ಅದು ಕಿರುತೆರೆ ಅಥವಾ ಹಿರಿತೆರೆಯೇ ಆಗಿರಲಿ… ಅನೇಕ ಜನರು ಎರಡೂ ಸ್ಥಳಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಮೊದಲು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿ, ನಂತರ ಸಿನಿಮಾದತ್ತ ಮುಖ ಮಾಡಿದವರೂ ಇದ್ದಾರೆ. ಕೆಲವರು ಯಶಸ್ಸಿನ ಮೆಟ್ಟಿಲು ಏರುವಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವರು ಸ್ವಲ್ಪ ಸಮಯದ ನಂತರ ಉದ್ಯಮದಿಂದಲೇ ಕಣ್ಮರೆಯಾಗುತ್ತಾರೆ. ಇಂದು ನಾವು ನಿಮಗೆ ಹೇಳುತ್ತಿರುವುದು ಕಿರುತೆರೆಯಲ್ಲಿ ಮಿಂಚಿದರೂ ಚಿತ್ರರಂಗಕ್ಕೆ ಕಾಲಿಟ್ಟ ತಕ್ಷಣ ಸೋತ ಓರ್ವ ನಟನ ಬಗ್ಗೆ. ಈ ನಟ ಯಾರು ಗೊತ್ತಾ…?. ನಾವು ಇಲ್ಲಿ ಹೇಳಲು ಹೊರಟಿರುವ ಆ ನಟ ಬೇರೆ ಯಾರೂ ಅಲ್ಲ, ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಕರಣ್ ಸಿಂಗ್ ಗ್ರೋವರ್. ಕರಣ್ ಸಿಂಗ್ ಗ್ರೋವರ್ ತಮ್ಮ ವೃತ್ತಿಪರ ಜೀವನದಲ್ಲಿ ಹೆಚ್ಚು ಹೆಸರು ಮಾಡದಿದ್ದರೂ ತಮ್ಮ ವೈಯಕ್ತಿಕ ಜೀವನದಿಂದಾಗಿ ಹೆಚ್ಚು ಬೆಳಕಿಗೆ ಬಂದರು.

ಇದಾದ ನಂತರ ಹಿಂತಿರುಗಿ ನೋಡಲೇ ಇಲ್ಲ…
2004 ರಲ್ಲಿ, ಕರಣ್ ಸಿಂಗ್ ಗ್ರೋವರ್ ಫೇಮಸ್ ಮಾಡೆಲ್. ಇದೇ ಸಮಯದಲ್ಲಿ ಕರಣ್ MTV ಇಂಡಿಯಾದ ಬಾಲಾಜಿ ಟೆಲಿಫಿಲ್ಮ್ಸ್ನ ಯೂತ್ ಶೋ ‘ಕಿತ್ನಿ ಮಸ್ತ್ ಹೈ ಜಿಂದಗಿ’ ಮೂಲಕ ಟಿವಿ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ, 2007 ರಲ್ಲಿ, ಕರಣ್ ಸಿಂಗ್ ‘ದಿಲ್ ಮಿಲ್ ಗಯೆ’ ನಲ್ಲಿ ಕಾಣಿಸಿಕೊಂಡರು. ಆ ನಂತರ ಕರಣ್ ಸಿಂಗ್ ಹಿಂತಿರುಗಿ ನೋಡಲೇ ಇಲ್ಲ. ಅಂದರೆ ನಂಬರ್ ಒನ್ ಸ್ಥಾನದಲ್ಲಿದ್ದರು ಎಂದು ಹೇಳಲಾಗಿದೆ. ಕರಣ್ ಈ ಶೋ ಮಾಡುವಾಗ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡರು.
ಮನೆ ಮನೆ ಮಾತಾದ ಕರಣ್
ಕರಣ್ ಸಿಂಗ್ ಕಿರುತೆರೆಗೆ ಪಾದಾರ್ಪಣೆ ಮಾಡಿದಾಗಿನಿಂದ ಕಠಿಣ ಪರಿಶ್ರಮ ಪಡುತ್ತಿದ್ದರು. ಅವರಿಗೆ ಅದೃಷ್ಟ 2012 ರಲ್ಲಿ ಕೈ ಹಿಡಿಯಿತು. ಹೌದು, 2012 ರಲ್ಲಿ, ಕರಣ್ ಸಿಂಗ್ ಅತ್ಯಂತ ಜನಪ್ರಿಯ ಟಿವಿ ಶೋ ‘ಕುಬೂಲ್ ಹೈ’ ನಲ್ಲಿ ಪ್ರಮುಖ ಪಾತ್ರವನ್ನು ಪಡೆದರು. ಇದರೊಂದಿಗೆ ಅವರು ಜನಪ್ರಿಯತೆಯ ಮೆಟ್ಟಿಲು ಏರಲು ಪ್ರಾರಂಭಿಸಿದರು. ಈ ಕಾರ್ಯಕ್ರಮವು ಭಾರತೀಯ ದೂರದರ್ಶನದ ನಂಬರ್ 2 ಶೋ ಆಗಿ ಹೊರಹೊಮ್ಮಿತು. ಕರಣ್ ಸಿಂಗ್ ಗ್ರೋವರ್ ಮನೆ ಮನೆ ಮಾತಾದರು.
ಬಾಲಿವುಡ್ಗೆ ಪ್ರವೇಶ
ಇದರ ನಂತರ, ಕರಣ್ ಅವರ ಅದೃಷ್ಟ ಹೇಗೆ ಖುಲಾಯಿಸಿತು ಎಂದರೆ ಅವರು ಕೆಲವೇ ಸಮಯದಲ್ಲಿ ಸ್ಟಾರ್ ಆದರು ಮತ್ತು ಕಿರುತೆರೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಕರಣ್ ‘ಕುಬೂಲ್ ಹೈ’ಗೆ ವಿದಾಯ ಹೇಳಿದರು. ಕರಣ್ ಕಾರ್ಯಕ್ರಮದಿಂದ ಹೊರಬಂದ ತಕ್ಷಣ, ಕಾರ್ಯಕ್ರಮದ ರೇಟಿಂಗ್ಗಳು ತೀವ್ರವಾಗಿ ಕುಸಿದವು. ಇದಾದ ನಂತರ ಸಿನಿಮಾಗಳತ್ತ ಮುಖ ಮಾಡಿದರೂ ಸಿನಿಮಾದಲ್ಲಿ ಸಾಧಿಸಲು ಬಯಸಿದ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ.
ಮೂರು ಬಾರಿ ಮದುವೆ
ಕರಣ್ ಸಿಂಗ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ಮೂರು ಬಾರಿ ಮದುವೆಯಾಗಿದ್ದಾರೆ. 2008 ರಲ್ಲಿ, ಕರಣ್ ನಟಿ ಶ್ರದ್ಧಾ ನಿಗಮ್ ಅವರನ್ನು ವಿವಾಹವಾದರು. ಆದರೆ, 10 ತಿಂಗಳ ನಂತರ ಇಬ್ಬರೂ ಬೇರಾದರು. ಇದರ ನಂತರ, ಅವರು 2012 ರಲ್ಲಿ ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾದರು. ಆದರೆ ಇಬ್ಬರೂ 2014 ರಲ್ಲಿ ದೂರವಾದರು. ಇದರ ನಂತರ, 2016 ರಲ್ಲಿ, ಅವರು ಬಿಪಾಶಾ ಬಸು ಅವರನ್ನು ವಿವಾಹವಾಗಿದ್ದು, ಓರ್ವ ಮಗಳಿಗೆ ತಂದೆಯಾಗಿದ್ದಾರೆ.



