ನಟ ನಟಿಯರ ಬದುಕು ಯಾವಾಗಲೂ ಒಂದೇ ರೀತಿ ಇರೋದಿಲ್ಲ. ಕಷ್ಟಗಳು ಅನ್ನೋದು ಎಲ್ಲರಿಗೂ ಬಂದೆ ಬರುತ್ತದೆ. ಅದೆಲ್ಲವನ್ನು ಮೆಟ್ಟಿ ನಿಂತು ಜೀವನದಲ್ಲಿ ಮುಂದೆ ಬರಬೇಕು. ಅದೇ ರೀತಿ ಬದುಕುತ್ತಿರುವ ಹಲವು ಕಲಾವಿದರು ಇದ್ದಾರೆ. ನಟನೆಯಲ್ಲಿ ಒಳ್ಳೆಯ ಅವಕಾಶ ಸಿಗದೇ ಇದ್ದಾಗ, ತಮ್ಮ ಕಾಲ ಮೇಲೆ ತಾವು ನಿಂತು ಇನ್ನೇನನ್ನೋ ಮಾಡಿ, ಉತ್ತಮವಾದ ಜೀವನ ಸಾಗಿಸುತ್ತಿರುವವರು ಇದ್ದಾರೆ. ಅಂಥ ಒಬ್ಬ ಕಲಾವಿದೆಯ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ. ಇವರು 90ರ ದಶಕದ ಸ್ಟಾರ್ ನಟಿ. ಕನ್ನಡದಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇಂದು ಇವರು ಜೀವನ ನಡೆಸುತ್ತಿರುವುದು ಸೋಪ್ ಮಾರಾಟ ಮಾಡುತ್ತಾ. ಹೌದು, ಅಷ್ಟಕ್ಕೂ ಈ ನಟಿ ಯಾರು ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿದರೆ, ಅದಕ್ಕೆ ಉತ್ತರವನ್ನು ತಿಳಿಸುತ್ತೇವೆ.. ಈಕೆ ಬಹಳ ಸ್ಪೆಷಲ್ ಆದ ಕಲಾವಿದೆ.
ಈ ಕಥೆ ಅಲ್ಲ ನಿಜ ಘಟನೆಗಳನ್ನು ಕೇಳಿದರೆ, ಇವರು ಯಾರಿರಬಹುದು ಎಂದು ನಿಮಗೆ ಅನ್ನಿಸಬಹುದು. ಆಕೆ ಮತ್ಯಾರು ಅಲ್ಲ, ನಟಿ ಐಶ್ವರ್ಯ ಭಾಸ್ಕರನ್. ಇವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ, ಸೂಪರ್ ಹಿಟ್ ನಟಿ, ಇಂದಿಗೂ ಎಲ್ಲರ ಫೇವರೆಟ್ ಆಗಿರುವ ನಟಿ ಲಕ್ಷ್ಮೀ ಅವರ ಮಗಳು. ನಟಿ ಲಕ್ಷ್ಮೀ ಮತ್ತು ಅವರ ಮೊದಲ ಪತಿ ಭಾಸ್ಕರನ್ ಜೋಡಿಯ ಮಗಳು. ಐಶ್ವರ್ಯ ಅವರು ಹುಟ್ಟಿದ ಕೆಲ ವರ್ಷಗಳಲ್ಲಿ ಅಪ್ಪ ಅಮ್ಮ ವಿಚ್ಚೇದನ ಪಡೆದು ಬೇರೆಯಾಗಿದ್ದರು. ಐಶ್ವರ್ಯ ಅವರಿಗೆ ತಂದೆಯೊಡನೆ ಸಮಯ ಕಳೆದ ನೆನಪು ಕೂಡ ಇರಲಿಲ್ಲವಂತೆ. ಅಮ್ಮ ಮತ್ತು ಅಜ್ಜಿ ಇವರನ್ನು ಬೆಳೆಸಿದರು..ಲಕ್ಷ್ಮೀ ಅವರು ಮಗಳನ್ನು ಬಹಳ ಸ್ಟ್ರಿಕ್ಟ್ ಆಗಿ ಬೆಳೆಸಿದ್ದರು. ಮಗಳು ಸಿನಿಮಾ ರಂಗಕ್ಕೆ ಬರುವುದು ಅವರಿಗೆ ಇಷ್ಟವಿರಲಿಲ್ಲ.

ಹಾಗಾಗಿ ಮಗಳು ಸಿನಿಮಾ ನೋಡಬಾರದು ಎಂದು ಸಿನಿಮಾ ನೋಡುವುದಕ್ಕೂ ಬಿಡುತ್ತಿರಲಿಲ್ಲವಂತೆ. ಆದರೆ ಒಂದು ದಿವಸ ಮಗಳನ್ನು ಲಕ್ಷ್ಮೀ ಅವರೇ ಚಿತ್ರರಂಗಕ್ಕೆ ಪರಿಚಯ ಮಾಡಿಸುವ ಸಮಯ ಬಂದಿತ್ತು. ಐಶ್ವರ್ಯ ಅವರು 90ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಇವರು ಮೊದಲು ನಟಿಸಿದ್ದು ಕನ್ನಡದಲ್ಲೇ. ಲಕ್ಷ್ಮೀ ಅವರು ನಟಿಸಿ ನಿರ್ಮಿಸಿ, ಅವರ ಪತಿ ಶಿವಚಂದ್ರನ್ ಅವರು ನಿರ್ದೇಶನ ಮಾಡಿದ ಸಿನಿಮಾದಲ್ಲಿ ಐಶ್ವರ್ಯ ಅವರು ನಾಯಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಹಲವು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಮಲಯಾಳಂ ನಲ್ಲಿ ಕೆಲವು ಸಿನಿಮಾಗಳು, ಹಿಂದಿಯಲ್ಲಿ ಕೂಡ ನಟಿಸಿದ್ದಾರೆ. ಐಶ್ವರ್ಯ ಅವರು ಎಲ್ಲಾ ಭಾಷೆಗಳಲ್ಲಿ ನಟಿಸಿ ಮಿಂಚಿದವರು. ಆದರೆ ಅಮ್ಮನಷ್ಟು ಜನಪ್ರಿಯತೆ ಪಡೆಯಲು ಆಗಲಿಲ್ಲ ಎನ್ನುವುದು ಸತ್ಯ.
ಹೀಗೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇದ್ದಾಗಲೇ ಬೇರೆ ಧರ್ಮದವರನ್ನು ಪ್ರೀತಿಸಿ, ಯಾರಿಗೂ ಗೊತ್ತಾಗದೇ ಮದುವೆಯಾಗಿದ್ದರು. ಮನೆಯಲ್ಲಿ ಗೊತ್ತಾಗಿ, ಎಲ್ಲರಿಂದ ದೂರವಾಗಿ ಪತಿಯೊಡನೆ ಇದ್ದರು. ಇವರಿಗೆ ಮಗಳು ಇದ್ದಾಳೆ, ಆದರೆ ಆ ದಾಂಪತ್ಯ ಜೀವನ ಸರಿ ಹೋಗದೇ, ವಿಚ್ಛೇದನ ಪಡೆದು ಮತ್ತೆ ಚಿತ್ರರಂಗಕ್ಕೆ ಬಂದರು. ಪೋಷಕ ಪಾತ್ರಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೂ ಸಹ, ಹೆಚ್ಚು ದಿನಗಳ ಕಾಲ ಅದು ಮುಂದುವರೆಯಲಿಲ್ಲ. ಇದರಿಂದ ಐಶ್ವರ್ಯ ಅವರು ಆರ್ಥಿಕವಾಗಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರು. ತಾಯಿ ದೊಡ್ಡ ಸ್ಟಾರ್ ನಟಿ ಆಗಿದ್ದರೂ ಸಹ ಐಶ್ವರ್ಯ ಅವರು ತಾಯಿಯ ಬಳಿ ಸಹಾಯ ಪಡೆಯಲಿಲ್ಲ. ಯಾರನ್ನು ಹಣಕ್ಕಾಗಿ ಬೇಡಲಿಲ್ಲ.

ಕೋವಿಡ್ ಸಮಯದಲ್ಲಿ ಇವರಿಗೆ ಬಹಳ ಕಷ್ಟವಾಗಿತ್ತು, ಆ ಸಮಯದಲ್ಲೆಲ್ಲಾ ಇವರು ಸಿನಿಮಾ ಧಾರಾವಾಹಿಗಳಲ್ಲಿ ಅವಕಾಶ ಇಲ್ಲದೇ, ಬೇರೆ ಕೆಲಸವು ಇಲ್ಲದೇ ಕಷ್ಟಪಡುವಾಗ, ಯಾರ ಹತ್ತಿರವೂ ಸಹಾಯ ಕೇಳದೇ, ತಾವೇ ಸ್ವಂತವಾಗಿ ಬೇರೆ ಕೆಲಸ ಶುರು ಮಾಡಿದರು. ಮನೆಯಲ್ಲೇ ಆರ್ಗ್ಯಾನಿಕ್ ಸೋಪ್ ಗಳನ್ನು ತಯಾರಿಸಿ, ಅವುಗಳನ್ನು ಮಾರಾಟ ಮಾಡುವುದಕ್ಕೆ ಶುರು ಮಾಡಿದರು..ಮೊದಲು ಸ್ನೇಹಿತರಿಗೆ ಮಾರಾಟ ಮಾಡುವುದಕ್ಕೆ ಶುರು ಮಾಡಿದರು, ಕೆಲವೊಮ್ಮೆ ತಾವೇ ಸ್ವತಃ ಮನೆಗಳಿಗೆ ಹೋಗಿ ಸೋಪ್ ಮಾರಾಟ ಮಾಡಿದ್ದಾರೆ. ಆಗ ಜನರು ಇವರನ್ನು ನೋಡಿ ಶಾಕ್ ಆಗಿದ್ದರಂತೆ. ನೀವು ಈ ಕೆಲಸ ಮಾಡುತ್ತಿದ್ದೀರಾ ಎಂದು.. ಆದರೆ ಐಶ್ವರ್ಯ ಅವರಿಗೆ ಯಾವುದೇ ಹಿಂಜರಿಕೆ ಅಥವಾ ಇನ್ಯಾವುದೇ ಸಮಸ್ಯೆಗಳು ಇದೆ ಎಂದು ಅನ್ನಿಸಲಿಲ್ಲ. ತಮ್ಮ ಕೆಲಸವನ್ನು ತಾವು ಶ್ರದ್ಧೆಯಿಂದ ಮಾಡಿದರು ಐಶ್ವರ್ಯ ಅವರು. ಇದಷ್ಟೇ ಅಲ್ಲದೇ ಇನ್ನೊಂದು ಕೆಲಸವನ್ನು ಸಹ ಶುರು ಮಾಡಿದರು.
ಐಶ್ವರ್ಯ ಅವರಿಗೆ ಬೇಕಿಂಗ್ ನಲ್ಲಿ ತುಂಬಾ ಆಸಕ್ತಿ ಇತ್ತು. ಬೇಕಿಂಗ್ ಅನ್ನು ಸಹ ಕೆಲಸವಾಗಿ ಶುರು ಮಾಡಿದರು. ತಮ್ಮ ಫ್ರೆಂಡ್ ಸರ್ಕಲ್ ನಲ್ಲಿ ಯಾರದ್ದಾದರು ಬರ್ತ್ ಡೇ ಅಥವಾ ಇನ್ಯಾವುದೇ ವಿಶೇಷ ಸಂದರ್ಭ ಇದ್ದರೆ, ಅವರಿಗೆ ಕೇಕ್ ಬೇಕ್ ಮಾಡುತ್ತಿದ್ದರು. ಇವರು ತಯಾರಿಸುತ್ತಿದ್ದ ಕೇಕ್ ರುಚಿ ಬಹಳ ಚೆನ್ನಾಗಿತ್ತು ಎಂದು, ಹೆಚ್ಚು ಆರ್ಡರ್ ಗಳು ಕೂಡ ಬರುವುದಕ್ಕೆ ಶುರುವಾದವು. ಈ ರೀತಿ ಯಾರ ಮೇಲೆ ಕೂಡ ಡಿಪೆಂಡ್ ಆಗಿರದೇ, ಸಿನಿಮಾವನ್ನು ನಂಬಿಕೊಳ್ಳದೇ, ತಮ್ಮ ಸ್ವಂತ ದುಡಿಮೆ ಶುರು ಮಾಡಿದರು. ಇದನ್ನು ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳಬೇಕು, ಹಾಗೆಯೇ ಅನುಸರಿಸಲೂಬೇಕು. ಇಲ್ಲಿ ಯಾರೂ ಕೂಡ, ದೊಡ್ಡವರಲ್ಲ ಚಿಕ್ಕವರಲ್ಲ, ಯಾವ ಕೆಲಸವೂ ದೊಡ್ಡದಲ್ಲ ಅಥವಾ ಚಿಕ್ಕದಲ್ಲ, ನಾವು ನಮ್ಮ ಮೇಲೆ ನಂಬಿಕೆ ಇಡಬೇಕು. ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವುದನ್ನು ಇವರಿಂದ ಕಲಿಯಬೇಕು.

ಇಷ್ಟೆಲ್ಲಾ ಮಾಡುತ್ತಿರುವ ಇವರು ಧೈರ್ಯವಂತ ಮಹಿಳೆ. ತುಂಬಾ ಚೆನ್ನಾಗಿ ಸಂತೋಷದಿಂದ ಬದುಕುತ್ತಿದ್ದಾರೆ. ಈಗ ಇವರಿಗೆ ಧಾರಾವಾಹಿ ಮತ್ತು ಸಿನಿಮಾ ಅವಕಾಶ ಇದೆ. ತಮಿಳು ಮತ್ತು ಮಲಯಾಳಂ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಆಕ್ಟಿವ್ ಆಗಿದ್ದಾರೆ. ಒಳ್ಳೆಯ ಧಾರಾವಾಹಿಗಳಲ್ಲಿ ನಟಿಸುತ್ತಾರೆ. ಆಗಾಗ ತೆಲುಗು ಸಿನಿಮಾಗಳಲ್ಲಿ ಸಹ ನಟಿಸುತ್ತಾರೆ. ಹೀಗೆ ಐಶ್ವರ್ಯ ಅವರು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಿಕೊಂಡು, ಇತ್ತೀಚೆಗೆ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಕಷ್ಟಪಟ್ಟು ಜೀವಿಸುವ ಇವರಂಥ ಶ್ರಮಜೀವಿಗಳಿಗೆ ಒಳ್ಳೆಯದಾಗಲಿ.



