ನಟ ವಸಿಷ್ಠ ಸಿಂಹ ಚಂದನವನಕ್ಕೆ ಚಿರಪರಿಚಿತ! ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಪಾತ್ರ ವಹಿಸಿರುವ ಇವರು ತಮ್ಮ ರಗಡ್ ನಟನೆಗೆ ಬಹಳಾ ಫೇಮಸ್ಸು!
ಯುವರತ್ನ, ರುದ್ರತಾಂಡವ, ಆ ಕರಾಳ ರಾತ್ರಿ, ಹೆಡ್ ಬುಷ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಾಲಚಕ್ರ ಯದಾ ಯದಾ ಹಿ, ಮಾಯಾಬಜಾರ್ ಹೀಗೆ ಅಲ್ಲ ಹಲವಾರು ಅತ್ಯುನ್ನತ ಸಿನಿಮಾಗಳನ್ನು ನೀಡಿರುವ ನಟ ವಸಿಷ್ಠ ಸಿಂಹ ಈವರೆಗೂ 49 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯಕ್ಕೆ ವಸಿಷ್ಠ ಸಿಂಹ ಅವರು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವುದು ಕಂಡುಬಂದಿದೆ. ಹೌದು, ಸದ್ಯಕ್ಕೆ ವಸಿಷ್ಠ ಸಿಂಹ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರಂತೆ.

ಈ ಬಗ್ಗೆ ನಟ ವಸಿಷ್ಠ ಸಿಂಹ ಅವರೇ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ” ಸಿನಿಮಾಗೆ ಯಾವುದೇ ರೀತಿಯ ಕಟ್ಟುಪಾಡುಗಳಿಲ್ಲ ಅದರ ಭಾಷೆ ಒಂದೇ. ಹಾಗಾಗಿ ಪರಭಾಷೆಯ ಇಂಡಸ್ಟ್ರಿ ಯಿಂದ ಅವಕಾಶ ಬಂದರೆ, ಪಾತ್ರಗಳು ಒಳ್ಳೆಯದಿದ್ದರೆ ಅದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ನಟರಾದ ನಾವು ಸದಾ ವಿಭಿನ್ನ ಪಾತ್ರಗಳಿಗೆ ಹಾತೊರೆಯುತ್ತಿರುತ್ತೇವೆ. ತೆಲುಗು ಇಂಡಸ್ಟ್ರಿಯಲ್ಲಿ ನನಗೆ ನಾಲ್ಕು ವಿಭಿನ್ನ ಪಾತ್ರಗಳು ಅವಕಾಶ ಸಿಕ್ಕಿದೆ ಹಾಗಾಗಿ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.
“ಬಾಹುಬಲಿ ಹಾಗೂ ಕೆಜಿಎಫ್ ನಂತಹ ಅತ್ಯುನ್ನತ ಸಿನಿಮಾಗಳನ್ನು ಕೊಟ್ಟಿರುವ ಸಿನಿಮಾ ಇಂಡಸ್ಟ್ರಿಯಿಂದ ಇಂದು ಜನರು ಬಹಳಷ್ಟು ವಿಭಿನ್ನತೆಯನ್ನು ನಿರೀಕ್ಷಿಸುತ್ತಿದ್ದಾರೆ. ಸದಾ ಒಂದೇ ರೀತಿಯ ಪಾತ್ರಗಳನ್ನು ಮಾಡಿ ನಮ್ಮನ್ನು ಒಂದು ಚೌಕಟ್ಟಿನೊಳಗೆ ಹಾಕುವ ಬದಲು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿ ನಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವ ಅವಶ್ಯಕತೆ ಇದೆ. ನಟನೆ ಅಷ್ಟೇ ಅಲ್ಲದೆ ಕಥೆಗಳಲ್ಲೂ ವಿಭಿನ್ನ ಕಥೆಗಳ ಅವಶ್ಯಕತೆ ತುಂಬಾನೇ ಇದೆ. ನಮ್ಮ ನೆಲದ ಒಂದು ವೈಶಿಷ್ಟ್ಯತೆ ಎಂದರೆ ನಾವೆಲ್ಲರೂ ಒಂದೇ ರೀತಿಯ ಪೌರಾಣಿಕ ಕಥೆಗಳನ್ನು ಕೇಳಿ ಬೆಳೆದವರು. ಹಾಗಾಗಿ ಇಂದು ಪೌರಾಣಿಕ ಕಥೆಗಳಿಗೆ ಆಧುನಿಕ ಜೀವನ ಶೈಲಿಯನ್ನು ಹೊಂದಿಸಿಕೊಂಡು ಬಹಳಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿದೆ. ಇದು ವಿಭಿನ್ನತೆಯನಷ್ಟೇ ಅಲ್ಲದೆ ಸಾರ್ವಕಾಲಿಕವಾಗಿ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ ಎಂದು ಪ್ರಸ್ತುತ ಸಿನಿಮಾ ಟ್ರೆಂಡ್ ಬಗ್ಗೆಯೂ ಮಾತನಾಡಿದ್ದಾರೆ ನಟ ವಸಿಷ್ಟ ಸಿಂಹ.

ಸದ್ಯ ತೆಲುಗಿನ ತಮ್ಮ ಬರ್ಬಾರಿಕ್ ಸಿನಿಮಾದ ಪಾತ್ರದ ಬಗ್ಗೆಯೂ ಒಂದಷ್ಟು ಮಾಹಿತಿ ನೀಡಿರುವ ನಟ ವಸಿಷ್ಠ ಸಿಂಹ ” ಈ ಸಿನಿಮಾದಲ್ಲಿ, ನನ್ನದು ಭೀಮನ ಮೊಮ್ಮಗನ ಪಾತ್ರ. ಅಂದರೆ ಘಟೋತ್ಕಜನ ಮಗನ ಪಾತ್ರ. ಈ ರೀತಿ ಮಹಾಭಾರತದ ಪೌರಾಣಿಕ ಕಥೆಯಿಂದ ಹಿಡಿದು ಆಧುನಿಕ ಜೀವನದ ವರೆಗೂ ಈ ಪಾತ್ರಕ್ಕೆ ಲಿಂಕ್ ಇದೆ ಎಂದಿದ್ದಾರೆ.
“ಇಂದು ವಿಭಿನ್ನ ಕಥೆಗಳನ್ನು ಪಾತ್ರಗಳನ್ನು ಹುಡುಕುವುದರ ಜೊತೆಗೆ, ಒಳ್ಳೊಳ್ಳೆ ಕ್ರಿಯಾಶೀಲ ವ್ಯಕ್ತಿಗಳೊಂದಿಗೆನ ಒಡನಾಟವು ಅಷ್ಟೇ ಮುಖ್ಯವಾಗಿದೆ. ಆಗಲೇ ನಮಗೂ ವಿಭಿನ್ನ ರೀತಿಯ ಯೋಚನೆಗಳು ಯೋಜನೆಗಳು ಕೈ ಸೇರುತ್ತವೆ. ಕನ್ನಡ ಇಂಡಸ್ಟ್ರಿಯವನಾದ ನನ್ನನ್ನು ಬೇರೊಂದು ಇಂಡಸ್ಟ್ರಿ ಗುರುತಿಸಿ ತನ್ನಂತ ಕರೆದಿದೆ ಎಂಬ ವಿಚಾರವಾಗಿ ನನಗೆ ಬಹಳ ಖುಷಿ ಹೆಮ್ಮೆ ಇದೆ. ಇನ್ನು ಹೆಚ್ಚು ಹೆಚ್ಚು ಒಳ್ಳೊಳ್ಳೆ ಪಾತ್ರಗಳ ಮೂಲಕ ಜನರಿಗೆ ವೈವಿಧ್ಯಮಯ ಪಾತ್ರಗಳನ್ನು ನೀಡುವುದರ ಜೊತೆಗೆ ನನ್ನ ನಟನಾ ಸಾಮರ್ಥ್ಯವನ್ನು ತಿಳಿಯುವ ಹಂಬಲದಲ್ಲಿದ್ದೇನೆ ಎಂದು ಮುಂದಿನ ಪ್ರಾಜೆಕ್ಟ್ ಗಳ ಮೇಲಿನ ತಮ್ಮ ನಿರೀಕ್ಷೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ ನಟ ವಸಿಷ್ಠ ಸಿಂಹ.



