ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 18ರ ಎಪಿಸೋಡ್ ಕಥೆ ಹೀಗಿದೆ. ಮಗುವನ್ನು ಕಳೆದುಕೊಂಡು ಜಾನು ನೋವು ಅನುಭವಿಸುತ್ತಿದ್ದಾಳೆ. ಜೊತೆಗೆ ಕೈ ಹಿಡಿದ ಗಂಡ ಜಯಂತ್ ನಾನು ಅಂದುಕೊಂಡಂತೆ ಅಲ್ಲ ಎಂದು ತಿಳಿದು ಪ್ರತಿದಿನ ಕಣ್ಣೀರಿಡುತ್ತಿದ್ದಾಳೆ. ಇದರ ನಡುವೆ ಅಜ್ಜಿಗೆ ಪ್ರಜ್ಞೆ ಬಂದಿರುವ ವಿಚಾರ ತಿಳಿದು ಜಾನು ಖುಷಿಯಾಗುತ್ತಾಳೆ. ಜಯಂತನಿಂದ ಮತ್ತೆ ಅಜ್ಜಿಗೆ ಏನು ಸಮಸ್ಯೆ ಆಗುವುದೋ ಎಂಬ ಆತಂಕದಲ್ಲಿದ್ಧಾಳೆ.
ಅಜ್ಜಿಗೆ ಪ್ರಜ್ಞೆ ಬಂದ ಖುಷಿಗೆ ಜಾನು ಸಿಹಿ ಮಾಡಿ ಜಯಂತನಿಗೆ ತಿನ್ನಿಸುತ್ತಾಳೆ. ಜಯಂತ ಪ್ರತಿ ಕ್ಷಣವೂ ಆತಂಕದಿಂದ ಬದುಕುತ್ತಿದ್ದಾನೆ. ಅಜ್ಜಿಗೆ ಪೂರ್ತಿ ಪ್ರಜ್ಞೆ ಬಂದು ಎಲ್ಲಿ ನನ್ನ ಬಂಡವಾಳ ಬಯಲು ಮಾಡುವರೋ ಎಂದು ಚಿಂತಿಸುತ್ತಿದ್ದಾನೆ, ಈ ನಡುವೆ ಜಾಹ್ನವಿ ವರ್ತಿಸುತ್ತಿರುವುದನ್ನು ನೋಡಿ ಜಯಂತ್ ಗಾಬರಿಯಾಗುತ್ತಾನೆ. ಮತ್ತೊಂದೆಡೆ ಹರೀಶ, ಅಜ್ಜಿ ಜೊತೆ ಮಾತನಾಡುವಾಗ ಟ್ರಂಕ್…ಟ್ರಂಕ್ ಎಂದು ಕನವರಿಸುತ್ತಾರೆ. ಅದನ್ನು ಕೇಳಿ ಹರೀಶ ಬಹುಶ: ಟ್ರಂಕ್ನಲ್ಲಿ ದುಡ್ಡು ಇರಬಹುದು ಎಂದುಕೊಳ್ಳುತ್ತಾನೆ. ಈ ವಿಚಾರವನ್ನು ಅಣ್ಣ ಸಂತೋಷನಿಗೆ ಹೇಳುತ್ತಾನೆ. ಬಹುಶ: ಅಜ್ಜಿ ತನಗೆ ಬಂದ ಪೆನ್ಷನ್ ಹಣವನ್ನು ಇದರಲ್ಲಿ ಬಚ್ಚಿಟ್ಟಿರಬಹುದು ಹೇಗಾದರೂ ಮಾಡಿ ಅದನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಮಾತನಾಡಿಕೊಳ್ಳುತ್ತಾರೆ.
ನೀನು ಹೋಗಿ ಅಜ್ಜಿ ರೂಮ್ನಿಂದ ಟ್ರಂಕ್ ತೆಗೆದುಕೊಂಡು ಬಾ, ಅದರಲ್ಲಿ ಏನಿದೆ ನೋಡೋಣ ಎಂದು ಸಂತೋಷ್, ಹರೀಶನಿಗೆ ಹೇಳುತ್ತಾನೆ. ಹರೀಶ ಯಾರಿಗೂ ತಿಳಿಯದಂತೆ ಅಜ್ಜಿ ರೂಮ್ನಿಂದ ಟ್ರಂಕನ್ನು ಹೊರತರುತ್ತಾನೆ. ಆದರೆ ಟ್ರಂಕ್ಗೆ ಬೀಗ ಹಾಕಿರುತ್ತದೆ, ಇದನ್ನು ಹೇಗೆ ತೆಗೆಯುವುದು, ಬೀಗ ಒಡೆದರೆ ಯಾರಿಗಾದರೂ ಅನುಮಾನ ಬರಬಹುದು, ಕೀ ನಮ್ಮ ಬಳಿ ಇಲ್ಲ ಎಂದು ಸಂತೋಷ ಹೇಳುತ್ತಾನೆ. ಅದಕ್ಕೆ ನನ್ನ ಬಳಿ ಒಂದು ಐಡಿಯಾ ಇದೆ, ಡೂಪ್ಲಿಕೇಟ್ ಕೀ ಮಾಡಿಸಿದರೆ ಆಯ್ತು ಎಂದು ಹರೀಶ ಹೇಳುತ್ತಾನೆ. ಹರೀಶನ ಮಾತು ಕೇಳಿ ಸಂತೋಷನಿಗೆ ಅನುಮಾನ ಉಂಟಾಗುತ್ತದೆ. ಡೂಪ್ಲಿಕೇಟ್ ಕೀ ಐಡಿಯಾ ಕೊಡುತ್ತಿರುವೆ ಎಂದಾದರೆ ನೀನು ಇದಕ್ಕೂ ಮುನ್ನ ಎಲ್ಲಾದರೂ ಕಳ್ಳತನ ಮಾಡಿದ್ಯಾ ಎಂದು ಕೇಳುತ್ತಾನೆ. ಅಯ್ಯೋ ಎಷ್ಟೋ ಸಿನಿಮಾಗಳಲ್ಲಿ ಇದರ ಬಗ್ಗೆ ತೋರಿಸುತ್ತಾರೆ ಅದನ್ನು ನೋಡಿ ಹೇಳಿದ್ದು ಎಂದು ಹರೀಶ ಹೇಳುತ್ತಾನೆ. ಹಿಂದೆ ತಾನು ಸಂತೋಷನ ಹಣ ಕದ್ದಿದ್ದನ್ನು ನೆನಪಿಸಿಕೊಳ್ಳುತ್ತಾನೆ.
ಇತ್ತ ಡಾಕ್ಟರ್ಗೆ ಕರೆ ಮಾಡುವ ಜಯಂತ್, ಜಾಹ್ನವಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾನೆ. ಕೂಡಲೇ ಡಾಕ್ಟರ್ ಮನೆಗೆ ಬಂದು ಜಾಹ್ನವಿಯನ್ನು ಚೆಕಪ್ ಮಾಡುತ್ತಾರೆ. ಮಗು ಕಳೆದುಕೊಂಡು ನೀವು ಎಷ್ಟು ನೋವು ಅನುಭವಿಸುತ್ತಿದ್ದೀರಿ ಎಂದು ನನಗೆ ಗೊತ್ತು, ಆದರೆ ಪ್ರಪಂಚದಲ್ಲಿ ನಿಮಗಿಂತ ನೋವು ಅನುಭವಿಸುವ ಎಷ್ಟೋ ಜನರಿದ್ದಾರೆ, ನೀವು ಎಲ್ಲವನ್ನೂ ಮರೆತು ಮೊದಲಿನಂತೆ ಬದುಕಬೇಕು ಎಂದು ಬುದ್ಧಿಮಾತು ಹೇಳುತ್ತಾರೆ. ಆದರೆ ಜಾಹ್ನವಿ ತಾನು ಅನುಭವಿಸುತ್ತಿರುವ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಜಾಹ್ನವಿ, ಮಗುವನ್ನು ಕಳೆದುಕೊಂಡು ತುಂಬಾ ಡಿಪ್ರೆಷನ್ನಲ್ಲಿದ್ಧಾರೆ, ಅವರು ಇನ್ನೂ ಸ್ವಲ್ಪ ದಿನ ಆಸ್ಪತ್ರೆಯಲ್ಲಿರಲಿ ಎಂದರೆ ನೀವು ಒಪ್ಪಲಿಲ್ಲ, ಅವರ ತಂದೆ ಮನೆಗೂ ಕಳಿಸುತ್ತಿಲ್ಲ, ಈ ರೀತಿ ಆದರೆ ಬಹಳ ಕಷ್ಟ. ನಾನು ಒಂದು ಮಾತ್ರೆ ಬರೆದುಕೊಡುತ್ತೇನೆ. ಜಾಹ್ನವಿ ಮತ್ತೆ ಡ್ರಿಪ್ರೆಷನ್ಗೆ ಹೋದರೆ ಆ ಮಾತ್ರೆ ಕೊಡಿ, ಆಗ ಅವರು ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ ಎಂದು ಡಾಕ್ಟರ್, ಜಯಂತನಿಗೆ ಹೇಳುತ್ತಾರೆ.
ಅಕ್ಕ ಭಾವನಾಗೆ ಕರೆ ಮಾಡುವ ಜಾಹ್ನವಿ, ಅಜ್ಜಿಗೆ ಪ್ರಜ್ಞೆ ಬಂದ ನಂತರ ಮತ್ತೇನೂ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿಕೊಂಡು ಅಳುತ್ತಾಳೆ. ತಂಗಿ ಮಾತು ಕೇಳಿದ ಭಾವನಾ, ಅವಳು ಏನೋ ಸಮಸ್ಯೆ ಅನುಭವಿಸುತ್ತಿದ್ದಾಳೆ. ಇತ್ತೀಚೆಗೆ ಇವಳು ನಡೆದುಕೊಳ್ಳುವ ರೀತಿ ವಿಚಿತ್ರವಾಗಿದೆ ಎಂದುಕೊಳ್ಳುತ್ತಾಳೆ. ನೀನು ಗರ್ಭಿಣಿ, ಈ ಸಮಯದಲ್ಲಿ ನೀನು ಬೇರೆ ವಿಚಾರದ ಬಗ್ಗೆ ಯೋಚಿಸಬಾರದು, ರೆಸ್ಟ್ ಮಾಡಬೇಕು ಎಂದು ಧೈರ್ಯ ಹೇಳುತ್ತಾಳೆ. ಈಗಲೇ ನಾನು ತಂಗಿಯನ್ನು ನೋಡಬೇಕು ಎಂದು ಭಾವನಾ ಸಿದ್ದು ಬಳಿ ಹೇಳುತ್ತಾಳೆ. ನಾನೂ ಬರುತ್ತೇನೆ ಎಂದು ಸಿದ್ದು , ಹೆಂಡತಿಯನ್ನು ಕರೆದುಕೊಂಡು ಜಾಹ್ನವಿಯನ್ನು ನೋಡಲು ಹೊರಡುತ್ತಾನೆ.
ಜಯಂತನಿಗೆ ಒಂದು ಕಡೆ ಜಾಹ್ನವಿ ಆರೋಗ್ಯದ ಚಿಂತೆ ಆದರೆ, ಮತ್ತೊಂದೆಡೆ ಅಜ್ಜಿ ಹೇಗಿರಬಹುದು , ಪೂರ್ತಿ ಪ್ರಜ್ಞೆ ಬಂತಾ ಎಂದು ತಿಳಿದುಕೊಳ್ಳುವ ಆತುರ. ಆದರೆ ಜಾಹ್ನವಿ ಕಣ್ಣು ತಪ್ಪಿಸಿ ಎಲ್ಲೂ ಹೋಗುವಂತಿಲ್ಲ, ಆಗ ಡಾಕ್ಟರ್ ಹೇಳಿದ್ದು ನೆನಪಿಗೆ ಬರುತ್ತದೆ, ಮಾರ್ಕೆಟ್ಗೆ ಹೋಗಿ ಬರುವೆ ಎಂದು ಸುಳ್ಳು ಹೇಳಿ ಡಾಕ್ಟರ್ ಹೇಳಿದ ಮಾತ್ರೆಯನ್ನು ತೆಗೆದುಕೊಂಡು ಬರುತ್ತಾನೆ. ಅದನ್ನು ಹಾಲಿನಲ್ಲಿ ಸೇರಿಸಿ ಜಾಹ್ನವಿಗೆ ಕೊಡುತ್ತಾನೆ, ನನ್ನನ್ನು ಮಲಗಿಸಿ ನೀವು ಅಜ್ಜಿಯನ್ನು ನೋಡಲು ಹೋಗುವ ಪ್ಲ್ಯಾನ್ ಮಾಡುತ್ತಿದ್ದೀರಾ ಎಂದು ಜಾನು ಕೇಳುತ್ತಾಳೆ. ಹಾಗೆಲ್ಲಾ ಇಲ್ಲ, ಆ ರೀತಿ ಹೋಗುವಂತಿದ್ದರೆ ನಿಮಗೆ ಬೇರೆ ನೆಪ ಹೇಳಿ ಹೋಗುತ್ತಿದ್ದೆ, ಆದರೆ ನಾನು ನಿಮಗೆ ಪ್ರಾಮಿಸ್ ಮಾಡಿದ್ದೀನಿ, ನನಗೆ ನಿಮ್ಮ ಆರೋಗ್ಯ ಮುಖ್ಯ, ದಯವಿಟ್ಟು ಹಾಲು ಕುಡಿಯಿರಿ ಎನ್ನುತ್ತಾನೆ.
ಜಾಹ್ನವಿ ಹಾಲು ಕುಡಿಯುತ್ತಿದ್ದಂತೆ ನಿದ್ರೆಗೆ ಜಾರುತ್ತಾಳೆ. ಇದೇ ಸರಿಯಾದ ಸಮಯ ಎಂದು ಜಯಂತ, ಅಜ್ಜಿಯನ್ನು ನೋಡಲು ಹೊರಡುತ್ತಾನೆ. ಆದರೆ ಮನೆ ಬಾಗಿಲು ತೆಗೆಯುತ್ತಿದ್ದಂತೆ ಅಲ್ಲಿ ಸಿದ್ದು ಹಾಗೂ ಭಾವನಾ ನಿಂತಿರುತ್ತಾರೆ. ಅವರನ್ನು ನೋಡಿ ಜಯಂತ್ ಶಾಕ್ ಆಗುತ್ತಾನೆ, ಛೇ ಈ ಸಮಯದಲ್ಲಿ ಬರಬೇಕಿತ್ತಾ, ಇವರು ಬರದಿದ್ದರೆ ನಾನು ಅಜ್ಜಿಯನ್ನು ನೋಡಲು ಹೋಗುತ್ತಿದ್ದೆ ಎಂದುಕೊಳ್ಳುತ್ತಾನೆ. ಸಿದ್ದು-ಭಾವನಾ ಇಬ್ಬರೂ ಜಾಹ್ನವಿಗಾಗಿ ಗಿಫ್ಟ್ ತಂದಿರುತ್ತಾರೆ. ಜಾಹ್ನವಿ ಮಲಗಿದ್ದಾಳೆ, ನೀವು ಮಾತನಾಡಿಸುವಿರಿ ಎಂದರೆ ಈಗಲೇ ಎಬ್ಬಿಸುತ್ತೇನೆ ಎನ್ನುತ್ತಾನೆ, ಇಲ್ಲ ಈಗ ಎಬ್ಬಿಸಬೇಡಿ, ಬೆಳಗಿನವರೆಗೂ ಇದ್ದೂ ಅವಳನ್ನು ನೋಡಿಕೊಂಡು ಹೋಗುತ್ತೇವೆ ಎಂದು ಭಾವನಾ ಹೇಳುತ್ತಾಳೆ. ಭಾವನಾ ಹಾಗೂ ಸಿದ್ದು ಮನೆಯಲ್ಲಿ ಉಳಿದುಕೊಳ್ಳುವುದು ಜಯಂತನಿಗೆ ಇಷ್ಟವಿಲ್ಲದಿದ್ದರೂ ಏನೂ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಭಾವನಾ ಜಾನು ರೂಮ್ಗೆ ಹೋಗುತ್ತಾಳೆ. ಸಿದ್ದು, ಜಯಂತನ ಜೊತೆ ಉಳಿದುಕೊಳ್ಳುತ್ತಾನೆ. ಅವರಿಬ್ಬರೂ ಜಾಹ್ನವಿಗಾಗಿ ತಂದ ಗೊಂಬೆಯನ್ನು ಜಯಂತ್ ಬಚ್ಚಿಡುವ ಪ್ರಯತ್ನ ಮಾಡುತ್ತಾನೆ.
ಅಕ್ಕ ಭಾವ ಬಂದಿರುವ ವಿಚಾರ ಜಾಹ್ನವಿಗೆ ಗೊತ್ತಾಗುವುದಾ? ಜಾನು ಅನುಭವಿಸುತ್ತಿರುವ ನೋವು , ಭಾವನಾಗೆ ಗೊತ್ತಾಗುವುದಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.