ಸಿನಿಮಾ ರಂಗದಲ್ಲಿ ಒಂದಾದರ ಮೇಲೊಂದರಂತೆ ಸುದ್ದಿಗಳು ಆಗ್ತಾನೇ ಇವೆ. ರಚಿತಾ ರಾಮ್ ವಿರುದ್ಧ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು ಸಂಜು ವೆಡ್ಸ್ ಗೀತಾ2 ಸಿನಿಮಾ ತಂಡ. ಈಗ ಮತ್ತೊಬ್ಬ ನಿರ್ದೇಶಕನ ವಿರುದ್ಧ ಯುವ ನಟರೊಬ್ಬರು ದೂರು ನೀಡೋದಕ್ಕೆ ಮುಂದಾಗ್ತಾ ಇದ್ದಾರೆ. ಈ ಪ್ರಕರಣದಲ್ಲಿ ಈಗ ಸುದೀಪ್ ಹೆಸರನ್ನು ಕೂಡ ಎಳೆದು ತರಲಾಗಿದೆ.

ರನ್ನ, ವಿಕ್ಟರಿ, ಅಧ್ಯಕ್ಷ, ಪೊಗರು ಹೀಗೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಂತಹ ನಿರ್ದೇಶಕ ನಂದ ಕಿಶೋರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ನಟ ಶಬರೀಶ್ ಇಂತಹದೊಂದು ಆರೋಪ ಮಾಡಿದ್ದಾರೆ. ನಂದ ಕಿಶೋರ್ ಅವರು ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತಾವು ಫಿಲಂ ಚೇಂಬರ್ಗೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಾರೆ.
ನಿರ್ದೇಶಕ ನಂದ ಕಿಶೋರ್ ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಪರಿಚಯ ಗೆಳೆತನವಾಗಿ, ನಂದ ಕಿಶೋರ್, ಶರಬೀಶ್ ಅವರನ್ನು ಸಿಸಿಎಲ್ನಲ್ಲಿ ಆಡಿಸುವುದಾಗಿ ಭರವಸೆ ನೀಡಿ, ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ನಾನು ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ ಎಂದು ಶಬರೀಶ್ ಹೇಳಿಕೆ ಕೂಡ ನೀಡಿದ್ದಾರೆ. 9 ವರ್ಷಗಳಿಂದ ಹಂತ ಹಂತವಾಗಿ ಹಣ. ಪಡೆದುಕೊಂಡಿದ್ದಾರಂತೆ.
ಹಣ ಪಡೆದ ನಿರ್ದೇಶಕ ಈ ವರೆಗೆ ತಮಗೆ ಹಣ ಮರಳಿಸಿಲ್ಲ ಎಂದು ಶಬರೀಶ್ ಆರೋಪಿಸಿದ್ದಾರೆ. ಹಣ ಮರಳಿಸುವಂತೆ ಕೇಳಿದರೆ ಬೆದರಿಕೆ ಹಾಕುತ್ತಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸಿದ್ದಾರೆ. ನಾನು 200 ಗ್ರಾಂ ಚಿನ್ನ ಅಡವಿಟ್ಟು ಅವರಿಗೆ ಹಣ ಕೊಟ್ಟಿದ್ದೆ, ಆ ಚಿನ್ನದ ಲೋನ್ ಕಟ್ಟಿ ಎಂದೆ ಅದನ್ನು ಕಟ್ಟಲಿಲ್ಲ. ನಾನು ಬಡ್ಡಿ ಕಟ್ಟಿದೆ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ಆ ಚಿನ್ನವನ್ನು ಹರಾಜು ಹಾಕಲಾಯ್ತು. ನನ್ನ ಬಳಿ ಎಲ್ಲದಕ್ಕೂ ದಾಖಲೆ ಇದೆ ಎಂದಿದ್ದಾರೆ.

ಇತ್ತ ಪೊಗರು ಸಿನಿಮಾನಲ್ಲಿ ಅವಕಾಶ ಕೊಡ್ತೀನಿ ಎಂದು ಅವಕಾಶ ಕೊಡಲಿಲ್ಲ. ರಾಣಾ ಸಿನಿಮಾದಲ್ಲಿ ಅವಕಾಶ ಕೊಡ್ತೀನಿ ಅಂದ್ರು ಅದನ್ನೂ ಕೊಡಲಿಲ್ಲ. ಈಗ ಹಣ ಕೇಳಿದರೆ ಏನು ಮಾಡ್ಕೊತೀಯೋ ಮಾಡ್ಕೊ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಶಬರೀಶ್. ಇನ್ನು ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗ್ತಿದ್ದೆ, ಈಗ ನಾನು ರಾಮಧೂತ ಸಿನಿಮಾ ಮಾಡಿದ್ದೇನೆ, ಶೂಟಿಂಗ್ ಪೂರ್ತಿ ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ, ನನ್ನ ಹಣ ವಾಪಸ್ ಕೊಡಿ ಅಂತ ಕೇಳಿದರೆ ಏನು ಮಾಡ್ಕೊತೀಯಾ ಮಾಡ್ಕೊ ಅಂದಿದ್ದಾರೆ.

ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೊದು ಗೊತ್ತಾಗ್ತಿಲ್ಲ, ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ನನ್ನ ಅವರ ಬಳಿ ಹೋಗಲು ಬಿಟ್ಟಿಲ್ಲ. ನನ್ನ ಹಣ ನನಗೆ ಕೊಡದೇ ಇದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೀನಿ. ಈ ವಿಷಯವನ್ನು ಶಿವಣ್ಣ, ಸುದೀಪ್ ಸರ್ ಗಮನಕ್ಕೆ ತರುತ್ತೇನೆ. ಫಿಲ್ಮ್ ಚೇಂಬರ್ಗೆ ದೂರು ಕೊಡ್ತೀನಿ ಅಂತಲೂ ಶಬರೀಶ್ ಹೇಳಿದ್ದಾರೆ.
ಸದ್ಯ ಈ ವಿಚಾರವಾಗಿ ನಂದ ಕಿಶೋರ್ ಏನು ಹೇಳುತ್ತಾರೆ ಅನ್ನೋದರ ಜೊತೆಗೆ ಈಗ ಸುದೀಪ್ ಹೆಸರೂ ಕೂಡ ತಳುಕು ಹಾಕಿಕೊಂಡಿದೆ. ಹೀಗಾಗಿ ಇದನ್ನ ಫಿಲ್ಮ್ ಚೇಂಬರ್ ಹೇಗೆ ನಿಭಾಯಿಸುತ್ತೆ ಅಥವಾ ಸುದೀಪ್ ಈ ಬಗ್ಗೆ ಏನು ಹೇಳ್ತಾರೆ ಕಾದು ನೋಡಬೇಕು.



