ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುವುದರೊಂದಿಗೆ ಗೆಲವಿನ ಓಟವನ್ನು ಮುಂದುವರಿಸಿದೆ. ನಿನ್ನೆಯಷ್ಟೇ ಪುಣೆ ಸ್ಟೇಡಿಯಂನಲ್ಲಿ ರೋಹಿತ್ ಪಡೆ ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದೆ. ಟಾಸ್ ಗೆದ್ದು ಬ್ಯಾಟಿಂಗಿಳಿದ ಬಾಂಗ್ಲಾ ಆರಂಭಿಕ ಮೇಲುಗೈ ಸಾಧಿಸ್ತು. ಮೊದಲ ವಿಕೆಟ್ಗೆ ಬೊಂಬಾಟ್ 93 ರನ್ ಬಾರಿಸಿದರು. ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಇಂಪ್ರೆಸ್ಸಿವ್ ಹಾಫ್ಸೆಂಚುರಿ ಬಾರಿಸಿ ಔಟಾದರು. ಬಳಿಕ ಹಠಾತ್ ಕುಸಿತ ಕಂಡು 44 ರನ್ ಆಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಮೊಹಮ್ಮದುಲ್ಲಾ 36 ಎಸೆತಗಳಲ್ಲಿ ಬಿರುಸಿನ 46 ರನ್ ಗಳಿಸಿದರು. ಅಂತಿಮವಾಗಿ ಬಾಂಗ್ಲಾ ತಂಡ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಕಲೆ ಹಾಕಿತು.
ಗುರಿ ಬೆನ್ನತ್ತಿನ ಟೀಂ ಇಂಡಿಯಾಗೆ ಮತ್ತು ಅಭಿಮಾನಿಗಳಿಗೆ ನೆಚ್ಚಿನ ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ ನಿರಾಸೆಗೊಳಿಸಲಿಲ್ಲ. ಮಾಸ್ ಆ್ಯಂಡ್ ಕ್ಲಾಸ್ ಇನ್ನಿಂಗ್ಸ್ ಕಟ್ಟಿದ ಕಿಂಗ್, ಲೀಲಜಾಲವಾಗಿ ಬ್ಯಾಟ್ ಬೀಸಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 48ನೇ ಶತಕ ಸಿಡಿಸಿ ವಿಜ್ರಂಭಿಸಿದರು. ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದ ಕೊಹ್ಲಿ ಸೆಂಚುರಿ ತಪ್ಪಿಸಲು ಬಾಂಗ್ಲಾ ಪ್ರಯತ್ನಿಸ್ತು. ಆದ್ರೆ ಅದರಲ್ಲಿ ಯಶಸ್ಸು ಕಾಣಲಿಲ್ಲ. ದಿ ರನ್ ಹಂಟರ್ ಸಿಕ್ಸರ್ ಎತ್ತಿ ಸೆಂಚುರಿ ಪೂರೈಸೋದ್ರ ಜೊತೆ ಭಾರತಕ್ಕೆ 7 ವಿಕೆಟ್ಗಳ ಪ್ರಚಂಡ ಗೆಲುವು ತಂದುಕೊಟ್ಟರು.
ಸದ್ಯ, ಕಿಂಗ್ ಕೊಹ್ಲಿ 103 ಹಾಗೂ ಕನ್ನಡಿಗ ರಾಹುಲ್ 34 ರನ್ ಗಳಿಸಿ ಅಜೇಯರಾಗುಳಿದರು. ರೋಹಿತ್ ಪಡೆಯ ವಿಕ್ಟರಿ ಸಂಖ್ಯೆ 4ಕ್ಕೇರಿದೆ. ಈ ನಡುವೆ ರನ್ಮಷಿನ್ ಕಿಂಗ್ ಕೊಹ್ಲಿ ಸೆಂಚುರಿ ಬಾರಿಸಿದ ಕ್ಷಣ ಹಾಗೂ ಈ ಸೆಂಚುರಿ ಶಾಟ್ ಕಂಡು ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಉತ್ಸಾಹದ ರಣಕೇಕೆ ಹಾಕಿದ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲಕ್ಷಾಂತಾರ ವೀಕ್ಷಣೆ ಕಂಡಿರುವ ಈ ವಿಡಿಯೋ ಎಲ್ಲೆಡೆ ಶೇರ್ ಆಗುತ್ತಿದೆ. ಸದ್ಯ, ಕಿಂಗ್ ಕೊಹ್ಲಿಯ ಈ ವಿಡಿಯೋ ಟ್ರೆಂಡಿಂಗ್ ನಲ್ಲಿದೆ.