ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಮೀ ಟೂ ಪ್ರಕರಣ ಸದ್ದು ಮಾಡುತ್ತಲೇ ಇದೆ. ಬಹುತೇಕ ನಟಿಯರು ತಮಗೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿದ್ದರು. ಆದರೆ ಕೆಲವರು ಭಯ ಪಟ್ಟು ಇಂದಿಗೂ ತಮಗೆ ಆದ ದೌರ್ಜನ್ಯವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಸುಮ್ಮನಿದ್ದಾರೆ. ಚಿತ್ರರಂಗದಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಂಚ್ ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ, ನಿರ್ಮಾಪಕರ ಜೊತೆ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಲ್ಲಿ ಅವಕಾಶ, ಇಲ್ಲದಿದ್ದರೆ ಚಿತ್ರರಂಗದಲ್ಲಿ ಕೇಳುವವರೇ ಇಲ್ಲ ಎಂದು ಎಷ್ಟೋ ನಟಿಯರು ಅಳಲು ತೋಡಿಕೊಂಡಿದ್ದಾರೆ.
ಚಿತ್ರರಂಗದಲ್ಲಿ, ವೈಯಕ್ತಿಕ ಜೀವನದಲ್ಲಿ ನೊಂದ ಹೆಣ್ಣು ಮಕ್ಕಳಿಗೆ ಖ್ಯಾತ ನಟಿ ಖುಷ್ಪೂ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಧೈರ್ಯ ತುಂಬುತ್ತಾ ಬಂದಿದ್ದಾರೆ. ಆದರೆ ಸ್ವತಃ ಖುಷ್ಪೂ ಕೂಡಾ ಬಾಲ್ಯದಲ್ಲಿ ಲೈಂ*ಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಅದು ಬೇರೆ ಯಾರಿಂದಲೋ ಅಲ್ಲ, ತನ್ನ ತಂದೆಯಿಂದಲೇ. ಈ ವಿಚಾರವನ್ನು ಖುಷ್ಬೂ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಾನು ಹಾಗೂ ತಾಯಿ ತನ್ನ ತಂದೆಯಿಂದ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಯಾವುದೇ ಹೆಣ್ಣು ಮಕ್ಕಳಿಗೆ ಇಂಥಹ ಪರಿಸ್ಥಿತಿ ಬಂದರೆ ಹೆದರದೆ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸುವಂತೆ ಕಿವಿಮಾತು ಹೇಳಿದ್ದರು. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದರು.

ಖ್ಯಾತ ಪತ್ರಕರ್ತೆ ಬರ್ಕಾ ದತ್ ಅವರೊಂದಿಗೆ ದಿ ವಿಮೆನ್ ಎಂಬ ಕಾರ್ಯಕ್ರಮದಲ್ಲಿ ಖುಷ್ಪೂ ಈ ಆಘಾತಕಾರಿ ವಿಚಾರವನ್ನು ಬಹಿರಂಗಗೊಳಿಸಿದ್ದರು. ಎಲ್ಲರಿಗೂ ಬಾಲ್ಯ ಎಂಬುದು ಸಿಹಿ ನೆನಪಾಗಿರುತ್ತದೆ. ಆದರೆ ನನ್ನ ಬಾಲ್ಯ ಹೇಳಿಕೊಳ್ಳುವಷ್ಟು ಸುಂದರವಾಗಿರಲಿಲ್ಲ. 8 ವರ್ಷದವಳಿದ್ದಾಗಲೇ ತಂದೆಯಿಂದ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೆ, ಆದರೆ ನಾನು ಅದನ್ನೆಲ್ಲಾ ಹೇಳಿದರೆ ಯಾರೂ ನಂಬುವುದಿಲ್ಲ ಎಂಬ ಭಯದಿಂದ ಯಾರೊಂದಿಗೂ ನಾನು ಅನುಭವಿಸುತ್ತಿದ್ದ ಕಷ್ಟವನ್ನು ಹೇಳಿಕೊಂಡಿರಲಿಲ್ಲ. ನನ್ನ ತಾಯಿಯೂ ತಂದೆಯಿಂದ ಸಾಕಷ್ಟು ಕಷ್ಟ ಅನುಭಸುತ್ತಿದ್ದರು. ಆದರೆ ನಾನು 15ನೇ ವಯಸ್ಸಿಗೆ ಬಂದಾಗ ತಂದೆ ವಿರುದ್ಧ ನಿಂತೆ. ನಾನು ಅನುಭವಿಸುತ್ತಿದ್ದ ಎಲ್ಲದನ್ನೂ ತಾಯಿ ಬಳಿ ಹೇಳಿಕೊಂಡೆ. ಅಲ್ಲಿಂದ ನನ್ನ ಜೀವನ ಬದಲಾಯ್ತು
ನನಗಾದ ಅನ್ಯಾಯಕ್ಕೆ ನನ್ನ ತಾಯಿ ಬಹಳ ನೊಂದುಕೊಂಡರು. ಅವರೂ ಕೂಡಾ ತನ್ನ ಗಂಡನ ವಿರುದ್ಧ ಸಿಡಿದುಬಿದ್ದರು. ಆ ಕೋಪಕ್ಕೆ ನನ್ನ ತಂದೆ ಎನಿಸಿಕೊಂಡ ವ್ಯಕ್ತಿ ನನಗೆ ಹೊಡೆದು ಭಿಕ್ಷೆ ಬೇಡಿ ತಿನ್ನು ಎಂದು ಮನೆಯಿಂದ ಹೊರ ಹಾಕಿದರು. ಆದರೆ ನಾನು ಹೆದರಿಲ್ಲ. ನನ್ನ ತಾಯಿ ಹಾಗೂ ಸಹೋದರನೊಂದಿಗೆ ಮನೆಯಿಂದ ಹೊರಬಂದೆ. ಬಹಳ ಕಷ್ಟಪಟ್ಟೆ. ಇಂದು ಈ ಸ್ಥಾನಕ್ಕೆ ಬಂದು ನಿಂತಿದ್ದೇನೆ. ಮನೆಯಿಂದ ಹೊರ ಬಂದ ನಂತರ ನಮ್ಮ ಕುಟುಂಬದಲ್ಲಿ ಯಾರೂ ಕೂಡಾ ಆ ವ್ಯಕ್ತಿ ಜೊತೆ ಸಂಪರ್ಕದಲ್ಲಿರಲಿಲ್ಲ ಎಂದು ಖುಷ್ಪೂ ಬಾಲ್ಯದಲ್ಲಿ ಅನುಭವಿಸಿದ್ದ ಆ ಕರಾಳ ಘಟನೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.

ಖುಷ್ಪೂ , ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಬಡತನದಲ್ಲಿ ಬೆಳೆದವರು. ಅವರ ಮೊದಲ ಹೆಸರು ನಖತ್ ಖಾನ್. ಬಾಲ್ಯದಲ್ಲೇ ಖುಷ್ಪೂ ಸಂಬಂಧಿಕರೊಬ್ಬರ ಸಹಾಯದಿಂದ ಚಿತ್ರರಂಗಕ್ಕೆ ಬಂದರು. 1980ರಲ್ಲಿ ತೆರೆ ಕಂಡ ಬಾಲಿವುಡ್ನ ದಿ ಬರ್ನಿಂಗ್ ಟ್ರೈನ್ ಚಿತ್ರದ ಮೂಲಕ ನಖತ್ ಖಾನ್ ನಟನೆ ಆರಂಭಿಸಿದರು. 2 ವರ್ಷಗಳ ಕಾಲ ಬಹುತೇಕ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು. 1982ರಲ್ಲಿ ಜಾನೂ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಅಲ್ಲಿಂದ ಆಚೆಗೆ ಆಕೆ ತಿರುಗಿ ನೋಡಿದ್ದೇ ಇಲ್ಲ. ತಮ್ಮ ಹೆಸರನ್ನು ಖುಷ್ಪೂ ಎಂದು ಬದಲಿಸಿಕೊಂಡರು. ಬಾಲಿವುಡ್ ಮಾತ್ರವಲ್ಲ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡರು.

1988 ರಲ್ಲಿ ತೆರೆಕಂಡ ರಣಧೀರ ಚಿತ್ರಕ್ಕೆ ರವಿಚಂದ್ರನ್, ಖುಷ್ಪೂ ಅವರನ್ನು ನಾಯಕಿಯಾಗಿ ಕನ್ನಡಕ್ಕೆ ಕರೆತಂದರು. ಮೊದಲ ಸಿನಿಮಾದಲ್ಲೇ ಈ ಚೆಲುವೆ ಕನ್ನಡಿಗರ ಮನಸ್ಸು ಗೆದ್ದರು. ಅಂಜದ ಗಂಡು, ಯುಗಪುರುಷ, ಪ್ರೇಮಾಗ್ನಿ, ಹೃದಯಗೀತೆ, ರುದ್ರ, ತಾಳಿಗಾಗಿ, ಗಗನ, ಕಲಿಯುಗ ಭೀಮ, ಒಂಟಿ ಸಲಗ, ಪುಂಡರ ಗಂಡ, ಶಾಂತಿ ಕ್ರಾಂತಿ, ಜೀವನದಿ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಖುಷ್ಫೂ ನಟಿಸಿದ್ದಾರೆ. ರವಿಚಂದ್ರನ್, ಅನಂತ್ನಾಗ್, ಅಂಬರೀಶ್, ಪ್ರಭಾಕರ್, ಡಾ ವಿಷ್ಣುವರ್ಧನ್ರಂಥ ಮಹಾನ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಕಿರುತೆರೆಯಲ್ಲೂ ಖುಷ್ಫೂ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ, ಜಡ್ಜ್ ಆಗಿ ಭಾವಹಿಸಿದ್ದಾರೆ. ಖ್ಯಾತ ತಮಿಳು ನಟ ಸುಂದರ್ ಅವರನ್ನು ಮದುವೆ ಆಗಿರುವ ಖುಷ್ಪೂಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯದಲ್ಲೂ ಖುಷ್ಫೂ ಗುರುತಿಸಿಕೊಂಡಿದ್ದಾರೆ.