ಡಾ. ರಾಜ್ ಕುಮಾರ್ ಅವರು ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುಟುಂಬ ಬಹಳ ಅನ್ಯೋನ್ಯತೆ ಇಂದ ಇದ್ದ ಕುಟುಂಬ ಆಗಿದೆ. ರವಿಚಂದ್ರನ್ ಅವರ ತಂದೆ ಕನ್ನಡದ ಧೀಮಂತ ನಿರ್ಮಾಪಕರಲ್ಲಿ ಒಬ್ಬರು. ವೀರಾಸ್ವಾಮಿ ಅವರು ನಿರ್ಮಾಣ ಮಾಡಿದ ಹಲವು ಸಿನಿಮಾಗಳಲ್ಲಿ ಡಾ. ರಾಜ್ ಕುಮಾರ್ ಅವರು ನಾಯಕರಾಗಿ ಅಭಿನಯಿಸಿದ್ದಾರೆ. ನಾ ನಿನ್ನ ಮರೆಯಲಾರೆ ಅಂಥ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಸಿನಿಮಾವನ್ನ ವೀರಾಸ್ವಾಮಿ ಅವರೇ ನಿರ್ಮಾಣ ಮಾಡಿದ್ದು, ಇನ್ನು ವಿಷ್ಣುವರ್ಧನ್ ಅವರನ್ನು ಮತ್ತು ಅಂಬರೀಶ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ಕೂಡ ವೀರಾಸ್ವಾಮಿ ಅವರೇ. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ನಾಗರಹಾವು ಸಿನಿಮಾವನ್ನು ವೀರಾಸ್ವಾಮಿ ಅವರೇ ನಿರ್ಮಾಣ ಮಾಡಿದವರು. ಹೀಗೆ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು.

ಇವರು ನಿರ್ಮಾಣ ಮಾಡಿರುವ ಸಿನಿಮಾಗಳು, ಇವರು ಕಟ್ಟಿ ಬೆಳೆಸಿದ ಈಶ್ವರಿ ಸಂಸ್ಥೆ ಇವತ್ತಿಗೂ ಕೂಡ ಕನ್ನಡಿಗರ ನೆನಪಿನಲ್ಲಿ, ಮನಸ್ಸಿನಲ್ಲಿ ಇದೆ. ಇವರ ಕುಟುಂಬ ಮತ್ತು ಡಾ. ರಾಜ್ ಕುಮಾರ್ ಅವರ ಕುಟುಂಬಕ್ಕೆ ಹೆಚ್ಚು ಅನ್ಯೋನ್ಯತೆ ಇದೆ. ಹೌದು, ಡಾ. ರಾಜ್ ಕುಮಾರ್ ಅವರು ವೀರಾಸ್ವಾಮಿ ಅವರನ್ನು ಅನ್ನದಾತರು ಎಂದೇ ಕರೆಯುತ್ತಿದ್ದರು. ಇನ್ನು ವೀರಾಸ್ವಾಮಿ ಅವರ ಮಗ ರವಿಚಂದ್ರನ್ ಅವರು ಮತ್ತು ಡಾ. ರಾಜ್ ಕುಮಾರ್ ಅವರ ಕುಟುಂಬ ಎಷ್ಟು ಕ್ಲೋಸ್ ಆಗಿದ್ದರು ಎನ್ನುವ ವಿಷಯ ಸಹ ಗೊತ್ತೇ ಇದೆ. ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳ ಮುಹೂರ್ತಕ್ಕೆ ರವಿಚಂದ್ರನ್ ಅವರು ಬಂದು ಮೊದಲ ಶಾಟ್ ಗೆ ಕ್ಲಾಪ್ ಮಾಡುತ್ತಿದ್ದರು, ರವಿಚಂದ್ರನ್ ಅವರು ಇವರ ಫ್ಯಾಮಿಲಿಗೆ ಲಕ್ಕಿ ಎನ್ನುವ ನಂಬಿಕೆ ಇದೆ. ಪುನೀತ್ ಅವರಿಗೂ ರವಿಚಂದ್ರನ್ ಅವರನ್ನು ಕಂಡರೆ ಅಷ್ಟೇ ಪ್ರೀತಿ ಮತ್ತು ಗೌರವ.

ಇಷ್ಟು ಅನ್ಯೋನ್ಯವಾಗಿರುವ ಈ ಕುಟುಂಬಗಳು ಸಂತೋಷದ ಸಮಯದಲ್ಲಿ ಮಾತ್ರ ಜೊತೆಯಾಗಿದ್ದಿಲ್ಲ, ಕಷ್ಟದ ಕಾಲದಲ್ಲಿ ಕೂಡ ಸಾಥ್ ನೀಡಿದ್ದಾರೆ. ಒಮ್ಮೆ ರವಿಚಂದ್ರನ್ ಅವರು ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾಗ, ಅವರಿಗೆ ಸಪೋರ್ಟ್ ಮಾಡಿ, ಆ ಕಷ್ಟದಿಂದ ಪಾರು ಮಾಡಿದ್ದು ಅಣ್ಣಾವ್ರು. ದಶಕಗಳ ಹಿಂದೆ ನಡೆದಿರುವ ಘಟನೆ ಇದು. ಈ ಬಗ್ಗೆ ಖುದ್ದು ರವಿಚಂದ್ರನ್ ಅವರೇ ಒಂದು ಕಾರ್ಯಕ್ರಮದಲ್ಲಿ ಮಾತನಾಡಿ, ಅಣ್ಣಾವ್ರನ್ನು ಹಾಡಿ ಹೊಗಳಿದ್ದರು. ರವಿಚಂದ್ರನ್ ಅವರು ಅಷ್ಟಕ್ಕೂ ಹೇಳಿದ್ದೇನು ಎಂದು ನೋಡುವುದಾದರೆ.. ಒಂದಷ್ಟು ವರ್ಷಗಳ ಹಿಂದೆ ರವಿಚಂದ್ರನ್ ಅವರು ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು, ರವಿಚಂದ್ರನ್ ಕನ್ನಡ ವಿರೋಧಿ ಎಂದು ಅವರ ಮನೆಯ ಬಳಿ ಜನರು ಸೇರಿ ತೊಂದರೆ ಕೊಡುವುದಕ್ಕೆ ಶುರು ಮಾಡಿದ್ದರು.
ಮನೆ ಮೇಲೆ ಕಲ್ಲು ಹೊಡೆಯುವುದು, ಹೀಗೆಲ್ಲಾ ಮಾಡಿದ್ದರು. ಆದರೆ ರವಿಚಂದ್ರನ್ ಅವರು ಆ ರೀತಿಯ ಯಾವುದೇ ಮಾತುಗಳನ್ನು ಆಡಿರಲಿಲ್ಲ. ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ರವಿಚಂದ್ರನ್ ಅವರಿಗೆ ಬಹಳ ಗೌರವ ಮತ್ತು ಪ್ರೀತಿ ಇದೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು ಯಾರು ಎನ್ನುವ ವಿಷಯ ಈಗಲೂ ಕೂಡ ಗೊತ್ತಿಲ್ಲ ಎನ್ನುತ್ತಾರೆ ಕ್ರೇಜಿಸ್ಟಾರ್. ಈ ಸಮಸ್ಯೆ ಇಂದ ಮನೆಯವರೆಗೂ ಜನರು ಬಂದು ತೊಂದರೆ ಕೊಡುತ್ತಿದ್ದ ಕಾರಣ ರವಿಚಂದ್ರನ್ ಅವರ ತಂದೆಯವರಿಗೆ ಬಹಳ ಆತಂಕ ಆಗಿತ್ತಂತೆ, ತಮ್ಮ ಮಗನಿಗೆ ಏನಾದರೂ ಮಾಡಿಬಿಡುತ್ತಾರೆ ಎನ್ನುವ ಭಯ ಕೂಡ ಇತ್ತಂತೆ. ಆಗ ಏನು ಮಾಡುವುದು, ಮಗನನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ವೀರಾಸ್ವಾಮಿ ಅವರು ಯೋಚಿಸುವುದಕ್ಕಿಂತ ಮೊದಲೇ ಅವರ ಸಹಾಯಕ್ಕೆ ಬಂದಿದ್ದು ಅಣ್ಣಾವ್ರು. ಹೌದು, ಡಾ. ರಾಜ್ ಕುಮಾರ್ ಅವರು ರವಿಚಂದ್ರನ್ ಅವರ ಪರವಾಗಿ ನಿಂತಿದ್ದಾರೆ.

ರವಿಚಂದ್ರನ್ ಅವರು ಆ ರೀತಿಯ ತಪ್ಪು ಮಾಡಿರುವುದಕ್ಕೆ ಸಾಧ್ಯವಿಲ್ಲ, ಇದೆಲ್ಲ ಸುಳ್ಳು ಸುದ್ದಿಗಳು ಇರಬಹುದು. ರವಿಚಂದ್ರನ್ ಅವರನ್ನು ನಾನು ಬಹಳ ವರ್ಷಗಳಿಂದ ನೋಡಿದ್ದೇನೆ, ಆ ಹುಡುಗ ಆ ರೀತಿ ಅಲ್ಲ ಎಂದು ಡಾ. ರಾಜ್ ಕುಮಾರ್ ಅವರು ಬಹಿರಂಗವಾಗಿ ಒಂದು ಪತ್ರ ಬರೆದು, ಪತ್ರಿಕೆಗಳಲ್ಲಿ ಆ ಪತ್ರವನ್ನು ಪ್ರಕಟಿಸಿದ್ದರು. ಡಾ. ರಾಜ್ ಕುಮಾರ್ ಅವರು ಈ ರೀತಿ ಮಾಡಿದ ನಂತರವೇ ಈ ವಿವಾದಕ್ಕೆ ಫುಲ್ ಸ್ಟಾಪ್ ಬಿದ್ದಿದ್ದು. ಸಹಾಯ ಮಾಡಿ ಎಂದು ಕೇಳುವ ಮೊದಲೇ ಡಾ. ರಾಜ್ ಕುಮಾರ್ ಅವರು ತಮಗೆ ಸಹಾಯ ಮಾಡಿದರು ಎಂದು ರವಿಚಂದ್ರನ್ ಅವರು ವೇದಿಕೆಯೊಂದರಲ್ಲಿ ಈ ಘಟನೆ ಬಗ್ಗೆ ಸ್ಮರಿಸಿದರು. ಅಂದು ಹಾಗೆಲ್ಲಾ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು ಯಾರು, ಆ ರೀತಿ ಮಾಡಿದ್ದು ಯಾಕೆ ಎಂದು ಇವತ್ತಿಗು ಗೊತ್ತಿಲ್ಲ. ಆ ಒಂದು ವಿಚಾರಕ್ಕೆ ಇವತ್ತಿಗೂ ನೋವಿದೆ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.

ಇನ್ನು ರವಿಚಂದ್ರನ್ ಅವರು ಕನ್ನಡದ ಬಗ್ಗೆ ಇರುವ ಪ್ರೀತಿ ಬಗ್ಗೆ ಕೂಡ ಹೇಳಿದ್ದಾರೆ. ಡಾ. ರಾಜ್ ಕುಮಾರ್ ಅವರಿಗೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಇರುವ ಹಾಗೆ, ರವಿಚಂದ್ರನ್ ಅವರ ಕೆರಿಯರ್ ನ ಶುರುವಿನಲ್ಲೇ ಅವರಿಗೆ ಸಿಕ್ಕ ಕನ್ನಡದ ಬಗೆಗಿನ ಹಾಡು ಕರುನಾಡ ತಾಯಿ ಸದಾ ಚಿನ್ಮಯಿ.. ನಂತರ ಮತ್ತೊಂದು ಹಾಡು ಎಂದರೆ ಸಿಪಾಯಿ ಸಿನಿಮಾದ ರುಕ್ಕಮ್ಮ ಹಾಡು. ಇವೆರಡು ಕನ್ನಡಕ್ಕೆ ಕರ್ನಾಟಕಕ್ಕೆ ಸಮರ್ಪಿತವಾಗಿರುವ ಹಾಡುಗಳು. ಈ ಹಾಡುಗಳನ್ನು ರವಿಚಂದ್ರನ್ ಅವರಿಗೆ ನೀಡಿದ್ದು ಹಂಸಲೇಖ ಅವರು. ತಾವು ಸಂಗೀತ ನಿರ್ದೇಶನ ಮಾಡಿದ ನಂತರ, ಕನ್ನಡದ ಬಗ್ಗೆ ತಮ್ಮ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಇರಬೇಕು ಎಂದು ಬಯಸಿದ ರವಿಚಂದ್ರನ್ ಅವರು, ಮಲ್ಲ ಸಿನಿಮಾದಲ್ಲಿ ಒಂದು ವಿಶೇಷ ಹಾಡನ್ನು ಕಂಪೋಸ್ ಮಾಡಿದರು. ಅದು ಕರುನಾಡೇ ಕೈ ಚಾಚಿದೆ ನೋಡೇ ಹಾಡು..ಇದು ಕೂಡ ಎಲ್ಲರ ಮೆಚ್ಚಿನ ಹಾಡುಗಳಲ್ಲಿ ಒಂದು..
ಹೀಗೆ ರವಿಚಂದ್ರನ್ ಅವರಿಗೆ ಅಪಾರವಾದ ಕನ್ನಡ ಪ್ರೇಮ ಇದ್ದರೂ ಕೂಡ ಒಂದು ಕಾಲದಲ್ಲಿ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿಸಿ, ತೊಂದರೆ ನೀಡಲಾಗಿತ್ತು. ಆದರೆ ಇವತ್ತಿಗು ರವಿಚಂದ್ರನ್ ಅವರು ಸಿನಿಮಾಗಳನ್ನು ಮಾಡುತ್ತಿರುವುದು ಕನ್ನಡದಲ್ಲಿ ಮಾತ್ರ. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿಲ್ಲ, ಅಲ್ಲಿಗೆ ಹೋಗಿಲ್ಲ. ಕನ್ನಡಕ್ಕೆ ಹೆಚ್ಚು ಮನ್ನಣೆ, ಆದ್ಯತೆ ಕೊಟ್ಟು, ಕನ್ನಡಕ್ಕಾಗಿಯೇ ಕೆಲಸ ಮಾಡುತ್ತಿರುವ ಕಲಾವಿದ ರವಿಚಂದ್ರನ್ ಅವರು. ಪ್ರಸ್ತುತ ಇವರು ಸಿನಿಮಾ ಜೊತೆಗೆ ರಿಯಾಲಿಟಿ ಶೋಗಳಿಗೆ ಕೂಡ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.



