ಕನ್ನಡ ಸಿನಿಮಾ ರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ರಚಿತಾ ರಾಮ್ ಕನ್ನಡದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಫೇಮಸ್ ನಟಿಯರಲ್ಲಿ ರಚಿತಾ ರಾಮ್ ಕೂಡ ಒಬ್ಬರು. ಇದೀಗ ಅವರನ್ನು ವಿವಾದವೊಂದು ಸುತ್ತಿಕೊಂಡಿದ್ದು, ರಚಿತಾ ರಾಮ್ ಅವರ ನಡೆಯ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾದ ಪ್ಲವರ್ ಶೋ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಚಿತಾ ರಾಮ್ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಬರುವ ವೇಳೆ ರಚಿತಾ ರಾಮ್ ಅವರ ಕಾರು ರಸ್ತೆಯಲ್ಲಿದ್ದ ಕ್ಲೀನಿಂಗ್ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದಿದ್ದರೂ ಕೂಡ ಡ್ರೈವರ್ ಕಾರು ನಿಲ್ಲಿಸಿಲ್ಲ, ರಚಿತಾ ರಾಮ್ ಕೂಡ ಕಾರಿನಿಂದ ಇಳಿದು ಸಿಬ್ಬಂದಿಯನ್ನು ಮಾತನಾಡಿಸದೇ ನೇರವಾಗಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇದನ್ನು ಗಮನಿಸಿರುವ ನೆಟ್ಟಿಗರು ಇದೀಗ ರಚಿತಾ ರಾಮ್ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ‘ಸಿನಿಮಾ ನಟಿ ಅಥವಾ ಸೆಲೆಬ್ರಿಟಿಗಳನ್ನು ಜನ ಗಮನಿಸುತ್ತಾರೆ. ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿರುವುದು ಅವರ ಕರ್ತವ್ಯ. ಕನಿಷ್ಠ ಪಕ್ಷ ಮಾನವೀಯ ನೆಲೆಯಲ್ಲಿ ಕಾರಿನಿಂದ ಇಳಿದು ಕ್ಲೀನಿಂಗ್ ಸಿಬ್ಬಂದಿಯ ಜೊತೆ ಮಾತನಾಡಬಹುದಿತ್ತು. ಆದರೆ ರಚಿತಾ ರಾಮ್ ನಡೆದುಕೊಂಡಿರುವ ರೀತಿಯಿಂದ ಬೇಸರವಾಗಿದೆ’ ಎಂದು ಎಲ್ಲೆಡೆ ನಟಿ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ.