಯಿಗೆ ಕರೆ ಮಾಡಿ ಕೋಪ ವ್ಯಕ್ತಪಡಿಸುತ್ತಾಳೆ. ನಿಮಗೆ ಮಗಳ ಬಗ್ಗೆ ಯೋಚನೆ ಮಾಡುವಷ್ಟು ಸಮಯ ಇಲ್ಲ, ಆದರೆ ಆ ಭಾವನಾಳನ್ನು ವಿದೇಶಕ್ಕೆ ಕಳಿಸುತ್ತಿದ್ದೀರಿ ಎಂದು ಬೇಸರಗೊಳ್ಳುತ್ತಾಳೆ. ಮಗಳಿಂದ ವಿಚಾರ ತಿಳಿದು ರೇಣುಕಾ ಸಿಟ್ಟಾಗುತ್ತಾಳೆ. ನೀವು ಏನು ಮಾಡುತ್ತಿದ್ದೀರಿ? ಮಗಳನ್ನು ಆ ಹಾಳು ಕೊಂಪೆಗೆ ತಳ್ಳಿ, ಈಗ ಮಗ ಸೊಸೆಯನ್ನು ಫಾರಿನ್ ಟ್ರಿಪ್ಗೆ ಕಳಿಸುತ್ತಿದ್ದೀರ? ಏನಾದರೂ ಮಾಡಿಕೊಳ್ಳಿ, ನಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಎಂದು ರೇಣುಕಾ ಜವರೇಗೌಡನ ಬಳಿ ಬೇಸರ ಹೇಳಿಕೊಳ್ಳುತ್ತಾಳೆ. ಆದರೆ ಜವರೇಗೌಡ, ಹೆಂಡತಿಗೆ ಇರುವ ವಿಚಾರವನ್ನು ಹೇಳಲೂ ಆಗದೆ, ಬಿಡಲೂ ಆಗದೆ ಒದ್ದಾಡುತ್ತಾನೆ.
ಮಗಳು-ಅಳಿಯ ವಿದೇಶಕ್ಕೆ ಹೋಗುತ್ತಿರುವ ವಿಚಾರ ತಿಳಿದಾಗಿನಿಂದ ಲಕ್ಷ್ಮೀ-ಶ್ರೀನಿವಾಸ್ ಖುಷಿಯಾಗಿದ್ದಾರೆ. ಮಗಳ ಖರ್ಚಿಗೆ ನಾವೂ ಸ್ವಲ್ಪ ಹಣ ನೀಡಬೇಕು, ಬ್ಯಾಂಕಿನಲ್ಲಿ ಇರುವ ಹಣ ತಂದುಕೊಡುತ್ತೇನೆ ಎಂದು ಶ್ರೀನಿವಾಸ್ ಹೇಳುತ್ತಾನೆ. ಅವರಿಬ್ಬರಿಗೂ ಕೊಡಲು ಲಕ್ಷ್ಮೀ ತಿಂಡಿ ರೆಡಿ ಮಾಡುತ್ತಾಳೆ. ಅದನ್ನು ನೋಡಿ ಸಂತೋಷ್ ಏನು ಜಾತ್ರೆಗೆ ಹೋಗುತ್ತಿದ್ದೀರ ಎಂದು ಕೇಳುತ್ತಾನೆ. ಇದೆಲ್ಲಾ ಭಾವನಾಗೆ ಕೊಡಲು ಎಂದು ಲಕ್ಷ್ಮೀ ಹೇಳುತ್ತಾಳೆ. ಭಾವನಾಗೆ ಮದುವೆಯೇ ಆಗುವುದಿಲ್ಲ ಎಂದುಕೊಂಡಿದ್ದೆವು, ಅದ್ಯಾವೋನೋ ಬಂದು ತಾಳಿ ಕಟ್ಟಿಬಿಟ್ಟ, ಈಗ ನೋಡಿದರೆ ಅವಳಿಗೆ ವಿದೇಶಕ್ಕೆ ಹೋಗುವ ಭಾಗ್ಯ ಬಂದುಬಿಟ್ಟಿದೆ ಎಂದು ಸಂತೋಷ್ ಕೊಂಕು ಮಾತನಾಡುತ್ತಾನೆ.
ಸಿದ್ದೇಗೌಡ-ಭಾವನಾ ಲಗ್ಗೇಜ್ ರೆಡಿ ಮಾಡಿಕೊಂಡು ಹೊರಡಲು ಸಿದ್ಧರಾಗುತ್ತಾರೆ. ನೀವಿಬ್ಬರೂ ಎಷ್ಟು ದಿನ ಫಾರಿನ್ನಲ್ಲಿ ಇರಬೇಕೋ ಅಷ್ಟು ದಿನ ಇದ್ದು ಬನ್ನಿ, ಮನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಾವು ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ಜವರೇಗೌಡ ಹೇಳುತ್ತಾನೆ. ಬರುವಾಗ ಸಿಹಿ ಸುದ್ದಿಯೊಂದಿಗೆ ಬನ್ನಿ ಎಂದು ಮರೀಗೌಡ ಹೇಳುತ್ತಾನೆ. ಅಣ್ಣನ ಮಾತು ಕೇಳಿ ಸಿದ್ದು ನಾಚಿ ನೀರಾಗುತ್ತಾನೆ. ಸಿದ್ದು, ತಾಯಿ ಕಾಲಿಗೆ ನಮಸ್ಕರಿಸಿ ಹೋಗಿ ಬರ್ತೀನಿ ಅವ್ವಾ ಎನ್ನುತ್ತಾನೆ. ನಾನು ನಿನಗೆ ಎಂದಿಗೂ ಕೆಟ್ಟದ್ದು ಬಯಸಿಲ್ಲ, ಹೋಗಿ ಬಾ ಒಳ್ಳೆಯದಾಗಲಿ ಎಂದು ರೇಣುಕಾ ಬೇಸರದಿಂದಲೇ ಇಬ್ಬರಿಗೂ ಆಶೀರ್ವಾದ ಮಾಡುತ್ತಾಳೆ. ಇಬ್ಬರೂ ಅಜ್ಜಿ ಆಶೀರ್ವಾದ ಪಡೆದು ಅಲ್ಲಿಂದ ಭಾವನಾ ತವರು ಮನೆಗೆ ಹೋಗಿ ನಂತರ ವಿಮಾನ ಏರುತ್ತಾರೆ.
ಇತ್ತ ಜಯಂತ್, ಜಾಹ್ನವಿ ಆರೋಗ್ಯದ ಬಗ್ಗೆ ಯೋಚಿಸುತ್ತಾನೆ. ಜಾಹ್ನವಿ ಮೊದಲಿನಂತೆ ಆಗಬೇಕು, ಏನು ಮಾಡುವುದು ಅವರು ಖುಷಿಯಾಗಿಲ್ಲ,ಯಾವುದಾದರೂ ಹೊಸ ಜಾಗಕ್ಕೆ ಕರೆದುಕೊಂಡು ಹೋಗಿ ಎಂದು ಡಾಕ್ಟರ್ ಹೇಳಿದ್ದಾರೆ, ಆದರೆ ಚಿನ್ನುಮರಿ ಎಲ್ಲಿಗೂ ಬರಲು ಒಪ್ಪುತ್ತಿಲ್ಲ ಎಂದು ಯೋಚಿಸುವ ಜಯಂತನಿಗೆ ಏನೋ ಪ್ಲ್ಯಾನ್ ಹೊಳೆದಂತೆ ಆಗುತ್ತದೆ. ಹಾಲಿಗೆ ನಿದ್ರೆ ಮಾತ್ರೆ ಹಾಕಿ ಕ್ಷಮಿಸಿ ಚಿನ್ನುಮರಿ ನನಗೆ ಬೇರೆ ದಾರಿ ಇಲ್ಲ ಎಂದು ಆ ಹಾಲನ್ನು ಅವಳಿಗೆ ಕುಡಿಯಲು ಕೊಡುತ್ತಾನೆ. ಹಾಲು ಕುಡಿಯುತ್ತಿದ್ದಂತೆ ಜಾಹ್ನವಿ ನಿದ್ರೆಗೆ ಜಾರುತ್ತಾಳೆ. ಎಚ್ಚರವಾದಾಗ ಬೇರೆ ಸ್ಥಳದಲ್ಲಿರುತ್ತಾಳೆ. ಹೊಸ ಸ್ಥಳ ನೋಡಿ ಜಾನು ಗಾಬರಿಯಾಗುತ್ತಾಳೆ. ಹೆದರಬೇಡಿ, ನಾವು ಫಾರಿನ್ಗೆ ಬಂದಿದ್ದೇವೆ ಎಂದು ಜಯಂತ್ ಹೇಳುತ್ತಾನೆ. ನನ್ನ ಅನುಮತಿ ಇಲ್ಲದೆ ನೀವು ಇಲ್ಲಿಗೆ ಹೇಗೆ ಕರೆದುಕೊಂಡು ಬಂದ್ರಿ ಎಂದು ಜಾನು ಸಿಟ್ಟಾಗುತ್ತಾಳೆ.
ಜಾಹ್ನವಿ, ಜಯಂತನ ಜೊತೆಗೆ ಇರಲು ಒಪ್ಪಿಕೊಳ್ಳುತ್ತಾಳಾ, ಸಿದ್ದೇಗೌಡ-ಭಾವನಾ ನಡುವೆ ಪ್ರೀತಿ ಚಿಗುರುತ್ತಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.



