ಸಾಮಾಜಿಕ ಜಾಲತಾಣದಲ್ಲಿ ನಾವು ನೋಡುವ ಸಾವಿರಾರು ವಿಡಿಯೋಗಳಲ್ಲಿ ಕೆಲವೊಂದು ಅತ್ಯಂತ ಆಪ್ತ ಹಾಗೂ ಭಾವನಾತ್ಮಕ ಎನಿಸುತ್ತದೆ. ಸದ್ಯ ಅಂತಹದ್ದೆ ಒಂದು ಮತ್ಸ್ಯಲೋಕದ ಭಾವನಾತ್ಮಕ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಸಮುದ್ರ ನಡುವೆ ಅಪಾಯದಲ್ಲಿ ಸಿಲುಕಿರುವ ತನ್ನ ತಾಯಿಯನ್ನು ರಕ್ಷಣೆ ಮಾಡಲು ತಿಮಿಂಗಿಲದ ಮರಿಗಳು ಪ್ರವಾಸಿಗರನ್ನು ವಿನಂತಿಸಿಕೊಂಡ ವಿಡಿಯೋ ಇದಾಗಿದ್ದು, ಅಂತಿಮವಾಗಿ ಏನಾಯ್ತು ಎಂಬುದಕ್ಕೆ ವಿವರಣೆ ಇಲ್ಲಿದೆ.
ಸದ್ಯ, ಟ್ವಿಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಮುದ್ರದ ನಡುವೆ ದೋಣಿಯ ಮೂಲಕ ತೆರಳುತ್ತಿದ್ದ ಪ್ರವಾಸಿಗರ ಬಳಿ ಬಂದ ತಿಮಿಂಗಿಲದ ಮರಿಗಳು ಏನನ್ನೋ ವಿನಂತಿಸುತ್ತಿರುವಂತೆ ಮಾಡುತ್ತಿದ್ದವು. ಇವುಗಳ ಮುಖಭಾವ ಕೊಂಚ ಅಸಹಾಯಕವಾಗಿದ್ದವು. ಅನಂತರ ಪ್ರವಾಸಿಗರನ್ನು ಕರೆದೊಯ್ಯುವಂತೆ ದೋಣಿಯ ಪಕ್ಕದಲ್ಲೇ ಖುಷಿಯಿಂದ ಈಜಲಾರಂಭಿಸಿದವು.
ಪ್ರವಾಸಿಗರೂ ಕೂಡ ಕುತೂಹಲದಿಂದ ಅವುಗಳೊಂದಿಗೆ ತೆರಳಿದರು ಸ್ವಲ್ಪ ದೂರ ಹೋಗಿ ನೋಡಿದಾಗ ಅಲ್ಲಿ ದೊಡ್ಡ ತಿಮಿಂಗಿಲವೊಂದರ ಬಾಲ ಬಲೆಯೊಂದಕ್ಕೆ ಸಿಲುಕಿತ್ತು. ಅದರಿಂದ ಬಿಡಿಸಿಕೊಳ್ಳಲು ತಿಮಿಂಗಿಲ ಒದ್ದಾಡುತ್ತಿತ್ತು. ಮರಿಗಳೂ ಕೂಡ ಕಿರುಚಾಡುತ್ತಿದ್ದವು. ತಕ್ಷಣವೇ ಎಚ್ಚೆತ್ತಕೊಂಡ ಪ್ರವಾಸಿಗರು ಬಲೆಯನ್ನು ಕತ್ತರಿಸಿ ತಿಮಿಂಗಿಲ ರಕ್ಷಿಸಿದರು. ಅನಂತರ ಖುಷಿಯಿಂದ ತಿಮಿಂಗಿಲ ಮರಿಗಳೊಂದಿಗೆ ತೆರಳಿತು. ಈ ವಿಡಿಯೋ ವೈರಲ್ ಆಗುತ್ತಿದ್ದು, ಪ್ರವಾಸಿಗರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.



