ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 732ರ ಎಪಿಸೋಡ್ ಕಥೆ ಇಲ್ಲಿದೆ. ಹರಾಜಾಗುತ್ತಿರುವ ಮನೆಯನ್ನು ಉಳಿಸಿಕೊಳ್ಳಲು ಭಾಗ್ಯಾ ಹರಸಾಹಸ ಮಾಡುತ್ತಿದ್ದಾಳೆ. ಒಡವೆಗಳನ್ನು ಗಿರವಿ ಇಟ್ಟು ಅದರಿಂದ ದೊರೆಯುವ ದುಡ್ಡಿನಲ್ಲಿ ಮನೆ ಇಎಂಐ ಕಟ್ಟೋಣ ಎಂದು ಭಾಗ್ಯಾ ನಿರ್ಧರಿಸುತ್ತಾಳೆ. ಕುಸುಮಾ, ಸುನಂದಾ ಕೂಡಾ ತಾವು ಧರಿಸಿರುವ ಒಡವೆಗಳನ್ನು ಭಾಗ್ಯಾಗೆ ನೀಡಿ ಅವಳ ಕಷ್ಟಕ್ಕೆ ಕೈ ಜೋಡಿಸುತ್ತಾರೆ. ಹೇಗೋ ಸಮಸ್ಯೆ ಬಗೆಹರಿಯಿತು ಎಂದುಕೊಳ್ಳುವಷ್ಟರಲ್ಲಿ ತಾಂಡವ್-ಶ್ರೇಷ್ಠಾ, ಮತ್ತೆ ಭಾಗ್ಯಾಗೆ ಕಷ್ಟ ತಂದೊಡ್ಡುತ್ತಾರೆ.
ಭಾಗ್ಯಾ, ಒಡವೆಗಳನ್ನೆಲ್ಲಾ ಗಿರವಿ ಇಡುತ್ತಿದ್ದಾಳೆ ಎಂದು ತನ್ವಿಯಿಂದ ವಿಚಾರ ತಿಳಿದುಕೊಂಡ ತಾಂಡವ್, ಶ್ರೇಷ್ಠಾ ಜೊತೆ ಮನೆಗೆ ಬರುತ್ತಾನೆ. ನಾನು ಕಷ್ಟಪಟ್ಟು ದುಡಿದ ಹಣದಿಂದ ತೆಗೆದುಕೊಟ್ಟ ಒಡವೆಗಳನ್ನು ಹೇಗೆ ಗಿರವಿ ಇಡುತ್ತೀಯ ಭಾಗ್ಯಾ? ಕೊನೆಗೂ ಮನೆ ಇಎಂಐ ಕಟ್ಟಲು ನಿನಗೆ ನಾನು ಸಂಪಾದಿಸಿದ ದುಡ್ಡು ಬೇಕಾಯ್ತು ನೋಡು ಎಂದು ವ್ಯಂಗ್ಯವಾಡುತ್ತಾನೆ. ಸೋಲು ಒಪ್ಪದ ಭಾಗ್ಯಾ, ಆ ಒಡವೆಗಳನ್ನು ತೆಗೆದುಕೊಳ್ಳುವಂತೆ ಟೇಬಲ್ ಮೇಲೆ ಇಡುತ್ತಾಳೆ. ಶ್ರೇಷ್ಠಾ, ಖುಷಿಯಿಂದ ಆ ಒಡವೆಗಳನ್ನು ತೆಗೆದುಕೊಳ್ಳುತ್ತಾಳೆ. ಹಣ ಹೊಂದಿಸಲು ಬೇರೆ ಏನಾದರೂ ದಾರಿ ಹುಡುಕುವೆ ಎಂದು ಭಾಗ್ಯಾ ಮನೆಯಿಂದ ಹೊರಡುತ್ತಾಳೆ.
ಭಾಗ್ಯಾ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಮಾತನಾಡಿಕೊಂಡು ತಾಂಡವ್, ಶ್ರೇಷ್ಠಾ ಇನ್ನೂ ಮನೆ ಬಳಿ ನಿಂತಿರುತ್ತಾರೆ. ನೀನು ಭಾಗ್ಯಾಗೆ ಸರಿಯಾಗಿ ಪಾಠ ಕಲಿಸಿದೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಹೌದು ನಾನು ಅಂದ್ರೆ ಸುಮ್ಮನೆ ಎಂದುಕೊಂಡಿದ್ದೀಯ? ಮನೆ ಉಳಿಸಿಕೊಳ್ಳಲು ನನ್ನ ದುಡ್ಡು ಬಳಸಿಕೊಂಡರೆ ನಾನು ಸುಮ್ಮನೆ ಬಿಡುತ್ತೀನಾ? ಇಷ್ಟೆಲ್ಲಾ ಆದರೂ ಮನೆಯವರಿಗೆ ಆ ಭಾಗ್ಯಾ ಮೇಲೆ ಏಕೆ ನಂಬಿಕೆ ಹೋಗುತ್ತಿಲ್ಲ ಎಂದು ತಾಂಡವ್ ಹೇಳುತ್ತಾನೆ. ಅಷ್ಟರಲ್ಲಿ ಭಾಗ್ಯಾ ಮನೆಯಿಂದ ಹೊರಗೆ ಬರುತ್ತಾಳೆ. ಅವರನ್ನು ನೋಡುತ್ತಿದ್ದಂತೆ ನೋಡಿಯೂ ನೋಡದಂತೆ ತನ್ನ ಪಾಡಿಗೆ ತಾನು ಹೋಗುತ್ತಾಳೆ. ಅವಳನ್ನು ಅಡ್ಡ ಗಟ್ಟಿ ನಿಲ್ಲಿಸುವ ತಾಂಡವ್, ಏನ್ ಮೇಡಂ ಮತ್ತೆ ಡ್ರೆಸ್ ಆಗಿ ಎಲ್ಲೋ ಹೋಗುತ್ತಿದ್ದೀರ? ಕೆಲಸ ಕೊಡಿ ಎಂದು ಭಿಕ್ಷೆ ಕೇಳಲು ಹೋಗುತ್ತಿದ್ದೀಯ ಎಂದು ಹೀಯಾಳಿಸುತ್ತಾನೆ.
ತಾಂಡವ್ ಮಾತಿಗೆ ಕೋಪಗೊಂಡ ಭಾಗ್ಯಾ, ಅವನ ಕಡೆ ಕೋಪದಿಂದ ತಿರುಗಿ ನೋಡುತ್ತಾಳೆ. ಹೀಗೆಲ್ಲಾ ಲುಕ್ ಕೊಡಬೇಡ, ಇದನ್ನೆಲ್ಲಾ ಹೋಟೆಲ್ನಲ್ಲಿ ನಿನ್ನ ಕೈ ಕೆಳಗೆ ಕೆಲಸ ಮಾಡುವವರ ಬಳಿ ಇಟ್ಟುಕೋ. ಇವತ್ತು ಏನೇ ಮಾಡಿದರೂ ನಿನಗೆ ಖಂಡಿತ ಕೆಲಸ ಸಿಗುವುದಿಲ್ಲ. ಈ ಮನೆ ಸೀಜ್ ಆಗುವುದು ಪಕ್ಕಾ, ಇವಳನ್ನು ನಂಬಿಕೊಂಡಿರೋ ಇವಳ ಅತ್ತೆ, ಮಾವ ಕೂಡಾ ಬೀದಿಗೆ ಬರುವುದೂ ಪಕ್ಕಾ ಎಂದು ತಾಂಡವ್ ಮತ್ತೆ ದುರಹಂಕಾರದ ಮಾತುಗಳನ್ನಾಡುತ್ತಾನೆ. ತಾಂಡವ್ ಮುಂದೆ ನಿಲ್ಲುವ ಭಾಗ್ಯಾ, ಹಾಗಾದರೆ ಒಂದು ಕೆಲಸ ಮಾಡಿ, ಈ ಮನೆಯನ್ನು ಸೀಜ್ ಮಾಡುತ್ತಾರೆ ಎಂದು ಹೇಳುತ್ತಿದ್ದೀರಲ್ಲ, ಆಗಲೇ ಬನ್ನಿ, ಈಗಲೇ ಏಕೆ ಇಲ್ಲಿ ನಿಂತು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತೀರ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.
ದೇವಸ್ಥಾನಕ್ಕೆ ಬರುವ ಭಾಗ್ಯಾ, ದೇವರ ಮುಂದೆ ಕೈ ಮುಗಿದು, ನನ್ನ ಜೀವನದಲ್ಲಿ ಎಷ್ಟೋ ಬದಲಾವಣೆಗಳನ್ನು ತಂದಿದ್ದೀಯ, ಆದರೂ ಪ್ರತಿಬಾರಿ ಸೋತು ನಿನ್ನ ಮುಂದೆ ಬಂದು ನಿಲ್ಲುವಂತೆ ಮಾಡುತ್ತಿದ್ದೀಯ? ನನಗೆ ದಾರಿ ತೋರಿಸು, ನನ್ನನ್ನೇ ನಂಬಿರುವ ನಮ್ಮ ಮನೆಯವರ ನಂಬಿಕೆಯನ್ನು ಸುಳ್ಳು ಮಾಡಬೇಡ ಎಂದು ಪ್ರಾರ್ಥಿಸಿಕೊಳ್ಳುತ್ತಾಳೆ. ಹಾಗೆ ಬೇಡುತ್ತಿದ್ದಂತೆ ದೇವಿ ಬಲಗಡೆಯಿಂದ ಹೂ ಬೀಳುತ್ತದೆ. ಅದನ್ನು ನೋಡಿ ಭಾಗ್ಯಾ ಖುಷಿಯಾಗುತ್ತಾಳೆ. ಅಲ್ಲಿಂದ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮೂವರು ಅಡುಗೆ ಬಗ್ಗೆ ಮಾತನಾಡುತ್ತಿರುತ್ತಾರೆ. ಶ್ರೀಮಂತ ವ್ಯಕ್ತಿಯೊಬ್ಬರು 250 ಮಂದಿಗೆ ಊಟದ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಅಡುಗೆ ಮಾಡುವವರು ಬಾರದೆ ಮೋಸ ಮಾಡುತ್ತಾರೆ. ಈಗ ಹೇಗೆ ಅಡುಗೆ ಮಾಡುವುದು? ನನ್ನ ಗೌರವ ಎಲ್ಲಾ ಹಾಳಾಯ್ತಲ್ಲ, ಇರುವ ಕಡಿಮೆ ಸಮಯದಲ್ಲಿ ಯಾರು ಅಡುಗೆ ಮಾಡುತ್ತಾರೆ ಎಂದು ಕಾಂಟ್ರಾಕ್ಟ್ ನೀಡಿದ್ದ ವ್ಯಕ್ತಿ ಬಳಿ ಕೇಳುತ್ತಾರೆ. ಅದನ್ನು ನೋಡುವ ಭಾಗ್ಯಾ, ಸರ್ ನೀವು ಒಪ್ಪಿದರೆ ನಾನು ಅಡುಗೆ ಮಾಡುತ್ತೇನೆ ಎನ್ನುತ್ತಾಳೆ.
ಯಾರೋ ಗೊತ್ತಿಲ್ಲದವರಿಗೆ ನಾನು ಅಡುಗೆ ಕಾಂಟ್ರಾಕ್ಟ್ ಕೊಡುವುದಿಲ್ಲ ಎಂದು ಆ ವ್ಯಕ್ತಿ ಹೇಳುತ್ತಾನೆ. ಭಾಗ್ಯಾ ಬೇಸರದಿಂದ ಅಲ್ಲಿಂದ ಹೆಜ್ಜೆ ಹಾಕುತ್ತಾಳೆ. ಆದರೆ ದೇವಸ್ಥಾನದ ಪುರೋಹಿತರು ಆ ವ್ಯಕ್ತಿ ಬಳಿ ಬಂದು, ಆಕೆಯ ಹೆಸರು ಭಾಗ್ಯಾ, ನಾನು ಅವಳ ಕೈ ರುಚಿ ಸವಿಸಿದ್ದೇನೆ, ಬಹಳ ಚೆನ್ನಾಗಿ ಅಡುಗೆ ಮಾಡುತ್ತಾಳೆ ಎನ್ನುತ್ತಾರೆ. ಅದನ್ನು ಕೇಳಿದ ಆ ವ್ಯಕ್ತಿ ಭಾಗ್ಯಾಳನ್ನು ಕರೆದು ಅಡುಗೆ ಮಾಡುವಂತೆ ಹೇಳುತ್ತಾರೆ. ಭಾಗ್ಯಾ ಖುಷಿಯಾಗಿ ಅತ್ತೆಗೆ ಫೋನ್ ಮಾಡಿ ಸಹಾಯ ಮಾಡಲು ಬರಲು ಹೇಳುತ್ತಾಳೆ. ಕುಸುಮಾ, ತನ್ನ ಜೊತೆಗೆ ಪೂಜಾಳನ್ನು ಕರೆತರುತ್ತಾಳೆ.
ಮಾತು ಕೊಟ್ಟಂತೆ ಭಾಗ್ಯಾ , ಇರುವ ಸಮಯದಲ್ಲಿ 250 ಜನರಿಗೆ ಅಡುಗೆ ಮಾಡಿ ಬಡಿಸುತ್ತಾಳಾ? ಭಾಗ್ಯಾಗೆ ಹಣ ದೊರೆಯುವುದಾ? ನಾಳಿನ ಎಪಿಸೋಡ್ನಲ್ಲಿ ತಿಳಿಯಲಿದೆ.