ಮಗಳು ಜಾನಕಿ… ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್. ಸೀತಾರಾಮ್ ಅವರ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ “ಮಗಳು ಜಾನಕಿ” ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. “ಮಗಳು ಜಾನಕಿ” ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆಯ ಹೆಸರು ಗಾನವಿ ಲಕ್ಷ್ಮಣ್.

ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಚಿಕ್ಕಮಗಳೂರಿನ ಚೆಲುವೆ ಎರಡು ವರ್ಷಗಳ ಕಾಲ ಜಾನಕಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿದ್ದರು. “ಮಗಳು ಜಾನಕಿ” ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಗಾನವಿ ಲಕ್ಷ್ಮಣ್ ಮುಂದೆ ಮುಖ ಮಾಡಿದ್ದು ಹಿರಿತೆರೆಯತ್ತ.
ಹೌದು, ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿದ “ಹೀರೋ” ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಹಾರಿದ ಗಾನವಿ ಲಕ್ಷ್ಮಣ್ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ತದ ನಂತರ ಈಕೆ ಅಭಿನಯಿಸಿದ್ದು ಶಿವರಾಜ್ ಕುಮಾರ್ ಜೊತೆಗೆ! ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ “ವೇದ” ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಪತ್ನಿ ಪುಷ್ಪ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ನಟಿಸಿದ್ದರು.

ಮೊದಲ ಬಾರಿಗೆ ರೆಬಲ್ ಆಗಿರುವ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗಾನವಿ ವಿಭಿನ್ನ ಲುಕ್ ಮೂಲಕ ಸಿನಿ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಮುಂದೆ “ಭಾವಚಿತ್ರ” ಸಿನಿಮಾದಲ್ಲಿ ಬಣ್ಣ ಹಚ್ಚಿದ ಈಕೆ ನಂತರ ಕಾಣಿಸಿಕೊಂಡಿದ್ದು ಪರಭಾಷೆಯ ಸಿನಿಮಾದಲ್ಲಿ. ತೆಲುಗಿನ “ರುದ್ರಾಂಗಿ” ಸಿನಿಮಾದಲ್ಲಿ ನಾಯಕಿ ರುದ್ರಾಂಗಿಯಾಗಿ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ನಟನಾ ಛಾಪನ್ನು ಪಸರಿಸಿದ ಈಕೆ ಟಾಲಿವುಡ್ನ ಜನಪ್ರಿಯ ನಟರಾದ ಜಗಪತಿ ಬಾಬು, ಆಶೀಶ್ ಗಾಂಧಿ, ಮಮ್ತಾ ಮೋಹನದಾಸ್ ಅವರೊಂದಿಗೆ ಬಣ್ಣ ಹಚ್ಚಿದ್ದಾರೆ.
ಇನ್ನು ಕೆ.ಶಂಕರ್ ಅವರ ನಿರ್ದೇಶನದ ಕನ್ನಡ ಸಿನಿಮಾ ‘ನನಗೂ ಹೆಂಡ್ತಿ ಬೇಕು’ ದಲ್ಲಿ ಈಕೆ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ
ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಷ್ಟೇ ನಟಿಸಿ ಸೈ ಎನಿಸಿಕೊಂಡಿರುವ ಗಾನವಿ ಲಕ್ಷ್ಮಣ್ ಮತ್ತೊಮ್ಮೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.



