2011ರಲ್ಲಿ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ನಾಗಶೇಖರ್ ಅವರು ನಿರ್ದೇಶಿಸಿ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ನಟ ಶ್ರೀನಗರ ಕಿಟ್ಟಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದ ಈ ಸಿನಿಮಾ, ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಈ ಸಿನಿಮಾದ ಸೀಕ್ವೆಲ್ ಬರಬೇಕು ಎನ್ನುವುದು ಬಹಳಷ್ಟು ಅಭಿಮಾನಿಗಳ ಆಸೆ ಕೂಡ ಆಗಿತ್ತು. ಬಹಳ ವರ್ಷಗಳ ನಂತರ, ನಾಗ್ ಶೇಖರ್ ಅವರು ಸಂಜು ವೆಡ್ಸ್ ಗೀತಾ2 ಸಿನಿಮಾವನ್ನು ನಿರ್ದೇಶನ ಮಾಡಿದರು. ಈ ಸಿನಿಮಾದಲ್ಲಿ ಸಹ ಶ್ರೀನಗರ ಕಿಟ್ಟಿ ಅವರೇ ನಾಯಕ, ಆದರೆ ನಾಯಕಿ ಆಗಿ ಈ ಬಾರಿ ಆಕ್ಟ್ ಮಾಡಿದ್ದು ರಚಿತಾ ರಾಮ್ ಅವರು. ರಮ್ಯಾ ಅವರ ಬದಲಾಗಿ ರಚಿತಾ ಬಂದರು. ಈ ವರ್ಷ ಜನವರಿ ತಿಂಗಳಿನಲ್ಲಿ ಸಂಜು ವೆಡ್ಸ್ ಗೀತಾ 2 ರಿಲೀಸ್ ಆಯಿತು.

ಆದರೆ ಅಂದುಕೊಂಡ ಹಾಗೆ ಸಿನಿಮಾ ಹಿಟ್ ಆಗಲಿಲ್ಲ, ನಿರೀಕ್ಷೆ ಮಾಡಿದ ಹಾಗೆ ಯಶಸ್ಸು ಸಿಗಲಿಲ್ಲ. ಈ ಕಾರಣಕ್ಕೆ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗದೆ. ಈ ಬಾರಿ ಒಳ್ಳೆಯ ರೀಚ್ ಸಿಕ್ಕಿದೆ ಎನ್ನುವುದು ತಂಡದಿಂದ ಸಿಕ್ಕಿರುವ ಮಾಹಿತಿ. ಈ ಸಿನಿಮಾ ರೀರಿಲೀಸ್ ವೇಳೆ ದೊಡ್ಡ ಮಟ್ಟದಲ್ಲಿ ಪ್ರೊಮೋಷನ್ಸ್ ಗಳನ್ನು ಮಾಡಲಾಯಿತು. ಸೆಲೆಬ್ರಿಟಿ ಶೋಗೆ ಶಿವಣ್ಣ ಅವರು ಬಂದು, ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡಿದರು. ಆದರೆ ನಾಯಕಿ ರಚಿತಾ ರಾಮ್ ಅವರ ಬಗ್ಗೆ ಚಿತ್ರತಂಡ ಮಾತನಾಡಿದ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆದವು. ರಚಿತಾ ರಾಮ್ ದುಡ್ಡು ತಗೊಂಡಿದ್ದಾರೆ ಸಿನಿಮಾಗೆ ಡೇಟ್ಸ್ ಕೊಟ್ಟಿಲ್ಲ, ಹೀರೋಯಿನ್ ಆಗಿ ಸಿನಿಮಾ ಪ್ರೊಮೋಷನ್ ಗೆ ಬಂದಿಲ್ಲ ಎಂದು ಸಂಜು ವೆಡ್ಸ್ ಗೀತಾ ತಂಡ ರಚಿತಾ ರಾಮ್ ಅವರ ಮೇಲೆ ಆರೋಪ ಮಾಡಿತ್ತು.
ಇಷ್ಟು ದಿವಸಗಳ ಕಾಲ ಈ ವಿಷಯದ ಬಗ್ಗೆ ಸುಮ್ಮನೆ ಇದ್ದ ರಚಿತಾ ರಾಮ್ ಅವರು ಇದೀಗ ತಮ್ಮ ಮೇಲೆ ಬಂದ ಎಲ್ಲಾ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಶೇರ್ ಮಾಡಿದ ರಚಿತಾ ಅವರು ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಅಭಿಮಾನಿಗಳ ಬಳಿ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ ರಚಿತಾ ರಾಮ್. ಅವರು ಹೇಳಿರುವ ವಿಚಾರ ಏನು ಎಂದರೆ, ಸಂಜು ವೆಡ್ಸ್ ಗೀತಾ 2 ಸಿನಿಮಾ ಮೊದಲ ಬಾರಿ ಜನವರಿಯಲ್ಲಿ ತೆರೆ ಕಂಡಾಗ ಪ್ರೊಮೋಷನ್ ಗಳಲ್ಲಿ ತಾವು ಭಾಗಿಯಾದಾಗ ಚಿತ್ರತಂಡ ತಮ್ಮ ಬಹಳ ಪ್ರೀತಿಯಿಂದ, ಖುಷಿಯಿಂದ ಮಾತನಾಡಿದ್ದರು, ರಚಿತಾ ತುಂಬಾ ಒಳ್ಳೆಯವರು, ಪ್ರೊಮೋಷನ್ ಗಳಿಗೆ ಅವರು ಬಂದಿರೋದು ತುಂಬಾ ಖುಷಿ ಇದೆ ಅಂದಿದ್ರು..
ಆದರೆ ಈಗ ಈ ಥರ ಆರೋಪ ಮಾಡಿದ್ದಾರೆ, ಇದೆಲ್ಲವನ್ನ ಆಗಲೇ ಯಾಕೆ ಹೇಳಲಿಲ್ಲ. ಆಗಲು ಹೇಳಬಹುದಿತ್ತಲ್ಲ ಎಂದಿದ್ದಾರೆ ರಚಿತಾ. ಸಂಜು ವೆಡ್ಸ್ ಗೀತಾ ಶೂಟಿಂಗ್ ವೇಳೆ ತಮ್ಮ ಇನ್ನೊಂದು ಸಿನಿಮಾ ಬಿಡುಗಡೆ ಆಗಬೇಕಿತ್ತು, ಆ ಸಿನಿಮಾ ಪ್ರೊಮೋಷನ್ ಗೆ ಒಂದೇ ಒಂದು ದಿವಸ ಬಿಟ್ಟುಕೊಡಿ ಅಂತ ಎಷ್ಟೇ ಕೇಳಿಕೊಂಡರು ನಾಗ್ ಶೇಖರ್ ಅವರು ಬಿಟ್ಟುಕೊಡಲಿಲ್ಲ, ಆ ಸಿನಿಮಾಗೆ ಇದ್ದಿದ್ದು ಲೇಡಿ ಪ್ರೊಡ್ಯುಸರ್, ಅವರದ್ದು ದುಡ್ಡು ಅಲ್ವಾ..ಈಗ ನನಗೂ ಬೇರೆ ಸಿನಿಮಾ ಕಮಿಟ್ಮೆಂಟ್ ಇದೆ. ಆ ಸಿನಿಮಾ ಡೈರೆಕ್ಟರ್, ಆಗಲ್ಲ ರಚಿತಾ ಅವರೇ ನಮಗೆ ಲೊಕೇಶನ್ ಪ್ರಾಬ್ಲಮ್ ಇದೆ, ಸಿನಿಮಾ ಮಾಡಿ ಮುಗಿಸಲೇಬೇಕು ಅಂತ ಹೇಳ್ತಾರೆ. ಅಷ್ಟೇ ಆಗಿರೋದು.. ನನ್ನ ತಂಡವನ್ನ ನಾನು ಗೌರವಿಸಬೇಕು.. ಎಂದು ಸಿನಿಮಾ ಪ್ರೊಮೋಷನ್ ಗೆ ಬರಲಿಲ್ಲ ಎನ್ನುವ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ರಚಿತಾ ರಾಮ್.

ಇನ್ನು ದುಡ್ಡು ತಗೊಂಡು ಡೇಟ್ಸ್ ಕೊಡಲಿಲ್ಲ ಎನ್ನುವ ವಿಷಯದ ಬಗ್ಗೆ ಕೂಡ ಮಾತನಾಡಿ, ಈ ವಿಷಯದ ಬಗ್ಗೆ ಈಗ ನಾನು ಮಾತನಾಡುವ ಹಾಗಿಲ್ಲ. ಸಾ. ರಾ. ಗೋವಿಂದು ಸರ್ ಈ ವಿಷಯವನ್ನ ಹ್ಯಾಂಡಲ್ ಮಾಡ್ತಿದ್ದಾರೆ. ಚೇಂಬರ್ ಗೆ ಕಂಪ್ಲೇಂಟ್ ಹೋಗಿದೆ, ಸಾ. ರಾ ಗೋವಿಂದು ಸರ್ ನನಗೆ ಹೇಳಿದ್ದಾರೆ, ನಾನು ಹೇಳೋವರೆಗೂ ಈ ವಿಷಯದ ಬಗ್ಗೆ ಎಲ್ಲಿಯೂ ಏನನ್ನು ಮಾತನಾಡಬೇಡ ಅಂತ. ಅವರ ಬಗ್ಗೆ ನನಗೆ ಗೌರವ, ಪ್ರೀತಿ ಎಲ್ಲವೂ ಇದೆ. ಅವರ ಮಾತಿಗೆ ಗೌರವ ಕೊಟ್ಟು, ಈ ವಿಷಯದ ಬಗ್ಗೆ ನಾನು ಏನು ಹೇಳೋಕೆ ಹೋಗೋದಿಲ್ಲ..ಸಮಯ ಬಂದಾಗ ಈ ವಿಷಯದ ಬಗ್ಗೆ ಮಾತಾಡ್ತೀನಿ ಎಂದು ಹೇಳಿದ್ದಾರೆ ರಚಿತಾ. ಈ ವಿಷಯಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಹಾಗೆಯೇ ತಾವು ಕ್ಷಮೆ ಕೇಳೋದಿಲ್ಲ ಎಂದಿದ್ದಾರೆ.
ತಪ್ಪು ಮಾಡಿದ್ದರೆ ಒಂದು ಪುಟ್ಟ ಮಗುವಿನ ಕಾಲಿಗೆ ಬಿದ್ದು ಕ್ಷಮೆ ಕೇಳೋಳು ನಾನು, ತಪ್ಪಿದ್ದರೆ ಕ್ಷಮೆ ಕೇಳೋಕೆ ಯೋಚನೆ ಮಾಡಲ್ಲ. ತಪ್ಪು ಮಾಡಿಲ್ಲ ಅಂದ್ರೆ ಆ ದೇವರೇ ಬಂದು ನನ್ನ ಮುಂದೆ ನಿಂತರೂ ಕ್ಷಮೆ ಕೇಳಲ್ಲ. ಈ ವಿಷಯದಲ್ಲಿ ನಾನು ತಪ್ಪು ಮಾಡಿದ್ದೀನಿ ಅಂತ ನನಗೆ ಅನ್ನಿಸೋದಿಲ್ಲ, ಹಾಗಾಗಿ ನಾನು ಕ್ಷಮೆ ಕೇಳೋದಿಲ್ಲ. ಈ ವಿಷಯವನ್ನು ನಿಮ್ಮೆಲ್ಲರ ಜೊತೆಗೆ ಹಂಚಿಕೊಳ್ಳಬೇಕು ಅನ್ನಿಸ್ತು ಹಾಗಾಗಿ ಈ ವಿಡಿಯೋ ಮಾಡಿದ್ದೀನಿ ಎಂದಿದ್ದಾರೆ ರಚಿತಾ ರಾಮ್. ಒಟ್ಟಿನಲ್ಲಿ ರಚಿತಾ ಅವರು ಎಲ್ಲಾ ವಿಷಯಗಳಿಗೆ ಕೂಡ ಈಗ ಸ್ಪಷ್ಟನೆಯನ್ನು ಕೊಟ್ಟಿದ್ದು, ನಾಗ್ ಶೇಖರ್ ಅವರು, ಶ್ರೀನಗರ್ ಕಿಟ್ಟಿ ಅವರು ಹಾಗೂ ಇಡೀ ತಂಡ ಹೇಗೆ ಪ್ರತಿಕ್ರಿಯೆ ಕೊಡುತ್ತದೆ ಎಂದು ಕಾದು ನೋಡಬೇಕಿದೆ.



