ಸಾಲ ತಗಳೋದು ಈಜಿ.. ಆದ್ರೆ ಕಟ್ಟೋದೇ ಕಷ್ಟ.. ಹಾಗಂತ ಸಾಲ ಮಾಡದೇ ಇರೋದಕ್ಕೂ ಆಗೋದಿಲ್ಲ.. ಅದ್ರಲ್ಲೂ ಈಗ ಸಾಲ ಸಿಗೋದು ಸುಲಭವಾಗಿಬಿಟ್ಟಿದೆ.. ಮೊಬೈಲ್ನಲ್ಲೇ ಆಪ್ಗಳ ಮೂಲಕವೇ ಫೈನಾನ್ಸ್ ಕಂಪನಿಗಳಿಂದ ಸಾಲ ಪಡ್ಕೋಬಹುದು.. ಹೀಗೆ ಸಾಲ ಸಿಗೋದು ಸುಲಭವಾದಾಗ ಜನ ಪ್ರತಿಯೊಂದಕ್ಕೂ ಸಾಲ ಮಾಡುತ್ತಿದ್ದಾರೆ.. ಮತ್ತೆ ವಾಪಸ್ ಕಟ್ಟಲಾಗದೇ ಒದ್ದಾಡುತ್ತಿದ್ದಾರೆ.. ಸಾಲ ಏನೋ ಸುಲಭವಾಗಿ ಸಿಗುತ್ತೆ.. ಆದ್ರೆ ಇಎಂಐ ಸಮಯಕ್ಕೆ ಸರಿಯಾಗಿ ಕಟ್ಟದಿದ್ದರೆ ವಸೂಲಾತಿ ಏಜೆಂಟುಗಳು ನಿಮ್ಮ ಬೆನ್ನು ಬೀಳುತ್ತಾರೆ.. ಮನೆ ಬಳಿಗೇ ಹುಡುಕಿಕೊಂಡು ಬರುತ್ತಾರೆ.. ಎಲ್ಲರ ಮುಂದೆ ಮಾನ ಮರ್ಯಾದೆ ಕಳೆಯುತ್ತಾರೆ.. ಆದ್ರೆ ಈ ತರಾ ಸಾಲ ವಸೂಲಿ ಮಾಡೋದಕ್ಕೆ ಅವಕಾಶ ಇದೆಯಾ..?, ಸಾಲ ವಸೂಲಿ ಹೇಗೆ ಮಾಡಬೇಕು ಅಂತ ನಮ್ಮ ಕಾನೂನು ಹೇಳುತ್ತೆ..? ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳು ಏನು ಹೇಳುತ್ತವೆ..? ಸಾಲದ ಕಂತು ಕಟ್ಟೋಕೆ ಆಗದಿದ್ದಾಗ ಯಾರಾದರೂ ಬಂದು ನಮಗೆ ಕಿರಕುಳ ಕೊಟ್ಟರೆ ನಾವು ಏನು ಮಾಡಬೇಕು..? ಕಾನೂನು ನಮಗೆ ಹೇಗೆ ರಕ್ಷಣೆ ಕೊಡುತ್ತದೆ..? ಈ ಬಗ್ಗೆ ನಾವು ವಿವರವಾಗಿ ತಿಳಿದುಕೊಳ್ಳೋಣ..
ನಾವು ಸಾಲ ತೆಗೆದುಕೊಂಡ ಮೇಲೆ ಅದನ್ನು ಸಮಯಕ್ಕೆ ಸರಿಯಾಗಿ ತೀರಿಸಬೇಕು ನಿಜ.. ಆದ್ರೆ, ಒಮ್ಮೊಮ್ಮೆ ಕಟ್ಟೋದಕ್ಕೆ ಆಗದೇ ಇರಬಹುದು.. ಆಗಂತ ಮನೆ ಅಥವಾ ಕಚೇರಿ ಬಳಿ ಬಂದು ಕಿರುಕುಳ ನೀಡೋದು ಎಷ್ಟು ಸರಿಯಾಗುತ್ತೆ ಅಲ್ಲವೇ..? ಇದರಿಂದ ನಿಮ್ಮ ಮಾನ ಮರ್ಯಾದೆ ಹೋಗುತ್ತೆ.. ಹೀಗಾಗಿಯೇ ಸಾಲ ಯಾರಿಗೆ ಹೇಗೆ ಕೊಡಬೇಕು ಎಂದು ರಿಸರ್ವ್ ಬ್ಯಾಂಕ್ ಕೆಲವೊಂದು ರೂಲ್ಸ್ ಮಾಡಿದೆ.. ಇದರ ಜೊತೆಗೆ ಸಾಲ ವಸೂಲಾತಿಗೂ ಒಂದಷ್ಟು ಮಾರ್ಗಸೂಚಿಗಳನ್ನು ನೀಡಿದೆ.. ಅದರ ಪ್ರಕಾರವೇ ಸಾಲ ವಸೂಲಾತಿ ಮಾಡಬೇಕಾಗುತ್ತದೆ.. ಅದನ್ನು ಮೀರಿದರೆ ಸಾಲ ವಸೂಲಾತಿ ಏಜೆಂಟರ ವಿರುದ್ಧ ಕಾನೂನು ಕ್ರಮ ಕೂಡಾ ಜರುಗಿಸಬಹುದು.. ಹಾಗಾದರೆ ಸಾಲ ವಸೂಲಾತಿ ಬಗ್ಗೆ ಆರ್ಬಿಐ ನೀಡಿರುವ ಮಾರ್ಗಸೂಚಿಗಳು ಏನು ಅನ್ನೋದನ್ನು ನಾವಿಲ್ಲಿ ನೋಡೋಣ..
ಸಾಲ ವಸೂಲಾತಿ ಮಾಡುವವರು ಸಾಲ ಪಡೆದವರನ್ನು ಭೇಟಿ ಮಾಡೋದಕ್ಕೆ, ಬಾಕಿ ಹಣವನ್ನು ವಸೂಲಿ ಮಾಡೋದಕ್ಕೆ ಅವಕಾಶ ಇದೆ.. ಆದ್ರೆ ಅದಕ್ಕೆ ಆರ್ಬಿಐ ಒಂದಷ್ಟು ಮಿತಿಗಳನ್ನು ಹೇರಿದೆ.. ಸಾಲ ವಸೂಲಾತಿಗಾರರು ಸಾಲ ಪಾವತಿಸದವರನ್ನು ಭೇಟಿಯಾಗಿ ಹಣ ವಸೂಲಿ ಮಾಡಬಹುದು.. ಆದ್ರೆ ಅದಕ್ಕೆ ಸಮಯ ನಿಗದಿ ಮಾಡಲಾಗಿದೆ.. ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಾಲಗಾರರನ್ನು ಏಜೆಂಟರು ಭೇಟಿ ಮಾಡಿ, ಸಾಲ ವಸೂಲಿ ಬಗ್ಗೆ ಮಾತನಾಡಲು ಅವಕಾಶ ಇದೆ.. ಸಾಲಗಾರರು ಒಪ್ಪಿದರೆ ಮಾತ್ರ ಬೇರೆ ಸಮಯದಲ್ಲೂ ಭೇಟಿಯಾಗಬಹುದು.. ಇನ್ನು ಸಾಲಗಾರರನ್ನು ಭೇಟಿಯಾದಾಗ ಏಜೆಂಟರು ಸಾಲಗಾರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು.. ಅವರ ಜೊತೆ ಅನುಚಿತವಾಗಿ ನಡೆದುಕೊಳ್ಳುವುದು, ಕೆಟ್ಟ ಭಾಷೆ ಬಳಸುವುದು, ಕಟ್ಟಲೇಬೇಕು ಎಂದು ಹೆಚ್ಚಿನ ಒತ್ತಡ ಹೇರುವುದು ಮಾಡಬಾರದು.. ಬಲವಂತವಾಗಿ ಸಾಲ ವಸೂಲಿ ಮಾಡೋದಕ್ಕೆ ಯಾರಿಗೂ ಅಧಿಕಾರವಿಲ್ಲ.. ಅದಕ್ಕೆ ಆರ್ಬಿಐ ಅವಕಾಶವನ್ನೂ ನೀಡುವುದಿಲ್ಲ.. ಬೆದರಿಕೆ ಹಾಕುವುದು, ಬೈಯ್ಯುವುದು, ಇತರರ ಮುಂದೆ ಅವಮಾನಿಸುವುದು ಮಾಡಿದರೆ ಅದು ಅಪರಾಧವಾಗುತ್ತದೆ..

ಇನ್ನು ಸಾಲ ವಸೂಲಾತಿ ಏಜೆಂಟರು ಎಲ್ಲರ ಎದುರಲ್ಲಿ ಸಾಲ ಪಡೆದಾತನ ಮೇಲೆ ಒತ್ತಡ ಹೇರುವಂತಿಲ್ಲ.. ಎಷ್ಟು ಸಾಲ ಪಡೆದಿದ್ದಾನೆ..? ಎಷ್ಟು ಕಟ್ಟಬೇಕು..? ಮುಂತಾದ ಮಾಹಿತಿಗಳನ್ನು ಇತರರಿಗೆ ಹೇಳುವಂತಿಲ್ಲ.. ಸಾರ್ವಜನಿಕರ ಮುಂದೆ ಸಾಲಗಾರನಿಗೆ ಅವಮಾನ ಮಾಡುವಂತಿಲ್ಲ. ಹೀಗಂತ ರಿಸರ್ವ್ ಬ್ಯಾಂಕ್ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.. ಇನ್ನು ಸಾಲಗಾರ ಕೆಲಸ ಮಾಡುವ ಸ್ಥಳಕ್ಕೆ ಸಾಲ ವಸೂಲಾತಿ ಮಾಡುವವರು ಬರುವುದಕ್ಕೆ ಅವಕಾಶವಿದೆ.. ಆದ್ರೆ ಅದಕ್ಕೆ ಒಂದಷ್ಟು ಮಿತಿಗಳಿವೆ.. ಸಾಲ ಪಡೆದಾತ ಯಾವಾಗ ಫೋನ್ ರಿಸೀವ್ ಮಾಡುವುದಿಲ್ಲವೋ, ಇ-ಮೇಲ್ ಸೇರಿದಂತೆ ಇತರೆ ಯಾವುದರ ಮೂಲಕವೂ ಸಂಪರ್ಕಕ್ಕೆ ಸಿಗುವುದಿಲ್ಲವೋ ಆಗ ಸಾಲಗಾರ ಕೆಲಸ ಮಾಡುವ ಸ್ಥಳಕ್ಕೆ ಹೋಗಬಹುದು.. ಆದ್ರೆ ಅಲ್ಲಿಯೂ ಸಾಲಗಾರನನ್ನು ಅವಮಾನಿಸುವಂತಿಲ್ಲ.. ಆತನೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು.. ನಮ್ಮ ಸಂವಿಧಾನದಲ್ಲಿ ಸಾಲಗಾರರಿಗೆ ಹಲವು ಹಕ್ಕುಗಳಿವೆ.. ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನ ಘನತೆಯಿಂದ ಬದುಕುವ ಹಕ್ಕು ನೀಡಿದೆ.. ಹೀಗಾಗಿ ಯಾರಾದರೂ ಸಾಲ ಮರುಪಾವತಿ ಮಾಡಲು ತಡವಾದರೆ ಬೆದರಿಸಿ ವಸೂಲಿ ಮಾಡುವುದು ಅಥವಾ ಕಿರುಕುಳ ನೀಡಿ ವಸೂಲಿಗೆ ಮುಂದಾಗುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ.. ಇನ್ನು ಸಾಲದ ಬಗ್ಗೆ ಗೌಪ್ಯತೆ ಕಾಪಾಡಬೇಕಾಗುತ್ತದೆ.. ಸಾಲದ ವಿವರಗಳನ್ನು ಬಹಿರಂಗ ಮಾಡುವುದು, ಈ ಮೂಲಕ ಅವಮಾನಿಸುವುದು ಮಾಡಿದರೆ ಕಾನೂನಿನ ಪ್ರಕಾರ ತಪ್ಪಾಗುತ್ತದೆ..
ಒಂದು ವೇಳೆ ಕಾನೂನು ಮೀರಿ ಸಾಲ ವಸೂಲಾತಿ ಏಜೆಂಟುಗಳು ಸಾಲಗಾರರಿಗೆ ಕಿರುಕುಳ ನೀಡಿದರೆ ಸಾಲ ನೀಡಿದ ಬ್ಯಾಂಕ್ಗೆ ಲಿಖಿತವಾಗಿ ದೂರು ಕೊಡೋದಕ್ಕೆ ಅವಕಾಶವಿದೆ.. ಅಷ್ಟೇ ಅಲ್ಲ, ರಿಸರ್ವ್ ಗ್ರಾಹಕರ ನೆರವಿಗಾಗಿಯೇ ಒಂಬುಡ್ಸ್ಮನ್ಗಳನ್ನು ನೇಮಕ ಮಾಡಿದೆ.. ಬ್ಯಾಂಕ್ಗೆ ದೂರು ನೀಡಿದರೂ ಯಾವುದೇ ಕ್ರಮ ಆಗದೇ ಹೋದಾಗ ಆರ್ಬಿಐ ನೇಮಿಸಿರುವ ಬ್ಯಾಂಕಿಂಗ್ ಒಂಬುಡ್ಸ್ಮನ್ಗೆ ದೂರು ಕೊಡಲು ಸಾಲಗಾರನಿಗೆ ಅವಕಾಶವಿದೆ.. ಆರ್ಬಿಐ ವೆಬ್ಸೈಟ್ ಮೂಲಕವೇ ಒಂಬುಡ್ಸ್ಮನ್ಗೆ ದೂರು ಸಲ್ಲಿಕೆ ಮಾಡಬಹುದು.. ಒಂಬುಡ್ಸ್ಮನ್ ನಿಮ್ಮ ನೆರವಿಗೆ ಧಾವಿಸಲಿದ್ದಾರೆ..
ಇನ್ನು ಸಾಲದ ಕಂತು ಸರಿಯಾಗಿ ಕಟ್ಟದಿದ್ದರೆ ಕೆಲ ಖಾಸಗಿ ಫೈನಾನ್ಸ್ಗಳವರು ರೌಡಿಗಳನ್ನು ವಸೂಲಾತಿಗೆ ಬಿಡುತ್ತಾರೆ.. ಅವರು ಮನೆ ಅಥವಾ ಕೆಲಸ ಮಾಡುವ ಸ್ಥಳಕ್ಕೆ ಬಂದು ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿವೆ.. ಹಾಗೇನಾದರೂ ಆದಾಗ ಮೊದಲಿಗೆ ವಸೂಲಾತಿಗೆ ಬಂದ ವ್ಯಕ್ತಿಯಿಂದ ಗುರುತಿನ ಚೀಟಿಯನ್ನು ಕೇಳಬೇಕು.. ಆತ ಬ್ಯಾಂಕ್ನ ಅಧಿಕೃತ ಏಜೆಂಟ್ ಆಗಿದ್ದರೆ ಮಾತ್ರ ಆತನೊಂದಿಗೆ ಚರ್ಚೆ ಮಾಡಬೇಕು.. ಆತನ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದಿದ್ದರೆ ಆತನ ವಿರುದ್ಧ ಕೇಸ್ ದಾಖಲಿಸಬಹುದು.. ನೀವಿದ್ದ ಸ್ಥಳಕ್ಕೆ ಬಂದು ಕಿರುಕುಳ ನೀಡುತ್ತಿದ್ದರೆ ಪೊಲೀಸರನ್ನು ಕರೆಸಿ ಅವರಿಗೆ ಒಪ್ಪಿಸಬಹುದು.. ಕರೆ ಮಾಡಿ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದರೆ, ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಅವುಗಳನ್ನು ರೆಕಾರ್ಡ್ ಮಾಡಿಕೊಂಡು ದೂರು ನೀಡಿದರೆ ಖಂಡಿತ ನ್ಯಾಯ ಸಿಗುತ್ತದೆ.. ಹೀಗಾಗಿ ಸಾಲ ಪಡೆದು ಅನಿವಾರ್ಯ ಕಾರಣಗಳಿಂದ ಪಾವತಿ ಮಾಡೋದು ತಡವಾದರೆ ಯಾವುದೇ ಭಯ ಬೀಳಬೇಕಾದ ಅವಶ್ಯಕತೆ ಇಲ್ಲ.. ಕಾನೂನು ಮೀರಿ ವಸೂಲಿ ಮಾಡಲು ಯಾರಾದರೂ ಬಂದರೆ ಕಾನೂನು ಏನು ಹೇಳುತ್ತೆ ಅನ್ನೋದನ್ನ ಅವರಿಗೆ ಮನವರಿಕೆ ಮಾಡಿಕೊಡಿ, ಕಾನೂನಿನ ಪ್ರಕಾರ ನಡೆಯಿರಿ.. ಆಗ ಕಾನೂನು ನಿಮ್ಮ ಜೊತೆಗಿರುತ್ತದೆ.. ಆದ್ರೆ ಕಾನೂನಿನ ನೆರವು ನಮಗಿದೆ ಎಂದು ಕೈಯಲ್ಲಿ ಹಣ ಇದ್ದರೂ ಸಾಲ ಪಾವತಿ ಮಾಡದೇ ಕೂರಬೇಡಿ.. ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಿದರೆ ಮಾತ್ರ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುತ್ತದೆ.. ಸರಿಯಾಗಿ ಸಾಲ ಮರುಪಾವತಿ ಮಾಡದೇ ಇದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ.. ಹಾಗೇನಾದರೂ ಮುಂದೆ ನಿಮ್ಮ ಸಾಲವೇ ಸಿಗದಂತಾಗುತ್ತದೆ.. ಹೀಗಾಗಿ ಸಾಲಗಾರರು ಕೂಡಾ ಎಚ್ಚರಿಕೆಯಿಂದ ವರ್ತಿಸುವುದು ಒಳ್ಳೆಯದು..



