ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 743ರ ಎಪಿಸೋಡ್ ಕಥೆ ಇಲ್ಲಿದೆ. ಗುಂಡಣ್ಣ ಸ್ಕೂಲ್ಗೆ ಹೋಗುವುದು ಬಿಟ್ಟು ಶೂ ಪಾಲಿಶ್ ಮಾಡುತ್ತಿರುವ ವಿಚಾರ ತಾಂಡವ್ಗೆ ಗೊತ್ತಾಗಿ ರಂಪಾಟ ಮಾಡಿದ್ದಾನೆ. ನೀನು ಹೀಗೆ ಶೂ ಪಾಲಿಶ್ ಮಾಡುತ್ತಿರುವುದನ್ನು ನನ್ನ ಆಫೀಸ್ನವರು ನೋಡಿದ್ರೆ ಏನು ಗತಿ, ನನ್ನ ಮರ್ಯಾದೆ ಏನಾಗುತ್ತಿತ್ತು ಎಂದು ರೇಗುತ್ತಾನೆ. ರಸ್ತೆಯಲ್ಲೇ ನಿಂತು ಭಾಗ್ಯಾ ಮೇಲೆ ಕೂಡಾ ದರ್ಪ ತೋರುತ್ತಾನೆ. ಆದರೆ ಭಾಗ್ಯಾ, ತಾಂಡವ್ಗೆ ಸರಿಯಾದ ಉತ್ತರ ಕೊಡುತ್ತಾಳೆ.
ಭಾಗ್ಯಾ ಜೋಕರ್ ಕೆಲಸ ಮಾಡುತ್ತಿರುವುದನ್ನು ತಿಳಿದು ತಾಂಡವ್ ಅವಳನ್ನು ಅಪಹಾಸ್ಯ ಮಾಡುತ್ತಾನೆ. ಈ ಕೆಲಸ ಮಾಡಿಕೊಂಡು ನನ್ನ ಮಕ್ಕಳನ್ನು ನೀನು ಸಾಕಲು ಸಾಧ್ಯವಿಲ್ಲ, ಅವರನ್ನು ನನ್ನ ಜೊತೆ ಕರೆದೊಯ್ಯುತ್ತೇನೆ ಎಂದು ತನ್ಮಯ್ ಕೈ ಹಿಡಿದು ಎಳೆದೊಯ್ಯಲು ಪ್ರಯತ್ನಿಸುತ್ತಾನೆ. ಆದರೆ ಗುಂಡಣ್ಣ ತಾಂಡವ್ ಕೈ ಕಚ್ಚಿ ಬಿಡಿಸಿಕೊಳ್ಳುತ್ತಾನೆ. ರಸ್ತೆಯಲ್ಲಿ ನೆರೆದಿದ್ದ ಜನರು ಕೂಡಾ ತಾಂಡವ್ಗೆ ಛೀಮಾರಿ ಹಾಕುತ್ತಾರೆ. ಇವನಿಗೆ ಇನ್ನೊಂದು ಸಂಬಂಧ ಬೇರೆ ಇದ್ಯಂತೆ ಎಂದು ಮಾತನಾಡಿಕೊಳ್ಳುತ್ತಾರೆ. ತಾಂಡವ್ ಕೋಪದಿಂದ ಮನೆ ಮುಂದೆ ಬಂದು ಕಾರ್ ಹಾರ್ನ್ ಮಾಡುತ್ತಾನೆ. ಆ ಸದ್ದಿಗೆ ನೆರೆಹೊರೆಯವರೂ ಮನೆ ಹೊರಗೆ ಬಂದು ನಿಲ್ಲುತ್ತಾರೆ.
ತಾಂಡವ್ ಸದ್ದು ಕೇಳಿ ಕುಸುಮಾ, ಧರ್ಮರಾಜ್ ಕೂಡಾ ಮನೆ ಹೊರಗೆ ಬರುತ್ತಾರೆ. ನಿಮ್ಮ ಜೊತೆ ಮಾತನಾಡಬೇಕು ಬನ್ನಿ ಎಂದು ತಾಂಡವ್ ಕರೆಯುತ್ತಾನೆ, ನಾವು ಇನ್ನೂ ನಿನ್ನಷ್ಟು ಕೆಳಮಟ್ಟಕ್ಕೆ ಇಳಿದಿಲ್ಲ ಎಂದು ಧರ್ಮರಾಜ್ ಹೇಳುತ್ತಾನೆ. ಹಾಗಾದರೆ ನಾನು ಬರುವೆ ಎಂದು ತಾಂಡವ್ ಮೇಲೆ ಬರಲು ಯತ್ನಿಸುತ್ತಾನೆ. ಇಲ್ಲಿ ಬಂದರೆ ಕಾಲು ಮುರಿಯುವೆ ಎಂದು ಸುನಂದಾ ಎಚ್ಚರಿಸುತ್ತಾಳೆ. ಸರಿ ಇಲ್ಲೇ ನಿಂತು ನಿಮ್ಮ ಸೊಸೆಯ ಗುಣಗಾನ ಮಾಡುವೆ ಕೇಳಿಸಿಕೊಳ್ಳಿ, ನಿಮ್ಮ ಸೊಸೆ ನಿಮಗೆ ಸುಳ್ಳು ಹೇಳಿ ಮಾಡಬಾರದ ಕೆಲಸ ಮಾಡುತ್ತಿದ್ದಾಳೆ. ಇಷ್ಟು ದಿನ ನನ್ನ ಜೀವನದಲ್ಲಿ ಥಕ ಥೈ ಅಂತ ಕುಣಿಯುತ್ತಿದ್ದಳು, ಇದೀಗ ಅಲ್ಲೆಲ್ಲೋ ಬಣ್ಣ ಹಚ್ಚಿಕೊಂಡು ಕುಣಿಯುತ್ತಿದ್ದಾಳೆ. ತಾನೂ ಬೀದಿ ಬೀದಿ ಸುತ್ತುವುದೂ ಅಲ್ಲದೆ, ಮಗನನ್ನೂ ಬೀದಿಗೆ ತಳ್ಳಿದ್ದಾಳೆ.
ಇನ್ನು ಸ್ವಲ್ಪ ದಿನ ನಿಮ್ಮನ್ನೂ ರಸ್ತೆಯಲ್ಲಿ ನಿಲ್ಲಿಸುತ್ತಾಳೆ. ನನ್ನ ಮಾತು ಕೇಳಿದ್ದರೆ ಇಂದು ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ, ಆದರೆ ಇಂದು ನಿಮ್ಮ ಸೊಸೆ ಸೂರ್ಯವಂಶಿ ಮನೆತನದ ಮರ್ಯಾದೆಯನ್ನು ಚೆನ್ನಾಗಿ ಉಳಿಸುತ್ತಿದ್ದಾಳೆ, ಅನುಭವಿಸಿ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ತಾಂಡವ್ ಹೇಳಿದ ಮಾತು ಯಾವುದೂ ಕುಸುಮಾ, ಧರ್ಮರಾಜ್ಗೆ ಅರ್ಥವಾಗುವುದಿಲ್ಲ. ಭಾಗ್ಯಾ ಬರಲಿ ಅವಳನ್ನೇ ಕೇಳೋಣ ಎಂದು ಸುಮ್ಮನಾಗುತ್ತಾರೆ. ಸುನಂದಾ ಮಗಳ ಬಗ್ಗೆ ಕೋಪಗೊಳ್ಳುತ್ತಾಳೆ. ಹೆತ್ತ ಕರುಳ ಸಂಕಷ್ಟ ಯಾರಿಗೂ ಅರ್ಥವಾಗುವುದಿಲ್ಲ, ಇವತ್ತು ನಾನು ಭಾಗ್ಯಾಳನ್ನು ಪ್ರಶ್ನೆ ಮಾಡೇ ತೀರುತ್ತೇನೆ, ನನ್ನನ್ನು ಯಾರೂ ತಡೆಯಬೇಡಿ ಎಂದು ಸುನಂದಾ ಸಿಟ್ಟಾಗುತ್ತಾಳೆ.
ಇತ್ತ ಭಾಗ್ಯಾ ಹಾಗೂ ಗುಂಡಣ್ಣ ಬಸ್ಗಾಗಿ ಕಾಯುವಾಗ ಗುಂಡಣ್ಣನ ಪರಿಚಯದ ಹುಡುಗನೊಬ್ಬ ಎದುರಾಗುತ್ತಾನೆ. ತನ್ಮಯ್, ಆ ಹುಡುಗನನ್ನು ಬ್ರೋ ಎಂದು ಕರೆದು ಮಾತನಾಡಿಸುತ್ತಾನೆ. ಇವರು ಕ್ರಿಕೆಟ್ ಆಡುತ್ತಾರೆ, ನಾನೂ ಕೂಡಾ ಇವರ ಜೊತೆ ಬಹಳಷ್ಟು ಸಾರಿ ಕ್ರಿಕೆಟ್ ಆಡಿದ್ದೇನೆ ಎಂದು ಭಾಗ್ಯಾಗೆ ಪರಿಚಯ ಮಾಡಿಕೊಡುತ್ತಾನೆ. ನಾನು ಊಟಕ್ಕೆ ಹೊರಗೆ ಹೋಗುತ್ತಿದ್ದೇನೆ, ನಮ್ಮ ಹಾಸ್ಟೆಲ್ನಲ್ಲಿ ಊಟ ಸರಿ ಇಲ್ಲ, ಹೋಟೆಲ್ನಲ್ಲೂ ಊಟ ಇಷ್ಟವಾಗುವುದಿಲ್ಲ, ಏನು ಮಾಡುವುದು ವಿಧಿ ಇಲ್ಲ ಎನ್ನುತ್ತಾನೆ. ಆಗ ಗುಂಡಣ್ಣ ತಾನು ತಂದಿರುವ ಊಟದ ಡಬ್ಬಿಯಲ್ಲಿ ಶೇರ್ ಮಾಡಿಕೊಳ್ಳೋಣ ಬನ್ನಿ ಎಂದು ಕರೆಯುತ್ತಾನೆ. ಭಾಗ್ಯಾ, ಇಬ್ಬರಿಗೂ ಕೈ ತುತ್ತು ಕೊಡುತ್ತಾಳೆ. ಆ ಊಟ ತಿಂದು ಗುಂಡಣ್ಣನ ಗೆಳೆಯ ಖುಷಿಯಾಗುತ್ತಾನೆ. ಈ ರೀತಿ ಊಟ ಮಾಡಿ ಬಹಳ ದಿನಗಳಾಯ್ತು ಎನ್ನುತ್ತಾನೆ.
ಭಾಗ್ಯಾ, ಗುಂಡಣ್ಣನನ್ನು ಕರೆದುಕೊಂಡು ಮನೆಗೆ ಬರುತ್ತಾಳೆ. ಅವಳಿಗಾಗಿ ಕಾಯುತ್ತಿದ್ದ ಸುನಂದಾ ನೀನು ಮಾಡಬಾರದ ಕೆಲಸ ಮಾಡಿ ಈ ರೀತಿ ಅವಮಾನ ಮಾಡಿಸಿಕೊಳ್ಳುವುದು ಬೇಕಿತ್ತಾ ಎಂದು ಕೇಳುತ್ತಾಳೆ. ನಾನು ಅವಮಾನ ಆಗುವಂಥ ಯಾವ ಕೆಲಸವನ್ನೂ ಮಾಡಿಲ್ಲ ಈಗೇನು, ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಯಬೇಕಾ? ಹೇಳ್ತೀನಿ, ನಾನು ಒಂದು ರೆಸಾರ್ಟ್ನಲ್ಲಿ ಜೋಕರ್ ಕೆಲಸ ಮಾಡುತ್ತಿದ್ದೇನೆ ಎಂದು ಭಾಗ್ಯಾ ತನ್ನ ಕೆಲಸವನ್ನು ವಿವರಿಸಿ ಹೇಳುತ್ತಾಳೆ. ಅದನ್ನು ಕೇಳಿ ಮನೆಯವರು ಶಾಕ್ ಆಗುತ್ತಾರೆ. ಜೊತೆಗೆ ಗುಂಡಣ್ಣ ಶೂ ಪಾಲಿಶ್ ಮಾಡುತ್ತಿದ್ದನ್ನು ಕೇಳಿ ಬೇಸರಗೊಳ್ಳುತ್ತಾರೆ. ನೀನು ಮಾಡುತ್ತಿರುವ ಕೆಲಸದ ಬಗ್ಗೆ ನಿಮ್ಮ ಅತ್ತೆ ಮಾವ ಸಂತೋಷವಾಗಿರಬಹುದು, ಆದರೆ ನನಗೆ ನೋವಾಗುತ್ತಿದೆ ಎಂದು ಸುನಂದಾ ಅಳುತ್ತಾಳೆ.
ನಾನು ಮಾಡುತ್ತಿರುವ ಕೆಲಸದ ಬಗ್ಗೆ ಅತ್ತೆ ಮಾವನಿಗೆ ಖುಷಿ ಇದೆ ಎಂದು ನಿನಗೆ ಹೇಳಿದವರು ಯಾರು? ನಿನಗೆ ಎಷ್ಟು ಸಂಕಟ ಆಗುತ್ತಿದೆಯೋ ಅವರಿಗೂ ಅಷ್ಟೇ ನೋವಿದೆ, ನಿನಗೆ ಅಷ್ಟು ಬೇಸರ ಎನಿಸಿದಲ್ಲಿ ನನ್ನನ್ನು ನೋಡಲು ನೀನು ಬರಬೇಡ ಎಂದು ಭಾಗ್ಯಾ ಹೇಳುತ್ತಾಳೆ. ಆ ಮಾತು ಕೇಳಿ ಸುನಂದಾ ಬೇಸರಗೊಂಡು ಮನೆಗೆ ವಾಪಸ್ ಹೋಗುತ್ತಾಳೆ. ಅಲ್ಲಿ ಗಂಡನ ಬಳಿ ಮಗಳು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಂಡು ಅಳುತ್ತಾಳೆ. ಇತ್ತ ಕುಸುಮಾ ಹಾಗೂ ಧರ್ಮರಾಜ್ ಸೊಸೆ ವಿಚಾರವಾಗಿ ಬಹಳ ನೊಂದುಕೊಳ್ಳುತ್ತಾರೆ. ಮೊದಲೆಲ್ಲಾ ನೀನು ಎಷ್ಟು ಕೆಲಸ ಮಾಡಿದರೂ ಇನ್ನೂ ಮಾಡು ಎನ್ನುತ್ತಿದ್ದೆ, ಆದರೆ ಈಗ ನೀನು ಮಾಡುತ್ತಿರುವ ಕೆಲಸ ನೋಡಿ ನನಗೆ ಬೇಸರವಾಗುತ್ತಿದೆ.
ಮನೆಯಲ್ಲೂ ಒಂದು ರಾಶಿ ಕೆಲಸ ಮಾಡುತ್ತೀಯ, ಅಲ್ಲಿ ಬಿಸಿಲಿನಲ್ಲಿ ಬಣ್ಣ ಹಚ್ಚಿಕೊಂಡು ಕುಣಿಯುತ್ತೀಯ, ಮತ್ತೆ ಮನೆಗೆ ಬಂದು ಎಲ್ಲಾ ಕೆಲಸ ಮಾಡುತ್ತೀಯ ನಮ್ಮಿಂದ ನಿನಗೆ ಬಹಳ ಕಷ್ಟವಾಗುತ್ತಿದೆ, ದಯವಿಟ್ಟು ಕ್ಷಮಿಸು ಮಗಳೇ ಎನ್ನುತ್ತಾರೆ. ನೀವು ನನ್ನನ್ನು ಮಗಳು ಎಂದುಕೊಂಡಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ, ನೀವು ನನ್ನ ಬಳಿ ಕ್ಷಮೆ ಕೇಳಬೇಡಿ, ಅದರ ಬದಲಿಗೆ ನನ್ನ ಬೆನ್ನುಲುಬಾಗಿ ನಿಂತರೆ ಸಾಕು ಎನ್ನುತ್ತಾಳೆ. ಸೊಸೆ ಮಾತು ಕೇಳಿ ಧರ್ಮರಾಜ್-ಕುಸುಮಾ ಖುಷಿಯಾಗುತ್ತಾರೆ. ಇನ್ಮುಂದೆ ನೀನು ಏನು ಮಾಡಿದರೂ ನಮ್ಮ ಬೆಂಬಲ ಇದ್ದೇ ಇರುತ್ತದೆ, ನಾವು ನಿನ್ನ ಜೊತೆ ಇರುತ್ತೇವೆ ಎನ್ನುತ್ತಾರೆ.
ಭಾಗ್ಯಾಳಿಗೆ ತಾಂಡವ್ ಮತ್ತೇನು ಸಮಸ್ಯೆ ತಂದೊಡ್ಡುತ್ತಾನೆ? ಭಾಗ್ಯಾ ಮಗನ ಸ್ಕೂಲ್ ಫೀಸ್ ಕಟ್ಟಲು ಏನು ಮಾಡುತ್ತಾಳೆ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.



