ಕಿರುತೆರೆಯಲ್ಲಿ ಬಹಳಷ್ಟು ಧಾರಾವಾಹಿಗಳು ನೋಡುಗರಿಗೆ ಮನರಂಜನೆ ನೀಡುತ್ತಿದೆ. ಧಾರಾವಾಹಿಗಳು ಗೃಹಿಣಿಯರ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಇದೀಗ ಈ ಧಾರಾವಾಹಿಗಳ ಪಾಲಿಗೆ ಮತ್ತೊಂದು ಹೊಸ ಧಾರಾವಾಹಿ ಸೇರ್ಪಡೆಯಾಗುತ್ತಿದೆ. ಮುದ್ದು ಸೊಸೆ ಹೆಸರಿನ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಅದೂ ಕೂಡಾ ಕಲರ್ಸ್ ಕನ್ನಡದಲ್ಲಿ. ಈ ವಾಹಿನಿಯಲ್ಲಿ ಈಗಾಗಲೇ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ, ರಾಮಾಚಾರಿ, ಕರಿಮಣಿ, ದೃಷ್ಟಿಬೊಟ್ಟು ಸೇರಿದಂತೆ ಅನೇಕ ಧಾರಾವಾಹಿಗಳು ಹೆಸರುವಾಸಿಯಾಗಿವೆ. ಈಗ ಈ ಧಾರಾವಾಹಿಗಳಿಗೆ ಕಾಂಪಿಟೇಶನ್ ಕೊಡಲು ಮುದ್ದು ಸೊಸೆ ನಿರ್ಮಾಣವಾಗುತ್ತಿದೆ.
ಈ ಸುದ್ದಿಯಲ್ಲಿ ಏನು ವಿಶೇಷ ಅಂತೀರಾ? ಅಂದ ಹಾಗೆ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವುದು ನಟಿ ಮೇಘಾ ಶೆಟ್ಟಿ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಕರುನಾಡಿನ ಜನತೆಗೆ ಪರಿಚಯವಾದ ಮೇಘಾ ಶೆಟ್ಟಿ ಈಗ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. ಮೇಘಾ ಶೆಟ್ಟಿ ಮೊದಲ ಬಾರಿಗೆ ಗೌರಿಶಂಕರ ಧಾರಾವಾಹಿ ಮೂಲಕ ನಿರ್ಮಾಣಕ್ಕೆ ಇಳಿದರು. ಈ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದರ ಜೊತೆಗೆ ಈಗ ಮೇಘಾ ಮುದ್ದು ಸೊಸೆ ಧಾರಾವಾಹಿಗೂ ಬಂಡವಾಳ ಹೂಡುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಧಾರಾವಾಹಿಯ ಪ್ರೋಮೋವನ್ನು ಹಂಚಿಕೊಂಡಿದೆ. ಇದರಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಇತಿಹಾಸ ಪರೀಕ್ಷೆ ಬರೆಯುತ್ತಿರುತ್ತಾರೆ. ಅದರ ನಡುವೆ ಧಾರಾವಾಹಿ ನಾಯಕಿ ಮೇಲ್ವಿಚಾರಕರಿಗೆ ಹೆಚ್ಚುವರಿ ಶೀಟ್ ಕೇಳುತ್ತಾಳೆ. ಆಗ ಉಳಿದ ಮಕ್ಕಳು ಆಕೆಯತ್ತ ತಿರುಗಿ ನೋಡುತ್ತಾರೆ. ನಾಯಕಿಯು ಮದುಮಗಳಾಗಿ ಶೃಂಗಾರ ಮಾಡಿಕೊಂಡು ಪರೀಕ್ಷೆ ಬರೆಯಲು ಬಂದಿರುತ್ತಾಳೆ. ಸ್ಕೂಲ್ ಬೆಂಚ್ನಿಂದ ಹಸೆಮಣೆಗೆ ಬರ್ತಿದ್ದಾಳೆ ಮುದ್ದು ಸೊಸೆ ಎಂದು ಈ ಪ್ರೋಮೋಗೆ ಕ್ಯಾಪ್ಷನ್ ನೀಡಲಾಗಿದೆ. ಪ್ರೋಮೋ ಬಹಳ ಕುತೂಹಲ ಕೆರಳಿಸುತ್ತಿದೆ. ಆದರೆ ವಾಹಿನಿಯು ಧಾರಾವಾಹಿ ಯಾವಾಗಿನಿಂದ ಪ್ರಸಾರವಾಗುತ್ತಿದೆ ಎಂದು ದಿನಾಂಕವನ್ನು ಅಧಿಕೃತವಾಗಿ ತಿಳಿಸಿಲ್ಲ.

ಮುದ್ದುಸೊಸೆ ಧಾರಾವಾಹಿಯಲ್ಲಿ ಪ್ರತಿಮಾ ನಾಯಕಿಯಾಗಿ ನಟಿಸಿದ್ದಾಳೆ. ಇದಕ್ಕೂ ಮುನ್ನ ಪ್ರತಿಮಾ ಅಂತರಪಟ, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಮುದ್ದುಸೊಸೆಗೆ ನಾಯಕಿಯಾಗಿ ಮತ್ತೊಮ್ಮೆ ಕಿರುತೆರೆಗೆ ಮಿಂಚಲು ಬರುತ್ತಿದ್ದಾರೆ. ನಾಯಕಿ ಯಾರು ಅನ್ನೋದು ಗೊತ್ತಾಯ್ತು ಆದರೆ ನಾಯಕ ಯಾರು ಎಂದು ಕಿರುತೆರೆ ಪ್ರಿಯರು ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ಬಾಸ್ ಖ್ಯಾತಿಯ ತ್ರಿವಿಕ್ರಮ್, ಈ ಧಾರಾವಾಹಿಗೆ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಿಗ್ ಬಾಸ್ ನಂತರ ತಾನು ಸಿನಿಮಾಗಳ ಕಡೆ ಗಮನ ಹರಿಸುವುದಾಗಿ ತ್ರಿವಿಕ್ರಮ್ ಹೇಳಿದ್ದರು. ಆದರೆ ಅವರು ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ ಅನ್ನೋದು ಕನ್ಫರ್ಮ್ ಆಗಿಲ್ಲ. ಧಾರಾವಾಹಿ ತಂಡ ಅಧಿಕೃತವಾಗಿ ಪ್ರಕಟಿಸಬೇಕು ಅಷ್ಟೇ.

ಇನ್ನು ಮೇಘಾಶೆಟ್ಟಿ ಬಗ್ಗೆ ಹೇಳುವುದಾದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಮುದ್ದು ಬ್ಯೂಟಿ ಮೇಘಾ, ಜೊತೆ ಜೊತೆಯಲಿ ಧಾರಾವಾಹಿ ಮೂಲಕ ನಟನೆಗೆ ಬಂದರು. ಸೋಷಿಯಲ್ ಮೀಡಿಯಾದಲ್ಲಿ ಮೇಘಾ ಫೋಟೋಗಳನ್ನು ನೋಡಿದ ಚಿತ್ರತಂಡ ಅವರನ್ನು ತಮ್ಮ ಧಾರಾವಾಹಿಯಲ್ಲಿ ನಟಿಸುವಂತೆ ಆಫರ್ ನೀಡಿದೆ. ನಟನೆ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ದೊರೆತ ಅವಕಾಶವನ್ನು ಬಿಡಲು ಮನಸಿಲ್ಲದೆ ಮೇಘಾ ನಟನೆಯ ಹಾದಿಗೆ ಬಂದರು. ಧಾರಾವಾಹಿಯಲ್ಲಿ ನಟಿಸುತ್ತಿದ್ದಂತೆ ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು. ದಿಲ್ ಪಸಂದ್, ಕೈವ, ಆಪರೇಷನ್ ಲಂಡನ್ ಕೆಫೆ, ಚೀತಾ, ಗ್ರಾಮಾಯಣ ಸಿನಿಮಾಗಳಲ್ಲಿ ಮೇಘಾ ನಟಿಸುತ್ತಿದ್ದಾರೆ. ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.



