ಕನ್ನಡದ ಭರ್ಜರಿ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಕಾಣಿಸಿಕೊಂಡು ಸಖತ್ ಫೇಮ್ ಪಡೆದ ಅಮೂಲ್ಯ ಗೌಡ ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ! ಹೌದು ತಮ್ಮ ಎವರ್ ಗ್ರೀನ್ ಚಾರ್ಮ್ ನಿಂದ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟಿ ಅಮೂಲ್ಯ ಗೌಡ ಇದೀಗ ಕ್ಯಾಮರಾ ಹಿಂದಿನ ಕೆಲಸಕ್ಕೆ ಕೈ ಹಾಕಿದ್ದಾರೆ.
ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದ ಈಕೆ ಇದೀಗ ಕ್ಯಾಮೆರಾ ಹಿಂದೆ ಅಂದರೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಲು ಶುರು ಮಾಡಿದ್ದಾರೆ. ಸ್ಯಾಂಡಲ್ ವುಡ್ ಬಹುನಿರೀಕ್ಷಿತ ಸಿನಿಮಾ “ಸಂಜು ವೆಡ್ಸ್ ಗೀತಾ 2″ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ನಟಿ ಅಮೂಲ್ಯ ಗೌಡ.

ಸಾಮಾನ್ಯವಾಗಿ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡವರಿಗೆ ನಟನೆಯ ಬಹು ಮುಖ್ಯ ಕನಸಾಗಿರುತ್ತದೆ. ಆದರೆ ನಟಿ ಅಮೂಲ್ಯ ಗೌಡ ಅವರು ಕ್ಯಾಮೆರಾ ಹಿಂದಿನ ಕೆಲಸಗಳನ್ನು ಕಲಿತು ಡೈರೆಕ್ಟರ್ ಆಗುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಈಕೆ ಸಂಜು ವೆಡ್ಸ್ ಗೀತಾ 2 ಸಿನಿಮಾದ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
“ಇಷ್ಟು ದಿನ ಕ್ಯಾಮೆರಾ ಮುಂದೆ ಕೆಲಸ ಮಾಡಿ ಗೊತ್ತಿತ್ತು. ಇದೀಗ ಕ್ಯಾಮೆರಾ ಹಿಂದಿನ ಕೆಲಸದ ಶ್ರಮ ಅರ್ಥವಾಗುತ್ತಿದೆ. ಯಾವುದೇ ರೀತಿಯ ಬ್ರೇಕ್ ಗಳಿಲ್ಲದೆ ಅಚ್ಚುಕಟ್ಟಾಗಿ ಒಂದು ಫ್ರೇಮ್ ಒಳಗೆ ಕಥೆಯನ್ನು ಹಿಡಿದಿಡುವುದು ಸುಲಭದ ಕೆಲಸವಲ್ಲ. ಬಿಸಿಲು, ಗಾಳಿ, ಮಳೆ, ಹಸಿವು ಇತ್ಯಾದಿಗಳು ಯಾವುದನ್ನು ಲೆಕ್ಕಿಸದೆ ಡೈರೆಕ್ಟರ್ ಗಳು ಹಗಲಿರುಳು ಕಷ್ಟ ಪಡುತ್ತಿರುತ್ತಾರೆ. ಅದರ ಪ್ರತಿಫಲವಾಗಿ ತೆರೆ ಮುಂದೆ ಪ್ರೇಕ್ಷಕರಿಗೆ ಅದ್ಭುತವಾದ ಸಿನಿಮಾಗಳು ಕಂಡುಬರುತ್ತದೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಇದೀಗ ಕೆಲಸ ಮಾಡುವುದಕ್ಕೆ ಆರಂಭ ಮಾಡಿದಾಗನಿಂದ ನನಗೆ ಡೈರೆಕ್ಟರ್ ಗಳ ಮೇಲಿನ ಗೌರವ ಅಭಿಮಾನ ಹೆಚ್ಚಾಗಿದೆ.” ಎಂದಿದ್ದಾರೆ.

“ಈ ವೃತ್ತಿ ಸುಲಭದ ಮಾತಲ್ಲ. ಗಂಟೆಗಟ್ಟಲೆ ಬಿಸಿಲಡಿ ನಿಲ್ಲುವ ಕಾರಣ ನನ್ನ ತ್ವಚೆ ತುಂಬಾ ಹಾಳಾಗಿದೆ. ಬೇಗ ಡಿಹೈಡ್ರೆಟ್ ಆಗುತ್ತಿರುತ್ತೇವೆ ಬೇರೆ ಬೇರೆ ರೀತಿಯ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಎಷ್ಟೋ ಬಾರಿ ಇವೆಲ್ಲವೂ ಬೇಕಾ ಎಂಬ ಪ್ರಶ್ನೆಯು ಮೂಡಿದಿದೆ. ಪರಿಣಾಮವಾಗಿ ಮುಂದೆ ತೆರೆ ಮೇಲೆ ಒಂದು ಅದ್ಭುತವಾದ ಸಿನಿಮಾವನ್ನು ನೀಡುವ ಕನಸು ಹೊತ್ತಿರುವುದರಿಂದ ಎಲ್ಲವನ್ನು ಸಹಿಸಿಕೊಂಡು ಖುಷಿಯಿಂದ ನಿರ್ದೇಶನದ ವೃತ್ತಿಯಲ್ಲಿ ತೊಡಗಿದ್ದೇನೆ.” ಎಂದು ತಮ್ಮ ವೃತ್ತಿಯ ಬಗ್ಗೆ ಸಮಾಧಾನ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.
” ನಟನೆಯಿಂದ ನಿರ್ದೇಶನಕ್ಕೆ ಬಂದಿರುವುದು ಬಹುದೊಡ್ಡ ನಿರ್ಧಾರ ಹಾಗೂ ಹಲವಾರು ವಿಚಾರಗಳನ್ನು ನನಗೆ ತಿಳಿಸಿಕೊಟ್ಟಿದೆ. ಸಮಯ ಪ್ರಜ್ಞೆ ಹಾಗೂ ಕ್ವಿಕ್ ಆಗಿ ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯವನ್ನು ನಾನು ನಿರ್ದೇಶನದಿಂದ ಕಲಿಯುತ್ತಿದ್ದೇನೆ. ನನ್ನ ಫೋನನ್ನು ಬದಿಗಿಟ್ಟು ಕೆಲಸ ಮಾಡುವುದೇ ಬಹುದೊಡ್ಡ ಗೇಮ್ ಚೇಂಜರ್ ಆಗಿದೆ. ವಾಕಿ ಟಾಕಿ ಹಿಡಿದುಕೊಂಡು ನಿರ್ದೇಶನದಲ್ಲಿ ತೊಡಗಲು ಬಹಳಷ್ಟು ಫೋಕಸ್ ಬೇಕಾಗುತ್ತದೆ. ” ಏಂಬಿತ್ಯಾದಿ ತಮ್ಮ ನಿರ್ದೇಶನ ವೃತ್ತಿಯ ಹಲವಾರು ಚಾಲೆಂಜ್ಗಳನ್ನು ಹಂಚಿಕೊಂಡಿದ್ದಾರೆ.