ವಿಚ್ಛೇದನಗಳಾದಾಗ ಮಹಿಳೆಯರು ವಿಚ್ಛೇದಿತ ಪತಿಯಿಂದ ಜೀವನಾಂಶ ಕೇಳುತ್ತಾರೆ.. ಜೀವನಾಂಶ ಪಡೆಯೋದಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವೂ ಇದೆ.. ಹಾಗಾದ್ರೆ, ಈ ಜೀವನಾಂಶವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ..?. ಇದಕ್ಕೇನಾದರೂ ಸೂಕ್ತವಾದ ಮಾನದಂಡಗಳು ಇವೆಯಾ..?. ಈ ಬಗ್ಗೆ ಜನಕ್ಕೆ ಕುತೂಹಲ ಇದೆ.. ಹೀಗಾಗಿ ಈ ಬಗ್ಗೆ ತಿಳಿಯೋ ಪ್ರಯತ್ನ ಮಾಡೋಣ ಬನ್ನಿ..
ಭಾರತದಲ್ಲಿ ವಿಚ್ಛೇದಿತರು ಜೀವನಾಂಶ ಪಡೆಯೋದಕ್ಕೆ ಸಾಧ್ಯವಿದೆ.. ಆದ್ರೆ ಇದನ್ನು ಲೆಕ್ಕ ಹಾಕೋಕೆ ಒಂದು ಸ್ಥಿರವಾದಂತಹ ಮಾರ್ಗಸೂಚಿ ಇಲ್ಲ.. ವಿಚಾರಣೆ ನಡೆಸುವ ನ್ಯಾಯಾಧೀಶರೇ ಜೀವನಾಂಶ ನೀಡಬೇಕೇ, ಬೇಡವೇ ಎಂದು ನಿರ್ಧರಿಸುತ್ತಾರೆ.. ಜೀವನಾಂಶ ನೀಡಬೇಕು ಎಂದಾದರೆ ಎಷ್ಟು ನೀಡಬೇಕು ಎಂಬುದನ್ನು ಕೂಡಾ ನ್ಯಾಯಾಧೀಶರೇ ತೀರ್ಮಾನ ತೆಗೆದುಕೊಳ್ಳುತ್ತಾರೆ.. ವಿಚ್ಛೇದನಕ್ಕೊಳಗಾದ ದಂಪತಿಗಳ ಆರ್ಥಿಕ ಪರಿಸ್ಥಿತಿ, ಇಬ್ಬರ ಆದಾಯ ಎಷ್ಟಿದೆ..?, ಮದುವೆಗೆ ಆದ ಖರ್ಚೆಷ್ಟು..?, ನೀಡಿದ ಕೊಡುಗೆಗಳು ಏನೇನು..? ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ಎಷ್ಟು ಖರ್ಚಾಗುತ್ತದೆ..? ಎಂಬುದರ ಆಧಾರದ ಮೇಲೆ ಜೀವನಾಂಶ ಲೆಕ್ಕ ಹಾಕಲಾಗುತ್ತದೆ.. ವಿಚ್ಛೇದ ಪಡೆದುಕೊಳ್ಳುತ್ತಿರುವ ಇಬ್ಬರ ಆರ್ಥಿಕ ಪರಿಸ್ಥಿತಿಯನ್ನು ಇಲ್ಲಿ ನೋಡಲಾಗುತ್ತದೆ.. ಪುರುಷನ ಸಂಪಾದನೆ ಎಷ್ಟಿದೆ..? ಮಹಿಳೆಯ ಸಂಪಾದನೆ ಎಷ್ಟಿದೆ ಎಂದು ಲೆಕ್ಕ ಹಾಕಲಾಗುತ್ತದೆ.. ಒಟ್ಟಿಗೆ ಇದ್ದಾಗ ಜೀವನದ ಪಟ್ಟ ಹೇಗಿತ್ತು ಎಂಬುದನ್ನು ನೋಡುತ್ತಾರೆ.. ಅನಂತರವೇ ಜೀವನಾಂಶ ಎಷ್ಟು ನೀಡಬೇಕು ಎಂದು ನಿರ್ಧಾರ ಮಾಡುತ್ತಾರೆ..

ಉದಾಹರಣೆಗೆ ಹೇಳುವುದಾದರೆ ಒಬ್ಬ ಮಹಿಳೆ ಚೆನ್ನಾಗಿ ಓದಿರುತ್ತಾಳೆ.. ಆದ್ರೆ ಮದುವೆಯಾದ ಮೇಲೆ ಗಂಡನ ಮನೆಯವರು ಶ್ರೀಮಂತರಾಗಿದ್ದರಿಂದ ಆಕೆಯನ್ನು ಕೆಲಸಕ್ಕೆ ಕಳುಹಿಸಿರುವುದಿಲ್ಲ.. ಕೆಲಸ ಮಾಡಿ ಸ್ವಂತವಾಗಿ ದುಡಿಯುವ ಸಾಮರ್ಥ್ಯವಿದ್ದರೂ ಆಕೆ, ಗಂಡನ ಮನೆಯವರ ಆದಾಯವನ್ನೇ ನಂಬಿ ಬದುಕಿರುತ್ತಾಳೆ.. ಆಕೆಗೆ ಮಕ್ಕಳೂ ಆಗಿರುತ್ತಾರೆ.. ವೈಭವದ ಜೀವನದ ನಡುವೆ ಗಂಡ-ಹೆಂಡತಿ ನಡುವೆ ವಿರಸ ಏರ್ಪಡುತ್ತದೆ.. ಇಬ್ಬರೂ ಬೇರೆಯಾಗುವ ನಿರ್ಧಾರ ಮಾಡುತ್ತಾರೆ.. ಇಂತಹ ಸಂದರ್ಭದಲ್ಲಿ ಮಹಿಳೆ ವಿದ್ಯಾವಂತೆಯಾಗಿದ್ದಳೂ ಗಂಡನ ಮನೆಯವರಿಗಾಗಿ ಸ್ವತಂತ್ರ ಆದಾಯವನ್ನು ತ್ಯಾಗ ಮಾಡಿರುತ್ತಾಳೆ.. ಗಂಡನ ಕುಟುಂಬ ಹಾಗೂ ಮಕ್ಕಳಿಗಾಗಿಯೇ ತನ್ನ ಜೀವನವನ್ನು ತ್ಯಾಗ ಮಾಡಿರುತ್ತಾಳೆ.. ಹೀಗಾಗಿ, ಗಂಡನಿಂದ ಬೇರೆಯಾದಾಗ ಆಕೆ ಜೀವನ ಮಾಡೋದಕ್ಕೆ ಜೀವನಾಂಶ ಬೇಕೇ ಬೇಕಾಗುತ್ತದೆ.. ಜೊತೆಗೆ ಮಕ್ಕಳನ್ನೂ ಬೆಳೆಸುವ ಹೊಣೆ ಆಕೆಯ ಮೇಲೆ ಬೀಳುತ್ತದೆ.. ಗಂಡ ಮನೆಯಲ್ಲಿನ ಜೀವನ ಶೈಲಿಯನ್ನೇ ಆಕೆ ಮಕ್ಕಳಿಗಾಗಿ ಕಾಪಾಡಿಕೊಂಡು ಬರಬೇಕಾಗುತ್ತದೆ.. ಹೀಗಾಗಿ ಕೋರ್ಟ್ ಶ್ರೀಮಂತ ಗಂಡನ ಪಾವತಿಸುವ ಸಾಮರ್ಥ್ಯವನ್ನು ಪರಿಗಣಿಸಿ ಕೋರ್ಟ್ ಹೆಚ್ಚಿನ ಜೀವನಾಂಶವನ್ನು ಆಕೆಗೆ ಕೊಡಿಸುತ್ತದೆ.. ಈ ಮೂಲಕ ಆ ಮಹಿಳೆ ಹಾಗೂ ಮಕ್ಕಳು ತೊಂದರೆ ಅನುಭವಿಸುವುದನ್ನು ತಡೆಯುತ್ತದೆ.
ಕೆಲವು ಪ್ರಕರಣಗಳಲ್ಲಿ ಗಂಡ ಕೂಡಾ ದುಡಿಯುತ್ತಿರುವುದಿಲ್ಲ.. ಆತನಿಗೆ ಆದಾಯದ ಮೂಲವೂ ಇರೋದಿಲ್ಲ.. ಹೆಂಡತಿಗೆ ಜೀವನಾಂಶ ನೀಡುವ ಪರಿಸ್ಥಿತಿ ಕೂಡಾ ಆತನಿಗಿರುವುದಿಲ್ಲ.
ಇಂತಹ ಪರಿಸ್ಥಿತಿಗಳಲ್ಲಿ ಎರಡೂ ಕಡೆಯವರ ಆದಾಯ ಮತ್ತಿತರ ವಿಷಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಕೋರ್ಟ್ ತೀರ್ಮಾನ ಮಾಡುತ್ತದೆ.. ಪರ್ವೀನ್ ಕುಮಾರ್ ಜೈನ್ ವರ್ಸಸ್ ಅಂಜು ಜೈನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೀವನಾಂಶ ನೀಡುವ ಬಗ್ಗೆ ಮಹತ್ವದ ಆದೇಶವನ್ನು ನೀಡಿದೆ.. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಇಬ್ಬರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೋಡಬೇಕು. ಹೆಂಡತಿ ಹಾಗೂ ಮಕ್ಕಳ ಸಮಂಜಸ ಅಗತ್ಯಗಳೇನು ಎಂಬುದನ್ನು ಪಟ್ಟಿ ಮಾಡಬೇಕು. ಗಂಡ-ಹೆಂಡತಿ ಇಬ್ಬರ ಉದ್ಯೋಗಗಳೇನು..? ಅರ್ಹತೆಗಳೇನು..? ಯಾರಿಗೆಷ್ಟು ಆದಾಯ ಇದೆ..? ಎಂಬುದನ್ನು ಪರಿಗಣಿಸಬೇಕು. ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿರುವವರ ಸ್ವತಂತ್ರ ಆದಾಯ ಎಷ್ಟು, ಅವರ ಬಳಿ ಇರುವ ಸ್ವತ್ತುಗಳು ಏನೇನು..? ಎಂಬುದನ್ನು ಕೂಡಾ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಮದುವೆಯ ಸಮಯದಲ್ಲಿ ಇಬ್ಬರ ಜೀವನದ ಗುಣಮಟ್ಟ ಹೇಗಿತ್ತು..?, ಕುಟುಂಬದ ಜವಾಬ್ದಾರಿಗಳಿಗಾಗಿ ಅರ್ಜಿದಾರರು ಮಾಡಿರುವ ತ್ಯಾಗಗಳು ಏನೇನು..? ಎಂಬುದನ್ನು ಪರಿಗಣಿಸಬೇಕು. ಇನ್ನು ಅರ್ಜಿದಾರರಿಗೆ ಯಾವುದೇ ಆದಾಯದ ಮೂಲ ಇಲ್ಲದಿದ್ದರೆ ಅವರ ಕಾನೂನು ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಇನ್ನು ಪತಿಯ ಆದಾಯ ಹಾಗೂ ಜವಾಬ್ದಾರಿಗಳ ಜೊತೆ ಆದಾಯದ ಸಾಮರ್ಥ್ಯವನ್ನು ಪರಿಗಣಿಸಿ ಜೀವನಾಂಶ ನಿರ್ಧಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ..
ಗಂಡನಿಂದ ದೂರವಾಗುವ ಮಹಿಳೆಯನ್ನು ರಕ್ಷಣೆ ಮಾಡೋದಕ್ಕಾಗಿಯೇ ಜೀವನಾಂಶದ ಕಾನೂನು ಜಾರಿಗೆ ತರಲಾಗಿದೆ.. ಅದು ಬಿಟ್ಟು ವಿಚ್ಛೇದನ ಕೊಟ್ಟರು ಎಂಬ ಕಾರಣಕ್ಕೆ ಶಿಕ್ಷೆ ನೀಡೋದಕ್ಕೆ ಆಗೋದಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.. ಕೆಲವೊಂದು ಸಂದರ್ಭದಲ್ಲಿ ಮಹಿಳೆ ಕೂಡಾ ಹೆಚ್ಚು ಆಸ್ತಿ ಹೊಂದಿರುತ್ತಾಳೆ, ಗಂಡನಷ್ಟೇ ಅಥವಾ ಗಂಡನಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿರುತ್ತಾಳೆ.. ಆದರೂ ಕೂಡಾ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿರುತ್ತಾಳೆ.. ಇಂತಹ ಸಂದರ್ಭದಲ್ಲಿ ಜೀವನಾಂಶ ಅಗತ್ಯವಿರುವುದಿಲ್ಲ ಎಂದು ಕೋರ್ಟ್ ಹಲವಾರು ಬಾರಿ ಅಭಿಪ್ರಾಯ ಪಟ್ಟಿದೆ. ಇಬ್ಬರೂ ಒಂದೇ ರೀತಿಯ ಆರ್ಥಿಕ ಸ್ಥಿತಿಯಲ್ಲಿದ್ದರೆ ಜೀವನಾಂಶ ಅಗತ್ಯ ಬರುವುದಿಲ್ಲ. ಆದರೆ ಮಕ್ಕಳ ಆರೈಕೆ ಮುಂತಾದ ಹೆಚ್ಚಿನ ಆರ್ಥಿಕ ಜವಾಬ್ದಾರಿಗಳು ಇದ್ದರೆ ಮಾತ್ರ ಅಗತ್ಯಕ್ಕೆ ಅನುಗುಣವಾಗಿ ಕೋರ್ಟ್ ಜೀವನಾಂಶ ನೀಡುವಂತೆ ಆದೇಶ ನೀಡಬಹುದು.

ಪುರುಷರು ಕೂಡಾ ಜೀವನಾಂಶಕ್ಕೆ ಅರ್ಹರು..!
ವಿಚ್ಛೇದನಗಳಾದಾಗ ಮಹಿಳೆಯರಷ್ಟೇ ಹೆಚ್ಚಾಗಿ ಜೀವನಾಂಶಕ್ಕಾಗಿ ಮನವಿ ಸಲ್ಲಿಸುತ್ತಾರೆ.. ಆದ್ರೆ ಜೀವನಾಂಶ ಪಡೆಯುವ ಹಕ್ಕು ಮಹಿಳೆಗಷ್ಟೇ ಇಲ್ಲ, ಪುರುಷರಿಗೂ ಈ ಹಕ್ಕು ಇದೆ.. ನಮ್ಮ ದೇಶದ ಕಾನೂನು ಒಂದಷ್ಟು ಷರತ್ತುಗಳನ್ನು ವಿಧಿಸಿ ಪುರುಷರಿಗೂ ಜೀವನಾಂಶ ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.. ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 24 ಮತ್ತು 25ರ ಅಡಿಯಲ್ಲಿ ಪತಿ ಕೂಡಾ ಜೀವನಾಂಶ ಪಡೆದುಕೊಳ್ಳಬಹುದು. ಈ ಕಾನೂನು ಲಿಂಗ ತಟಸ್ಥ ವಿಧಾನ ಅನುಸರಿಸುತ್ತದೆ.. ಆದ್ರೆ, ಜೀವನಾಂಶ ಪಡೆಯುವ ವಿಚಾರದಲ್ಲಿ ಪುರುಷನಿಗಿಂತ ಮಹಿಳೆಗೇ ಹೆಚ್ಚಿನ ಕಾನೂನು ನೆರವು ಸಿಗಲಿದೆ.. 1954 ರ ವಿಶೇಷ ವಿವಾಹ ಕಾಯ್ದೆ, 2023 ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 1956ರ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ ಹಾಗೂ 2005ರ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆಗಳು ಮಹಿಳೆಯರ ಪರವಾಗಿಯೇ ಇವೆ.. ಈ ಕಾನೂನುಗಳು ಪತಿಯಿಂದ ಪತ್ನಿಗೆ ಜೀವನಾಂಶ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ..
ಆದ್ರೆ, ಪತಿಯಾದವನು ಪತ್ನಿಯ ಸಂಪಾದನೆಯನ್ನೇ ನಂಬಿಕೊಂಡಿದ್ದಾರೆ.. ಪತಿಗೆ ಯಾವುದೇ ಆದಾಯದ ಮೂಲ ಇಲ್ಲದೇ ಇದ್ದರೆ ಪತಿ ಜೀವನಾಂಶ ಪಡೆಯಬಹುದು.. ಆದ್ರೆ, ಇದನ್ನು ಕೋರ್ಟ್ನಲ್ಲಿ ಸಾಬೀತು ಮಾಡಬೇಕು. ಪತ್ನಿಗೆ ಆದಾಯವಿದೆ. ಆದ್ರೆ ನನಗೆ ಯಾವುದೇ ಆದಾಯವಿಲ್ಲ, ಸಂಪಾದನೆ ಮಾಡುವ ಸ್ಥಿತಿ ಕೂಡಾ ನನಗೆ ಇಲ್ಲ, ಇಲ್ಲಿಯವರೆಗೆ ಪತ್ನಿಯ ಆದಾಯವನ್ನೇ ಅವಲಂಬಿದ್ದೆ ಎಂದು ಪತಿ ದಾಖಲೆಗಳ ಸಮೇತ ಸಾಬೀತು ಮಾಡಬೇಕು. ಆಗ ಕೋರ್ಟ್ ಪತಿಗೆ ಜೀವನಾಂಶ ನೀಡುವಂತೆ ಆದೇಶ ನೀಡುತ್ತದೆ.. ಪತಿ ಅಂಗವೈಕಲ್ಯ ಹೊಂದಿದ್ದು, ಕೆಲಸ ಮಾಡದ ಸ್ಥಿತಿಯಲ್ಲಿದ್ದರೆ, ಗಂಭೀರ ಕಾಯಿಲೆಗೆ ತುತ್ತಾಗಿದ್ದರೆ ಪತಿಗೆ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ನೀಡಬಹುದು. ಆದ್ರೆ ಇಂತಹ ಪ್ರಕರಣ ತುಂಬಾ ಕಡಿಮೆ..



