ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 727ರ ಎಪಿಸೋಡ್ ಕಥೆ ಇಲ್ಲಿದೆ. ಈ ಬಾರಿ ನಮ್ಮ ಮದುವೆಯನ್ನು ತಡೆಯುವವರು ಯಾರೂ ಇಲ್ಲ ಎಂಬ ಧೈರ್ಯದಿಂದ ಶ್ರೇಷ್ಠಾ ಹಾಗೂ ತಾಂಡವ್ ಮದುವೆ ಆಗಲು ಮುಂದಾಗುತ್ತಾರೆ. ಆದರೆ ತಾಳಿ ಕಟ್ಟುವ ವೇಳೆಗೆ ಎದುರಿಗೆ ಭಾಗ್ಯಾ ಬರುವುದನ್ನು ತಾಂಡವ್ ನೋಡುತ್ತಾನೆ. ಗಾಬರಿಯಿಂದ ಎದ್ದು ನಿಲ್ಲುತ್ತಾನೆ. ನನಗೆ ಬೇಗ ತಾಳಿ ಕಟ್ಟು ಎಂದು ಶ್ರೇಷ್ಠಾ ಹೇಳಿದರೆ, ತಾಂಡವ್ ಮಾತ್ರ ತಾಳಿ ಕಟ್ಟಲು ನಿರಾಕರಿಸುತ್ತಾನೆ. ನೀನು ಇಲ್ಲಿಗೆ ಏಕೆ ಬಂದೆ ಎಂದು ತಾಂಡವ್ ಕೇಳುತ್ತಾನೆ. ನಾನು ಮದುವೆ ನಿಲ್ಲಿಸಲು ಬಂದಿಲ್ಲ ಎಂದು ಭಾಗ್ಯಾ ಹೇಳುತ್ತಾಳೆ.
ಮೊದಲೆಲ್ಲಾ ಶ್ರೇಷ್ಠಾ ಹಾಗೂ ತಾಂಡವ್ ಜೊತೆಯಲ್ಲಿದ್ದಾಗ ಸಿಡಿದು ಬೀಳುತ್ತಿದ್ದ ಭಾಗ್ಯಾ ಈಗ ಅವರಿಬ್ಬರೂ ಮದುವೆ ಆಗುವುದನ್ನು ನೋಡಿಯೂ ಸುಮ್ಮನಿರುವುದನ್ನು ಕಂಡು ಎಲ್ಲರೂ ಶಾಕ್ ಆಗುತ್ತಾರೆ. ಬಲವಂತದ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ, ಇವರು ಒಂದು ದಿನವೂ ನನ್ನನ್ನು ಹೆಂಡತಿಯಂತೆ ನೋಡಿಲ್ಲ, ನನಗೆ ಕೊಡಬೇಕಾದ ಗೌರವ ಕೊಟ್ಟಿಲ್ಲ. ಅಂದ ಮೇಲೆ ಈ ತಾಳಿಗೆ ಬೆಲೆ ಏನಿದೆ? ಇದನ್ನು ತೆಗೆದುಬಿಡುತ್ತೇನೆ ಎನ್ನುತ್ತಾಳೆ. ಸೊಸೆ ನಿರ್ಧಾರಕ್ಕೆ ಕುಸುಮಾ ಕೂಡಾ ಬೆಂಬಲ ನೀಡುತ್ತಾಳೆ. ಆದರೆ ಭಾಗ್ಯಾ ತಾಯಿ ಸುನಂದಾ ಮಗಳ ನಿರ್ಧಾರಕ್ಕೆ ಅಡ್ಡಿ ಬರುತ್ತಾಳೆ. ಯಾರು ಏನು ಹೇಳಿದರೂ ನನ್ನ ನಿರ್ಧಾರ ಬದಲಾಗುವುದಿಲ್ಲ ಎಂದು ಭಾಗ್ಯಾ ಎಲ್ಲರ ಮುಂದೆ ತಾಳಿ ತೆಗೆಯುತ್ತಾಳೆ. ಅದನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ.
ದೇವರ ಮುಂದೆ ನಿಂತು ಭಾಗ್ಯಾ ತನ್ನನ್ನು ಆಶೀರ್ವದಿಸುವಂತೆ ಬೇಡುತ್ತಾಳೆ. ಅಲ್ಲಿಂದ ಹೊರಡುತ್ತಿದ್ದವಳು ಮತ್ತೆ ವಾಪಸ್ ಹೊರಟು, ಮದುವೆಗೆ ಬಂದವರು ಬರಿ ಕೈಯಲ್ಲಿ ಬರಬಾರದು, ಅದಕ್ಕಾಗಿ ನಿಮಗೆ ನೀವು ಕಟ್ಟಿದ ತಾಳಿಯನ್ನೇ ಉಡುಗೊರೆಯನ್ನಾಗಿ ನೀಡುತ್ತಿದ್ದೇನೆ. ಇದರ ಮೇಲೆ ಬರೆದಿರುವುದು ಆ ಶ್ರೇಷ್ಠಾ ಹೆಸರು ತಾನೇ, ಇದನ್ನೇ ಅವಳಿಗೆ ಕಟ್ಟಿಬಿಡಿ ಎಂದು ಅಲ್ಲಿಂದ ಹೊರಡುತ್ತಾಳೆ. ಕುಸುಮಾ, ಧರ್ಮರಾಜ್ ಸೇರಿದಂತೆ ಎಲ್ಲರೂ ಭಾಗ್ಯಾ ಹಿಂದೆ ಹೊರಡುತ್ತಾರೆ. ಇದೆನ್ನೆಲ್ಲಾ ನೋಡುತ್ತಿದ್ದ ಶ್ರೇಷ್ಠಾ ಖುಷಿಯಾಗುತ್ತಾಳೆ. ಮದುವೆ ಮಂಟಪಕ್ಕೆ ತಾಂಡವ್ನನ್ನು ಎಳೆದೊಯ್ದು ನಮ್ಮ ಜೀವನಕ್ಕೆ ಇದ್ದ ಪೀಡೆ ಮರೆಯಾಯ್ತು, ಇನ್ನು ನಾವು ಧೈರ್ಯದಿಂದ ಮದುವೆ ಆಗಬಹುದು, ತಾಳಿ ಕಟ್ಟು ಎನ್ನುತ್ತಾಳೆ. ಭಾಗ್ಯಾ ತಾಳಿ ತೆಗೆದುಕೊಟ್ಟಿದ್ದಕ್ಕೆ ತಾಂಡವ್ ಇನ್ನೂ ಶಾಕ್ನಲ್ಲೇ ಇರುತ್ತಾನೆ. ಅದೇ ಶಾಕ್ನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟುತ್ತಾನೆ.
ಶ್ರೇಷ್ಠಾ ಗೆಳೆಯ ಶೌರ್ಯ, ಮನೆವರೆಗೂ ಬಂದು ಇಬ್ಬರನ್ನೂ ಕಳಿಸಿಕೊಟ್ಟು ಅವರಿಗೆ ಶುಭ ಹಾರೈಸಿ ವಾಪಸ್ ಹೊರಡುತ್ತಾನೆ. ನೆರೆ ಮನೆಯವರು ಶ್ರೇಷ್ಠಾ ಹಾಗೂ ತಾಂಡವ್ಗೆ ಆರತಿ ಮಾಡುತ್ತಾರೆ. ಶ್ರೇಷ್ಠಾ, ಸೇರು ಒದ್ದು ಒಳಗೆ ಬರುತ್ತಾಳೆ. ಇಷ್ಟು ದಿನಗಳು ಕಾದಿದ್ದು ಈಗ ನೆರವೇರಿದೆ. ಕೊನೆಗೂ ನಾವು ಮದುವೆ ಆಗಿದ್ದೇವೆ, ನನಗೆ ಬಹಳ ಖುಷಿಯಾಗುತ್ತಿದೆ ಎಂದು ಶ್ರೇಷ್ಠಾ ತಾಂಡವ್ ಬಳಿ ಹೇಳಿಕೊಳ್ಳುತ್ತಾಳೆ. ಆದರೆ ತಾಂಡವ್ ಸಪ್ಪೆ ಮೋರೆ ಹಾಕಿರುವುದನ್ನು ನೋಡಿ, ಈ ರೀತಿ ಏಕೆ ಬೇಸರವಾಗಿದ್ದೀಯ ಎಂದು ಕೇಳುತ್ತಾಳೆ. ಆ ದಡ್ಡಿ ಭಾಗ್ಯಾಗೆ ಅಷ್ಟು ಕಾನ್ಫಿಡೆನ್ಸ್ ಹೇಗೆ ಬಂತು ಗೊತ್ತಾಗುತ್ತಿಲ್ಲ, ಯಾವುದೇ ಕಾರಣಕ್ಕೂ ನಾನು ಅವಳ ಮುಂದೆ ಸೋಲಬಾರದು ಎನ್ನುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಸಿಟ್ಟಾಗುತ್ತಾಳೆ. ಅಷ್ಟರಲ್ಲಿ ತಾಂಡವ್ನನ್ನು ಹುಡುಕಿಕೊಂಡು ಭಾಗ್ಯಾ ತಂಗಿ ಲಕ್ಷ್ಮೀ ಬರುತ್ತಾಳೆ.
ಇತ್ತ ಮನೆಗೆ ಬಂದಾಗಲೂ ಸುನಂದಾ ಅಳು ನಿಲ್ಲಿಸುವುದಿಲ್ಲ. ಗಂಡ ಹೆಂಡತಿ ಎಂದ ಮೇಲೆ ಜಗಳ ಇದ್ದದ್ದೇ, ಈಗ ಆ ತಾಂಡವ್, ಶ್ರೇಷ್ಠಾಳನ್ನು ಮದುವೆ ಆಗಿದ್ದಾನೆ. ಇನ್ನು ನನ್ನ ಮಗಳ ಜೀವನ ನರಕವಾಗುತ್ತದೆ. ನೀವೆಲ್ಲಾ ಇವಳಿಗೆ ತಾಳಿ ತೆಗೆಯಲು ಬಿಡಬಾರದಿದ್ದು ಎಂದು ಅಳುತ್ತಾಳೆ. ಎಷ್ಟು ದಿನ ನಾನು ಅನುಸರಿಸಿಕೊಂಡು ಹೋಗಬೇಕಿತ್ತು ಅಮ್ಮಾ? ಮದುವೆ ಅಗಿ ಇಷ್ಟು ವರ್ಷಗಳಾದರೂ ಅವರು ನನ್ನನ್ನು ಹೆಂಡತಿಯಂತೆ ನೋಡಿಲ್ಲ. ಎಮ್ಮೆ, ದಡ್ಡಿ ಎಂದು ನನ್ನನ್ನು ಅಪಹಾಸ್ಯ ಮಾಡುತ್ತಲೇ ಇದ್ದರು. ಇದನ್ನೆಲ್ಲಾ ಎಷ್ಟು ವರ್ಷಗಳು ಸಹಿಸಿಕೊಳ್ಳಬೇಕಿತ್ತು. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎನ್ನುತ್ತಾಳೆ. ಅಷ್ಟರಲ್ಲಿ ತನ್ವಿ ಹಾಗೂ ತನ್ಮಯ್ ಇಬ್ಬರೂ ಬಂದು ಅಮ್ಮನನ್ನು ಅಪ್ಪಿಕೊಳ್ಳುತ್ತಾರೆ. ನೀವು ಹಾಗೂ ಅಪ್ಪ ಬೇರೆಯಾದರಂತೆ ಹೌದಾ, ಇನ್ಮುಂದೆ ಅಪ್ಪ ನಮ್ಮ ಜೊತೆ ಇರುವುದಿಲ್ಲವಾ ಎಂದು ಕೇಳುತ್ತಾರೆ. ಇನ್ಮುಂದೆ ನಾನೇ ನಿಮಗೆ ಅಪ್ಪ ಅಮ್ಮ ಎಲ್ಲಾ. ಅಪ್ಪ ಇಲ್ಲ ಎಂಬ ಕೊರಗು ಬರದಂತೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಕ್ಕಳಿಗೆ ಭಾಗ್ಯಾ ಭರವಸೆ ಕೊಡುತ್ತಾಳೆ.
ದೇವರ ಮುಂದೆ ನಿಂತು ಭಾಗ್ಯಾ ತನ್ನ ಹೊಸ ಜೀವನಕ್ಕೆ ಹಾರೈಸು, ನನಗೆ ಶಕ್ತಿ ಕೊಡು ಎಂದು ಬೇಡುತ್ತಾಳೆ. ಅಷ್ಟರಲ್ಲಿ ಕುಸುಮಾ ಬಂದು ಭಾಗ್ಯಾಗೆ ಒಂದು ಸರ ಕೊಟ್ಟು , ಬರೀ ಕತ್ತಿನಲ್ಲಿ ಇರಬೇಡ ಇದನ್ನು ಧರಿಸು ಎನ್ನುತ್ತಾಳೆ. ಅತ್ತೆ ನಿಮ್ಮ ಮಗನೊಂದಿಗಿನ ಸಂಬಂಧ ಕಳೆದುಕೊಂಡಿದ್ದೇನೆ, ಕೊನೆವರೆಗೂ ನೀವು ನಮ್ಮ ಜೊತೆಯಲ್ಲಿರುತ್ತೀರ ತಾನೇ ಎಂದು ಕೇಳುತ್ತಾಳೆ. ಭಾಗ್ಯಾ ಮಾತಿಗೆ ಉತ್ತರಿಸದ ಕುಸುಮಾ ಧರ್ಮರಾಜ್ನನ್ನು ಹೊರಗೆ ಕರೆದು ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು ಎನ್ನುತ್ತಾಳೆ. ಅತ್ತೆ ನಡೆ ಕಂಡು ಭಾಗ್ಯಾಗೆ ಗೊಂದಲವಾಗುತ್ತದೆ.
ಕುಸುಮಾ ಏನು ಮಾಡಲು ಹೊರಟಿದ್ದಾಳೆ. ಭಾಗ್ಯಾ ಮೇಲೆ ತಾಂಡವ್ ಸೇಡು ತೀರಿಸಿಕೊಳ್ಳಲು ಮತ್ತೆ ಏನು ಪ್ಲ್ಯಾನ್ ಮಾಡುತ್ತಾನೆ? ಕಾದು ನೋಡಬೇಕು.



