ರಾಕಿಂಗ್ ಸ್ಟಾರ್ ಯಶ್ , ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ರಿಲೀಸ್ ಯಾವಾಗ ಎಂಬ ಬಗ್ಗೆ ಅಭಿಮಾನಿಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಹನೆ ಹೊರಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ನಿರ್ಮಾಪಕರು ಸಿನಿಮಾ ಪೋಸ್ಟರ್ ಅನ್ನು ಅದರ ಅಧಿಕೃತ ಬಿಡುಗಡೆಯ ದಿನಾಂಕಗಳೊಂದಿಗೆ ಹಂಚಿಕೊಂಡಿದ್ದಾರೆ. ಬಹು ನಿರೀಕ್ಷಿತ ಚಿತ್ರಗಳಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ’ ಕೂಡ ಒಂದು. ಈ ಸಿನಿಮಾ ಘೋಷಣೆಯಾದಾಗಿನಿಂದ ಅಭಿಮಾನಿಗಳು ಬಿಡುಗಡೆ ದಿನಾಂಕದ ಘೋಷಣೆಗಾಗಿ ಕಾಯುತ್ತಿದ್ದಾರೆ.
ಸದ್ಯ ಈ ಸಿನಿಮಾದ ವಿವರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ನಿರ್ಮಾಪಕರು, ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದೆ. ಆದರೆ ಚಿತ್ರದ ತಾರಾಗಣವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಮಾಹಿತಿ ನೀಡಿದ ತಯಾರಕರು:
ನಿರ್ಮಾಪಕ ನಮಿತ್ ಮಲ್ಹೋತ್ರಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಈ ಕುರಿತು ಮಾಹಿತಿ ನೀಡಿರುವ ಅವರು 2026 ರ ದೀಪಾವಳಿಯಂದು ಭಾಗ 1 ಮತ್ತು 2027 ರ ದೀಪಾವಳಿಯಂದು ಭಾಗ 2 ಬರಲಿದೆ ಎಂದು ತಿಳಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಮತ್ತು ಭಗವಾನ್ ರಾಮನ ಬಿಲ್ಲನ್ನು ಸಹ ಪೋಸ್ಟ್ನಲ್ಲಿ ನೋಡಬಹುದು.
ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀತಾ ಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಯಶ್ ರಾವಣನ ಪಾತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಾಮನ ಜೊತೆಗೆ ಪರಶುರಾಮನ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅರುಣ್ ಗೋವಿಲ್ ಮತ್ತು ಲಾರಾ ದತ್ತಾ ರಾಜಮನೆತನದ ಉಡುಪನ್ನು ಧರಿಸಿರುವ ಫೋಟೋ ಇತ್ತಿಚಿನ ದಿನಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ಇವರು ದಶರಥ ಮತ್ತು ರಾಣಿ ಕೈಕೇಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಚಿತ್ರದ ಎರಡೂ ಭಾಗಗಳನ್ನು ನಿತೀಶ್ ತಿವಾರಿ ನಿರ್ದೇಶಿಸಲಿದ್ದಾರೆ. ಈ ವರ್ಷದ ಆರಂಭದಲ್ಲಿಯೇ, ಸಿನಿಮಾ ಸೆಟ್ಗಳಿಂದ ಅನೇಕ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದು, ಇದು ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿತ್ತು. ರಾಮನಾಗಿ ರಣಬೀರ್ ಕಪೂರ್ ಅವರ ಲುಕ್ ಈಗಾಗಲೇ ಜನರ ಹೃದಯವನ್ನು ಗೆದ್ದಿದೆ. ಸಿನಿಮಾ 800 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಜೆಟ್ನಲ್ಲಿ ತಯಾರಾಗುತ್ತಿದೆ.