ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 3ರ ಎಪಿಸೋಡ್ ಕಥೆ ಹೀಗಿದೆ. ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಅಕ್ಕ-ತಂಗಿಯರಾದ ಜಾಹ್ನವಿ, ಭಾವನಾ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜಾಹ್ನವಿಗೆ ತನ್ನ ಸೈಕೋ ಗಂಡ ಜಯಂತನ ಅಸಲಿ ಮುಖ ಗೊತ್ತಾಗಿದೆ. ಮತ್ತೊಂದೆಡೆ ಭಾವನಾಗೆ ಸಿದ್ದು ಮೇಲೆ ಪ್ರೀತಿ ಚಿಗುರುತ್ತಿದೆ. ಮೊದಲೆಲ್ಲಾ ಸಿದ್ದು ಎಂದರೆ ಸಿಡಿದುಬೀಳುತ್ತಿದ್ದ ಭಾವನಾ ಈಗ ಸಿದ್ದು ಜೊತೆ ನಗು ನಗುತ್ತಾ ಮಾತನಾಡುತ್ತಿದ್ದಾಳೆ. ಅವಳನ್ನು ಪ್ರೀತಿಯಿಂದ ಕಾಳಜಿ ಮಾಡುತ್ತಿದ್ದಾಳೆ.
ಅಜ್ಜಿ ಕೋಮಾಗೆ ಹೋಗಲು ಗಂಡ ಜಯಂತ್ ಕಾರಣ ಎಂಬ ಸತ್ಯ ತಿಳಿದ ಜಾಹ್ನವಿ ಆಸ್ಪತ್ರೆ ಸೇರುತ್ತಾಳೆ. ಅದೇ ಶಾಕ್ನಲ್ಲಿ ಮಗುವನ್ನು ಕಳೆದುಕೊಳ್ಳುತ್ತಾಳೆ. ಆದರೆ ಅಪ್ಪ-ಅಮ್ಮನಿಗೆ ನಿಜ ಹೇಳಲು ಜಾನು ಒದ್ದಾಡುತ್ತಿದ್ದಾಳೆ. ನಿಜ ಗೊತ್ತಾದರೆ ಅವರು ಎಲ್ಲಿ ಇದೇ ಯೋಚನೆಯಲ್ಲಿ ಮುಳುಗುತ್ತಾರೋ ಎಂದು ನಿಜ ಹೇಳಲೂ ಆಗದೆ, ಮುಚ್ಚಿಡಲೂ ಆಗದೆ ಕಣ್ಣೀರಿಡುತ್ತಿದ್ದಾಳೆ. ಇದೇ ಕೋಪದಲ್ಲಿ ಜಾನು , ಜಯಂತನನ್ನು ಮಾತನಾಡಿಸಲು ಕೂಡಾ ಇಷ್ಟಪಡುವುದಿಲ್ಲ. ನೋವು ತಾಳಲಾಗದೆ ಜಾನು ಮನೆ ಬಿಟ್ಟು ಹೊರಗೆ ಬರುತ್ತಾಳೆ. ದಾರಿ ಸಿಕ್ಕ ಕಡೆಗೆ ಹೋಗುತ್ತಾಳೆ. ಅಲ್ಲಿ ದೇವಸ್ಥಾನದ ಬಳಿ ಕುಳಿತಿದ್ದ ಗುರುಗಳನ್ನು ಮಾತನಾಡಿಸಿ ಒಳಗೆ ಹೋಗುತ್ತಾಳೆ. ಹಿಂದೆಯೇ ಜಯಂತ್ ಕೂಡಾ ಹೆಂಡತಿಯನ್ನು ಹುಡುಕಿ ಬರುತ್ತಾನೆ. ಗುರುಗಳು , ಜಯಂತನಿಗೆ ಬಲವಂತದ ಪ್ರೀತಿಯಲ್ಲಿ ಯಾರೂ ಸಂತೋಷವಾಗಿರುವುದಿಲ್ಲ ಎಂದು ಪರೋಕ್ಷವಾಗಿ ಬುದ್ಧಿಮಾತುಗಳನ್ನು ಹೇಳುತ್ತಾರೆ.
ಯಾರು ಎಷ್ಟೇ ಹೇಳಿದರೂ ಜಯಂತ್, ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಅವನಿಗೆ ಜಾನು ತನ್ನನ್ನು ಬಿಟ್ಟು ಹೋಗಬಹುದು ಎಂಬ ಭಯ ಕಾಡುತ್ತಿದೆ. ತನ್ನನ್ನು ಹಿಂಬಾಲಿಸಿಕೊಂಡು ಬಂದ ಜಯಂತ್ನನ್ನು ನೋಡಿ ಜಾನು ಮತ್ತೆ ತಲೆ ಸುತ್ತಿ ಬೀಳುತ್ತಾಳೆ. ಹೆಂಡತಿಯನ್ನು ಜಯಂತ್ ಮನೆಗೆ ಕರೆದೊಯ್ದು, ಡಾಕ್ಟರ್ ಕರೆಸುತ್ತಾನೆ. ಜಾಹ್ನವಿಯನ್ನು ಪರೀಕ್ಷಿಸುವ ಡಾಕ್ಟರ್, ಜಾನುಗೆ ಮಗು ಕಳೆದುಕೊಂಡ ನೋವು ಕಾಡುತ್ತಿದೆ. ಆಪ್ತರೊಂದಿಗೆ ಮಾತನಾಡಿದಲ್ಲಿ ಅವರು ಸರಿ ಆಗಬಹುದು, ಮೊದಲು ಅವರ ಅಪ್ಪ-ಅಮ್ಮನಿಗೆ ನಿಜ ಹೇಳಿ, ಎಷ್ಟು ದಿನ ಸತ್ಯ ಮುಚ್ಚಿಡುತ್ತೀರಿ ಎಂದು ಸಲಹೆ ನೀಡುತ್ತಾರೆ. ಅದನ್ನು ಕೇಳಿ ಜಯಂತ್ ಗೊಂದಲಕ್ಕೆ ಒಳಗಾಗುತ್ತಾನೆ.
ಇತ್ತ ಸಿದ್ದು ಹಾಗೂ ಭಾವನಾ ದೇವಸ್ಥಾನಕ್ಕೆ ಹೋಗಿ ಬಂದಿದ್ದಕ್ಕೆ ರೇಣುಕಾ ಸಿಟ್ಟಾಗುತ್ತಾಳೆ. ಮರೀಗೌಡ ಹಾಗೂ ನೀಲುಗೆ ಮದುವೆ ಆಗಿ ಇಷ್ಟು ವರ್ಷಗಳು ಕಳೆದರೂ ಮಕ್ಕಳಾಗಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ನಾನು ದೇವಸ್ಥಾನದಲ್ಲಿ ಪೂಜೆಗೆ ಕೊಟ್ಟಿದ್ದೆ. ಆದರೆ ಅಣ್ಣ ಅತ್ತಿಗೆಯನ್ನು ಕರೆಯದೆ ನೀವಿಬ್ಬರೇ ಹೇಗೆ ದೇವಸ್ಥಾನಕ್ಕೆ ಹೋಗಿ ಬಂದ್ರಿ ಎಂದು ಪ್ರಶ್ನಿಸುತ್ತಾಳೆ. ತಪ್ಪು ನಮ್ಮದೇ, ನಾವೇ ಅಣ್ಣ ಅತ್ತಿಗೆಯನ್ನು ಕರೆಯಬೇಕಿತ್ತು ಎಂದು ಭಾವನಾ ಹಾಗೂ ಸಿದ್ದು ಸುಮ್ಮನಾಗುತ್ತಾರೆ. ದೇವರನ್ನು ನೀವು ಏನು ಕೇಳಿಕೊಂಡಿರಿ ಎಂದು ಭಾವನಾ ಕೇಳುತ್ತಾಳೆ. ನನ್ನ ಮೇಡಂ ಏನೇ ಕೇಳಿದರೂ ಕೊಡು ಎಂದು ಬೇಡಿಕೊಂಡಿದ್ದಾಗಿ ಸಿದ್ದು ಹೇಳುತ್ತಾನೆ. ನೀವು ಏನು ಕೇಳಿದಿರಿ ಎಂದು ಸಿದ್ದು ಕೇಳುತ್ತಾನೆ. ನನಗೆ ಮದುವೆ ಆಗುವುದಿಲ್ಲ ಎಂದುಕೊಂಡಿದ್ದೆ, ಆದರೆ ಈಗ ಮದುವೆ ಆಗಿದೆ, ನನ್ನ ಜೀವನ ಸುಧಾರಿಸುವಂತೆ ಕಾಣುತ್ತಿದೆ. ನನಗೆ ಇನ್ನೇನು ಬೇಕು? ಖುಷಿಗೆ ನ್ಯಾಯ ಸಿಕ್ಕರೆ ಸಾಕು ಎಂದು ಭಾವನಾ ಹೇಳಿದಾಗ ಸಿದ್ದು ಬೇಸರಗೊಳ್ಳುತ್ತಾನೆ.
ಮರುದಿನ ಭಾವನಾ ದೇವಸ್ಥಾನಕ್ಕೆ ಹೋಗಲು ಸಿದ್ದಳಾಗುತ್ತಾಳೆ. ಅವಳು ವ್ರತ ಮಾಡಲು ಹೋಗುತ್ತಿದ್ದಾಳೆ ಎಂದು ತಿಳಿದ ಸಿದ್ದೇಗೌಡ, ನೀವು ನಿನ್ನೆಯೇ ಉಪವಾಸ ಮಾಡಿದ್ದೀರಿ ಇಂದು ಮೊದಲು ಊಟ ಮಾಡಿ , ನಂತರ ವ್ರತ ಮುಂದುವರೆಸಿ ಎನ್ನುತ್ತಾನೆ. ಆದರೆ ಅದಕ್ಕೆ ಭಾವನಾ ಒಪ್ಪುವುದಿಲ್ಲ. ದೇವಸ್ಥಾನದಲ್ಲಿ ಕೂಡಾ ಸಿದ್ದು , ಭಾವನಾ ಹಿಂದೆ ಬಂದು ಊಟ ಮಾಡುವಂತೆ ಮನವಿ ಮಾಡುತ್ತಾನೆ. ಆದರೆ ಸಿದ್ದು ಎಷ್ಟು ಹೇಳಿದರೂ ಭಾವನಾ ಊಟ ಮಾಡಲು ನಿರಾಕರಿಸುತ್ತಾಳೆ. ಹೆಂಡತಿ ಹೀಗೆ ಊಟ ಬಿಟ್ಟು ವ್ರತ ಮಾಡುವುದನ್ನು ನೋಡಿ ಸಹಿಸದ ಸಿದ್ದು, ಆಕ್ಸಿಡೆಂಟ್ ಮಾಡಿದ್ದು ನಾನೇ ಎಂಬ ನಿಜವನ್ನು ಭಾವನಾ ಬಳಿ ಹೇಳಲು ನಿರ್ಧರಿಸುತ್ತಾನೆ.
ಸಿದ್ದು ನಿಜವಾಗಿಯೂ ಭಾವನಾ ಬಳಿ ನಾನೇ ಆಕ್ಸಿಡೆಂಟ್ ಮಾಡಿದ್ದು ಎಂಬ ನಿಜ ಹೇಳುತ್ತಾನಾ? ಆ ಸತ್ಯ ಕೇಳಿ ಭಾವನಾ ಹೇಗೆ ಪ್ರತಿಕ್ರಿಯಿಸುತ್ತಾಳೆ? ಮಂಗಳವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.



