ಒಂದು ಕಾಲದ ಜನಪ್ರಿಯ ಆನ್ಲೈನ್ ಸಂವಹನ ವೇದಿಕೆ. ಲೈವ್ ವೀಡಿಯೋ ಕಾಲ್ ಮೂಲಕ ದೂರದಲ್ಲಿರುವವರನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾದ ಅವಕಾಶ ಮಾಡಿಕೊಟ್ಟ ಆ್ಯಪ್. ಇದೀಗ ಅಧಿಕೃತವಾಗಿ ಸ್ಥಗಿತಗೊಳ್ಳಲಿದೆ.
ಹೌದು ಸ್ಕೈಪ್ ಇನ್ನು ಕೆಲವೇ ತಿಂಗಳುಗಳಲ್ಲಿ ಅಧಿಕೃತವಾಗಿ ತನ್ನ ಕಾರ್ಯ ನಿಲ್ಲಿಸಲಿದೆ. ಸ್ಕೈಪ್ನ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲು ಮೈಕ್ರೋಸಾಫ್ಟ್ ನಿರ್ಧರಿಸಿದ್ದು, 2025 ಮೇನಲ್ಲಿ ಸಂಪೂರ್ಣವಾಗಿ ಬಂದ್ ಆಗಲಿದೆ. 2000ನೇ ದಶಕದಲ್ಲಿ ಆನ್ಲೈನ್ ಸಂವಹನದಲ್ಲಿ ಪ್ರಾಬಲ್ಯ ಹೊಂದಿದ್ದ, ಒಂದು ಕಾಲದ ಜನಪ್ರಿಯ ಚಾಟ್ ಹಾಗೂ ವೀಡಿಯೋ ಕರೆ ಅಪ್ಲಿಕೇಶನ್ ಇದಾಗಿತ್ತು.
ಸ್ಕೈಪ್ ಏಕೆ ಸ್ಥಗಿತಗೊಳ್ಳುತ್ತಿದೆ?
2010ರಲ್ಲಿ ಜನಪ್ರೀಯತೆಯ ಉತ್ತುಂಗದಲ್ಲಿದ ಸ್ಕೈಪ್ ಅಪ್ಲಿಕೇಶನ್ 660 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. 2000 ದಶಕದ ಆನ್ಲೈನ್ ಅಪ್ಲಿಕೇಶನ್ಗಳಲ್ಲಿಯೇ ಪ್ರವರ್ತಕವಾಗಿದ್ದ ಸ್ಕೈಪ್, ಕಾಲಾ ನಂತರ ಜೂಮ್, ಗೂಗಲ್ ಮೀಟ್, ಫೇಸ್ಟೈಮ್, ವಾಟ್ಸಾಪ್ ಹಾಗೂ ಫೇಸ್ಬುಕ್ನ ಮೆಸೆಂಜರ್ನಂತಹ ಸೇವೆಗಳಿಂದ ಭಾರೀ ಸ್ಪರ್ಧೆ ಎದುರಿಸಿತ್ತು. ಕಾಲ ಕಳೆದಂತೆ ಬಹುಪಾಲು ಬಳಕೆದಾರರು ಹೊಸ ಹೊಸ ಅಪ್ಲಿಕೇಶನಗಳ ಮೊರೆ ಹೋಗುತ್ತಿದ್ದಂತೆ ಸ್ಕೈಪ್ ಬಳಕೆಯಲ್ಲಿ ಕುಸಿತ ಕಂಡು ಬಂತು.
2015ರ ಹೊತ್ತಿಗೆ 660 ಮಿಲಿಯ್ ಇದ್ದ ಬಳಕೆದಾರರ ಪಟ್ಟಿ 300 ಮಿಲಿಯನ್ಗೆ ಇಳಿಯುವ ಮೂಲಕ ಕುಸಿತಗೊಳ್ಳುವತ್ತ ಮುಖ ಮಾಡಿತ್ತು. ಹಾಗೆಯೇ ಮುಂದುವರಿದು 2020 ಮಾರ್ಚ್ ಹೊತ್ತಿಗೆ ಸ್ಕೈಪ್ ಬಳಕೆದಾರರಲ್ಲಿ ಭಾರೀ ಕುಸಿತ ಕಂಡು ಬಂದು ಸಕ್ರಿಯ ಬಳಕೆದಾದರಾರ ಸಂಖ್ಯೆ 100 ಮಿಲಿಯನ್ಗೆ ಇಳಿಯಿತು.

ನಂತರ ಸ್ಕೈಪ್ನ ಬಳಕೆಯಲ್ಲಿ ಬಳಕೆದಾರರ ನಿರುತ್ಸಾಹ ಹಾಗೂ ಮೈಕ್ರೋಸಾಫ್ಟ್ನ ಮತ್ತೊಂದು ಅಪ್ಲಿಕೇಶನ್ ಮೈಕ್ರೋಸಾಫ್ಟ್ ಟೀಮ್ಸ್ನಲ್ಲಿಯೇ ಎಲ್ಲಾ ಸೌಲಭ್ಯಗಳು ಇರುವುದನ್ನು ಪರಿಗಣಿಸಿದ ಮೈಕ್ರೋಸಾಫ್ಟ್ ಕಂಪನಿ ಇನ್ನು ಈ ಅಪ್ಲಿಕೇಶನನ್ನು ನಡೆಸುವುದು ಸೂಕ್ತವಲ್ಲ ಎಂದು ಪರಿಗಣಿಸಿದೆ. ಆದ್ದರಿಂದಲೇ ಸ್ಕೈಪ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಿ, ಸ್ಕೈಪ್ನಲ್ಲಿ ಖಾತೆ ಹೊಂದಿರುವ ಬಳಕೆದಾರರಿಗೆ ಅದೇ ಖಾತೆಯಿಂದ ಮೈಕ್ರೋಸಾಪ್ಟ್ ಟೀಮ್ಸ್ ಫ್ರೀ ಅಪ್ಲಿಕೇಶನ್ ಮೂಲಕ ಹಿಂದಿನ ಚಾಟ್ ಹಾಗೂ ಸಂಪರ್ಕವನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದೆ.

ಸ್ಕೈಪ್ನ ಏರಿಳಿತ:
ಸ್ಕೈಪ್ ಅಪ್ಲಿಕೇಶನ್ ಅನ್ನು 2003ರಲ್ಲಿ ನಿಕ್ಲಾಸ್ ಝೆನ್ಸ್ಟ್ರೋಮ್ ಮತ್ತು ಜಾನಸ್ ಫ್ರೈಸ್, ನಾಲ್ಕು ಎಸ್ಟೋನಿಯನ್ ಡೆವಲಪರ್ಗಳೊಂದಿಗೆ ರಚಿಸಿದರು. ಇದು ಡಿಜಿಟಲ್ ಸಂವಹನ ಮಾರುಕಟ್ಟೆಯಲ್ಲಿ ಪ್ರಮುಖ ಬದಲಾವಣೆಯನ್ನು ತಂದಿತು ಎಂದರೂ ತಪ್ಪಾಗುವುದಿಲ್ಲ. ಅನಿಯಮಿತ ಚಾಟ್ ಮಾಡಲು, ತಡೆರಹಿತ ವೀಡಿಯೋ ಕರೆ ಹಾಗೂ ಇಂಟರ್ನೆಟ್ ಮೂಲಕ ನಂಬರ್ ಡಯಲ್ ಮಾಡಿ ಮಾತಾಡಲು ಸಹ ಈ ಅಪ್ಲಿಕೇಶನ್ ಸಹಕಾರಿಯಾಗಿತ್ತು.
ಪ್ರಸಿದ್ಧಿಯ ಉತ್ತುಂಗದಲ್ಲಿದ್ದ ಈ ಆ್ಯಪ್ ಅನ್ನು 2005ರಲ್ಲಿ ಇಬೇ 2.6 ಬಿಲಿಯನ್ ಡಾಲರ್ಗೆ ಸ್ವಾಧೀನ ಪಡಿಸಿಕೊಂಡಿತು. ಇನ್ನು 2011ರಲ್ಲಿ ಮೈಕ್ರೋಸಾಫ್ಟ್ ಕಂಪನಿಯು 8.5 ಬಿಲಿಯನ್ ಡಾಲರ್ಗೆ ಇದನ್ನು ಖರೀದಿಸಿತು. ನಂತರದ ದಿನಗಳಲ್ಲಿ ಇನ್ನೂ ಹೆಚ್ಚು ವ್ಯವಸ್ಥಿತ ಹೊಸ ಹೊಸ ಅಪ್ಲಿಕೇಶನ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ಕಾರಣ ಸ್ಕೈಪ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿತು.
ಇದೀಗ ಮೈಕ್ರೋಸಾಫ್ಟ್ ಟೀಂ ಆ್ಯಪ್ನತ್ತ ಹೆಚ್ಚು ಗಮನ ಹರಿಸುತ್ತಿರುವ ಮೈಕ್ರೋಸಾಫ್ಟ್, ಸ್ಕೈಪ್ ಪ್ರಯಾಣವನ್ನು ಔಪಚಾರಿಕವಾಗಿ ಕೊನೆಗೊಳಿಸಲು ನಿರ್ಧರಿಸಿದೆ. ಯಾವುದೇ ಹೊಸ ಅಪ್ಲಿಕೇಶನ್ ಬಂದರು ಸಹ ಡಿಜಿಟಲ್ ಯುಗದ ಪ್ರಾರಂಭದಲ್ಲಿ ಪ್ರವರ್ಧಮಾನದಲ್ಲಿದ್ದ ಸಂವಹನ ವೇದಿಕೆ ಎಂದು ಸ್ಕೈಪ್ ನೆನಪಿನಲ್ಲಿ ಉಳಿಯುವುದು ಖಂಡಿತ.