ಸದ್ಯ ಕಾಂಗ್ರೆಸ್ ಪೂರ್ಣ ಪ್ರಮಾಣದ ಸರ್ಕಾರ ಅಧಿಕಾರಕ್ಕೆ ಬಂದರೂ ಅದ್ಯಾಕೋ ಸುಲಭವಾಗಿ ಆಡಳಿತ ಮಾಡೋದಿಕ್ಕೆ ಸಾಧ್ಯವಾಗ್ತಾ ಇಲ್ಲ. ಯಾರ ಸ್ಥಾನ ಯಾವಾಗ ಹೋಗುತ್ತೋ ಅನ್ನೋ ಆತಂಕದಲ್ಲೇ ದಿನಗಳನ್ನ ಕಳೆಯುವಂತಾಗಿದೆ. ಅದರಲ್ಲೂ ಸಿಎಂ ಸ್ಥಾನದ ಕಥೆಯಂತೂ ಕೇಳಲೇಬೇಡಿ. ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ನಿರ್ಣಯ ಮಾಡಲಾಗಿದೆ ಅನ್ನೋ ಚರ್ಚೆ ಕಳೆದ ಎರಡು ವರ್ಷಗಳಿಂದಲೂ ಇದೆ.
ಈ ವಿಚಾರ ದಿನದಿಂದ ದಿನಕ್ಕೆ ಜೋರಾಗ್ತಾ ಇದ್ದಂತೆ ಈ ಹಿಂದೆ ಹೈ ಕಮಾಂಡ್ ಮಧ್ಯ ಪ್ರವೇಶ ಮಾಡಿ ಯಾರೂ ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಅಂತ ಹೇಳಿತ್ತು. ಇದೆಲ್ಲದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಬಹಿರಂಗ ಹೇಳಿಕೆ ಸೂಕ್ತ ಅಲ್ಲ ಅಂತ ಹೇಳಿಕೆ ಕೊಡುವವರ ವಿರುದ್ಧ ಗುಡುಗಿತ್ತು. ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರಿಗೆ ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ ಕೂಡ ಕೊಡಲಾಗಿತ್ತು ಅನ್ನೋ ಚರ್ಚೆಯೂ ಇದೆ. ಈ ಮಧ್ಯೆ ನವೆಂಬರ್ ವೇಳೆಗೆ ಒಂದಿಷ್ಟು ರಾಜಕೀಯ ಚಟುವಟಿಕೆ ಗರಿಗೆದರಬಹುದು ಎಂಬ ಅಂದಾಜು ಕೂಡ ಮಾಡಲಾಗಿತ್ತು

ಯಾವಾಗ ಹೈ ಕಮಾಂಡ್ ಮಧ್ಯಪ್ರವೇಶ ಮಾಡಿತ್ತೋ ಅಂದಿನಿಂದ ಸೈಲೆಂಟ್ ಆಗಿದ್ದರು ದಲಿತ ಸಚಿವರು. ಅದರಲ್ಲಿ ರಾಜಣ್ಣ ಕೂಡ ಒಬ್ಬರು. ಆದರೆ ಇಷ್ಟು ದಿನ ಸೈಲೆಂಟ್ ಆಗಿದ್ದ ಕೆ ಎನ್ ರಾಜಣ್ಣ ಈಗ ಹೊಸ ಬಾಂಬ್ ಒಂದನ್ನ ಹಾಕಿದ್ದಾರೆ. ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ ಅನ್ನೋ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಂತೇಯೇ ಸತೀಶ್ ಜಾರಕಿಹೊಳಿ ಕೂಡ ಬದಲಾವಣೆ ಸುಳಿವು ಕೊಟ್ಟಿದ್ದಾರೆ.
ಹೌದು, ನವೆಂಬರ್ ವೇಳೆಗೆ ರಾಜ್ಯ ಕಾಂಗ್ರೆಸ್ ನಲ್ಲಿ ಒಂದಿಷ್ಟು ರಾಜಕೀಯ ಬೆಳವಣಿಗೆಗಳು ಆಗುತ್ತವೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೂತ್ರ ಜಾರಿ ಆಗಲಿದೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಾ ಇದ್ವು. ಸಿಎಂ ಬದಲಾವಣೆ, ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೀಗೆ ಅನೇಕ ವಿಚಾರದಲ್ಲಿ ಬದಲಾವಣೆ ಸಾಧ್ಯ ಇವೆ ಅಂತಿದ್ದವು ಕಾಂಗ್ರೆಸ್ ಮೂಲಗಳು. ಆದರೆ ಅದಕ್ಕೂ ಮುನ್ನವೇ ಬದಲಾವಣೆ ಆಗಲಿವೆ ಅಂತ ಕೆ ಎನ್ ರಾಜಣ್ಣ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಸೆಪ್ಟೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ ಸಚಿವ ಕೆ ಎನ್ ರಾಜಣ್ಣ. ಕಳೆದ ಹಲವು ದಿನಗಳಿಂದಲೂ ಸ್ವಲ್ಪ ಸೈಲೆಂಟ್ ಆಗಿದ್ದ ಈ ಸಚಿವ ಇದ್ದಕ್ಕಿದ್ದ ಹಾಗೆ ಇಂತಹದೊಂದು ಸ್ಪೋಟಕ ಹೇಳಿಕೆ ನೀಡಿರೋದು ಹಲವು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಅವರು, ಸದ್ಯ ತಣ್ಣನೆಯ ಗಾಳಿ ಬೀಸುತ್ತದೆ. ಸೆಪ್ಟೆಂಬರ್ ವೇಳೆಗೆ ಬದಲಾವಣೆ ಆಗಲಿದೆ. ರಾಜಕೀಯ ನಿಂತ ನೀರಲ್ಲ. ಹರಿಯುವ ನೀರು ಅಂತ ಒಗಟೊಗಟಾಗಿ ಮಾತನಾಡೋ ಮೂಲಕ ಹಲವು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ.
ಇನ್ನು ರಾಜಣ್ಣ ಹೇಳಿಕೆ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಕೂಡ ಬದಲಾವಣೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಣ್ಣ ಪುಟ್ಟ ಬದಲಾವಣೆ ಆಗಲಿದೆ. ಹಾಗಂತ ಭಾರೀ ಬದಲಾವಣೆ ಅಲ್ಲ. ಸರ್ಕಾರದ ಮಟ್ಟದಲ್ಲಿ ಬದಲಾವಣೆ ಇಲ್ಲ. ಸಚಿವರ ಮಟ್ಟದಲ್ಲಿ ಬದಲಾವಣೆ ಆಗಲಿದೆ ಎಂದಿದ್ದಾರೆ. ಸದ್ಯ ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗಿ ಬಂದ ಬಳಿಕ ಈ ರೀತಿಯ ಹೇಳಿಕೆಗಳು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿವೆ. ಬದಲಾವಣೆ ಆಗೇ ಆಗುತ್ತದೆ ಅನ್ನೋದನ್ನ ಸಚಿವರು ಹೇಳುತ್ತಿದ್ದಾರೆ.
ಸದ್ಯ ಈ ನಾಯಕರುಗಳ ಇಷ್ಟು ದಿನ ಸೈಲೆಂಟ್ ಆಗಿದ್ದು ಈಗ ಮತ್ತೆ ಹೇಳಿಕೆ ನೀಡುತ್ತಿರೋದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ದೆಹಲಿ ಪ್ರವಾಸದ ಬಳಿಕ ಈ ರೀತಿಯ ಹೇಳಿಕೆಗಳು ಹೊರ ಬರ್ತಾ ಇರೋದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕ್ತಾ ಇದೆ. ಸಿಎಂ ಸ್ಥಾನ ಬದಲಾವಣೆ ನಿಜಕ್ಕೂ ಆಗುತ್ತಾ ಅಥವಾ ಸಚಿವ ಸ್ಥಾನ ಬದಲಾವಣೆ ಆಗುತ್ತಾ ಅನ್ನೋದು ಕೂಡ ಕುತೂಹಲ. ಅಥವಾ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಸ್ಥಾನ ಏನಾದ್ರೂ ಒಲಿದು ಬಂದಿದ್ಯಾ ಅನ್ನೋದು ಕೂಡ ಚರ್ಚೆಯಲ್ಲಿ ಇರುವ ವಿಚಾರ. ಯಾಕಂದ್ರೆ ಸಿದ್ದರಾಮಯ್ಯ ದೆಹಲಿ ಪ್ರವಾಸದ ವೇಳೆ ಸತೀಶ್ ಜಾರಕಿಹೊಳಿ ಕೂಡ ಹೈ ಕಮಾಂಡ್ ಭೇಟಿ ಮಾಡಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ಏನಾದ್ರೂ ರಾಜಣ್ಣ, ಸತೀಶ್ ಜಾರಕಿಹೊಳಿ ಮಾತನಾಡಿದ್ರಾ ಅನ್ನೋದು ಚರ್ಚೆಯಾಗ್ತಾ ಇರುವ ವಿಚಾರ.



