ಸಿನಿಮಾ ನಟ/ನಟಿಯರ ಜೀವನ ನೋಡಿದರೆ ಅವರಂಥ ಅದೃಷ್ಟವಂಥರು ಬೇರೆ ಇಲ್ಲ ಎನಿಸುವುದು ಸಹಜ. ಅವರಿಗೇನು ಕಷ್ಟ, ಕೋಟ್ಯಂತರ ದುಡ್ಡು, ಓಡಾಡಲು ಕಾರುಗಳು, ಕೈಗೊಬ್ಬ ಕಾಲಿಗೊಬ್ಬ ಆಳುಗಳು, ಬಿಂದಾಸ್ ಜೀವನ ಎಂದುಕೊಳ್ಳುವವರೇ ಹೆಚ್ಚು. ಆದರೆ ದೂರದ ಬೆಟ್ಟ ನುಣ್ಣಗೆ ಎಂಬ ಮಾತಿನಂತೆ ತೆರೆ ಹಿಂದೆ ಅವರಿಗೂ ಸಾಕಷ್ಟು ಕಷ್ಟಗಳಿರುತ್ತವೆ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲದ ವಿಚಾರ. ಚಿತ್ರರಂಗದಲ್ಲಿ ಹೆಸರು ಮಾಡಿದ ಎಷ್ಟೋ ಕಲಾವಿದರ ಜೀವನ ಚರಿತ್ರೆ ನೋಡಿದರೆ ಹೀಗೂ ಉಂಟಾ ಎಂದು ಉದ್ಘರಿಸುವಂತಾಗುತ್ತದೆ. ಅಂಥವರಲ್ಲಿ ಮಲಯಾಳಂ ನಟಿ ಶಕೀಲಾ ಕೂಡಾ ಒಬ್ಬರು.
ಸಿನಿಪ್ರಿಯರು ಶಕೀಲಾ ಹೆಸರನ್ನು ಕೇಳಿರುತ್ತಾರೆ. ಶಕೀಲಾ, ವಯಸ್ಕರ ಚಿತ್ರಗಳಿಗೆ ಹೆಸರಾದವರು. ಬಹಳ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಶಕೀಲಾ ವಯಸ್ಕರ ಚಿತ್ರಗಳಲ್ಲಿ ನಟಿಸಿ ಹಣ, ಹೆಸರು ಗಳಿಸಿದವರು. ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಶಕೀಲಾಗೆ ಎಷ್ಟು ಬೇಡಿಕೆ ಇತ್ತೆಂದರೆ ಆಕೆಯ ಸಿನಿಮಾಗಳು ಬಿಡುಗಡೆ ಆಗುತ್ತಿದೆ ಎಂದರೆ ಮುಮುಟ್ಟಿ, ಮೋಹನ್ ಲಾಲ್ನಂಥ ಸ್ಟಾರ್ ನಟರ ಸಿನಿಮಾಗಳು ಕೂಡಾ ಹಿಂದೆ ಉಳಿಯುತ್ತಿತ್ತಂತೆ. ನಿರ್ಮಾಪಕರು ಕೂಡಾ ಶಕೀಲಾ ಮನೆ ಮುಂದೆ ಕಾಲ್ಶೀಟ್ಗಾಗಿ ಕಾಯುತ್ತಿದ್ದರಂತೆ. ಒಂದು ಕಾಲದಲ್ಲಿ ಅಷ್ಟು ಬ್ಯುಸಿಯಾಗಿದ್ದ ಶಕೀಲಾ, ಈಗ ಅಡಲ್ಟ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ.

ಶಕೀಲಾ ತಾಯಿ ಆಂಧ್ರಪ್ರದೇಶಕ್ಕೆ ಸೇರಿದವರು, ತಂದೆ ಮುಸ್ಲಿಂ. ಆಕೆಯ ಪೂರ್ತಿ ಹೆಸರು ಶಕೀಲಾ ಬೇಗಂ. ಅಣ್ಣ, ಅಕ್ಕ ಹಾಗೂ ತಂಗಿ ಜೊತೆ ಬೆಳೆದ ಶಕೀಲಾ ಬಡತನದ ಕಾರಣ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. 10ನೇ ತರಗತಿಯನ್ನು ಅರ್ಧಕ್ಕೆ ನಿಲ್ಲಿಸಿದರು. ನಂತರ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು. ಆದರೆ ಶಕೀಲಾ, ಬಯಸಿ ಬಯಸಿ ಚಿತ್ರರಂಗಕ್ಕೆ ಕಾಲಿಟ್ಟವರಲ್ಲ. ಅವರು ವಯಸ್ಕರ ಚಿತ್ರಗಳಲ್ಲಿ ನಟಿಸುವಂತೆ ಪ್ರೇರೇಪಿಸಿದ್ದು ಬೇರೆ ಯಾರೂ ಅಲ್ಲ, ಆಕೆಯ ಹೆತ್ತ ತಾಯಿ. ಈ ವಿಚಾರವನ್ನು ಶಕೀಲಾ ತಮ್ಮ ಬಯೋಪಿಕ್ನಲ್ಲಿ ಬರೆದುಕೊಂಡಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಕೂಡಾ ಹೇಳಿಕೊಂಡಿದ್ದಾರೆ.
ನಾನು ಶಾಲೆಯಲ್ಲಿ ಓದುವಾಗಲೇ ದೊಡ್ಡ ಹುಡುಗಿಯಂತೆ ಕಾಣುತ್ತಿದ್ದೆ, ನಾನು ಹೊರಗೆ ಹೋದರೆ ಸಾಕು ಗಂಡಸರೆಲ್ಲಾ ತಿನ್ನುವಂತೆ ನೋಡುತ್ತಿದ್ದರು. ನನ್ನ ತಾಯಿಗೆ ಏನನ್ನಿಸಿತೋ ಏನೋ ಆಕೆ ಅನೇಕ ಗಂಡಸರನ್ನು ಪರಿಚಯ ಮಾಡಿಕೊಂಡಳು, ನನ್ನ ಅವರ ಜೊತೆ ಹೋಗುವಂತೆ ಪೀಡಿಸುತ್ತಿದ್ದಳು. ನನಗೆ ಅದು ಇಷ್ಟವಿಲ್ಲದಿದ್ದರೂ ಬಲವಂತದಿಂದ, ಅಮ್ಮನ ಮೇಲಿನ ಹೆದರಿಕೆಗೆ ಅವರ ಜೊತೆ ಹೋಗುತ್ತಿದ್ದೆ, ಮುಂದೆ ಅದೇ ನನಗೆ ಚಿತ್ರರಂಗಕ್ಕೆ ಬರಲು ಕಾರಣವಾಯ್ತು. ಅಡಲ್ಟ್ ಚಿತ್ರದಲ್ಲಿ ನಟಿಸಲು ನನಗೆ ಆಫರ್ ಬಂತು. ವಿಧಿ ಇಲ್ಲದೆ ಸಿನಿಮಾರಂಗಕ್ಕೆ ಬಂದೆ. ನಾನು ಬಯಸಿದ ಜೀವನ ಇದಲ್ಲ. ಅಡಲ್ಟ್ ಸಿನಿಮಾಗಳಿಂದ ಸಾಕಷ್ಟು ದುಡ್ಡು ಮಾಡಿದೆ. ಆದರೆ ಆ ದುಡ್ಡು ನನ್ನ ಅಕ್ಕನ ಬಳಿ ಇದೆ. ಅಮ್ಮ ನನ್ನನ್ನು ಸಾಮಾನ್ಯ ಹುಡುಕಿಯಂತೆ ಬದುಕಲು ಬಿಡಲಿಲ್ಲ. ಅಕ್ಕ ನಾನು ದುಡಿದ ಹಣವನ್ನು ನನಗೆ ಕೊಡದೆ ತಾನು ಅದರಲ್ಲಿ ಜೀವನ ನಡೆಸುತ್ತಿದ್ದಾಳೆ. ಎಲ್ಲರೂ ನನಗೆ ಮೋಸ ಮಾಡಿದರು.

ನಾನು ಬೇರೆ ಧರ್ಮದ ವ್ಯಕ್ತಿಯನ್ನು ಪ್ರೀತಿಸಿದ್ದೆ, ಆದರೆ ನಮ್ಮಿಬ್ಬರ ಮದುವೆಗೆ ಮನೆಯವರು ಒಪ್ಪಲಿಲ್ಲ. ಧರ್ಮಕ್ಕಿಂತ, ನನ್ನ ವೃತ್ತಿ ನಮ್ಮ ಮದುವೆಗೆ ಅಡ್ಡಿಯಾಗಿತ್ತು. ಆತನಿಗೆ ಮನೆಯಲ್ಲಿ ಬೇರೆ ಹುಡುಗಿಯನ್ನು ನೋಡಿದ್ದರು. ಈ ವಿಚಾರವನ್ನು ಆತ ನನ್ನ ಬಳಿ ಹೇಳಿದ. ನನಗೆ ಬೇರೆ ವಿಧಿ ಇಲ್ಲದೆ ಅವನನ್ನು ಬಿಟ್ಟುಕೊಟ್ಟೆ. ಆತ ಈಗ ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದಾನೆ. ನನ್ನನ್ನು ಈ ಜೀವನಕ್ಕೆ ದೂಡಿದ ತಾಯಿ ಇಂದು ಇಲ್ಲ. ಒಡಹುಟ್ಟಿದವರೂ ಇದ್ದೂ ಇಲ್ಲ. ಅವರಿಗೆ ನನ್ನ ದುಡ್ಡು ಬೇಕು, ನಾನು ಮಾತ್ರ ಬೇಡ. ಈಗ ನಾನು ಒಂಟಿ ಜೀವನ ನಡೆಸುತ್ತಿದ್ದೇನೆ. ನನಗೂ ಒಂದು ಕುಟುಂಬ ಇರಬಾರದಿತ್ತಾ ಎನಿಸುತ್ತದೆ, ಆದರೆ ಯಾರಿಗೂ ಭಾರವಾಗಿ ಇರಲು ನನಗೆ ಇಷ್ಟವಿಲ್ಲ. ಅದೊಂದು ಸಮಾಧಾನವಿದೆ. ಸ್ವಂತ ಮನೆ ಇದೆ. ಅಲ್ಪ ಸ್ವಲ್ಪ ಹಣ ಉಳಿಸಿದ್ದೇನೆ. ಇರುವಷ್ಟು ದಿನ ಸಾಮಾನ್ಯರಂತೆ ಜೀವನ ನಡೆಸುತ್ತೇನೆ ಎಂದು ಶಕೀಲಾ ತಮ್ಮ ಹಳೆಯ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಕನ್ನಡದಲ್ಲಿ ಶಕೀಲಾ ಸಾಗರ, ಮೊನಾಲೀಸಾ, ಶ್ರೀ, ನೈಂಟಿ, ಪಾತರಗಿತ್ತಿ, ಲವ್ ಯೂ ಆಲಿಯಾ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ. 2014 ರಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 2 ರಲ್ಲಿ ಶಕೀಲಾ ಸ್ಪರ್ಧಿಯಾಗಿದ್ದರು. 27ನೇ ದಿನಕ್ಕೆ ಎಲಿಮಿನೇಟ್ ಆಗಿ ಹೊರ ಹೋಗಿದ್ದರು. 2020 ರಲ್ಲಿ ಶಕೀಲಾ ಜೀವನ ಆಧಾರಿತ ಸಿನಿಮಾ ರಿಲೀಸ್ ಆಗಿತ್ತು. ಚಿತ್ರವಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದರು.