ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 4ರ ಎಪಿಸೋಡ್ ಕಥೆ ಹೀಗಿದೆ. ಸಿದ್ದು ವಿಚಾರದಲ್ಲಿ ಭಾವನಾ ಬಹಳ ಬದಲಾಗಿದ್ದಾಳೆ. ಸಿದ್ದು ತನ್ನ ಹೋರಾಟಕ್ಕೆ ಬೆಂಬಲ ನೀಡಿದ್ದು, ಅವನಿಗೆ ಜ್ವರ ಬಂದದ್ದು, ಮನೆ ಬಿಟ್ಟು ಹೋಗಿ ಜೊತೆಗೆ ಇದ್ದದ್ದು ಎಲ್ಲವೂ ಭಾವನಾಗೆ ಸಿದ್ದು ಮೇಲಿನ ಅಭಿಪ್ರಾಯ ಬದಲಾಗುವಂತೆ ಮಾಡಿದೆ. ಇತ್ತ ಜಾಹ್ನವಿಗೆ ತನ್ನ ಗಂಡ ಜಯಂತ್, ಅಜ್ಜಿಯನ್ನು ಕೊಲೆ ಮಾಡಲು ಯತ್ನಿಸಿದ್ದು ಎಂಬ ನಿಜ ಗೊತ್ತಾಗಿದೆ. ಮತ್ತೊಂದೆಡೆ ಸಂತೋಷ್ ಮನೆ ಕಟ್ಟುವ ಕೆಲಸ ಕೊನೆಯ ಹಂತಕ್ಕೆ ಬಂದಿದೆ. ಹರೀಶ್ ಬ್ಯುಸ್ನೆಸ್ನಲ್ಲಿ ಆರಕ್ಕೇರದೆ, ಮೂರಕ್ಕೆ ಇಳಿಯದೆ ಕಾಲ ಕಳೆಯುತ್ತಿದ್ದಾನೆ.
ಎಂದೂ ಇಲ್ಲದ ಸಂತೋಷ್, ಹೆಂಡತಿ ವೀಣಾಳನ್ನು ಮನೆ ನೋಡಲು ಕರೆದುಕೊಂಡು ಹೋಗುತ್ತಾನೆ. ಅಡುಗೆ, ಮನೆ ಕೆಲಸದ ಜಂಜಾಟದ ನಡುವೆ ಹೆಚ್ಚಾಗಿ ಹೊರಗೆ ಹೋಗದ ವೀಣಾ, ಖುಷಿಯಿಂದ ಹೊರಗೆ ಹೋಗುತ್ತಾಳೆ. ಆದರೆ ಮನೆ ಕೀಯನ್ನೂ ಜೊತೆಗೆ ತೆಗೆದುಕೊಂಡು ಹೋಗುತ್ತಾಳೆ. ಸಂತೋಷ್, ಮನೆ ತೋರಿಸಿದ್ದೂ ಅಲ್ಲದೆ ಅವಳಿಗೆ ಪಾನಿಪೂರಿ ಕೊಡಿಸಿ, ಜ್ಯೂಸ್ ಕೊಡಿಸುತ್ತಾನೆ. ಇವರು ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದರೆ ನನಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಡನ ಮೇಲೆ ವೀಣಾಗೆ ಅನುಮಾನ ಬಂದಿದೆ. ಕೊನೆಗೂ ಸಂತೋಷ್ ಪೀಠಿಕೆ ಹಾಕುತ್ತಾ ತನ್ನ ಮನಸಿನಲ್ಲಿರುವ ವಿಚಾರವನ್ನು ವೀಣಾ ಬಳಿ ಹೇಳುತ್ತಾನೆ. ಮನೆ ಕಟ್ಟುತ್ತಿರುವುದು ಅಪ್ಪನಿಗೆ ಗೊತ್ತಿಲ್ಲ. ಹಾಗಾಗಿ ಅವರನ್ನು ಸೆಕ್ಯೂರಿಟಿ ಕೆಲಸದಿಂದ ತೆಗೆಯಬೇಕಾಯ್ತು. ಮನೆ ಬಳಿ ಬೆಲೆ ಬಾಳುವ ವಸ್ತುಗಳಿವೆ, ನಂಬಿಕಸ್ತರು ಸಿಗುವುದು ಕಷ್ಟ, ಆದ್ದರಿಂದ ನಿಮ್ಮ ಅಮ್ಮ ಹೇಗೋ ಬೇರೆಯವರ ಮನೆ ಕೆಲಸ ಮಾಡುತ್ತಿದ್ದಾರಲ್ಲ, ಅದರ ಬದಲಿಗೆ ನಮ್ಮ ಮನೆ ನೋಡಿಕೊಂಡರೆ ನಮಗೆ ಸಹಾಯವಾಗುತ್ತೆ ಎನ್ನುತ್ತಾನೆ.
ಮೊದಲು ವೀಣಾ ಸಂತೋಷ್ ಮಾತಿಗೆ ಬೇಸರಗೊಂಡರೂ ಅಮ್ಮ ತನ್ನ ಜೊತೆಯಲ್ಲೇ ಇರುತ್ತಾಳೆ ಎಂಬ ಖುಷಿಗೆ ಒಪ್ಪಿಕೊಳ್ಳುತ್ತಾಳೆ. ಈ ವಿಚಾರವನ್ನು ಅಮ್ಮನ ಬಳಿ ಮಾತನಾಡಲು ವೀಣಾ ಹಾಗೂ ಸಂತೋಷ್ ಹೋಗುತ್ತಾರೆ. ಆದರೆ ವೀಣಾ ತಾಯಿ ಸದ್ಯಕ್ಕೆ ಮನೆ ನೋಡಿಕೊಳ್ಳಲು ನಿರಾಕರಿಸುತ್ತಾಳೆ. ನಾನು 4-5 ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಇದ್ದಕ್ಕಿದ್ದಂತೆ ಆ ಮನೆಯನ್ನು ಬಿಟ್ಟು ಬಂದರೆ ಅವರಿಗೆ ಸಮಸ್ಯೆ ಆಗುತ್ತೆ, ಅಲ್ಲದೆ ಅವರು ಸಂಬಳವನ್ನೂ ಕೊಡುವುದಿಲ್ಲ. ಆದ್ದರಿಂದ ನನಗೆ ಒಂದು ತಿಂಗಳು ಸಮಯ ಕೊಡಿ, ಸಂಬಳ ಪಡೆದು, ಅವರಿಗೆ ಬೇರೆ ವ್ಯವಸ್ಥೆ ಮಾಡಿ ಬರುತ್ತೇನೆ ಎನ್ನುತ್ತಾಳೆ. ಅಷ್ಟು ದಿನ ನಾನೊಬ್ಬನೇ ಕಷ್ಟ ಪಡಬೇಕಾ ಎಂದು ಸಂತೋಷ್ ಮನಸ್ಸಿನಲ್ಲೇ ಬೇಸರ ಮಾಡಿಕೊಳ್ಳುತ್ತಾನೆ. ಸರಿ ಅಮ್ಮ ನಿನಗೆ ಸಾಧ್ಯವಾದಾಗ ಮನೆಗೆ ಬಾ ಎಂದು ವೀಣಾ ಹೇಳುತ್ತಾಳೆ.
ಇತ್ತ ಸಿಂಚನಾ ಆಫೀಸಿನಿಂದ ಬೇಗ ಮನೆಗೆ ಬರುತ್ತಾಳೆ. ಮನೆ ಬೀಗ ಹಾಕಿರುವುದನ್ನು ನೋಡಿ ಕೋಪಗೊಳ್ಳುತ್ತಾಳೆ. ಆಫೀಸ್ ಕೆಲಸಕ್ಕೆ ತಡವಾಗುತ್ತಿದೆ, ಲ್ಯಾಪ್ಟಾಪ್ ಚಾರ್ಚ್ ಕಡಿಮೆ ಇದೆ, ಈ ಮನೆಯವರಿಗೆ ಎಲ್ಲಾದರೂ ಹೋಗುವಾಗ ಹೇಳಿ ಹೋಗಬೇಕು ಅಥವಾ ಕೀ ಕೊಟ್ಟು ಹೋಗಬೇಕು ಎಂಬ ಪ್ರಜ್ಞೆ ಇಲ್ಲ ಎಂದು ಗೊಣಗುತ್ತಾಳೆ. ಕೋಪದಿಂದ ಗಂಡ ಹರೀಶನಿಗೆ ಕರೆ ಮಾಡುತ್ತಾಳೆ. ಹರೀಶ ಆಫೀಸಿನಿಂದ ಓಡೋಡಿ ಬರುತ್ತಾನೆ. ಹೆಂಡತಿ ಸಿಟ್ಟು ನೋಡಲಾಗದೆ, ಸರಿ ನಾನು ಲ್ಯಾಪ್ಟಾಪ್ ಚಾರ್ಜ್ ಮಾಡಲು ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ನೆರೆಮನೆಯಿಂದ ಕನೆಕ್ಷನ್ ತೆಗೆದುಕೊಳ್ಳುತ್ತಾನೆ. ಆದರೆ ಸ್ವಿಚ್ ಆನ್ ಮಾಡುತ್ತಿದ್ದಂತೆ ಲ್ಯಾಪ್ಟಾಪ್ ಶಾರ್ಟ್ ಸರ್ಕ್ಯೂಟ್ ಆಗುತ್ತದೆ. ಅಷ್ಟರಲ್ಲಿ ಲಕ್ಷ್ಮೀ ಹಾಗೂ ಶ್ರೀನಿವಾಸ್ ಬರುತ್ತಾರೆ. ಅವರ ಮುಂದೆ ಸಿಂಚನಾ ವೀಣಾಳನ್ನು ಬೈಯ್ಯುತ್ತಾಳೆ.
ಎಲ್ಲರೂ ಹೊರಗೆ ನಿಂತಿರುವುದನ್ನು ನೋಡಿ ವೀಣಾ ಗಾಬರಿ ಆಗುತ್ತಾಳೆ. ನೀವೆಲ್ಲಾ ಇವತ್ತು ಇಷ್ಟು ಬೇಗ ಬಂದಿದ್ದೀರಾ ಬನ್ನಿ ಮನೆ ಒಳಗೆ ಎಂದು ಕರೆಯುತ್ತಾಳೆ. ಆದರೆ ಸಿಂಚನಾ ಸಿಟ್ಟಿನಿಂದ ವೀಣಾ ಜೊತೆ ಕೂಡಾ ಜಗಳ ತೆಗೆಯುತ್ತಾಳೆ. ನಾನು ಹೊರಗೆ ನಿಲ್ಲಬೇಕು ಎಂಬ ಕಾರಣದಿಂದಲೇ ನೀವು ಹೀಗೆ ಮಾಡಿದ್ದೀರ ಎನ್ನುತ್ತಾಳೆ. ಇಷ್ಟು ದಿನ ಆಫೀಸಿನಿಂದ ನೀನು ಲೇಟ್ ಆಗಿ ಬರುತ್ತಿದ್ದೆ, ಆದರೆ ಇವತ್ತು ಬೇಗ ಬಂದಿದ್ದೀಯ, ಅದು ನನಗೆ ಹೇಗೆ ಗೊತ್ತಾಗಬೇಕು ಎಂದು ವೀಣಾ ಕೇಳುತ್ತಾಳೆ. ಹೀಗೆ ಇಬ್ಬರಿಗೂ ಮಾತಿನ ಚಕಮಕಿ ನಡೆಯುತ್ತದೆ. ಆಯ್ತು, ವೀಣಾ ಮಾಡಿದ ತಪ್ಪಿಗೆ ನಾನು ನಿನ್ನ ಬಳಿ ಕ್ಷಮೆ ಕೇಳುತ್ತೇನೆ ಎಂದು ಲಕ್ಷ್ಮೀ, ಸಿಂಚನಾ ಮುಂದೆ ಕೈ ಮುಗಿದು ಕ್ಷಮೆ ಕೇಳುತ್ತಾಳೆ. ಈಗಾಗಲೇ ಮನೆ ನೆಮ್ಮದಿ ಹಾಳಾಗಿದೆ. ದಯವಿಟ್ಟೂ ಇನ್ನೂ ನೆಮ್ಮದಿ ಹಾಳುಮಾಡಬೇಡಿ, ದಯವಿಟ್ಟು ಈ ವಯಸ್ಸಿನಲ್ಲಿ ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡಿ ಎಂದು ಲಕ್ಷ್ಮೀ ಕೈ ಮುಗಿದು ಎಲ್ಲರ ಬಳಿ ಮನವಿ ಮಾಡಿಕೊಳ್ಳುತ್ತಾಳೆ.
ಮಾತು ಮಾತಿಗೂ ಮನೆ ಬಿಟ್ಟು ಹೋಗುತ್ತೇನೆ ಎನ್ನುವ ಸಿಂಚನಾ ಈ ಬಾರಿ ನಿಜವಾಗಲೂ ಮನೆ ಬಿಟ್ಟು ಹೋಗುತ್ತಾಳಾ? ಸಿದ್ದು ತಾನು ನಿರ್ಧರಿಸಿದಂತೆ ಪೊಲೀಸರ ಬಳಿ ಸರಂಡರ್ ಆಗುತ್ತಾನಾ? ಜಾಹ್ನವಿ ಮುಂದಿನ ನಡೆ ಏನು? ಬುಧವಾರದ ಸಂಚಿಕೆಯಲ್ಲಿ ತಿಳಿಯಲಿದೆ.