ಈಗಿನ ಕಾಲದಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಕನ್ನಡ ಬಳಸಿ, ಕನ್ನಡ ಮಾತಾಡಿ ಅಂತ ಎಲ್ಲರನ್ನು ಗೋಗರೆದು, ಪ್ರತಿಭಟನೆ ಮಾಡುವ ಹಂತಕ್ಕೆ ಹೋಗಿದೆ. ಕರ್ನಾಟಕದಲ್ಲಿ ನಮ್ಮವರಿಗಿಂತ ಪರಭಾಷೆಯವರ ಹಾವಳಿ ಹೆಚ್ಚಾಗಿದೆ, ಜೊತೆಗೆ ಕನ್ನಡದವರೆ ಕನ್ನಡ ಮಾತಾಡೋಕೆ ಹಿಂಜರಿಕೆ ಮಾಡುತ್ತಾರೆ ಎಂದು ಹೇಳಿದರೂ ತಪ್ಪಲ್ಲ. ಕಲಾವಿದರು ಕೂಡ ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋದ ನಂತರ ಕನ್ನಡವನ್ನೇ ಮರೆಯುತ್ತಾರೆ.
ಅಂಥದ್ರಲ್ಲಿ ನಟಿ ನಿತ್ಯಾ ಮೆನನ್ ಅವರಿಗೆ ಕನ್ನಡದಲ್ಲಿ ಒಳ್ಳೆಯ ಅವಕಾಶಗಳು ಸಿಗದೇ ಇದ್ದರೂ ಸಹ ತಾನು ಅಪ್ಪಟ ಕನ್ನಡತಿ, ಓದೋಕೆ ಬರೆಯೋಕೆ ಬರೋ ಒಂದೇ ಭಾಷೆ ಕನ್ನಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿತ್ಯಾ ಮೆನನ್ ಅವರು 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಇವರ ನಟನೆಗೆ ನ್ಯಾಶನಲ್ ಅವಾರ್ಡ್ ಕೂಡ ಬಂದಿದೆ.


ನಿತ್ಯಾ ಅವರು ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲೇ, ಆದರೆ ಇವರ ತಾಯಿ ಭಾಷೆ ಮಲಯಾಳಂ. ಹಾಗಿದ್ದರೂ ಸಹ ನಿತ್ಯಾ ಮೆನನ್ ಅವರಿಗೆ ಕನ್ನಡದ ಬಗ್ಗೆ ಅಪಾರವಾದ ಪ್ರೀತಿ ಹಾಗೂ ಗೌರವವಿದೆ. ಕನ್ನಡ ಚಿತ್ರರಂಗದಲ್ಲೇ ನಟನೆ ಶುರು ಮಾಡಿದರೂ ಸಹ ನಿತ್ಯಾ ಮೆನನ್ ಅವರಿಗೆ ಇಲ್ಲಿ ಹೇಳಿಕೊಳ್ಳುವಂಥ ಒಳ್ಳೆಯ ಅವಕಾಶಗಳೇನು ಸಿಗಲಿಲ್ಲ. ಇವರಿಗೆ ಹೆಚ್ಚು ಸಕ್ಸಸ್ ಸಿಕ್ಕಿದ್ದು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ.
ಹಾಗಿದ್ದರೂ ಸಹ ನಿತ್ಯಾ ಮೆನನ್ ಅವರಿಗೆ ಕನ್ನಡ ಭಾಷೆಯ ಮೇಲೆ ಇರುವ ಅಭಿಮಾನ ಕಡಿಮೆ ಇಲ್ಲ. ಇವರ ತಂದೆ ತಾಯಿ ಈಗಲೂ ಇರುವುದು ಬೆಂಗಳೂರಿನಲ್ಲೇ, ಮನೆಯಲ್ಲಿ ಇವರೆಲ್ಲಾ ಮಾತಾಡೋದು ಕನ್ನಡ ಭಾಷೆಯನ್ನೇ. ನಿತ್ಯಾ ಮೆನನ್ ಅವರು ಸಹ ಎಲ್ಲೇ ಹೋದ್ರು ಕೊನೆಗೆ ಬೆಂಗಳೂರಿನ ಮನೆಗೆ ಬರೋದು. ಒಂದು ಸಂದರ್ಶನದಲ್ಲಿ ಮನದಾಳದ ಮಾತನ್ನು ಹಂಚಿಕೊಂಡಿದ್ದ ನಿತ್ಯಾ ಮೆನನ್ ಅವರು, ನನ್ನನ್ನ ನೋಡಿದರೆ ಮಲಯಾಳಂ ಭಾಷೆಯಲ್ಲಿ ಮಾತಾಡ್ತಾರೆ..
ಮಲಯಾಳಂ ನಲ್ಲಿ ಡೈಲಾಗ್ ಬರೆದು ಓದುತ್ತೀರಾ ಅಂತ ಕೇಳ್ತಾರೆ, ಆದರೆ ನಾನು ಕನ್ನಡದಲ್ಲಿ ಬರೆದು ಓದುತ್ತೇನೆ, ನನಗೆ ಸರಿಯಾಗಿ ಬರೆಯೋಕೆ, ಓದೋಕೆ ಬರೋ ಒಂದೇ ಭಾಷೆ ಕನ್ನಡ ಎಂದಿದ್ದಾರೆ ನಿತ್ಯಾ ಮೆನನ್. ಭಾಷೆಯ ಬಗ್ಗೆ ಇವರಿಗೆ ಇರುವ ಅಭಿಮಾನವನ್ನ ನಾವೆಲ್ಲರೂ ಮೆಚ್ಚಲೇಬೇಕು. ನಿತ್ಯಾ ಮೆನನ್ ಅವರು ಇನ್ನು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು.



