ಇದು ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ. ಅಲ್ಲದೇ ಇದು ಅವರ ಕನಸಿನ ಪ್ರಾಜೆಕ್ಟ್. ಆ ಕಾರಣದಿಂದ ಅಪ್ಪು ಅಭಿಮಾನಿಗಳು ‘ಗಂಧದ ಗುಡಿ’ ಜೊತೆ ಭಾವುಕವಾಗಿ ಕನೆಕ್ಟ್ ಆಗುತ್ತಿದ್ದಾರೆ. ಅಕ್ಟೋಬರ್ 28ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಅಕ್ಟೋಬರ್ 27ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಯಿತು. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ದೊಡ್ಡ ಪರದೆ ಮೇಲೆ ‘ಗಂಧದ ಗುಡಿ’ ನೋಡಿ ಎಲ್ಲರೂ ಎಮೋಷನಲ್ ಆಗಿದ್ದಾರೆ. ನಟಿ ರಮ್ಯಾ ಕೂಡ ಪ್ರೀಮಿಯರ್ ಶೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ಅಪ್ಪು ಬಗ್ಗೆ ಮಾತನಾಡಿದ್ದಾರೆ. ಅಪ್ಪು ನೆನಪಿನಲ್ಲೇ ‘ಗಂಧದ ಗುಡಿ’ ನೋಡಲು ಬಂದ ರಮ್ಯಾ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಪುನೀತ್ ಜೊತೆಗಿನ ಒಡನಾಟವನ್ನು ನೆನೆದು ಎಮೋಷನಲ್ ಆಗಿದ್ದಾರೆ. ಅಲ್ಲದೇ, ‘ಗಂಧದ ಗುಡಿ’ ಬಗ್ಗೆ ತಮಗೆ ಎಷ್ಟು ಕಾತುರ ಇದೆ ಎಂಬುದನ್ನು ಕೂಡ ಅವರ ಹೇಳಿದ್ದಾರೆ. ‘ಅಪ್ಪು ಯಾವಾಗಲೂ ನನ್ನ ಫೇವರಿಟ್ ಕೋ ಸ್ಟಾರ್ ಆಗಿದ್ದರು. ಇದೇ ಕೊನೇ ಬಾರಿ ನಾವೆಲ್ಲರೂ ಅವರನ್ನು ದೊಡ್ಡ ಪರದೆ ಮೇಲೆ ನೋಡುವುದು. ಹಾಗಾಗಿ ಇದು ತುಂಬ ಎಮೋಷನಲ್ ಆದಂತಹ ಕ್ಷಣ. ನಾನು ಕೂಡ ಕುತೂಹಲದಿಂದ ನೋಡಬೇಕು.
100 ಪರ್ಸೆಂಟ್ ನಾನು ಅಳುತ್ತೇನೆ. ಅದಂತೂ ಗ್ಯಾರಂಟಿ’ ಎಂದು ರಮ್ಯಾ ಹೇಳಿದ್ದಾರೆ. ‘ಈ ಸಾಕ್ಷ್ಯಚಿತ್ರ ನೋಡಲು ನಾನು ಕಾದಿದ್ದೆ. ಟ್ರೇಲರ್ ನೋಡಿದಾಗ ನನಗೆ ತುಂಬ ಇಷ್ಟ ಆಗಿತ್ತು. ಛಾಯಾಗ್ರಹಣ ಅದ್ಭುತವಾಗಿದೆ. ಅಪ್ಪು ಹಾಗು ಪ್ರಕೃತಿಯನ್ನು ನಾನು ಪ್ರೀತಿಸುತ್ತೇನೆ. ಆ ಎರಡು ಅಂಶಗಳು ಇದರಲ್ಲಿ ಇವೆ. ಅನುಭವ ಹೇಗಿರುತ್ತದೆ ಅಂತ ನೋಡೋಣ. ಪುನೀತ ಪರ್ವದಲ್ಲಿ ನಾನು ಡ್ಯಾನ್ಸ್ ಮಾಡಿದ್ದೇ ಅಪ್ಪುಗೋಸ್ಕರ.
ಆ ಕ್ಷಣದಲ್ಲಿ ನಾನು ಅಪ್ಪು ಅವರನ್ನೇ ನೆನಪಿಸಿಕೊಳ್ಳುತ್ತಿದ್ದೆ. ಅವರನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ರಮ್ಯಾ. ಪುನೀತ್ ರಾಜ್ಕುಮಾರ್ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ತಾವು ನಿರ್ದೇಶನ ಮಾಡಿದ್ರೆ ನಾನೇ ಹೀರೋಯಿನ್ ಅಂತ ಹೇಳಿದ್ದರು. ಅಂತಹ ಅನೇಕ ಸಂಗತಿಗಳನ್ನು ನಾವು ಚರ್ಚೆ ಮಾಡಿದ್ವಿ. ಗಂಧದ ಗುಡಿ ನಮ್ಮೆಲ್ಲರ ಹೆಮ್ಮೆ. ಹಾಗಾಗಿ ನಾವು ಇದನ್ನು ಚಿತ್ರಮಂದಿರದಲ್ಲಿ ನೋಡಬೇಕು’ ಎಂದು ರಮ್ಯಾ ಹೇಳಿದ್ದಾರೆ.